• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕ ಬಂದ್: ಕರವೇ ನಿಲುವು ಸ್ಪಷ್ಟ ಪಡಿಸಿದ ನಾರಾಯಣ ಗೌಡ್ರು

|

ಬೆಂಗಳೂರು, ನವೆಂಬರ್ 25: ಡಿಸೆಂಬರ್ 5 ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಕರ್ನಾಟಕ ರಕ್ಷಣಾ ವೇದಿಕೆಯ ಸಂಪೂರ್ಣ ಬೆಂಬಲವಿದೆ ಎಂದು ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡರು ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆಯು ಕರ್ನಾಟಕ ಬಂದ್, ಪ್ರವಾಹ ಹೀಗೆ ಹಲವು ವಿಚಾರಗಳ ಕುರಿತು ಸಭೆಯನ್ನು ಏರ್ಪಡಿಸಿತ್ತು.

ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರ ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.ನವೆಂಬರ್ 25 ರಂದು ಗಾಂಧಿನಗರದ ಹೋಟೆಲ್‌ನಲ್ಲಿ ಕರವೇ ನಡೆ, ಬಿಜಾಪುರದ ಕಡೆ, ನೆರೆ ಸಂತ್ರಸ್ತರ ಪ್ರತಿಭಟನಾ ಸಮಾವೇಶ ನಡೆಯಲಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈ ವರ್ಷ ಭೀಕರವಾದ ನೆರೆ, ಭಾರಿ ಮಳೆಯಿಂದಾಗಿ ಒಂದು ಲಕ್ಷ ಕೋಟಿ ರುಪಾಯಿಗಳಿಗೂ ಹೆಚ್ಚು ನಷ್ಟ ಸಂಭವಿಸಿದೆ.

ರಾಜ್ಯ ಸರ್ಕಾರ ಅಂದಾಜು ಮಾಡಿರುವುದೇ 25000 ಕೋಟಿ ರುಪಾಯಿಗಳ ನಷ್ಟ. ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹತ್ತು ಸಾವಿರ ಕೋಟಿ ರುಪಾಯಿಗಳ ಪರಿಹಾರವನ್ನು ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

'ಕೇಂದ್ರ ಸರ್ಕಾರ ಕನ್ನಡಿಗರನ್ನು ಕಡೆಗಣಿಸುತ್ತಿದೆ'

ಆದರೆ ಇದುವರೆಗೆ ಕರ್ನಾಟಕಕ್ಕೆ ಬಂದಿರುವುದು ಕೇವಲ 577 ಕೋಟಿ ರುಪಾಯಿ. ಈ ಹಣವನ್ನೂ ಸಹ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಬಳಸಿಕೊಳ್ಳುತ್ತಿದೆಯೆಂಬ ಮಾಹಿತಿಯಿದೆ. ತಮ್ಮ ಮನೆ ಮಠ, ಜಾನುವಾರುಗಳು, ಬಂಧು ಬಾಂಧವರನ್ನು ಕಳೆದುಕೊಂಡ ಸಂತ್ರಸ್ಥರು ಪ್ರತಿನಿತ್ಯ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.

ಆದರೆ ರಾಜ್ಯ ಸರ್ಕಾರವನ್ನು ನಡೆಸುತ್ತಿರುವ ಮುಖ್ಯಮಂತ್ರಿಗಳು, ಮಂತ್ರಿಮಂಡಳದ ಸಚಿವರು, ಸಂಸತ್ ಸದಸ್ಯರು, ಶಾಸಕರು, ವಿರೋಧ ಪಕ್ಷದ ಮುಖಂಡರು ಯಾವುದೇ ರೀತಿಯಲ್ಲೂ ಜವಾಬ್ದಾರಿಯಿಂದ ನಡೆದುಕೊಳ್ಳದೆ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಸಭೆ, ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ 'ಕರವೇ ನಡೆ, ಬಿಜಾಪುರದ ಕಡೆ' ಎಂಬ ನೆರೆಸಂತ್ರಸ್ಥರ ಪ್ರತಿಭಟನಾ ಸಮಾವೇಶವನ್ನು ಏರ್ಪಡಿಸಲಿದೆ. ಈ ಸಮಾವೇಶದಲ್ಲಿ ಉತ್ತರ ಕರ್ನಾಟಕದ ನೆರೆಸಂತ್ರಸ್ಥ ಜಿಲ್ಲೆಗಳಿಂದ ಸಾವಿರಾರು ನೆರೆಸಂತ್ರಸ್ಥರು, ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ನೆರೆ ಸಂತ್ರಸ್ಥರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಕನಿಷ್ಠ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಬೇಕು ಮತ್ತು ರಾಜ್ಯ ಸರ್ಕಾರ ಈ ಕೂಡಲೇ ವಿಶೇಷ ಪ್ಯಾಕೇಜ್ಗೆ ಮನವಿ ಸಲ್ಲಿಸಿ, ಮಂಜೂರು ಮಾಡಿಸಬೇಕು ಎಂದು ಈ ಸಭೆ ಸರ್ವಾನುಮತದಿಂದ ಆಗ್ರಹಿಸುತ್ತದೆ.

ಕರ್ನಾಟಕ ಬಂದ್: ಕರವೇ ನಿಲುವು

ಕರ್ನಾಟಕ ಬಂದ್: ಕರವೇ ನಿಲುವು

ಕೆಲವು ಕನ್ನಡಪರ ಸಂಘಟನೆಗಳು ಡಿಸೆಂಬರ್ 5ರಂದು ಕರೆ ನೀಡಿರುವ ‘ಕರ್ನಾಟಕ ಬಂದ್' ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

1. ‘ಮರಾಠಾ ಅಭಿವೃದ್ಧಿ ಪ್ರಾಧಿಕಾರ' ರಚನೆ ರಾಜಕೀಯ ಪ್ರೇರಿತ, ದುಡುಕಿನ, ಅಸಂವಿಧಾನಿಕ ತೀರ್ಮಾನವಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ತಾತ್ತ್ವಿಕವಾಗಿ ವಿರೋಧಿಸುತ್ತದೆ.

2. ಬಂದ್ ಕರೆ ನೀಡಿರುವ ಹಿರಿಯ ಕನ್ನಡ ಚಳವಳಿ ನಾಯಕರಾದ ಶ್ರೀ ವಾಟಾಳ್ ನಾಗರಾಜ್ ಅವರು ಬಂದ್ಗೆ ಕೈಜೋಡಿಸುವಂತೆ ಶ್ರೀ ಟಿ.ಎ.ನಾರಾಯಣಗೌಡರಿಗೆ ಕೋರಿದ್ದಾರೆ. ಹಾಗೆಯೇ ‘ಮರಾಠಾ ಸಮುದಾಯ'ದ ಅನೇಕ ಮುಖಂಡರು ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರನ್ನು ಭೇಟಿಯಾಗಿ ಮನವಿಗಳನ್ನು ಸಲ್ಲಿಸಿರುತ್ತಾರೆ. ರಾಜ್ಯ ಸರ್ಕಾರ ಇಂಥ ಸೂಕ್ಷ್ಮ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಎಲ್ಲ ಕನ್ನಡಪರ ಸಂಘಟನೆಗಳ ಮುಖಂಡರ ಸಭೆ ಕರೆದು, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ ಮುಖ್ಯಮಂತ್ರಿಗಳಾದಿಯಾಗಿ ಹಲವು ಶಾಸಕರು, ಬಿಜೆಪಿ ಮುಖಂಡರು ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತ ಕನ್ನಡಿಗರನ್ನು ಭಾವನಾತ್ಮಕವಾಗಿ ಕೆರಳಿಸಿ, ಸುಲಭವಾಗಿ ಬಗೆಹರಿಯಬಹುದಿದ್ದ ವಿವಾದವನ್ನು ದೊಡ್ಡದಾಗಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ.

3. ಕರ್ನಾಟಕ ರಕ್ಷಣಾ ವೇದಿಕೆ ‘ಮರಾಠಾ ಸಮುದಾಯ'ದ ವಿರುದ್ಧವಾಗಲೀ, ಮರಾಠಿ ಭಾಷಿಕರ ವಿರುದ್ಧವಾಗಲಿ ಇಲ್ಲ. ನಮ್ಮ ವಿರೋಧ ಇರುವುದು ಕನ್ನಡದ್ರೋಹದ ಚಟುವಟಿಕೆಗಳನ್ನು ಕನ್ನಡದ ನೆಲದಲ್ಲಿ ನಡೆಸುವ ಎಂಇಎಸ್ ವಿರುದ್ಧ ಹಾಗು ಗಡಿಯಾಚೆಯಿಂದ ಪ್ರಚೋದನೆ ನೀಡಿ ಕನ್ನಡಿಗರಿಗೂ ಮರಾಠಿಗರಿಗೂ ಜಗಳ ತಂದಿಡುವ ಶಿವಸೇನೆ ಮತ್ತು ಎನ್ಸಿಪಿ ವಿರುದ್ಧ. ಸಾಮಾನ್ಯ ಮರಾಠಿಗರು ಕರ್ನಾಟಕದಲ್ಲಿ ಕನ್ನಡಿಗರಾಗಿಯೇ ಗುರುತಿಸಿಕೊಂಡು, ಹೊಂದಾಣಿಕೆಯಿಂದ ಬದುಕುತ್ತಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯಲ್ಲೇ ಸಾಕಷ್ಟು ಮಂದಿ ಮರಾಠಿ ಮಾತೃಭಾಷೆಯುಳ್ಳವರು ಇದ್ದಾರೆ. ಆದರೆ ಸರ್ಕಾರವೇ ಚುನಾವಣಾ ರಾಜಕೀಯಕ್ಕಾಗಿ ಮರಾಠಿಗರನ್ನು ಕನ್ನಡದ ಮುಖ್ಯವಾಹಿನಿಯಿಂದ ದೂರ ಮಾಡಲು ಪ್ರಯತ್ನಿಸುತ್ತಿದೆಯಲ್ಲದೆ ಕನ್ನಡಿಗರು-ಮರಾಠಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರೊಬ್ಬರು ‘ಬಿಜೆಪಿಗೆ ಕನ್ನಡಿಗರ ಮತ ಬೇಕಿಲ್ಲ' ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಹಲವು ಶಾಸಕರು, ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಸದಾ ಕನ್ನಡಪರ ಕಾಳಜಿಯ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಬಿ.ಎಸ್.ಯಡಿಯೂರಪ್ಪನವರಾಗಲೀ, ಬಿಜೆಪಿಯ ರಾಜ್ಯ ನಾಯಕರಾಗಲೀ ಈ ಹೇಳಿಕೆಯನ್ನು ಸಮರ್ಥಿಸುವುದಿಲ್ಲ ಎಂದು ಇದುವರೆಗೆ ಹೇಳಿರುವುದಿಲ್ಲ. ಹೀಗಾಗಿ ಇದು ಭಾರತೀಯ ಜನತಾ ಪಕ್ಷದ ಅಭಿಪ್ರಾಯ ಎಂದೇ ಭಾವಿಸಬೇಕಾಗಿದೆ.

4. ಭಾರತೀಯ ಜನತಾ ಪಕ್ಷಕ್ಕೆ ಕನ್ನಡಿಗರ ಮತ ಬೇಕಿಲ್ಲವಾದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜೀನಾಮೆ ನೀಡಿ, ವಿಧಾನಸಭೆ ವಿಸರ್ಜಿಸಿ ಮತ್ತೆ ಚುನಾವಣೆಗೆ ಹೋಗಲಿ. ಆಗಲೂ ಅವರು ಕನ್ನಡಿಗರ ಮತ ಬೇಕಿಲ್ಲ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡಲಿ. ಕನ್ನಡಿಗರು ಆಗ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ.

5. ಇದೆಲ್ಲ ವಿಷಯಗಳ ಕುರಿತು ಕೂಲಂಕಶವಾಗಿ ಚರ್ಚಿಸಿ, ಸರ್ಕಾರ ಮತ್ತು ಸರ್ಕಾರವನ್ನು ನಡೆಸುತ್ತಿರುವ ಕನ್ನಡವಿರೋಧಿ ಧೋರಣೆಗಳನ್ನು ಗಮನದಲ್ಲಿಟ್ಟುಕೊಂಡು ಡಿಸೆಂಬರ್ 5ರಂದು ಕರೆ ನೀಡಲಾಗಿರುವ ‘ಕರ್ನಾಟಕ ಬಂದ್'ಗೆ ತಾತ್ತ್ವಿಕ ಬೆಂಬಲ ನೀಡಲು ಕರ್ನಾಟಕ ರಕ್ಷಣಾ ವೇದಿಕೆ ತೀರ್ಮಾನಿಸಿದೆ. ರಾಜ್ಯದ ಜನತೆ ಸ್ವಯಂಪ್ರೇರಿತರಾಗಿ ಬಂದ್ನಲ್ಲಿ ಪಾಲ್ಗೊಂಡು ಸರ್ಕಾರದ ನೀತಿಯನ್ನು ಧಿಕ್ಕರಿಸಬೇಕು, ‘ಕನ್ನಡಿಗರ ಮತ ಬೇಕಿಲ್ಲ' ಎಂದು ಹೇಳಿರುವ ಭಾರತೀಯ ಜನತಾ ಪಕ್ಷದ ನಾಯಕರಿಗೆ ಛೀಮಾರಿ ಹಾಕಬೇಕು ಎಂದು ವೇದಿಕೆ ಮನವಿ ಮಾಡುತ್ತದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲು ಈ ಸಭೆ ತೀರ್ಮಾನಿಸುತ್ತದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ವೇದಿಕೆ ಕಾರ್ಯಕರ್ತರು ಎಚ್ಚರ ವಹಿಸಬೇಕು ಎಂದು ಸಭೆ ತೀರ್ಮಾನಿಸುತ್ತದೆ.

ಜಾತಿಗೊಂದು ಪ್ರಾಧಿಕಾರ, ನಿಗಮ ಮಂಡಳಿ

ಜಾತಿಗೊಂದು ಪ್ರಾಧಿಕಾರ, ನಿಗಮ ಮಂಡಳಿ

1. ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ, ರಾಜಕೀಯಪ್ರೇರಿತವಾಗಿ ಜಾತಿಗೊಂದು ಪ್ರಾಧಿಕಾರ, ನಿಗಮ, ಮಂಡಳಿ ರಚಿಸುತ್ತಿದೆ. ಇದು ಕೆಟ್ಟ ಬೆಳವಣಿಗೆಯಾಗಿದೆ. ಯಾವುದೇ ಸಮುದಾಯಕ್ಕೆ ಇಂಥ ಮಂಡಳಿಗಳನ್ನು ಸ್ಥಾಪಿಸುವುದಾದರೆ ಅದಕ್ಕೆ ವೈಜ್ಞಾನಿಕವಾದ ಆಧಾರವಿರಬೇಕು. ಆ ಸಮುದಾಯ ಸಾಮಾಜಿಕವಾಗಿ ತುಳಿತಕ್ಕೆ ಒಳಗಾಗಿರಬೇಕು ಮತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರಬೇಕು. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆಯಾಗಿದೆ. ಈ ಆಯೋಗ ಅಧ್ಯಯನ ನಡೆಸಿ, ಸಾರ್ವಜನಿಕ ಅಹವಾಲುಗಳನ್ನು ನಡೆಸಿ, ತಜ್ಞ ಸಂಸ್ಕೃತಿ ಸಂಶೋಧಕರಿಂದ ಕುಲಶಾಸ್ತ್ರೀಯ ಅಧ್ಯಯನಗಳನ್ನು ನಡೆಸಿ ಸರ್ಕಾರಕ್ಕೆ ವರದಿ ನೀಡುತ್ತದೆ. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಆಧಾರದಲ್ಲಿ ಸರ್ಕಾರ ಇಂಥ ನಿಗಮ ಮಂಡಳಿಗಳನ್ನು ರಚಿಸಬೇಕಾಗುತ್ತದೆ. ಆದರೆ ರಾಜ್ಯ ಸರ್ಕಾರ ಇಂಥ ಯಾವುದೇ ವರದಿಗಳ ಆಧಾರವಿಲ್ಲದೆ ಈಗ ಸಾಲುಸಾಲಾಗಿ ರಚಿಸುತ್ತಿರುವ ನಿಗಮ, ಮಂಡಳಿ, ಪ್ರಾಧಿಕಾರಗಳು ಅಸಂವಿಧಾನಿಕ ಮತ್ತು ಕಾನೂನು ಬಾಹಿರವಾಗಿದೆ.

2. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅತ್ಯಂತ ಹಿಂದುಳಿದಿರುವ ಅಲೆಮಾರಿ ಸಮುದಾಯಗಳಿಗಾಗಿ ಅಲೆಮಾರಿ ಆಯೋಗ ಮತ್ತು ಅಲೆಮಾರಿ ನಿಗಮವನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು. ಆದರೆ ಇದುವರೆಗೆ ಆ ಕಾರ್ಯವನ್ನು ಸರ್ಕಾರ ಮಾಡಿಲ್ಲ. ಕನಿಷ್ಠ ಮತದಾನದ ಗುರುತಿನ ಚೀಟಿ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಕೂಡ ಇಲ್ಲದ ಅನೇಕ ಸಮುದಾಯಗಳು ರಾಜ್ಯದಲ್ಲಿವೆ. ಹಿಂದುಳಿದ ವರ್ಗದಲ್ಲಿ ಬರುವ ಕಮ್ಮಾರ, ತಿಗಳ, ಆಡು ಮತ್ತು ಕುರಿಗಾಹಿಗಳು, ಕರಡಿ ಕಲಂದರ್, ಕೊಡಗು ಕಾಪಾಳರು, ಕ್ರೈಸ್ತ ಪರಿಶಿಷ್ಟರು, ಹಾವಾಡಿಗ, ದೊಂಬಿದಾಸ, ಚಪ್ಪರ್ ಬಂದ್, ಖಂಜರ್ ಬಾಟ್, ಜೋಗಿ, ಹರಣಿ ಶಿಕಾರಿ, ಗೋಂದಲಿ, ಡವರಿ, ಸಿಕ್ಕಲಿಗ ಸಮುದಾಯಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗಲೇ ಕಾರ್ಯನಿರ್ವಹಿಸಿದ್ದ ಡಾ.ಸಿ.ಎಸ್.ದ್ವಾರಕಾನಾಥ್ ಅವರ ಆಯೋಗ ಶಿಫಾರಸು ಮಾಡಿದೆ. ಆದರೆ ಇದ್ಯಾವುದನ್ನೂ ಮಾಡದೇ ರಾಜಕೀಯ ಶಕ್ತಿ ಇರುವ ಸಮುದಾಯಗಳಿಗೆ ನಿಗಮ ಮಂಡಳಿ ಮಾಡುವುದು ಅನೈತಿಕ. ಸರ್ಕಾರ ಈ ಕೂಡಲೇ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸು ಇಲ್ಲದೆ ರಚಿಸಿರುವ ಎಲ್ಲ ಪ್ರಾಧಿಕಾರ, ಮಂಡಳಿ, ನಿಗಮಗಳನ್ನು ರದ್ದುಪಡಿಸಿ, ಆಯೋಗದ ಶಿಫಾರಸಿನಂತೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಇಂಥ ಮಂಡಳಿಗಳನ್ನು ರಚಿಸಬೇಕು ಎಂದು ಈ ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.

ಜಿಎಸ್ಟಿ ಮತ್ತು ಉದ್ಯೋಗ

ಜಿಎಸ್ಟಿ ಮತ್ತು ಉದ್ಯೋಗ

ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಕರ್ನಾಟಕ ರಾಜ್ಯಕ್ಕೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗುತ್ತಿದೆ. ಲಕ್ಷಾಂತರ ಕೋಟಿ ರುಪಾಯಿ ತೆರಿಗೆ ಹಣವನ್ನು ಕರ್ನಾಟಕ ಸಂಗ್ರಹಿಸಿಕೊಟ್ಟರೂ, ಕರ್ನಾಟಕಕ್ಕೆ ವಾಪಾಸು ಬರುತ್ತಿರುವ ಹಣ ನಗಣ್ಯ. ಬರ-ನೆರೆಯಂಥ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ನಾವು ಕೇಂದ್ರ ಸರ್ಕಾರದ ಮುಂದೆ ಭಿಕ್ಷೆ ಕೇಳುವಂತೆ ಹಣ ಕೇಳುವ ಪರಿಸ್ಥಿತಿ ಉದ್ಭವವಾಗಿದೆ. ಜಿಎಸ್ಟಿ ಮಂಡಳಿಯಲ್ಲಿ ಕೇಂದ್ರ ಸರ್ಕಾರ 33.33 ಶೇ. ಮತದಾನದ ಹಕ್ಕು ಹೊಂದಿರುವುದರಿಂದ ಕೇಂದ್ರ ಸರ್ಕಾರ ಏನು ತೀರ್ಮಾನಿಸುತ್ತದೋ ಅದೇ ಜಾರಿಯಾಗುತ್ತದೆ.

ಜಿಎಸ್ಟಿ ಆರಂಭಗೊಳ್ಳುವಾಗ ಕೇಂದ್ರ ಸರ್ಕಾರ ಮೊದಲ ಐದು ವರ್ಷಗಳಲ್ಲಿ ಆಗುವ ನಷ್ಟವನ್ನು ಭರಿಸಿಕೊಡುವುದಾಗಿ ವಾಗ್ದಾನ ಮಾಡಿತ್ತು. ಆದರೆ ಈ ವಾಗ್ದಾನವನ್ನು ಮುರಿದು, ಪರಿಹಾರದ ಹಣ ನೀಡಲಾಗುವುದಿಲ್ಲ, ಬೇಕಿದ್ದರೆ ರಿಸರ್ವ್ ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳಿ ಎಂದು ಹೇಳಿ ಕೇಂದ್ರ ಸರ್ಕಾರ ಕೈ ತೊಳೆದುಕೊಂಡಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆಯ ಮೇಲೆ ಮಾಡಿದ ದೊಡ್ಡ ಪ್ರಹಾರ. ಇಂಥ ಅನ್ಯಾಯದ ಜಿಎಸ್ಟಿ ವ್ಯವಸ್ಥೆ ನಮಗೆ ಬೇಕಿಲ್ಲ. ನಮ್ಮ ತೆರಿಗೆ ನಮಗೇ ಇರುವಂತೆ ಹಳೆಯ ತೆರಿಗೆ ವ್ಯವಸ್ಥೆಯೇ ಜಾರಿಗೆ ಬರಬೇಕು. ಆರ್ಥಿಕ ವಿಷಯಗಳಲ್ಲಿ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಸಭೆ ಒತ್ತಾಯಿಸುತ್ತದೆ.

  Cyclone Nivar Effect: ಮಳೆ ಮಳೆ ... ಎಚ್ಚರ!! | Oneindia Kannada
  ಆರ್ಥಿಕ ಕುಸಿತ

  ಆರ್ಥಿಕ ಕುಸಿತ

  ಆರ್ಥಿಕ ಕುಸಿತ, ಕೊವಿಡ್ 19 ಇತ್ಯಾದಿ ಕಾರಣಗಳಿಂದಾಗಿ ರಾಜ್ಯದಲ್ಲಿ ನಿರುದ್ಯೋಗಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರ್ಕಾರದ ಉದ್ಯಮಗಳಲ್ಲಿ ಕನ್ನಡಿಗರಿಗೆ ಕೆಲಸ ಸಿಗುತ್ತಿಲ್ಲ. ಪದೇ ಪದೇ ಚಳವಳಿ ನಡೆಸಿದರೂ ಕನ್ನಡದ ಮಕ್ಕಳಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯಲು ಅವಕಾಶ ನೀಡುತ್ತಿಲ್ಲ. ಕರ್ನಾಟಕದಲ್ಲಿ ಉತ್ತರ ಭಾರತೀಯರನ್ನು ತುಂಬಿಸಲು, ವಲಸೆ ಪ್ರಮಾಣ ಹೆಚ್ಚಿಸಲು ಕೇಂದ್ರ ಸರ್ಕಾರದ ಇಲಾಖೆ, ಉದ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರೇ ಸಿಗುವಂತೆ ರಾಜ್ಯ ಸರ್ಕಾರ ಕೂಡಲೇ ಕಾನೂನೊಂದನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತದೆ. ಇದಕ್ಕಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ನಿರಂತರ ಚಳವಳಿಗಳನ್ನು ಹಮ್ಮಿಕೊಳ್ಳಲು ಸಭೆ ತೀರ್ಮಾನಿಸುತ್ತದೆ.

  English summary
  Members of Karnataka Rakshana vedike Decided to Support Karnataka Bandh , Karnataka Rakshana Vedike asks BSY govt to scrap Maratha board.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X