ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19: ಜನರ ನಂತರ ಈಗ ಸಂಕಷ್ಟಕ್ಕೀಡಾಗುವ ಸರದಿ ರಾಜ್ಯ ಸರ್ಕಾರದ್ದು!

|
Google Oneindia Kannada News

ಬೆಂಗಳೂರು, ಜು. 05: ಜನ-ಸಾಮಾನ್ಯರು ಸರ್ಕಾರದ ಮೇಲೆ ಇಟ್ಟಿದ್ದ ಭರವಸೆಯನ್ನು ಕಳೆದು ಕೊಂಡಿದ್ದಾರಾ? ಇಂಥದ್ದೊಂದು ಪರಿಸ್ಥಿತಿ ಇದೀಗ ಬೆಂಗಳೂರಿನಲ್ಲಿ ಕಂಡು ಬರುತ್ತಿದೆ. ಇದಕ್ಕೆ ಕಾರಣ ಆತಂಕದಿಂದ ಬೆಂಗಳೂರನ್ನು ತೊರೆಯುತ್ತಿರುವ ಜನರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳು. ಕಳೆದ ಮೂರು ತಿಂಗಳುಗಳ ಹಿಂದೆ ಸರ್ಕಾರ ಏಕಾಏಕಿ ಇಡೀ ದೇಶಾದ್ಯಂತ ಲಾಕ್‌ಡೌನ್ ಘೊಷಣೆ ಮಾಡಿದಾಗ ನಾವು ಕೊರೊನಾ ವೈರಸ್‌ನಿಂದ ಸಂಪೂರ್ಣವಾಗಿ ಬಚಾವಾದೆವು ಎಂದುಕೊಂಡು ತುಟಿ ಪಿಟಕ್ ಎನ್ನದೇ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಜನರು ಪಾಲಿಸಿದ್ದರು.

ಕೋಟ್ಯಂತರ ವಲಸೆ ಕಾರ್ಮಿಕರು ಬೀದಿಗೆ ಬಿದ್ದಿದ್ದರು. ಆಗ ಕೆಲಸ ಕಳೆದುಕೊಂಡವರು ಕೊನೆಗೆ ತವರಿಗೆ ಮರಳುವ ತವಕದಲ್ಲಿ ಜೀವವನ್ನೂ ಕಳೆದುಕೊಂಡರು. ತವರಿಗೆ ಮರಳುವ ಭರದಲ್ಲಿ ಜೀವ ತೆತ್ತವರನ್ನೂ ತೆಗಳಲೂ ಜನರು ಹಿಂದು ಮುಂದು ನೋಡಲಿಲ್ಲ.

ಶೀಘ್ರದಲ್ಲೇ ನೂತನ ಚಿಕಿತ್ಸೆ ಮಾರ್ಗಸೂಚಿ ಬಿಡುಗಡೆ: ಡಾ.ಕೆ.ಸುಧಾಕರ್ಶೀಘ್ರದಲ್ಲೇ ನೂತನ ಚಿಕಿತ್ಸೆ ಮಾರ್ಗಸೂಚಿ ಬಿಡುಗಡೆ: ಡಾ.ಕೆ.ಸುಧಾಕರ್

ಒಂದಿಷ್ಟು ದಿನ ಮನೆಯಲ್ಲಿರಲು ಏನು ಕಷ್ಟ? ಎಂದು ಪ್ರಶ್ನೆ ಮಾಡಿದ್ದರು. ಇದೀಗ ಕಾರ್ಮಿಕರ ಬಳಿಕ ಮಧ್ಯಮ ವರ್ಗದ ಜನರಿಗೆ ಸಂಕಷ್ಟ ಬಂದಿದೆ. ಮಧ್ಯಮ ವರ್ಗದ ಜನತೆ ಈಗ ಆತಂಕದಿಂದ ತವರಿನತ್ತ ಮುಖ ಮಾಡಿದ್ದಾರೆ. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ತವರಿಗೆ ತಲುಪಿದ ಜನರಲ್ಲಿನ ಆತಂಕ ಕಡಿಮೆಯಾಗಿದ್ದು, ಇದೀಗ ರಾಜ್ಯ ಸರ್ಕಾರಕ್ಕೆ ಆತಂಕ ಶುರುವಾಗಿದೆ.

ಬೆಂಗಳೂರು ತೊರೆಯುತ್ತಿದ್ದಾರೆ ಜನರು

ಬೆಂಗಳೂರು ತೊರೆಯುತ್ತಿದ್ದಾರೆ ಜನರು

ಜೀವನ ಮಾಡಲು ಬೆಂಗಳೂರಿಗೆ ಬಂದಿದ್ದ ಜನರು, ಇದೀಗ ಜೀವ ಉಳಿಸಿಕೊಳ್ಳಲು ಬೆಂಗಳೂರು ತೊರೆಯುತ್ತಿದ್ದಾರೆ. ಹೀಗೆ ಬೆಂಗಳೂರು ತೊರೆಯುವ ಭರದಲ್ಲಿ ಬೆಂಗಳೂರು ಸಹವಾಸ ಸಾಕು ಎನ್ನುತ್ತಿರುವುದು ಬೆಂಗಳೂರಿಗರ ಕೋಪಕ್ಕೆ ಕಾರಣವಾಗಿದೆ. ಆದರೆ ಜನರು ತೆಗಳುತ್ತಿರುವುದು ಬೆಂಗಳೂರನ್ನು ಅಲ್ಲ. ಬದಲಿಗೆ ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹುಟ್ಟಿಸಿರುವ ಭಯಕ್ಕೆ. ಭಯದ ಕೊಡುಗೆ ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ.

ಸಾಮಾನ್ಯ ರೋಗಕ್ಕೂ ಚಿಕಿತ್ಸೆ ಸಿಗದೇ ಜನರು ಬೀದಿಯಲ್ಲಿ ಸಾಯುತ್ತಿದ್ದಾರೆ. ಇನ್ನು ಕೋವಿಡ್ ಸೋಂಕಿತರ ಪರಿಸ್ಥಿತಿಯಂತೂ ಕೇಳುವವರೇ ಇಲ್ಲದಂತಾಗಿದೆ. ಕಳೆದ ಮೂರು ತಿಂಗಳುಗಳಿಂದ ಬರೀ ಅಂಗೈಯಲ್ಲಿ ಅರಮನೆ ತೋರಿಸಿದ ಸರ್ಕಾರ ನಿನ್ನೆಯಷ್ಟೇ (ಜು. 04) ಮತ್ತೆ ಕೋವಿಡ್ ಉಸ್ತುವಾರಿ ಸಚಿವರನ್ನು ಮತ್ತೊಮ್ಮೆ ಬದಲಾವಣೆ ಮಾಡಿದೆ. ಸರ್ಕಾರದ ಗುರಿಯಿಲ್ಲದ ನೀತಿಗಳಿಂದ ಜನರು ಭಯಕ್ಕೆ ಬಿದ್ದಿದ್ದಾರೆ.

ದಿನಕ್ಕೊಂದು ನೀತಿ, ದಿನಕ್ಕೊಬ್ಬ ಉಸ್ತುವಾರಿ

ದಿನಕ್ಕೊಂದು ನೀತಿ, ದಿನಕ್ಕೊಬ್ಬ ಉಸ್ತುವಾರಿ

ಕಳೆದ 15 ದಿನಗಳಲ್ಲಿ ಹಲವು ಬಾರಿ ಕೋವಿಡ್-19 ರೋಗಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಬದಲಾಯಿಸಿದೆ. ಇವತ್ತು ಇದ್ದ ಮಾರ್ಗಸೂಚಿ ನಾಳೆ ಇರಲ್ಲ. ಅದು ಕ್ವಾರಂಟೈನ್ ನಿಯಮ ಇರಬಹುದು, ಸೋಂಕಿತರಿಗೆ ಚಿಕಿತ್ಸೆ ಇರಬಹುದು ಅಥವಾ ಲಾಕ್‌ಡೌನ್ ನಿಯಮಗಳಿರಬಹುದು, ಎಲ್ಲವೂ.

ಸಿಎಂ ಜೊತೆ ತಜ್ಞರ ಸಭೆ: ಕೊರೊನಾ ನಿಯಂತ್ರಿಸಲು ತಜ್ಞರು ಹೇಳಿದ್ದೇನು?ಸಿಎಂ ಜೊತೆ ತಜ್ಞರ ಸಭೆ: ಕೊರೊನಾ ನಿಯಂತ್ರಿಸಲು ತಜ್ಞರು ಹೇಳಿದ್ದೇನು?

ಜೊತೆಗೆ ಬೆಂಗಳೂರಿನಲ್ಲಿ ಕೋವಿಡ್-19 ನಿರ್ವಹಣೆಯ ಉಸ್ತುವಾರಿ ಸಚಿವರನ್ನು ಮೂರು ಬಾರಿ ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಮಾಡಿದ್ದಾರೆ. ಮೊದಲಿಗೆ ಡಾ. ಸುಧಾಕರ್ ಅವರು ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಂತರ ಗೊಂದಲದಿಂದ ರಾಜ್ಯದ ಉಸ್ತುವಾರಿಯನ್ನು ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಬೆಂಗಳೂರು ಉಸ್ತುವಾರಿಯನ್ನು ಡಾ. ಸುಧಾಕರ್ ಅವರಿಗೆ ಕೊಟ್ಟರು.

ನಂತರ ಸಂಬಂಧವೇ ಇಲ್ಲದ ಶಿಕ್ಷಣ ಸಚಿವ ಎಸ್. ಸುರೇಶ ಕುಮಾರ್ ಅವರಿಗೆ ಮಾಧ್ಯಮಗಳಿಗೆ ಮಾಹಿತಿ ಕೊಡುವ ಜವಾಬ್ದಾರಿಯನ್ನು ಸಿಎಂ ಹಂಚಿಕೆ ಮಾಡಿದ್ದರು. ಇವೆಲ್ಲದರ ಪರಿಣಾಮ ಇದೀಗ ಜನರು ಬೀದಿಯಲ್ಲಿ ಬಿದ್ದು ಸಾಯುವಂತಾಗಿದೆ ಎನ್ನುತ್ತಾರೆ ಬೆಂಗಳೂರು ತೊರೆಯುತ್ತಿರುವ ಜನರು.

ಬೆಡ್ ಇಲ್ಲ, ಬೆಡ್ ಇಲ್ಲ, ಬೆಡ್ ಇಲ್ಲ

ಬೆಡ್ ಇಲ್ಲ, ಬೆಡ್ ಇಲ್ಲ, ಬೆಡ್ ಇಲ್ಲ

ಬೆಂಗಳೂರಿನಲ್ಲಿ ಸೋಂಕಿತರು ಆಸ್ಪತ್ರೆಯಿಂದ ಆಸ್ಪತ್ರೆಗೆ ತೆರಳಿದರೂ ಬೆಡ್ ಇಲ್ಲ ಎಂಬ ಒಂದೇ ಸಿದ್ಧ ಉತ್ತರ ಬರುತ್ತಿದೆ. ಸರ್ಕಾರ ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಶೇಕಡಾ 78 ರಿಂದ 80ರಷ್ಟು ಬೆಡ್‌ಗಳು ಖಾಲಿಯಿವೆ. ಸೋಂಕಿತರಿಗೆ ಚಿಕಿತ್ಸೆ ಕೊಡಿಸಲು ಸರ್ಕಾರ ಸನ್ನದ್ಧವಾಗಿದೆ ಎಂಬ ಉತ್ತರ ಕೊಡುತ್ತಿದೆ. ಆದರೆ ವಾಸ್ತವ ಅರಿತಿರುವ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಜೀವ ಇದ್ದರೇ ಹೇಗಾದರೂ ಜೀವನ ಮಾಡಬಹುದು ಎಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ.

ರಾಜಕೀಯ ನಾಯಕರ ಸಂಬಂಧಿಗಳಿಗೆ ಬೆಡ್ ಸಿಗದೇ ಪರದಾಡುತ್ತಿರುವ ವಿಷಯಗಳು ಸಾಮಾನ್ಯ ಜನರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ.

ಆತಂಕಕ್ಕೆ ಕಾರಣ

ಆತಂಕಕ್ಕೆ ಕಾರಣ

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಹಾಗೂ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗದಿ ಮಾಡಿರುವ ದರವನ್ನು ಭರಿಸುವುದು ಮಧ್ಯಮ ವರ್ಗದ ಜನರಿಗೆ ಆಗದ ವಿಚಾರ. ಕೊರೊನಾ ವೈರಸ್ ಪರೀಕ್ಷೆಗೆ ಸರ್ಕಾರ ನಾಲ್ಕೂವರೆ ಸಾವಿರ ರೂ. ನಿಗದಿ ಮಾಡಿದೆ. ಕುಟುಂಬದಲ್ಲಿ ನಾಲ್ಕು ಜನರಿದ್ದರೆ 20 ಸಾವಿರ ರೂ. ಬರೀ ಪರೀಕ್ಷೆಗೆ ಬೇಕು. ಇನ್ನು ಚಿಕಿತ್ಸೆಗೆ ಲಕ್ಷ ಲಕ್ಷ ರೂ.ಗಳು ಬೇಕು.

ಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರಹೋಮ್ ಐಸೋಲೇಶನ್ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ

ಪರಿಸ್ಥಿತಿ ಹೀಗಿದ್ದಾಗ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಆಗದ ಮಾತು. ಜೊತೆಗೆ ಹಣ ಕೊಟ್ಟರೂ ಆಸ್ಪತ್ರೆಯಲ್ಲಿ ಬೆಡ್ ಸಿಗುವುದು ಕಷ್ಟ.

ವೆಂಟಿಲೇಟರ್ಸ್‌ ಹಗರಣ

ವೆಂಟಿಲೇಟರ್ಸ್‌ ಹಗರಣ

ಇದೇ ಸಂದರ್ಭದಲ್ಲಿ ವಿರೋಧ ಪಕ್ಷಗಳ ಆರೋಪ ಸಾಮಾನ್ಯ ಜನರನ್ನು ಕಂಗಾಲು ಮಾಡಿದೆ. ಜನರು ಜೀವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿಯೂ ಮಾನವೀಯತೆ ಇಲ್ಲದ ರಾಜ್ಯ ಸರ್ಕಾರ ಸುಮಾರು 2200 ಕೋಟಿ ರೂಪಾಯಿಗಳ ಹಗರಣ ಮಾಡಿದೆ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಆರೋಪ ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸರ್ಕಾರ ಖರೀದಿ ಮಾಡಿರುವ ವೆಂಟಿಲೇಟರ್ಸ್‌, ಪಿಪಿಇ ಕಿಟ್ ಸೇರಿದಂತೆ ವೈದ್ಯಕೀಯ ಸಲಕರಣೆಯಲ್ಲೂ ಹಗರಣ ನಡೆದಿದೆ ಎಂದು ವಿಪಕ್ಷಗಳ ನಾಯಕರು ಆರೋಪಿಸಿದ್ದಾರೆ. ಇದು ಸರ್ಕಾರದ ಮೇಲೆ ಜನರು ಮತ್ತಷ್ಟು ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ.

ಈಗ ಆತಂಕ ಸರ್ಕಾಕ್ಕೆ

ಈಗ ಆತಂಕ ಸರ್ಕಾಕ್ಕೆ

ಜನರು ಬೆಂಗಳೂರು ತೊರೆಯುತ್ತಿರುವುದರಿಂದ ಸರ್ಕಾರಕ್ಕೆ ಆತಂಕ ಶುರುವಾಗಿದೆ. ಬಹುತೇಕ ವಲಸಿಗರಿಂದಲೇ ಬೆಂಗಳೂರಿನ ಆರ್ಥಿಕತೆ ನಿಂತಿದೆ. ಬೆಂಗಳೂರಿನ ಆರ್ಥಿಕತೆಯ ಮೇಲೆ ಸರ್ಕಾರ ನಿಂತಿದೆ ಎನ್ನಬಹುದು. ಆದರೂ ಸರ್ಕಾರದ ದಿವ್ಯ ನಿರ್ಲಕ್ಷದಿಂದ ಜನರು ಬೆಂಗಳೂರು ತೊರೆಯುತ್ತಿದ್ದಾರೆ.

ಒಂದು ಮಾಹಿತಿಯ ಪ್ರಕಾರ ರಾಜ್ಯ ಸರ್ಕಾರ ನಡೆಸಲು ತಿಂಗಳಿಗೆ ಆರೂವರೆ ಸಾವಿರ ಕೋಟಿ ರೂಪಾಯಿಗಳು ಬೇಕು. ರಾಜ್ಯದಲ್ಲಿ ಲಾಕ್‌ಡೌನ್ ಜಾರಿಯಲ್ಲಿದ್ದರೆ ಇಷ್ಟೊಂದು ತೆರಿಗೆ ಸಂಗ್ರಹ ಮಾಡುವುದು ಅಸಾಧ್ಯ ಎನ್ನಲಾಗಿದೆ.

ಬೆಂಗಳೂರಿನಿಂದ ಹೋಗಬೇಡಿ

ಬೆಂಗಳೂರಿನಿಂದ ಹೋಗಬೇಡಿ

ಮಾರ್ಚ್ 24 ಲಾಕ್‌ಡೌನ್ ಮಾಡಿದಾಗ ತಾತ್ಕಾಲಿಕವಾಗಿ ಜನರು ಬೆಂಗಳೂರು ತೊರೆದಿದ್ದರು. ಆದರೆ ಇದೀಗ ಖಾಯಂ ಆಗಿ ಜನರು ಗಂಟು ಮೂಟೆ ಕಟ್ಟಿಕೊಂಡು ಬೆಂಗಳೂರಿನಿಂದ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ಪರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮಾಡಿಕೊಂಡಿದ್ದಾರೆ.

ಸೋಂಕಿತರ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ ಇಲ್ಲ. ಬೆಂಗಳೂರನ್ನು ಜನರು ತೊರೆದು ಹೋಗಬಾರದು. ಮತ್ತೆ ಲಾಕ್‌ಡೌನ್‌ನ್ನು ಮಾಡುವುದಿಲ್ಲ. ಮುಂದಿನ ನಾಲ್ಕು ಭಾನುವಾರ ಲಾಕ್‌ಡೌನ್ ಮಾಡುತ್ತೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಶೇಕಡಾ 80ರಷ್ಟು ಬೆಡ್‌ಗಳು ಖಾಲಿಯಿವೆ. ಎಲ್ಲರಿಗೂ ಚಿಕಿತ್ಸೆ ಸಿಗುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ವಿಪರ್ಯಾಸ ಎಂದರೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಜನರಿಗೆ ಭರವಸೆ ಕೊಟ್ಟ ಕೆಲವೇ ಕ್ಷಣಗಳಲ್ಲಿ ಸೋಂಕಿತರೊಬ್ಬರು ಬೆಂಗಳೂರಿನಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ.

English summary
The Karnataka state government has appealed to people not to leave Bengaluru in COVID-19 calamity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X