2021 ಕರ್ನಾಟಕ ಬಜೆಟ್ ಅಧಿವೇಶನ: ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿ
ಬೆಂಗಳೂರು, ಮಾರ್ಚ್ 01 : ವಿಧಾನಸೌಧದಲ್ಲಿ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ಮಾರ್ಚ್ 04 ರಿಂದ 31 ರ ವರೆಗೆ ವಿಧಾನಸೌಧ ಸುತ್ತಳತೆ ಎರಡು ಕಿಲೋ ಮೀಟರ್ ವರೆಗೂ ಅನ್ವಯಿಸುವಂತೆ ಸಿ ಆರ್ ಪಿ ಸಿ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಆದೇಶ ಹೊರಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾರ್ಚ್ 4 ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದರು.
ಅಧಿವೇಶನದ ಅವಧಿಯಲ್ಲಿ ರಾಜಕೀಯ ಪಕ್ಷದವರು ಗುಂಪು ಸೇರುವುದು, ಕಾರ್ಮಿಕರು, ಸಭೆ ಸಮಾರಂಭ ಮಾಡುವುದು, ಮುತ್ತಿಗೆ ಹಾಕುವುದನ್ನು ನಿಷೇಧಿಸಲಾಗಿದೆ. ಕಾನೂನು ಭಂಗ ಚಟುವಟಿಕೆ ಮಾಡುವ ಉದ್ದೇಶದಿಂದ ಐದು ಜನಕ್ಕಿಂತೂ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಸಭೆ ಸಮಾರಂಭ ನಡೆಸುವಂತಿಲ್ಲ. ದೊಣ್ಣೆ, ಕತ್ತಿ ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ತೆಗೆದುಕೊಂಡು ಹೋಗುವಂತಿಲ್ಲ. ವ್ಯಕ್ತಿ, ಶವ, ಪ್ರತಿಕೃತಿ ದಹನ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.