ಅಕ್ರಮ ಮದ್ಯ ಸಾಗಾಟದಲ್ಲಿ ಅಧಿಕಾರಸ್ಥರ ಕೈವಾಡ; ಆರೋಪ
ಬೆಂಗಳೂರು, ಏಪ್ರಿಲ್ 25: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಎಗ್ಗಿಲ್ಲದೆ ಮದ್ಯ ಸರಬರಾಜು ಆಗುತ್ತಿದೆ. ಮುಖ ಬೆಲೆಯ ಹತ್ತು ಪಟ್ಟಿಗೂ ಹೆಚ್ಚಿನ ಬೆಲೆಯಲ್ಲಿ ಮದ್ಯ ಸರಬರಾಜು ಮಾಡಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ಗಳಿಕೆಗೆ ಈ ಲಾಕ್ ಡೌನ್ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಮಾಜ ವಿದ್ರೋಹಿ ಶಕ್ತಿಗಳ ಹಿಂದೆ ಅಧಿಕಾರಸ್ಥರ ನೇರ ಕೈವಾಡವಿರುವುದು ಕಂಡುಬರುತ್ತಿದೆ ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಬೆಂಗಳೂರು ನಗರದ ಎಸಿಪಿ ವಾಸು ಎಂಬುವವರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರ ಮೇಲೆ ನೇರ ಆಪಾದನೆಯನ್ನು ಮಾಡುವ ಮೂಲಕ ರಾಜ್ಯದ ಉನ್ನತ ಮಟ್ಟದ ಅಧಿಕಾರಸ್ಥರ ನೇರ ಕೈವಾಡವಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಸರ್ಕಾರಿ ವಾಹನಗಳನ್ನೇ ಈ ಅಕ್ರಮ ಮದ್ಯ ಸರಬರಾಜು ದಂಧೆಗೆ ಬಳಸಿಕೊಳ್ಳುತ್ತಿರುವುದು ದುರಂತದ ಸಂಗತಿಯೇ ಆಗಿದೆ ಎಂದು ಆರೋಪಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾ ವಿರುದ್ಧ ನಿಜಕ್ಕೂ ಕೆಲಸ ಮಾಡುತ್ತಾ?
ಒಂದು ಕಡೆ ರಾಜ್ಯದಲ್ಲಿ ಮದ್ಯ ಪೂರೈಕೆ ಇಲ್ಲದೆ ಕಡು ಬಡತನದಿಂದ ಬಳಲುತ್ತಿರುವ ಮದ್ಯ ವ್ಯಸನಿಗಳು ಮದ್ಯ ದೊರಕದೆ ಆತ್ಮಹತ್ಯೆಯಂತಹ ದಾರಿಯನ್ನು ಹಿಡಿದು ಈಗಾಗಲೇ 25 ಕ್ಕೂ ಹೆಚ್ಚು ಬಲಿಯಾಗಿದೆ .ಮತ್ತೊಂದು ಕಡೆ ಸಿರಿವಂತ ಮದ್ಯ ವ್ಯಸನಿಗಳ ಮಧ್ಯ ಪೂರೈಕೆಗಾಗಿ ಅಲ್ಲಲ್ಲಿ ಮದ್ಯದಂಗಡಿ ಮಾಲೀಕರುಗಳೇ ಕಳ್ಳತನವನ್ನು ಮಾಡಿಸಿ ಕಾಟಾಚಾರ ಎಫ್ಐಆರ್ ಮಾಡುವ ಮೂಲಕ ಈ ನೂರಾರು ಕೋಟಿ ಅಕ್ರಮ ದಂಧೆಗೆ ಇಂಬು ನೀಡುತ್ತಿರುವ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಅಬಕಾರಿ ಇಲಾಖೆಯು ಈ ಎಲ್ಲ ಅಕ್ರಮಗಳನ್ನು ತಡೆಗಟ್ಟಲು ಸಂಪೂರ್ಣವಾಗಿ ನಿಷ್ಕ್ರಿಯವಾಗಿದ್ದು ಮಂತ್ರಿಗಳು ನಿದ್ದೆ ಮಾಡುತಈತಿರುವ ಪರಿ ನೋಡಿದರೆ ಅವರ ಮೇಲೂ ಸಹ ಅನುಮಾನ ಮೂಡಿಸುವಂತಿದೆ. ಪ್ರಾರಂಭದಲ್ಲಿ ಒಂದೆರಡು ಬಾರ್ ಗಳನ್ನು ಜಪ್ತಿ ಮಾಡಿದ್ದನ್ನು ಬಿಟ್ಟರೆ ಈ ಅಕ್ರಮ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವುದೇ ಉಗ್ರ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದೆ.
ರಾಜ್ಯದ ಮುಖ್ಯಮಂತ್ರಿಗಳು ಈ ಕೂಡಲೇ ಇತ್ತ ಕಡೆ ಗಮನಹರಿಸಿ ಅಕ್ರಮ ಮದ್ಯ ಪೂರೈಕೆಯ ಈ ದಂಧೆಯ ಹಿಂದಿರುವ ಪ್ರಭಾವಿ ವ್ಯಕ್ತಿಗಳನ್ನು ಸೂಕ್ತ ತನಿಖೆಗೊಳಪಡಿಸಿ ಪತ್ತೆ ಹಚ್ಚಬೇಕು. ಈ ದಂಧೆಯಲ್ಲಿ ಅಕ್ರಮ ಹಣ ವಹಿವಾಟು ನಡೆಸಿರುವ ಕೋಟ್ಯಾಂತರ ರೂಪಾಯಿಗಳನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಂಡು ಕೋರೋನ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ಬಳಸಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸುತ್ತದೆ ಎಂದು ಹೇಳಿದೆ.



Click it and Unblock the Notifications























