ಕರ್ನಾಟಕ ಬಜೆಟ್ 2021: ಆಗಸ್ಟ್ ಒಳಗೆ 'ಒಂದು ರಾಷ್ಟ್ರ ಒಂದು ಕಾರ್ಡ್' ಜಾರಿ
ಬೆಂಗಳೂರು, ಮಾರ್ಚ್ 08: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಪ್ರಸ್ತುತ ಸಾಲಿನ ಬಜೆಟ್ ಮಂಡಿಸಿದ್ದು, ಆಗಸ್ಟ್ ತಿಂಗಳೊಳಗೆ ಒಂದು ರಾಷ್ಟ್ರ ಒಂದು ಕಾರ್ಡ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ ಈ ಕಾರ್ಡ್ ಬಳಕೆ ಮಾಡಬಹುದಾಗಿದೆ. ಇದರಿಂದಾಗಿ ನಮ್ಮ ಮೆಟ್ರೋ ಹಾಗೂ ಬಿಎಂಟಿಸಿ ಎರಡರಲ್ಲೂ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.
ಕರ್ನಾಟಕ ಬಜೆಟ್ 2021: ಬೆಂಗಳೂರಿಗೆ ಸಿಕ್ಕಿದ್ದೇನು?
ಕೇವಲ ಕರ್ನಾಟಕದ ಮೆಟ್ರೋ ಮಾತ್ರವಲ್ಲದೆ ದೇಶದಲ್ಲಿರುವ ಇನ್ಯಾವುದೇ ರಾಜ್ಯದ ಮೆಟ್ರೋದಲ್ಲಿ ಬೇಕಾದರೂ ಈ ಕಾರ್ಡ್ಗಳನ್ನು ಬಳಸಬಹುದಾಗಿದೆ.ಈ ಕಾರ್ಡಿನ ಸಹಾಯದಿಂದಾಗಿ ಸಾರ್ವಜನಿಕರು ಯಾವುದೇ ಸಾರ್ವಜನಿಕ ಸಾರಿಗೆ ಸೇರಿದಂತೆ ಇತರೆ ಸೇವೆಗಳಿಗೆ ಪಾವತಿ ಕಾರ್ಯವನ್ನು ಸುಲಭದಲ್ಲಿ ಮಾಡಲು ಸಾಧ್ಯವಾಗುತ್ತದೆ.
ಬ್ಯಾಂಕ್ ನಿಂದ ನೀಡಲಾಗುವ ರೂಪೇ/ಡೆಬಿಟ್/ಕ್ರೆಡಿಟ್ ಕಾರ್ಡ್ ನಂತೆಯೇ ಇರುತ್ತದೆ ಒಂದು ದೇಶ ಒಂದು ಕಾರ್ಡ್. ಈ ರೂಪೇ ಕಾರ್ಡ್ ನ್ನು ಪಾಲುದಾರ ಬ್ಯಾಂಕಿನ ಡೆಬಿಟ್/ಕ್ರೆಡಿಟ್ ಅಥವಾ ಪ್ರಿಪೇಯ್ಡ್ ಕಾರ್ಡ್ ರೂಪದಲ್ಲಿ ನೀಡಬಹುದು. ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಜೊತೆಗೆ ರೂಪೇ ಒಂದು ದೇಶ ಒಂದು ಕಾರ್ಡ್ ಕಾಂಟ್ಯಾಕ್ಟ್ ಲೆಸ್ ಕಾರ್ಡ್ ಆಗಿದ್ದು ಮೆಟ್ರೋ ರೈಲಿನ ಸ್ಮಾರ್ಟ್ ಕಾರ್ಡಿನಂತೆಯೇ ಕಾರ್ಯ ನಿರ್ವಹಿಸುತ್ತದೆ.
ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಬೆಂಬಲದೊಂದಿಗೆ ಬಸ್, ಮೆಟ್ರೋ ಮತ್ತು ಇತರೆ ಸಾರಿಗೆ ವ್ಯವಸ್ಥೆ ಸೇರಿದಂತೆ ಶಾಪಿಂಗ್ ಮಾಡುವ ಸ್ಥಳಗಳಲ್ಲಿ ನೀವಿದನ್ನು ಬಳಕೆ ಮಾಡಬಹುದು. ಮೆಟ್ರೋ, ಬಿಆರ್ ಟಿ, ಸಿಟಿ ಬಸ್, ಸಬ್-ಅರ್ಬನ್ ರೈಲು ಮತ್ತು ಇತ್ಯಾದಿ ಕಡೆಗಳಲ್ಲಿ ಬಳಸಬಹುದು.
ಪಾರ್ಕಿಂಗ್ ಮತ್ತು ಟೋಲ್ ಗಳಲ್ಲೂ ಕೂಡ ಪಾವತಿ ಮಾಡುವುದಕ್ಕೆ ಒಂದು ದೇಶ ಒಂದು ಕಾರ್ಡ್ ನ್ನು ಬಳಕೆ ಮಾಡಬಹುದು. ಹಾಗೆಯೇ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಆಟೊಮೆಟಿಕ್ ಫೇರ್ ಕಲೆಕ್ಷನ್ ಸಿಸ್ಟಂ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತಾರಾಷ್ಟ್ರೀಯ ಮಟ್ಟದ ಬೆಂಗಳೂರು ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿಗೊಳಿಸಲಾಗುತ್ತದೆ. 14,788 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 58.2 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆ- ಏರ್ಪೋರ್ಟ್ ಮೆಟ್ರೋ ಜಾಲ ಹಂತ 2ಎ ಮತ್ತು 2 ಬಿ ಅನುಷ್ಠಾನಗೊಳ್ಳಲಿದೆ.