ಹಂ.ಪ.ನಾ ವಿರುದ್ಧದ ಪೊಲೀಸ್ ವಿಚಾರಣೆ ಖಂಡಿಸಿ ಜ.25ಕ್ಕೆ ಕರವೇಯಿಂದ ಖಂಡನಾ ಸಭೆ
ಬೆಂಗಳೂರು, ಜನವರಿ 24: ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಬಳಿ ಪೊಲೀಸರು ನಡೆದುಕೊಂಡ ರೀತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದೆ.
ಮಂಡ್ಯ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ರೈತರಿಗೆ ಸ್ಪಂದಿಸದ ಒಕ್ಕೂಟ ಸರ್ಕಾರವನ್ನು, ಪ್ರಧಾನಮಂತ್ರಿಗಳನ್ನು ಟೀಕಿಸಿದರೆಂಬ ಕಾರಣಕ್ಕೆ ನಾಡಿನ ಹಿರಿಯ ಸಾಹಿತಿ, ಸಂಶೋಧಕ ಹಂ.ಪ.ನಾಗರಾಜಯ್ಯ ಅವರನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಹೇಳಿಕೆ ಪಡೆದು ಅಪಮಾನಿಸಲಾಗಿದೆ.
ನಾರಾಯಣಗೌಡ ನಿಜವಾದ ಮಂಡ್ಯದ ಗಂಡು: ಆರ್.ಅಶೋಕ್
ಸುಳ್ಳು ದೂರೊಂದರ ಬಗ್ಗೆ ಪ್ರಾಥಮಿಕ ತನಿಖೆಯನ್ನೂ ಮಾಡದೆ, ಯಾವ ಸಾಕ್ಷ್ಯಾಧಾರಗಳೂ ಇಲ್ಲದೆ ಇದ್ದರೂ 85 ವರ್ಷ ವಯಸ್ಸಿನ ಹಿರಿಯರಾದ ಹಂಪನಾ ಅವರಿಗೆ ಪೊಲೀಸ್ ಠಾಣೆಗೆ ಬರುವಂತೆ ಮಾನಸಿಕ ಕಿರುಕುಳ ನೀಡಲಾಗಿದೆ. ಇದು ಅಕ್ಷಮ್ಯ.
ಈ ಘಟನೆಯನ್ನು ಒಂದು ಆಕಸ್ಮಿಕ ಘಟನೆ ಎಂದು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಸಾಹಿತಿಗಳು, ಸಂಶೋಧಕರು, ಪತ್ರಕರ್ತರು, ಕಲಾವಿದರು, ಹೋರಾಟಗಾರರನ್ನು ಪೊಲೀಸ್ ಬಲ ಬಳಸಿ ಹತ್ತಿಕ್ಕುವ ದಮನಕಾರಿ ಚಟುವಟಿಕೆಗಳು ದೇಶಾದ್ಯಂತ ನಡೆಯುತ್ತಲೇ ಇವೆ. ನಮ್ಮ ಕರ್ನಾಟಕದಲ್ಲೂ ಈ ದುಷ್ಟಕಾಲ ಆರಂಭವಾದಂತಿದೆ.
ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಗಟ್ಟಿಯಾದ ಧ್ವನಿಯಲ್ಲಿ ಈ ಘಟನೆಯನ್ನು ಖಂಡಿಸಬೇಕಿದೆ, ಸಾಹಿತ್ಯ-ಸಾಂಸ್ಕೃತಿಕ ಜಗತ್ತನ್ನು ಪೊಲೀಸ್ ಬಲದಿಂದ ಹತ್ತಿಕ್ಕಲು ನಾವು ಬಿಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಬೇಕಿದೆ.
ಈ ಹಿನ್ನೆಲೆಯಲ್ಲಿ 25-1-2021 ಸಂಜೆ 4-30 ಗಂಟೆಗೆ ಬೆಂಗಳೂರಿನ ಗಾಂಧಿನಗರದ 5ನೇ ಮುಖ್ಯರಸ್ತೆಯ ಹೋಟೆಲ್ ಜಿಯಾನ್ ಸಭಾಂಗಣದಲ್ಲಿ ಖಂಡನಾ ಸಭೆ ಏರ್ಪಡಿಸಿದ್ದೇವೆ. ನಾಡಿನ ಹೆಸರಾಂತ ಸಾಹಿತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಪ್ರಾಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.