ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಸರ್ಕಾರದ ಸಮ್ಮತಿ
ಬೆಂಗಳೂರು, ಜನವರಿ.13: ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹೋರಾಟಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದ್ದಾರೆ.
"ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಅಭಿಯಾನ ತಾರ್ಕಿಕ ಅಂತ್ಯ ಕಾಣುವ ಭರವಸೆ ಮೂಡಿದೆ. ಕೆಲವು ಔಪಚಾರಿಕ ಕ್ರಿಯೆಗಳು ಮಾತ್ರವೇ ಉಳಿದಿದ್ದು, ಸದ್ಯದಲ್ಲೇ ಅಗತ್ಯ ಹಣ ಬಿಡುಗಡೆಯಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನನಗೆ ದೂರವಾಣಿ ಮೂಲಕ ತಿಳಿಸಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಭಿತ್ತಿಪತ್ರ ಚಳವಳಿಯ ಉದ್ದೇಶ
ಹಣಕಾಸು ಇಲಾಖೆ ಹಣ ಬಿಡುಗಡೆಗೆ ಒಪ್ಪಿಗೆ ನೀಡಿದ್ದು, ಅನುದಾನ ಬಿಡುಗಡೆಗೆ ಇದ್ದ ಎಲ್ಲ ತೊಡಕುಗಳು ನಿವಾರಣೆಯಾಗಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಯಾವುದೇ ರೀತಿಯಲ್ಲಿ ಹಣಕಾಸಿನ ಕೊರತೆ ಉಂಟಾಗದಂತೆ ನೋಡಿಕೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ. ಅಲ್ಲದೇ ಕನ್ನಡ ವಿಶ್ವವಿದ್ಯಾಲಯ ಎಂದಿನಂತೆ ಕಾರ್ಯನಿರ್ವಹಿಸಲು ಅನುವಾಗುವಂತೆ ಎಲ್ಲ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಜಗತ್ತಿನ ಏಕೈಕ ಕನ್ನಡ ವಿವಿ ಉಳಿವಿಗೆ ಹೋರಾಟ:
ಹಂಪಿ ಕನ್ನಡ ವಿಶ್ವವಿದ್ಯಾಲಯ ಕನ್ನಡಕ್ಕಾಗಿಯೇ ಇರುವ ಜಗತ್ತಿನ ಏಕೈಕ ವಿಶ್ವವಿದ್ಯಾಲಯ. ಇದರಿಂದ ಸರ್ಕಾರ ಆದಾಯ ನಿರೀಕ್ಷೆ ಮಾಡಬಾರದು. ಇದನ್ನು ಅಫಿಲಿಯೇಟೆಡ್ ವಿಶ್ವವಿದ್ಯಾಲಯವಾಗಿ ಬದಲಿಸುವ ಯಾವುದೇ ದುಸ್ಸಾಹಸಕ್ಕೂ ಸರ್ಕಾರ ಕೈಹಾಕಬಾರದು ಎಂದು ಸಚಿವರಿಗೆ ಈ ಸಂದರ್ಭದಲ್ಲಿ ನಾನು ಮನವಿ ಮಾಡಿಕೊಂಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಹಂಪಿ #ಕನ್ನಡವಿವಿಉಳಿಸಿ ಅಭಿಯಾನದ ಸಂಪೂರ್ಣ ಮಾಹಿತಿ ಹೊಂದಿದ್ದು, ಕನ್ನಡದ ಸಾರಸ್ವತ ಲೋಕದ ದಿಗ್ಗಜರು, ಸಾಮಾಜಿಕ ಹೋರಾಟಗಾರರ ಅಭಿಮತವನ್ನು ಗಮನಿಸಿದ್ದು, ಕನ್ನಡ ವಿಶ್ವವಿದ್ಯಾಲಯದ ಅಸ್ಮಿತೆಗೆ, ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದಾಗಿ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಹೇಳಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಟ್ವೀಟ್ ಮಾಡಿದ್ದಾರೆ.