ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ವಿಕಿಪೀಡಿಯಗೆ 10, ಬೆಳವಣಿಗೆ ಸಾಲದು : ಪ್ರೊ .ಜಿವಿ

By ಅಶ್ವಥ್ ಸಂಪಾಜೆ, ಬೆಂಗಳೂರು
|
Google Oneindia Kannada News

ಬೆಂಗಳೂರು, ನ.17: ಕನ್ನಡ ನೆಟ್ಟಿಗರ ಜ್ಞಾನದಾಹವನ್ನು ತಣಿಸುತ್ತಿರುವ ಕನ್ನಡ ವಿಕಿಪೀಡಿಯ 10 ವಸಂತಗಳನ್ನು ಪೂರೈಸಿರುವ ಸಂತಸವನ್ನು ನವೆಂಬರ್ 17 ರಂದು ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಡಾ. ಎಚ್ ನರಸಿಂಹಯ್ಯ ಸಭಾಂಗಣದಲ್ಲಿ ಹಂಚಿಕೊಳ್ಳಲಾಯಿತು.

ದಶಮಾನೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿದ್ದ ಡಾ. ಯುಆರ್ ಅನಂತಮೂರ್ತಿ ಹಾಗೂ ರವಿ ಹೆಗಡೆ ಅವರು ಕಾರಣಾಂತರದಿಂದ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಮತ್ತೊಬ್ಬ ಮುಖ್ಯ ಅತಿಥಿಗಳಾದ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಸಭೆಯನ್ನು ಉದ್ದೇಶಿಸಿ ಹೀಗೆ ಮಾತನಾಡಿದರು :

'ಕನ್ನಡ ವಿಕಿಪೀಡಿಯದ ಬೆಳವಣಿಗೆ ಸಾಲದು. ನಾಡಿನ ಯುವ ಜನತೆ ಮತ್ತಷ್ಟು ಉತ್ಸುಕರಾಗಿ ಲೇಖನಗಳನ್ನು ಸೇರಿಸಿ ಕನ್ನಡ ವಿಕಿಪೀಡಿಯವನ್ನು ಮಾಹಿತಿಯೋಗ್ಯ ತಾಣವಾಗಿ ಮಾರ್ಪಡಿಸಿ' ಎಂದು ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಯುವಜನತೆಗೆ ಕರೆ ನೀಡಿದರು.

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕನ್ನಡ ವಿಕಿಪೀಡಿಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು, 'ಕನ್ನಡ ವಿಕಿಪೀಡಿಯವನ್ನು ಹತ್ತು ಪೂರೈಸಿದ ಮಾತ್ರಕ್ಕೆ ವಿಕಿಪೀಡಿಯ ಮುಂದುವರೆಯುತ್ತದೆ ಎನ್ನುವ ಭಾವನೆ ಬೇಡ. ಪ್ರೀತಿಯಿಂದ ಕಟ್ಟಿದ ಒಂದು ಸಂಸ್ಥೆ ಮುಂದುವರೆಯಬೇಕಾದರೆ ಅದಕ್ಕೆ ಬಹಳಷ್ಟು ಜನರ ಸಹಕಾರ ಬೇಕು. ಈ ಸಹಕಾರ ಈಗ ಕನ್ನಡ ವಿಕಿಪೀಡಿಯಕ್ಕೆ ಅಗತ್ಯವಿದೆ. ನನಗೆ ಈಗಾಗಲೇ ನೂರು ವರ್ಷವಾಗಿದೆ. ಆದರೂ ನನ್ನಿಂದಾಗುವ ಸಹಾಯವನ್ನು ನೀಡಲು ಸಿದ್ದ. ಕನ್ನಡ ವಿಕಿಪೀಡಿಯಕ್ಕೆ ನನ್ನ ಬೆಂಬಲ ಯಾವತ್ತೂ ನಿರಂತರ' ಎಂದರು.

'ಇಂದು ಇಂಟರ್ನೆಟ್ನಲ್ಲಿ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಸಾವಿರಾರು ಮಾಹಿತಿಗಳು ಸಿಗುತ್ತದೆ.ಇವುಗಳಲ್ಲಿ ನಿಖರವಾಗಿರುವ ಮಾಹಿತಿ ಎಲ್ಲಾ ತಾಣಗಳಲ್ಲಿ ಸಿಗುವುದು ಕಷ್ಟ. ಹೀಗಾಗಿ ಅಯಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡದ ಸಾಧಕರು ತಮ್ಮ ಕರ್ತವ್ಯವೆಂದು ಭಾವಿಸಿ ಕನ್ನಡ ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವ ಕಾರ್ಯಕ್ಕೆ ಮುಂದಾಗಬೇಕು' ಎಂದು ವಿಜ್ಞಾನಿ ಅನಂತರಾಮು ಅಭಿಪ್ರಾಯಪಟ್ಟರು.

ಕನ್ನಡ ವಿಕಿಪೀಡಿಯದ ಸಂಪಾದಕ ಯು.ಬಿ. ಪವನಜ ಮಾತನಾಡಿ, 'ಪೆಟ್ರೋಲ್‌ ಉಳಿಸಲು ಕಡಿಮೆ ಪೆಟ್ರೋಲ್‌ ಬಳಸಿ ಎಂದು ಹೇಳುತ್ತೇವೆ. ಆದರೆ ಕನ್ನಡ ಉಳಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಕಷ್ಟ. ಆದರೆ ವಿಶ್ವದ ಮಾಹಿತಿಗಳು ನಮ್ಮ ಭಾಷೆಯಲ್ಲಿ ಸಿಕ್ಕಿದಾಗ ಮಾತ್ರ ಕನ್ನಡ ಉಳಿಸಬಹುದು. ಕಥೆ, ಕವನ ಇತ್ಯಾದಿ ಸಾಹಿತ್ಯದ ಜೊತೆಗೆ ಈಗ ಮಾಹಿತಿ ಸಾಹಿತ್ಯವನ್ನು ಬರೆಯುವ ಮಾಹಿತಿ ಸಾಹಿತಿಗಳ ಅಗತ್ಯವಿದೆ. ಈ ಸಾಹಿತಿಗಳಿಗೆ ವಿಕಿಪೀಡಿಯ ಒಂದು ಉತ್ತಮ ವೇದಿಕೆ.ಈ ವೇದಿಕೆಯನ್ನು ಬಳಸಿ ಕನ್ನಡ ವಿಕಿಪೀಡಿಯವನ್ನು ಉತ್ತಮ ಮಾಹಿತಿ ಕೋಶವನ್ನಾಗಿ ರೂಪಿಸಬೇಕಾಗಿದೆ' ಎಂದು ಹೇಳಿದರು.

ನಿರ್ದೇಶಕ ಅಭಯ್ ಸಿಂಹ ಮಾತನಾಡಿ. 'ನನ್ನ ಅಜ್ಜ ಜಿ.ಟಿ ನಾರಾಯಣರಾಯರು ಬರೆದಿರುವ ವಿಜ್ಞಾನಕ್ಕೆ ಸಂಬಂಧಿಸಿ ಬರೆದಿರುವ ಲೇಖನಗಳು ಕ್ರಿಯೆಟಿವ್ ಕಾಮನ್ಸ್‌ ಲೈಸನ್ಸ್‌ನಿಂದಾಗಿ ವಿಕಿಪೀಡಿಯದಲ್ಲಿ ಲಭ್ಯವಾಗಿದೆ.ಈ ಲೈಸನ್ಸ್‌ ಮೂಲಕ ಈಗಾಗಲೇ ಮುದ್ರಣಗೊಂಡಿರುವ ಮತ್ತಷ್ಟು ಲೇಖನಗಳು ವಿಕಿಪೀಡಿಯದಲ್ಲಿ ಸೇರುವಂತಾಗಬೇಕು' ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ವಿಕಿಪೀಡಿಯದಲ್ಲಿ ಅತಿ ಹೆಚ್ಚಾಗಿ ಲೇಖನಗಳನ್ನು ಸಂಪಾದನೆ ಮಾಡಿದ ಲೇಖಕರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ವಿಕಿಪೀಡಿಯಕ್ಕೆ ಹೊಸ ಲೇಖನ ಸೇರಿಸುವ ಬಗ್ಗೆ ಓಂ ಶಿವಪ್ರಕಾಶ ಪ್ರಾತ್ಯಕ್ಷಿಕೆ ನೀಡಿದರು. ಕ್ರಿಯೇಟಿವ್ ಕಾಮನ್ಸ್ ವಿಚಾರದ ಬಗ್ಗೆ ಕಿರಣ್ ರವಿಕುಮಾರ ಉಪನ್ಯಾಸ ನೀಡಿದರು.

English summary
Kannada Wikipedia has completed 10 years. The Kannada Wikipedia community celebrated the tenth anniversary on Nov 17, 2013 at H N Multimedia Hall, National College, Basavanagudi, Bangalore. Here is the brief report about the celebration by Ashwath Sampaje
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X