ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಇಎಸ್, ಶಿವಸೇನೆ ನಿಷೇಧಕ್ಕೆ ರಾಜ್ಯಪಾಲರಿಗೆ ಕರವೇ ಮನವಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 31: ಎಂಇಎಸ್ ಮತ್ತು ಶಿವಸೇನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡರ ನೇತೃತ್ವದಲ್ಲಿ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಭಾಷಾವಾರು ಪ್ರಾಂತ್ಯ ವಿಂಗಡಣೆಯ ನಂತರ ಮಹಾರಾಷ್ಟ್ರ ರಾಜಕಾರಣಿಗಳು, ಅಲ್ಲಿನ ಸರ್ಕಾರಗಳ ಪ್ರಚೋದನೆಯಿಂದ ಬೆಳಗಾವಿಯಲ್ಲಿ ಪದೇಪದೇ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಾ ಬಂದಿದೆ.

ಎಂಇಎಸ್ ನಿಷೇಧಕ್ಕೆ ಡೆಡ್‌ಲೈನ್ ಕೊಟ್ಟ ವಾಟಾಳ್; ಮುಂದಿನ ಬಂದ್ ಯಾವಾಗ?ಎಂಇಎಸ್ ನಿಷೇಧಕ್ಕೆ ಡೆಡ್‌ಲೈನ್ ಕೊಟ್ಟ ವಾಟಾಳ್; ಮುಂದಿನ ಬಂದ್ ಯಾವಾಗ?

ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘಟನೆ/ರಾಜಕೀಯ ಪಕ್ಷವನ್ನು ಹುಟ್ಟುಹಾಕಿ, ಅದಕ್ಕೆ ಮಹಾರಾಷ್ಟ್ರದಿಂದ ಹಣಕಾಸಿನ ನೆರವು ಹರಿಸಿ ಬೆಳಗಾವಿಯ ಕನ್ನಡಿಗರ ಮೇಲೆ ಮರಾಠಿಗರನ್ನು ಎತ್ತಿಕಟ್ಟಿ ಹಲವು ದಶಕಗಳಿಂದ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗಿದೆ. ಎಂಇಎಸ್ ಜತೆಗೆ ಶಿವಸೇನೆ ಎಂಬ ರಾಜಕೀಯ ಪಕ್ಷದ ಘಟಕವೂ ಬೆಳಗಾವಿಯಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಿದೆ.

Karnataka Rakshana Vedike Writes Letter to Governor Demanding Ban on MES and Shiv Sena

ಬೆಳಗಾವಿ ಕನ್ನಡಿಗರ ನೆಲ:

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಬೇಡಿಕೆಯಲ್ಲಿ ಯಾವ ಅರ್ಥವೂ ಇಲ್ಲ. ಯಾಕೆಂದರೆ ಅದು ಕನ್ನಡಿಗರ ನೆಲ. ಇದೇ ನೆಲದಲ್ಲಿ ಕನ್ನಡಿಗರ ಮಹಾನಾಯಕರಾದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಮರಾಠರ ಆಕ್ರಮಣವನ್ನು ಮೆಟ್ಟಿ ನಿಂತು ಶಿವಾಜಿಯ ಸೈನ್ಯವನ್ನು ಸೋಲಿಸಿದ ಬೆಳವಡಿ ಮಲ್ಲಮ್ಮ ಕೂಡ ಇಲ್ಲಿಯವರು. 1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರ ಸಮ್ಮುಖದಲ್ಲಿ ಪದ್ಮಭೂಷಣ ಗಂಗೂಬಾಯಿ ಹಾನಗಲ್ ಅವರು ಹುಯಿಲಗೋಳ ನಾರಾಯಣ ಅವರು ಬರೆದ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು' ಗೀತೆಯನ್ನು ಹಾಡಿದ್ದರು. ಕರ್ನಾಟಕ ಏಕೀಕರಣದ ಆಶಯದ ಈ ಗೀತೆ ಬೆಳಗಾವಿಯ ನೆಲದಲ್ಲಿ ಮೊಳಗಿತು ಎಂಬುದು ಹೆಮ್ಮೆಯ ವಿಷಯ.

ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರದ ಹುನ್ನಾರ:

ಬೆಳಗಾವಿಯ ಮೇಲೆ ಹಕ್ಕು ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ಮಾಡಿದ ಹುನ್ನಾರಗಳು ಒಂದೊಂದಲ್ಲ. ಒಕ್ಕೂಟ ಸರ್ಕಾರದ ಮೇಲೆ ಒತ್ತಡ ಹೇರಿ ಗಡಿವಿವಾದ ಇತ್ಯರ್ಥಕ್ಕೆ ಮೆಹರ್ ಚಂದ್ ಮಹಾಜನ್' ನೇತೃತ್ವದ ಆಯೋಗ ಸ್ಥಾಪನೆ ಮಾಡಿಸಿದರು. ಅವರೇ ಬಯಸಿದ ಆಯೋಗ ತನ್ನ ಅಂತಿಮ ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಎಂಬ ತೀರ್ಪು ನೀಡಿತು. ಮಹಾರಾಷ್ಟ್ರದ ರಾಜಕಾರಣಿಗಳು ಕುತ್ಸಿತ ನೀತಿ ಅನುಸರಿಸಿ ಮಹಾಜನ್ ಆಯೋಗದ ವರದಿ ಒಪ್ಪುವುದಿಲ್ಲ, ಅದರ ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದು ಹಠ ಹಿಡಿದರು.

ಮಹಾರಾಷ್ಟ್ರದಲ್ಲಿ ಹಿಂಸಾಚಾರ ನಡೆಸಿ ಕನ್ನಡಿಗರ ಮೇಲೆ ದಾಳಿ ನಡೆಸಲಾಯಿತು. ಹೀಗಾಗಿ ಮಹಾಜನ್ ಆಯೋಗದ ವರದಿ ಜಾರಿಯಾಗಲಿಲ್ಲ. ಇದರ ಪರಿಣಾಮವಾಗಿ ಕರ್ನಾಟಕಕ್ಕೆ ಸೇರಬೇಕಾದ ಅಪ್ಪಟ ಕನ್ನಡದ ಜಿಲ್ಲೆ ಕಾಸರಗೋಡು ಕೈತಪ್ಪಿ, ಕೇರಳದಲ್ಲೇ ಉಳಿದುಕೊಂಡಿತು. ಮಾತ್ರವಲ್ಲದೆ ಮಹಾರಾಷ್ಟ್ರ ಸೇರಿರುವ ನೂರಾರು ಕನ್ನಡದ ಹಳ್ಳಿ, ಪಟ್ಟಣಗಳು ಕರ್ನಾಟಕಕ್ಕೆ ಸಿಗಲಿಲ್ಲ‌. ಇಷ್ಟಾದ ಮೇಲೂ ಬೆಳಗಾವಿ ತಮಗೆ ಸೇರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೊರೆಹೋಯಿತು. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಈಗಾಗಲೇ ಒಕ್ಕೂಟ ಸರ್ಕಾರ ಸುಪ್ರೀಂಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದ್ದು ತೀರ್ಪು ಬರುವುದು ಬಾಕಿ ಇದೆ.

ಮಹಾರಾಷ್ಟ್ರ ರಾಜಕಾರಣಿಗಳಿಂದ ವಾಮಮಾರ್ಗ:

ಕಾನೂನಾತ್ಮಕವಾಗಿ ಬೆಳಗಾವಿ ಪಡೆಯಲು ವಿಫಲರಾಗಿರುವ ಮಹಾರಾಷ್ಟ್ರ ರಾಜಕಾರಣಿಗಳು ವಾಮಮಾರ್ಗ ಆಯ್ಕೆ ಮಾಡಿಕೊಂಡು ಎಂಇಎಸ್, ಶಿವಸೇನೆ ಮೂಲಕ ಬೆಳಗಾವಿಯಲ್ಲಿ ಸದಾ ಸಂಘರ್ಷದ ವಾತಾವರಣ ನಿರ್ಮಿಸಿದ್ದಾರೆ. ಎಂಇಎಸ್ ಹೆಸರಿನಲ್ಲಿ ಸಾವಿರಾರು ಮಹಾರಾಷ್ಟ್ರೀಯನ್ನರು ಗಡಿದಾಟಿ ಬೆಳಗಾವಿಗೆ ಬಂದು 'ಮರಾಠಿ ಮಹಾಮೇಳ'ಗಳನ್ನು ನಡೆಸುವುದು, ಕನ್ನಡಿಗರ ವಿರುದ್ಧ, ಕರ್ನಾಟಕ ಸರ್ಕಾರದ ವಿರುದ್ಧ ಮಾನಹಾನಿಕಾರಿ, ಪ್ರಚೋದನಾತ್ಮಕ ಭಾಷಣಗಳನ್ನು ಮಾಡುವುದು, ಮುಗ್ಧ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವುದು ನಡೆಯುತ್ತಲೇ ಇದೆ. ಇದರ ಪರಿಣಾಮವಾಗಿ ಬೆಳಗಾವಿಯಲ್ಲಿ ಕನ್ನಡಿಗರು-ಮರಾಠಿಗರು ನೆಮ್ಮದಿ, ಶಾಂತಿಯಿಂದ ಬಾಳಲು ಸಾಧ್ಯವಾಗುತ್ತಿಲ್ಲ‌. ಬೆಳಗಾವಿಯಲ್ಲಿರುವ ಕನ್ನಡಿಗರು, ಮರಾಠಿಗರು ಮತ್ತು ಇನ್ನಿತರ ಭಾಷಾ ಸಮುದಾಯಗಳು ಎಂಇಎಸ್ ಮತ್ತು‌ ಶಿವಸೇನೆಗಳನ್ನು ಈಗಾಗಲೇ ತಿರಸ್ಕರಿಸಿದ್ದಾರೆ. ಹೀಗಾಗಿ ಹತಾಶೆಗೆ ಒಳಗಾದ ಈ ಸಂಘಟನೆಗಳು ಹಿಂಸಾಚಾರಕ್ಕೆ ಇಳಿದಿವೆ.

ಚಳಿಗಾಲದ ಅಧಿವೇಶನ ವೇಳೆ ಬೆಳಗಾವಿ ಬಂದ್:

ಇತ್ತೀಚೆಗೆ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೂ ಸಹ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಕಿತಾಪತಿ ನಡೆಸಿ, ಬೆಳಗಾವಿ ಬಂದ್ ನಡೆಸಿ ಹಿಂಸಾಚಾರ ನಡೆಸಿದವು. ತಾಯಿ ನೆಲಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಭಗ್ನಗೊಳಿಸಲಾಯಿತು. ಇಡೀ ಮನುಕುಲಕ್ಕೆ ಕಾಯಕ ಧರ್ಮವನ್ನು ನೀಡಿದ ಮಹಾಮಾನವತಾವಾದಿ ಬಸವಣ್ಣನವರ ಭಾವಚಿತ್ರಕ್ಕೆ ಸೆಗಣಿ ಬಳಿಯಲಾಯಿತು. ಬೆಳಗಾವಿ ಮತ್ತು ಮಹಾರಾಷ್ಟ್ರಗಳಲ್ಲಿ ಕನ್ನಡಿಗರ ಆತ್ಮಾಭಿಮಾನದ ಪ್ರತೀಕವಾಗಿರುವ ಕನ್ನಡ ಧ್ಚಜಕ್ಕೆ ಬೆಂಕಿ ಇಡಲಾಯಿತು. ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಸೇರಿದ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಈಗಲೂ ಸಹ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಕನ್ನಡಿಗರನ್ನು ಥಳಿಸಿ, ಹಲ್ಲೆ ನಡೆಸಲಾಗುತ್ತಿದೆ, ಕನ್ನಡಿಗರ ಆಸ್ತಿಪಾಸ್ತಿ, ವಾಹನಗಳನ್ನು ನಷ್ಟಗೊಳಿಸಲಾಗುತ್ತಿದೆ. ಇದಕ್ಕೆಲ್ಲ ಕಾರಣಕರ್ತರು ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಎಂಬ ಭಯೋತ್ಪಾದಕ ಸಂಘಟನೆಗಳ ಗೂಂಡಾಗಳು. ಈ ಕಾರಣಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಈ ಎರಡೂ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಸತತ ಹೋರಾಟ ನಡೆಸುತ್ತಿದೆ.

ಬೆಳಗಾವಿಯಲ್ಲಿ ಸಂಘಟಿತ ಅಪರಾಧ:

ಎಂಇಎಸ್ ಮತ್ತು ಶಿವಸೇನೆ ಸಂಘಟನೆ ಅಥವಾ ರಾಜಕೀಯ ಪಕ್ಷಗಳು ಹಲವು ದಶಕಗಳಿಂದ ಬೆಳಗಾವಿಯಲ್ಲಿ ಸಂಘಟಿತ ಅಪರಾಧಗಳನ್ನು ನಡೆಸುತ್ತಿವೆ. ಎರಡು ಭಾಷಾ ಸಮುದಾಯಗಳ ನಡುವೆ ದ್ವೇಷ, ಪ್ರತೀಕಾರದ ಭಾವನೆಗಳನ್ನು ಮೂಡಿಸುತ್ತಿವೆ. ಹಿಂಸಾಚಾರಕ್ಕೆ ಪ್ರಚೋದನೆ ನಡೆಸುತ್ತಿವೆ. ಅಲ್ಲದೆ ಕರ್ನಾಟಕ ರಾಜ್ಯ ಸರ್ಕಾರದ ಆಸ್ತಿಪಾಸ್ತಿಗಳನ್ನು ಹಾಳುಗೆಡಹುತ್ತಿವೆ. ಮೇಲಾಗಿ ಬೆಳಗಾವಿಯ ಜನತೆಯಲ್ಲಿ ಭಯ, ಆತಂಕ, ಅಭದ್ರತೆಯ ಭಾವನೆಗಳನ್ನು ಮೂಡಿಸಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಹೀಗಾಗಿ ಈ ಎರಡೂ ಸಂಘಟನೆ, ರಾಜಕೀಯ ಪಕ್ಷಗಳನ್ನು ನಿಷೇಧಿಸಬೇಕು, ನಿಷೇಧಕ್ಕೆ ಅಗತ್ಯವಿರುವ ಎಲ್ಲ ಬಗೆಯ ಕಾನೂನು ಹಾಗೂ ರಾಜಕೀಯ ಪ್ರಕ್ರಿಯೆಗಳನ್ನು ಆರಂಭಿಸಬೇಕು ಎಂದು ತಮ್ಮ ಮೂಲಕ ಒಕ್ಕೂಟ ಸರ್ಕಾರವನ್ನು ಒತ್ತಾಯಿಸುತ್ತೇವೆ.

ಎಂಇಎಸ್, ಶಿವಸೇನೆ ನಿಷೇಧಕ್ಕೆ ಆಗ್ರಹ:

ಎಂಇಎಸ್, ಶಿವಸೇನೆಗಳು ನಡೆಸುತ್ತಿರುವ ನಾಡದ್ರೋಹಿ, ದೇಶದ್ರೋಹಿ ಕೃತ್ಯಗಳ ವಿರುದ್ಧ ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತ ಬಂದಿದೆಯಲ್ಲದೆ ಇವುಗಳನ್ನು ನಿಷೇಧಿಸಬೇಕೆಂದು ಆಗ್ರಹಿಸುತ್ತಲೇ ಬಂದಿದೆ. ಈಗ ಈ ಎರಡು ಸಂಘಟನೆಗಳ ಸಮಾಜಘಾತಕ ಕೃತ್ಯಗಳು ಮಿತಿಮೀರಿಹೋಗಿದ್ದು, ರಾಜ್ಯದಲ್ಲಿ ದ್ವೇಷದ ವಾತಾವರಣ ನಿರ್ಮಿಸಿ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತಡಮಾಡದೆ ನಮ್ಮ ಬೇಡಿಕೆಯನ್ನು ಈಡೇರಿಸಲು ಒಕ್ಕೂಟ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಆಗ್ರಹಿಸುತ್ತೇವೆ.

English summary
Karnataka Rakshana Vedike President TA Narayana Gowda Writes Letter to Governor Thawar Chand Gehlot Demanding Ban on MES and Shiv Sena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X