ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹತ್ವಾಕಾಂಕ್ಷೆಯ ತಲಚೇರಿ-ವಯನಾಡ್-ಮೈಸೂರು ರೈಲ್ವೇ ಯೋಜನೆ ತಿರಸ್ಕರಿಸಿದ ರಾಜ್ಯ ಸರ್ಕಾರ

By Coovercolly Indresh
|
Google Oneindia Kannada News

ಬೆಂಗಳೂರು, ಮೇ 14: ಕೇರಳ ರಾಜ್ಯ ಸರ್ಕಾರದ ಜಂಟಿ ಉದ್ಯಮ ಕಂಪನಿಯಾದ ಕೇರಳ ರೈಲು ಅಭಿವೃದ್ಧಿ ನಿಗಮ ಲಿಮಿಟೆಡ್ (ಕೆ-ರೈಲು) ಅಡಿಯಲ್ಲಿ ತಲಚೇರಿ-ವಯನಾಡ್-ಮೈಸೂರು ರೈಲು ಮಾರ್ಗವನ್ನು ಅಭಿವೃದ್ಧಿಪಡಿಸುವ ಕೇರಳ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಸ್ತಾಪವನ್ನು ಸ್ಥಗಿತಗೊಳಿಸಿದೆ ಎಂದು ರಾಜ್ಯ ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯ ಅರಣ್ಯ ಇಲಾಖೆಯು ಈ ಉದ್ದೇಶಿತ ಯೋಜನೆಗೆ ಆಕ್ಷೇಪ ಎತ್ತಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸರ್ಕಾರವು ಈ ಯೋಜನೆಯನ್ನು ತಿರಸ್ಕರಿಸಿದೆ ಎನ್ನಲಾಗಿದೆ. ಈ ರೈಲು ಯೋಜನೆಯ ಒಟ್ಟು ಮೊತ್ತ ೫೦೦೦ ಕೋಟಿ ರೂಪಾಯಿಗಳಾಗಿದ್ದು, ಎರಡೂ ರಾಜ್ಯಗಳ ದಟ್ಟಾರಣ್ಯದಲ್ಲಿ ಇದು ಹಾದು ಹೋಗಬೇಕಾಗಿತ್ತು.

ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸುರಂಗ

ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸುರಂಗ

ವಯನಾಡ್ ವನ್ಯಜೀವಿ ಅಭಯಾರಣ್ಯ, ಬಂಡೀಪುರ ಹುಲಿ ಮೀಸಲು ಅರಣ್ಯ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿ ತಾಣಗಳನ್ನು ಉಳಿಸಲು ಕಬಿನಿ ನದಿಗೆ ಅಡ್ಡಲಾಗಿ ದೊಡ್ಡ ಸುರಂಗವನ್ನು ನಿರ್ಮಿಸುವ ಈ ಬೃಹತ್ ಯೋಜನೆಯು ಕಾರ್ಯಸಾಧ್ಯವಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳ ನಡುವಿನ ಸಮೃದ್ಧ ಜೀವ ವೈವಿಧ್ಯ ಕಾರಿಡಾರ್ ಮೇಲೆ ಹಾನಿಕಾರಕ ಪರಿಣಾಮ ಬೀರುವುದರ ಜೊತೆಗೆ ಭೂಗತ ಸುರಂಗಗಳ ಮೂಲಕ ರೈಲು ಮಾರ್ಗವನ್ನು ನಿರ್ಮಿಸಿದರೂ ಸಹ, ಇದು ಭೂಮಿಯ ಕೆಳಗಿರುವ ನೀರಿನ ಸೆಲೆಗಳ ಮರುಪೂರಣಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಅಷ್ಟೇ ಅಲ್ಲ, ಆ ಮೂಲಕ ಪ್ರಾಕೃತಿಕ ವ್ಯವಸ್ಥೆಗೆ ತೊಂದರೆಯಾಗಿ ತೀವ್ರ ಪರಿಸರ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ರಾಜ್ಯ ಅರಣ್ಯ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ ಎಂದೂ ಮೂಲಗಳು ದೃಢಪಡಿಸಿವೆ.

ಕೇರಳದ ಪುಲ್ಪಲ್ಲಿವರೆಗೆ ಹಾದುಹೋಗುತ್ತದೆ

ಕೇರಳದ ಪುಲ್ಪಲ್ಲಿವರೆಗೆ ಹಾದುಹೋಗುತ್ತದೆ

ಭಾರತೀಯ ವಿಜ್ಞಾನ ಸಂಸ್ಥೆ, ವನ್ಯಜೀವಿ ಸಂಸ್ಥೆ ಅಥವಾ ಭಾರತೀಯ ತಂತ್ರಜ್ಞಾನ ಸಂಸ್ಥೆ ನಡೆಸಿದ ಯಾವುದೇ ವೈಜ್ಞಾನಿಕ ಅಧ್ಯಯನದ ಆಧಾರದ ಮೇಲೆ ಕರ್ನಾಟಕ ಅರಣ್ಯ ಇಲಾಖೆ ಈ ತೀರ್ಮಾನಕ್ಕೆ ಬಂದಿದೆಯೇ ಎಂದು ತಿಳಿದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ನಿರ್ಧಾರದಿಂದ ಕೇರಳದ ಉತ್ತರ ಭಾಗದ ಜನತೆಯ ಬಹುವರ್ಷಗಳ ಕನಸಿಗೆ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಈ ಉದ್ದೇಶಿತ ರೈಲು ಮಾರ್ಗವು ನಾಗರಹೊಳೆ ಅಭಯಾರಣ್ಯ ಮತ್ತು ಬಂಡೀಪುರ ನಡುವಿನ ಭೂಗತ ಸುರಂಗದ ಮೂಲಕ ಕರ್ನಾಟಕದ ಎಚ್.ಡಿ ಕೋಟೆ ತಾಲ್ಲೂಕಿನ ಮೂಲಕ ಕೇರಳದ ಪುಲ್ಪಲ್ಲಿವರೆಗೆ ಹಾದುಹೋಗುತ್ತದೆ. ಕೇರಳದಲ್ಲಿ ಕಣ್ಣೂರು ಜಿಲ್ಲೆಯ ತಲಚೇರಿ ಮತ್ತು ಪನೂರ್, ಕೋಜಿಕೋಡ್ ಜಿಲ್ಲೆಯ ವಿಲಂಗಡ್ ಮತ್ತು ವಯನಾಡ್ ಜಿಲ್ಲೆಯ ನೀರವಿಲ್ಪುಜ, ತರುವಾನಾ, ಕಲ್ಪೆಟ್ಟ, ಮೀನಂಗಡಿ ಮೂಲಕ ಪುಲ್ಪಲ್ಲಿಯನ್ನು ಸಂಪರ್ಕಿಸುತ್ತದೆ.

ವಯನಾಡ್ ಮೂಲಕ ತಲಚೇರಿಯಿಂದ ಮೈಸೂರಿಗೆ

ವಯನಾಡ್ ಮೂಲಕ ತಲಚೇರಿಯಿಂದ ಮೈಸೂರಿಗೆ

ರಾಜಕೀಯ ಇಚ್ಛಾಶಕ್ತಿ ಮತ್ತು ಎರಡು ರಾಜ್ಯ ಸರ್ಕಾರಗಳ ನಡುವೆ ಒಮ್ಮತದಿಂದ ಮಾತ್ರ ಈ ಯೋಜನೆಯು ವಾಸ್ತವವಾಗಬಹುದು. ಅಲ್ಲದೆ, ಈ ಬೃಹತ್ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮವನ್ನು ತಿಳಿಯಲು ವೈಜ್ಞಾನಿಕ ಅಧ್ಯಯನ ನಡೆಸಲು ಕೇರಳ ಸರ್ಕಾರ ಮುಂದಾಗಬೇಕು ಎಂದು ಕೇರಳದ ಉದ್ಯಮಿಗಳು ಒತ್ತಾಯಿಸುತ್ತಿದ್ದಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ರೈಲು ಮಾರ್ಗವು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ್ನು ಹಾದು ಹೋಗುವುದನ್ನು ತಪ್ಪಿಸಿ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲ್ಲೂಕು ಮತ್ತು ವಯನಾಡ್ ಮೂಲಕ ತಲಚೇರಿಯಿಂದ ಮೈಸೂರಿಗೆ ರೈಲ್ವೇ ಮಾರ್ಗದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು.

ಕೊಡಗಿನ ಜನತೆಯ ತೀವ್ರ ಪ್ರತಿರೋಧ

ಕೊಡಗಿನ ಜನತೆಯ ತೀವ್ರ ಪ್ರತಿರೋಧ

ನಂತರ ಕರ್ನಾಟಕ ಮತ್ತು ಕೇರಳದ ಮುಖ್ಯ ಕಾರ್ಯದರ್ಶಿಗಳು ಈ ಪ್ರಸ್ತಾಪವನ್ನು ತಾತ್ವಿಕವಾಗಿ ಒಪ್ಪಿಕೊಂಡರು, ಆದರೆ ಕೊಡಗಿನ ಜನತೆಯ ತೀವ್ರ ಪ್ರತಿರೋಧದ ಕಾರಣದಿಂದಾಗಿ ಈ ಯೋಜನೆಯನ್ನು ಕೈ ಬಿಡಲಾಗಿತ್ತು. ಈ ಹಿಂದೆ ಪಿಣರಾಯಿ ವಿಜಯನ್ ಅವರ ಸರ್ಕಾರವು ನೀಲಂಬೂರ್-ನಂಜನಗೂಡು ಮತ್ತು ತಲಚೇರಿ-ಮೈಸೂರು ರೈಲ್ವೇ ಯೋಜನೆಗಳನ್ನು ಕಾರ್ಯಗತಗೊಳಿಸಲು ಆಸಕ್ತಿ ತೋರಿತು. ಈ ಎರಡೂ ಯೋಜನೆಗಳಿಗೆ ದೆಹಲಿ ಮೆಟ್ರೋ ರೈಲು ನಿಗಮ (ಡಿ.ಎಂ.ಆರ್.ಸಿ) ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಿದೆ. ಆದರೆ ಎರಡೂ ಮಾರ್ಗಗಳು ಸಂರಕ್ಷಿತ ಅರಣ್ಯ ಪ್ರದೇಶಗಳ ಮೂಲಕ ಹಾದುಹೋಗುತ್ತಿರುವುದರಿಂದ ಕರ್ನಾಟಕ ಅರಣ್ಯ ಇಲಾಖೆ ಈ ಯೋಜನೆಗೆ ಆಕ್ಷೇಪ ಸಲ್ಲಿಸಿತು ಎಂದು ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ರಾಜ್ಯ ಸರ್ಕಾರವು ಈ ಯೋಜನೆಗೆ ಅನುಮತಿ ನೀಡದಿರುವ ಮೂಲಕ ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು, ಈ ತೀರ್ಮಾನ ಬದಲಾಗದಿರಲಿ ಎಂದು ಲಕ್ಷಾಂತರ ಪರಿಸರ ಪ್ರೇಮಿಗಳ ಆಶಯವಾಗಿದೆ.

English summary
The Kerala government's ambitious proposal to develop the Talacheri-Wayanad-Mysuru railway line has been rejected, top sources in the Karnataka government have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X