ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಸೂಚಿಸಿದೆ.

ಭಾರತ ಒಕ್ಕೂಟದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟವನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಒಂದು ಕೋಟಿಗೂ ಹೆಚ್ಚು ರೈತರು ದೆಹಲಿ ಮತ್ತು ದೆಹಲಿಯ ಹೊರವಲಯದಲ್ಲಿ ನೆರೆದು ತಮ್ಮ ನ್ಯಾಯಯುತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರನ್ನು ಕರವೇ ಅಭಿನಂದಿಸುತ್ತದೆ.

ರೈತರ ಅಸ್ತಿತ್ವವನ್ನೇ ಬೇರು ಸಮೇತ ಕಿತ್ತುಹಾಕುವ ಮೂರು ಜನದ್ರೋಹಿ ಕಾನೂನುಗಳನ್ನು ಜಾರಿಗೊಳಿಸಿ ದೇಶದ ಅನ್ನದಾತನಿಗೆ ಘೋರ ಅನ್ಯಾಯವೆಸಗಲಾಗಿದೆ. ಒಕ್ಕೂಟ ಸರ್ಕಾರ ಯಾವುದೇ ಸಬೂಬು ಹೇಳದೇ ಮೂರೂ ಕಾನೂನುಗಳನ್ನು ತಕ್ಷಣ ಹಿಂದಕ್ಕೆ ಪಡೆದು ರೈತರ ಹೋರಾಟಕ್ಕೆ ಶರಣಾಗಬೇಕು. ಅದನ್ನು ಬಿಟ್ಟು ಸರ್ಕಾರಕ್ಕೆ ಬೇರೆ ದಾರಿಯಿಲ್ಲ ಎಂದು ರಾಜ್ಯಾಧ್ಯಕ್ಷ ಟಿಎ ನಾರಾಯಣಗೌಡ ತಿಳಿಸಿದ್ದಾರೆ.

ಮಸೂದೆಯ ಸೆಕ್ಷನ್ 6ರ ಸಬ್ ಕ್ಲಾಸ್ 2ರ ಪ್ರಕಾರ ಪ್ರಾಯೋಜಕರು ರೈತರಿಂದ ಸರಕನ್ನು ಸ್ವೀಕರಿಸುವ ಮುನ್ನ ಸರಕಿನ ಗುಣಮಟ್ಟವು ಒಪ್ಪಂದದಲ್ಲಿ ಮಾಡಿಕೊಂಡ ಗುಣಮಟ್ಟಕ್ಕೆ ತಕ್ಕ ಹಾಗಿದೆಯೇ ಎಂದು ಪರಿಶೀಲಿಸಬೇಕು. ಒಂದುವೇಳೆ ಗುಣಮಟ್ಟ ಸರಿ ಇಲ್ಲದೇ ಹೋದಲ್ಲಿ ರೈತ ಏನು ಮಾಡಬೇಕು? ಆತ ದೈತ್ಯ ಕಂಪೆನಿಗಳ ಮೇಲೆ ಕಾನೂನು ಹೋರಾಟ ಮಾಡಬೇಕು!

ಭಾರತ ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಮೂರನೇ ಕಾಯ್ದೆ ಬೃಹತ್ ಕೃಷಿ ಕಂಪೆನಿಗಳಿಗೆ ದೇಶದ ಆಹಾರ ಸರಕುಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶ ನೀಡುತ್ತದೆ. ಮೊದಲೆರಡು ಕಾಯ್ದೆಗಳಿಗೆ ಪೂರಕವಾಗಿ, ದೊಡ್ಡ ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿಯನ್ನು ಈ ಕಾನೂನು ಕಾಯುವುದಷ್ಟೇ ಅಲ್ಲದೆ ದೇಶವನ್ನು ಕಾಳಸಂತೆಯ ಅಂಧಕಾರಕ್ಕೆ ತಳ್ಳುತ್ತದೆ.

ದೇಶದಾದ್ಯಂತ ಆಹಾರ ಸರಕುಗಳ ಸಾಗಾಟ, ಸಂಗ್ರಹಣೆಗಳಿಗಿದ್ದ ಮಿತಿಯನ್ನು ಈ ಕಾನೂನು ತೆಗೆದುಹಾಕುತ್ತದೆ. ಆಹಾರ ಸಂಸ್ಕರಣೆ ಉದ್ಯಮಗಳಿಗಾಗಿ ಮತ್ತು ರಫ್ತುಗಳಿಗಾಗಿ ದೊಡ್ಡದೊಡ್ಡ ಕೃಷಿ ವ್ಯಾಪಾರ ಕಂಪನಿಗಳು ಎಷ್ಟು ಬೇಕಾದರೂ ಆಹಾರ ಸಂಗ್ರಹ ಮಾಡಿಟ್ಟುಕೊಳ್ಳಲು ಈ ಕಾಯಿದೆ ಎಲ್ಲ ಬಗೆಯ ಅವಕಾಶ ಕಲ್ಪಿಸಿಕೊಡುತ್ತದೆ.

ಯುದ್ಧ ಮತ್ತು ಬರದ ಸನ್ನಿವೇಶ ಹೊರತು ಮಿಕ್ಕ ಯಾವ ಸನ್ನಿವೇಶದಲ್ಲೂ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಅದರ ಅರ್ಥ, ಖಾಸಗಿ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಆಹಾರ ದಾಸ್ತಾನು ಮಾಡಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಗೆ ಅವಕಾಶ ನೀಡಿದರೂ ಸರ್ಕಾರ ಏನೂ ಮಾಡುವುದಿಲ್ಲ. ಆಹಾರ ಸಾಮಾಗ್ರಿಗಳಿಗೆ ಈ ಕಂಪೆನಿಗಳು ನಿಗದಿಪಡಿಸಿದ್ದೇ ದರ ಎಂಬಂತಾಗುತ್ತದೆ.

ಮೂರೂ ಕಾನೂನುಗಳು ಒಟ್ಟಾರೆಯಾಗಿ ರೈತರ ಮತ್ತು ದೇಶದ ಬಡಜನರ ಜೀವಹಿಂಡುವ ಕಾಯ್ದೆಗಳಾಗಿದ್ದು, ಲಕ್ಷಾಂತರ ಕೋಟಿ ರುಪಾಯಿಗಳನ್ನು ಇಟ್ಟುಕೊಂಡ ಅಂಬಾನಿ, ಅದಾನಿಯಂಥ ವ್ಯಾಪಾರಿಗಳಿಗೆ ಇಡೀ ಕೃಷಿ ಕ್ಷೇತ್ರವನ್ನು ಧಾರೆಯೆರೆಯುವ ಕಾನೂನುಗಳಾಗಿವೆ. ರೈತರು ಈ ಕಾರಣಕ್ಕಾಗಿಯೇ ದೇಶದ ಇತಿಹಾಸದಲ್ಲಿ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟಿಸುತ್ತಿದ್ದಾರೆ.

ಒಕ್ಕೂಟ ಸರ್ಕಾರ ಒಂದೆಡೆ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಮಾತುಕತೆಗೆ ಕರೆಯುತ್ತದೆ. ಇನ್ನೊಂದು ಕಡೆ ತನ್ನ‌ ಬೆಂಬಲಿಗರಿಂದ ರೈತರನ್ನು ಭಯೋತ್ಪಾದಕರು, ಜಿಹಾದಿಗಳು ಇತ್ಯಾದಿಯಾಗಿ ಅಪಪ್ರಚಾರ ಹರಡುತ್ತದೆ. ಅನ್ನದಾತ ರೈತರಿಗೇ ಭಯೋತ್ಪಾದಕರ ಪಟ್ಟ ಕಟ್ಟಿರುವುದು ದೇಶದ ಇತಿಹಾಸದಲ್ಲೇ ಮೊದಲಿರಬೇಕು. ಇದು ನೀಚತನದ ಪರಮಾವಧಿ.

ದೇಶದಲ್ಲಿ ಇಂದು ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವವರ ಮೇಲೆ ಕೆಸರು ಎರಚುವ, ಅದರ ಮೂಲಕ ಹೋರಾಟವನ್ನು ಹತ್ತಿಕ್ಕುವ ಹೊಸದಾರಿಯನ್ನು ಆಳುವ ಜನರು ಕಂಡುಕೊಂಡಿದ್ದಾರೆ. ಇದು ಅತ್ಯಂತ ಅಪಾಯಕಾರಿ, ಅಮಾನವೀಯ ನಡೆ. ಹೋರಾಟಗಾರರನ್ನು ಎದುರಿಸಲಾಗದ ಹೇಡಿಗಳಷ್ಟೇ ಹೀಗೆ ಅಪಪ್ರಚಾರ ಮಾಡುತ್ತಾರೆ.

ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನೆ: ಆಳುವ ಜನರಿಗೆ ವಿವೇಕ ಬರಲಿ: ಕರವೇ ಗೌಡ್ರ ಪೋಸ್ಟ್ ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನೆ: ಆಳುವ ಜನರಿಗೆ ವಿವೇಕ ಬರಲಿ: ಕರವೇ ಗೌಡ್ರ ಪೋಸ್ಟ್

ಒಕ್ಕೂಟ ಸರ್ಕಾರ ದಮನಕಾರಿ ನೀತಿಯನ್ನು ಕೈಬಿಟ್ಟು ಮೂರೂ ಜನವಿರೋಧಿ ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು. ದೇಶದ ಜನರಿಂದಲೇ ಸರ್ಕಾರವಾಗಿದೆ. ಜನರ ಇಚ್ಛೆಗೆ ವಿರುದ್ಧವಾಗಿ ಕಾನೂನುಗಳನ್ನು ಜಾರಿಗೊಳಿಸುವುದರಲ್ಲಿ ಅರ್ಥವಿಲ್ಲ. ರೈತರ ಹೋರಾಟ ನ್ಯಾಯಬದ್ಧವಾಗಿದೆ, ಹೀಗಾಗಿ ಅವರ ಎಲ್ಲ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು.

ತರಾತುರಿಯಲ್ಲಿ ಕೃಷಿ ಮಸೂದೆ ಮಂಡನೆ

ತರಾತುರಿಯಲ್ಲಿ ಕೃಷಿ ಮಸೂದೆ ಮಂಡನೆ

ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ತರಾತುರಿಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸರಿಯಾದ ಚರ್ಚೆಗೂ ಅವಕಾಶ ನೀಡದೇ, ವಿರೋಧಪಕ್ಷಗಳ ಹಕ್ಕುಗಳನ್ನು ಮೊಟಕುಗೊಳಿಸಿ ಅಸಾಂವಿಧಾನಿಕವಾಗಿ ಜಾರಿಗೊಳಿಸಿತು. ಹೀಗೆ ಕಾನೂನುಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸಿದ್ದು ದೇಶದ ಇತಿಹಾಸದಲ್ಲೇ ಇದೇ ಮೊದಲು.

ಎಪಿಎಂಸಿಗಳನ್ನು ನಾಶಪಡಿಸುವ ಗುರಿ

ಎಪಿಎಂಸಿಗಳನ್ನು ನಾಶಪಡಿಸುವ ಗುರಿ

ದೇಶದ ರೈತರು ಅಲ್ಪಸ್ವಲ್ಪ ಉಸಿರಾಡುತ್ತಿರುವುದು ಕೃಷಿ ಉತ್ಪನ್ನ ಮಾರುಕಟ್ಟೆಗಳು ಮತ್ತು ಕನಿಷ್ಠ ಬೆಂಬಲ ಬೆಲೆಯಿಂದಾಗಿ. ಆದರೆ ಎಪಿಎಂಸಿಗಳನ್ನು ಕೇಂದ್ರ ಸರ್ಕಾರ ನಗಣ್ಯಗೊಳಿಸುವ, ಅದರ ಮೂಲಕ ನಾಶಪಡಿಸುವ ಉದ್ದೇಶ ಹೊಂದಿದೆ.‌ ಖಾಸಗಿ ಮಂಡಿಗಳನ್ನು ತಂದು, ರೈತರನ್ನು ಮೊದಮೊದಲು ಆಕರ್ಷಿಸಿ ನಂತರ ಪಾತಾಳಕ್ಕೆ ತಳ್ಳುವ ಕಾಯ್ದೆಯಿದು.

 ಆಹಾರ ಭದ್ರತಾ ಕಾಯ್ದೆಯ ಮೂಲ ಉದ್ದೇಶವೇ ಬದಲಾಗಿದೆ

ಆಹಾರ ಭದ್ರತಾ ಕಾಯ್ದೆಯ ಮೂಲ ಉದ್ದೇಶವೇ ಬದಲಾಗಿದೆ

ಒಕ್ಕೂಟದ ರಾಜ್ಯ ಸರ್ಕಾರಗಳು ಎಪಿಎಂಸಿಗಳ ಮೂಲಕವೇ ರೈತರು ಬೆಳೆದ ಬೆಳೆಯನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸುತ್ತಿದ್ದವು. ದೇಶದ ಬಡವರಿಗೆ ಆಹಾರ ಭದ್ರತಾ ಕಾಯ್ದೆಯಡಿ ಇದೇ ಬೆಳೆಯನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ನೀಡಲಾಗುತ್ತಿತ್ತು. ಹೊಸ ಕಾನೂನಿನಲ್ಲಿ ಇದ್ಯಾವುದಕ್ಕೂ ಅವಕಾಶವಿಲ್ಲ. ಇದರಿಂದ ಆಹಾರ ಭದ್ರತಾ ಕಾಯ್ದೆಯ ಮೂಲ ಉದ್ದೇಶವೇ ತಲೆಕೆಳಗಾಗಲಿದೆ.

ಒಕ್ಕೂಟ ವ್ಯವಸ್ಥೆ ಮತ್ತಷ್ಟು ಶಿಥಿಲ

ಒಕ್ಕೂಟ ವ್ಯವಸ್ಥೆ ಮತ್ತಷ್ಟು ಶಿಥಿಲ

ಎಪಿಎಂಸಿಗಳು ರಾಜ್ಯ ಸರ್ಕಾರಗಳ ಅಧೀನದಲ್ಲಿದ್ದವು. ಬೆಳೆಗಾರರಿಗೆ ಮತ್ತು ವರ್ತಕರಿಗೆ ಸೆಸ್ ವಿಧಿಸುವ ಅಧಿಕಾರವೂ ರಾಜ್ಯ ಸರ್ಕಾರಗಳ ಬಳಿ ಇತ್ತು. ಖಾಸಗಿ ಮಂಡಿಗಳಿಗೆ ಚಾಲನೆ ನೀಡುವ ಮೂಲಕ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗುವುದು.‌ ಒಕ್ಕೂಟ ವ್ಯವಸ್ಥೆಯನ್ನು ಇದು ಇನ್ನಷ್ಟು ಶಿಥಿಲಗೊಳಿಸಲಿದೆ.
ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಇನ್ನೊಂದು ಮರಣ ಶಾಸನ ಕಾಂಟ್ರಾಕ್ಟ್ ಫಾರ್ಮಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ. ಇದು ಅಕ್ಷರಶಃ ರೈತರ ಅಸ್ತಿತ್ವ, ಸ್ವಾಭಿಮಾನ ಮತ್ತು ಬದುಕನ್ನೇ ಖಾಸಗಿ ಕಂಪೆನಿಗಳಿಗೆ ಮಾರಾಟ ಮಾಡುವ ಕಾನೂನು. ತಮ್ಮ‌ ನೆಲದಲ್ಲೇ ತಾವೇ ಯಾವುದೋ ಕಂಪೆನಿಗಳಿಗಾಗಿ ಕೆಲಸ ಮಾಡುವ ಕ್ರೂರ ವ್ಯವಸ್ಥೆಯನ್ನು ಇದು ಜಾರಿಗೊಳಿಸುತ್ತದೆ.

ರೈತರ ಮೂಲಭೂತ ಹಕ್ಕುಗಳ ದಮನ

ರೈತರ ಮೂಲಭೂತ ಹಕ್ಕುಗಳ ದಮನ

ರೈತರ ಹಿಡುವಳಿಗಳನ್ನು ಅತಿದೊಡ್ಡ ಬಹುರಾಷ್ಟ್ರೀಯ ಕಂಪೆ‌ನಿಗಳಿಗೆ ಒಪ್ಪಂದದ ಆಧಾರದಲ್ಲಿ ಗುತ್ತಿಗೆ ನೀಡುವ ಈ ಕಾನೂನು ರೈತರನ್ನು ಅಂಬಾನಿ, ಅದಾನಿಯಂಥ ಕುಳಗಳ ಜೀತದಾಳುಗಳಂತೆ ಮಾಡುತ್ತದೆ. ರೈತನಿಗೆ ಬೆಳೆ ಬೆಳೆಯಲು ಸಹಾಯ ನೀಡುವ ಸೋಗಿನಲ್ಲಿ, ಆತನ ಮೂಲಭೂತ ಹಕ್ಕುಗಳನ್ನು ದಮನಗೊಳಿಸುವ, ಅತಂತ್ರಗೊಳಿಸುವ ಕಾನೂನು ಇದು.

ಕೃಷಿ ಕ್ಷೇತ್ರಗಳ ಮಾರ್ಪಾಡು ಹೊಣೆ ಸರ್ಕಾರದ್ದು

ಕೃಷಿ ಕ್ಷೇತ್ರಗಳ ಮಾರ್ಪಾಡು ಹೊಣೆ ಸರ್ಕಾರದ್ದು

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾನೂನು‌ ರೂಪಿಸುವ, ಮಾರ್ಪಾಡುಗೊಳಿಸುವ ಹೊಣೆ ಮತ್ತು ಅಧಿಕಾರ ರಾಜ್ಯ ಸರ್ಕಾರಗಳಿಗೆ ಸೇರಿದ್ದು. ಒಕ್ಕೂಟ ಸರ್ಕಾರ ಇದರಲ್ಲಿ ಮೂಗು ತೂರಿಸಿ, ಒಕ್ಕೂಟ ವ್ಯವಸ್ಥೆಯ ಹಂದರವನ್ನು ಹಾಳು ಮಾಡಬಾರದು. ಎಲ್ಲ ಅಧಿಕಾರಗಳನ್ನು ತಾನೇ ಕೇಂದ್ರೀಕರಣಗೊಳಿಸಿಕೊಳ್ಳುವ ಕೆಟ್ಟ ಸಂಪ್ರದಾಯವನ್ನು ಒಕ್ಕೂಟ ಸರ್ಕಾರ ಕೈಬಿಡಬೇಕು.

ಹುಲಿಯ ಜತೆ ಜಿಂಕೆಯನ್ನು ಕಾದಾಡಲು‌ ಬಿಡುವ ಹಾಗೆ

ಹುಲಿಯ ಜತೆ ಜಿಂಕೆಯನ್ನು ಕಾದಾಡಲು‌ ಬಿಡುವ ಹಾಗೆ

ಇದು ಒಂದು ಬಗೆಯಲ್ಲಿ ಹುಲಿಯ ಜತೆ ಜಿಂಕೆಯನ್ನು ಕಾದಾಡಲು‌ ಬಿಡುವ ಹಾಗೆ.‌ ಬಡಪಾಯಿ ರೈತ, ದೈತ್ಯ ಕಂಪೆನಿಗಳ ಜತೆ ಕಾನೂನು ಹೋರಾಟ ನಡೆಸಲು ಸಾಧ್ಯವೇ? ಸರ್ಕಾರಗಳೇ ಈ ದೊಡ್ಡ ಕಂಪೆನಿಗಳ ಬಾಲಂಗೋಚಿಗಳಾಗಿರುವಾಗ ಸರ್ಕಾರದ ನಿರ್ದೇಶನಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾದ ಅಧಿಕಾರಿಗಳು ರೈತರಿಗೆ ನ್ಯಾಯಕೊಡಿಸಬಲ್ಲರೇ?

Recommended Video

ಎತ್ತರದ ಶಿಖರ Mt Everest , ಪುನಃ ಅಳತೆ ಮಾಡ್ಬೇಕಂತೆ | Oneindia Kannada

English summary
Karnataka Rakshana Vedike supports Farmers Protest in Delhi Against new farm laws.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X