ಸ್ವಿಗ್ಗಿ, ಡಂಜೋ ಸಮವಸ್ತ್ರದಲ್ಲಿ ಡ್ರಗ್ಸ್ ಮಾರಾಟ: ಜಾಮೀನು ನಿರಾಕರಿಸಿದ ಹೈಕೋರ್ಟ್
ಬೆಂಗಳೂರು, ಜ.29: ಸ್ವಿಗ್ಗಿ ಮತ್ತು ಡುಂಜೋ ಸೇವೆ ನೀಡುವವರಂತೆ ಆ ಸಮವಸ್ತ್ರ ಧರಿಸಿಕೊಂಡು ಮಾದಕ ದ್ರವ್ಯಗಳ ಕಳ್ಳ ಮಾರಾಟದಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಮೂಲತಃ ಕೊಡಗು ಜಿಲ್ಲೆಯ ಅಬ್ದುಲ್ ರಜಾಕ್ ಮತ್ತು ಎಸ್.ಎಚ್. ರಶೀದ್ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಆಲಿಸಿದ ನ್ಯಾ. ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
"ತನಿಖೆ ವೇಳೆ ಆರೋಪಿಗಳಿಂದ ಮಾದಕ ನಿಗ್ರಹ ದಳ(ಎನ್ ಸಿಬಿ) ಸಾಕಷ್ಟು ಎಟಿಎಂ ಕಾರ್ಡ್ ಗಳನ್ನು ಮತ್ತು ಹಣ ಠೇವಣಿ ಮಾಡುವ ಇತರೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಡಂಜೋ ಮತ್ತು ಸ್ವಿಗ್ಗಿ ಸೇವಾ ಪೂರೈಕೆದಾರರ ಹೆಸರಿನಲ್ಲಿ ಆರೋಪಿಗಳು ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಿದ್ದಾರೆ. ಈ ಹಂತದಲ್ಲಿ ಎನ್ಸಿಬಿ ತಮ್ಮಿಂದ ಏನೂ ವಶಪಡಿಸಿಕೊಂಡಿಲ್ಲವೆಂಬ ಆರೋಪಿಗಳ ಹೇಳಿಕೆ ಆಧರಿಸಿ ಜಾಮೀನು ನೀಡಲಾಗದು'' ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೆ, ಅರ್ಜಿದಾರರಿಗೆ ಜಾಮೀನು ನೀಡಿದರೆ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಾರೆ ಎಂಬುದನ್ನು ತಳ್ಳಿ ಹಾಕಲಾಗದು. ಡ್ರಗ್ ಪೆಡ್ಲಿಂಗ್ ಚಟುವಟಿಕೆ ಗಂಭೀರ ಅಪರಾಧವಾಗಿದ್ದು, ಅವುಗಳಲ್ಲಿ ತೊಡಗಿರುವವರ ಜಾಮೀನು ಅರ್ಜಿ ಪುರಸ್ಕರಿಸಲಾಗದು ಎಂದು ಆರೋಪಿಗಳ ಅರ್ಜಿಗಳನ್ನು ವಜಾಗೊಳಿಸಿದೆ.
ಜಾಮೀನು ಅರ್ಜಿಯನ್ನು ವಿರೋಧಿಸಿದ್ದ ಪ್ರಾಸಿಕ್ಯೂಷನ್ ಪರ ವಕೀಲರು, ರಜಾಕ್ ಮತ್ತು ರಶೀದ್ ಇಬ್ಬರೂ ಸಣ್ಣ ಪ್ಯಾಕೇಟ್ ಗಳಲ್ಲಿ ಗಾಂಜಾ ತುಂಬಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ರಜಾಕ್ ಖಾತೆಯಲ್ಲಿ ಬ್ಯಾಂಕ್ ನಲ್ಲಿ ಭಾರಿ ಪ್ರಮಾಣದ ಹಣ ಠೇವಣಿ ಮಾಡಿರುವುದು ಆತ ಮಾದಕ ದ್ರವ್ಯ ಮಾರಾಟ ದಂಧೆಯಲ್ಲಿ ತೊಡಗಿರುವುದನ್ನು ದೃಢಪಡಿಸುತ್ತದೆ. ಇಬ್ಬರಿಬ್ಬರೂ ಕಾರ್ಡ್ ಬೋರ್ಡ್ ಬಾಕ್ಸ್ ಗಳಲ್ಲಿ ಮಾಡಿಕೊಂಡು ಡಂಜೋ ಮತ್ತು ಸ್ವಿಗ್ಗಿ ಸಮವಸ್ತ್ರ ಧರಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು, ಇದು ಗಂಭೀರ ಅಪರಾಧ . ಹಾಗಾಗಿ ಜಾಮೀನು ನೀಡಬಾರದೆಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಪ್ರಕರಣದ ಹಿನ್ನೆಲೆ?
2021ರ ಸೆ.30ರಂದು ಖಚಿತ ಮಾಹಿತಿ ಆಧರಿಸಿ ಎನ್ ಸಿಬಿ ಅಧಿಕಾರಿಗಳು ನಗರದ ಕುಂದಲಹಳ್ಳಿ ಬಳಿ ಕಾರನ್ನು ತಪಾಸಣೆಗೊಳಪಡಿಸಿದಾಗ ಆದರಲ್ಲಿ 136 ಕೆ.ಜಿ. 800 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡಗು ಮೂಲದ ಆರೋಪಿಗಳಾದ ಬಿಯು ಅಬ್ದುಲ್ ರಜಾಕ್ ಮತ್ತು ಎಸ್ ಎಚ್ ರಶೀದ್ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅದರಲ್ಲಿ ಒಬ್ಬರು ಸೆಲೂನ್ ಮತೊಬ್ಬರು ಬೇಕರಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ.