• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾಷಾಭಿಮಾನಕ್ಕೆ ಮಾದರಿಯಾಗಬಲ್ಲದು ಫಿಲಿಪ್ಸ್ ಸಂಸ್ಥೆಯ ಇಂಥ ಕನ್ನಡ ಹಬ್ಬ

By Lekhaka
|

ಭಾರತದ ಸಿಲಿಕಾನ್ ವ್ಯಾಲಿ, ಪ್ರಪಂಚದ ಅತಿ ಹೆಚ್ಚು ಸಾಫ್ಟ್ ವೇರ್ ಇಂಜಿನಿಯರ್ ಗಳನ್ನ ತನ್ನ ಮಡಿಲಲ್ಲಿ ಪೋಷಿಸುತ್ತಿರುವ ನಗರ ನಮ್ಮ ಬೆಂಗಳೂರು. ಪ್ರತಿ ವರುಷ ದೇಶದ ಬೇರೆ ಬೇರೆ ನಗರಗಳಿಂದ, ಹಳ್ಳಿಗಳಿಂದ ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸಿ ಬರುವವರ ಸಂಖ್ಯೆ ಹತ್ತಾರು ಸಾವಿರದಷ್ಟು. ತಂತ್ರಜ್ಞಾನ ಬೆಳೆದಂತೆ, ಹೆಚ್ಚೆಚ್ಚು ಸಂಸ್ಥೆಗಳು ಹುಟ್ಟಿಕೊಂಡಂತೆ, ಕನ್ನಡದ ಯುವಕ ಯುವತಿಯರೇ ಸಂಸ್ಥೆಯ ಹೊರಗೂ ಕನ್ನಡದಲ್ಲಿ ಮಾತನಾಡಲು, ವ್ಯವಹರಿಸಲು ಅಂಜುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಅಂಜಿಕೆಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾದಂತೆ ಗೋಚರಿಸುತ್ತಿವೆ. ಇದಕ್ಕೆ ಹಲವಾರು ಕಾರಣಗಳೂ ಇವೆ.

ನಾಡಿನ ಯುವಕ ಯುವತಿಯರಲ್ಲಿ ಇತ್ತೀಚಿಗೆ ಮೂಡಿರುವ, ಮೂಡುತ್ತಿರುವ ಜಾಗೃತಿ, ನುಡಿಯ ಮೇಲಿನ ಅಭಿಮಾನದಿಂದ ನಡೆಯುತ್ತಿರುವ ಹೊಸಪದಗಳ ಕಟ್ಟುವಿಕೆಯ ಕಾರ್ಯಾಗಾರಗಳು, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ವೈದ್ಯಕೀಯ ವಿಚಾರಗಳ ಬಗೆಗಿನ ಮಾತೃಭಾಷೆಯಲ್ಲಿನ ಚರ್ಚೆಗಳು, ಪ್ರಪಂಚದ ಎಲ್ಲ ಒಳ್ಳೆ ವಿಚಾರಗಳನ್ನು ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಕನ್ನಡದಲ್ಲೂ ಲಭಿಸುವಂತೆ ಮಾಡುತ್ತಿರುವ ಪ್ರಯತ್ನಗಳು ಇವಕ್ಕೆ ಕಾರಣ ಎನ್ನಬಹುದು.

ಇನ್ಫೋಸಿಸ್ ಬೆಂಗಳೂರು ಕೇಂದ್ರದಲ್ಲಿ ರಾಜ್ಯೋತ್ಸವ ಸಂಭ್ರಮ

ಇದರ ಜೊತೆ ಕನ್ನಡದ ಎಲ್ಲ ಕವಿಗಳ, ಲೇಖಕರ ಕೃತಿಗಳು ಆಡಿಯೋ ಪ್ರಕಾರದಲ್ಲಿ ಸಿಗುವಂತೆ ಆಗುತ್ತಿರುವ ಪ್ರಯತ್ನಗಳು, ಬ್ಯಾಂಕುಗಳಲ್ಲಿ, ಎಟಿಎಂಗಳಲ್ಲಿ, ವಿಮಾನಯಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದಲ್ಲೂ ಸೇವೆಗಳು ಸಿಗುವಂತೆ ಮಾಡುತ್ತಿರುವುದು- ಹೀಗೆ ಹತ್ತು ಹಲವು ಕನ್ನಡ ಪರ ಕೆಲಸಗಳಲ್ಲಿ ಇಂದಿನ ಯುವಸಮಾಜ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಚಾರವೇ ಸರಿ.

ಹಾಗೆಯೇ ಕೇವಲ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಶಾಲಾ ಕಾಲೇಜು, ಕನ್ನಡಪರ ಸಂಘಟನೆಗಳಿಗೆ ಸೀಮಿತವಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆಗಳು ಇಂದು ಬೆಂಗಳೂರಿನ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಸಭಾ ಭವನಗಳಲ್ಲೂ ಸ್ಥಾನ ಪಡೆದಿರುವುದು ಸಂತಸ ಮೂಡಿಸದೇ ಇರದು. ಹಾಗಾದರೆ, ಕನ್ನಡ ರಾಜ್ಯೋತ್ಸವದ ಆಚರಣೆಯಿಂದಷ್ಟೇ ಭಾಷೆಯ ಉಳಿವು ಸಾಧ್ಯವೇ? ಅಥವಾ ಕನ್ನಡದ ಮೇಲಿನ ಅಭಿಮಾನವನ್ನು ತೋರಿಸಲು ಇದೊಂದೇ ಮಾರ್ಗವೇ? ಎಂಬ ಚರ್ಚೆಗೆ ನಾಂದಿ ಹಾಡುವ ಹಲವು ಪ್ರಶ್ನೆಗಳು ಅನೇಕರಲ್ಲಿ ಮೂಡಿರಲೂಬಹುದು. ಈ ಪ್ರಶ್ನೆಗೆ ಒಂದೇ ಪದ ಅಥವಾ ಒಂದೇ ವಾಕ್ಯದಲ್ಲಿ ಉತ್ತರಿಸಲಾಗದಿದ್ದರೂ, ನಾಡ ಹಬ್ಬದ ಆಚರಣೆ ಇಂದಿಗೆ ಸಾಂಕೇತಿಕ ಹಾಗು ಅವಶ್ಯಕ ಎಂದರೆ ತಪ್ಪಿಲ್ಲ.

ಕತಾರ್ ನಲ್ಲಿ ಎಸ್ಎಲ್ ಭೈರಪ್ಪ, ಪುನೀತ್ ರಾಜ್ ಗೆ ಸನ್ಮಾನ

ಐಟಿ ಕ್ಷೇತ್ರದಲ್ಲಿ ದೇಶದ, ವಿವಿಧ ರಾಜ್ಯಗಳ ಹಾಗೂ ಅನೇಕ ದೇಶಗಳಿಂದ ಬಂದ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿರುತ್ತಾರೆ. ಕನ್ನಡ ರಾಜ್ಯೋತ್ಸವದಂಥ ಕಾರ್ಯಕ್ರಮಗಳು ನೆರೆಹೊರೆಯ ಸ್ನೇಹಿತರಿಗೆ ನಮ್ಮ ಇತಿಹಾಸ, ಪರಂಪರೆ, ಸಂಸ್ಕೃತಿ, ಪದ್ಧತಿ, ಆಚರಣೆಗಳು, ಊಟದ ಪದ್ಧತಿ, ಓದು, ಸಾಹಿತ್ಯ, ಪಠ್ಯಕ್ರಮ - ಹೀಗೆ ಹತ್ತು ಹಲವು ವಿಚಾರಗಳ ಪರಿಚಯ ಮಾಡಿಸಿಕೊಡುವ ಅಥವಾ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಸದವಕಾಶ ಎನ್ನಬಹುದು. ಈ ಆಚರಣೆಗಳನ್ನು ಅನ್ಯಭಾಷಿಕರನ್ನೂ ಒಳಗೊಂಡು ರೂಪಿಸಿದಲ್ಲಿ ಮತ್ತಷ್ಟು ಮೆರಗು ತಂದೀತು.

ಇಂಥದ್ದೇ ಒಂದು ದಾರಿಯಲ್ಲಿ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಹೆಬ್ಬಾಳದ, ಮಾನ್ಯತಾ ಟೆಕ್ ಪಾರ್ಕ್ ನಲ್ಲಿನ ಫಿಲಿಪ್ಸ್ ಇಂಡಿಯಾ ಲಿಮಿಟೆಡ್ ಸಂಸ್ಥೆ ಕನ್ನಡ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. ಇದೇ ನವೆಂಬರ್ 22 ರಂದು ಕೂಡ ಇಲ್ಲಿ "ಫಿಲಿಪ್ಸ್ ಕನ್ನಡ ಹಬ್ಬ 2019" ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅರ್ಥಪೂರ್ಣವಾಗಿ ಈ ಒಂದು ಕಾರ್ಯಕ್ರಮವು ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಮಾಜಿ ಲೋಕಾಯುಕ್ತ, ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಸಂತೋಷ್ ಹೆಗ್ಡೆ ಆಗಮಿಸಿ ಯುವ ಪೀಳಿಗೆ ಪಾಲಿಸಲೇಬೇಕಾದ ಎರಡು ಪ್ರಮುಖ ಅಂಶಗಳಾದ ತೃಪ್ತಿ ಹಾಗು ಮಾನವೀಯತೆಗಳನ್ನು ತಮ್ಮ ಜೀವನದ ಅನುಭವದೊಂದಿಗೆ ಉದಾಹರಿಸಿ, ಉತ್ತೇಜಿಸಿದರು.

ಬಾಲ್ಯದ ಅಂಗಳಕ್ಕೆ ಜಾರಿಸಿದ ಕಾರ್ಯಕ್ರಮಗಳು

ಕಾರ್ಯಕ್ರಮಕ್ಕೆ ಬರುವವರನ್ನು ಸ್ವಾಗತಿಸಲು ಮೈಸೂರು ಅರಮನೆಯನ್ನೇ ಹೋಲುವ ದ್ವಾರದ ಕಲಾಕೃತಿ, ""ನಾವು, ನಮ್ಮ ಬಾಲ್ಯ" ಎಂಬ ಬರಹದಡಿ ಆಯೋಜಿಸಲಾಗಿದ್ದ ಬಾಲ್ಯದ ಆಟಿಕೆಗಳನ್ನು ನೆನಪಿಸುವ ಆಟಗಳಾದ - ಬುಗುರಿಗಳು, ಗೋಲಿ, ಹಳೆಯ ಟೈರ್ ಬಂಡಿಗಳು, ಚೌಕಾಬಾರ, ಅಳಿಗುಳಿಮನೆ ಆಟ, ಹಳೆಯ ಬೈಸಿಕಲ್, ಕೋಲಾಟ - ಆಟಗಳನ್ನು ಬೆಳಿಗ್ಗಿನಿಂದ ಸಂಜೆಯವರೆಗೂ ಆಯೋಜಿಸಲಾಗಿತ್ತು. ಈ ಆಟಗಳನ್ನ ಆಡಿ ಉದ್ಯೋಗಿಗಳು ತಮ್ಮ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿ ಸಂತಸದಿಂದ ಮತ್ತೆ ಮಕ್ಕಳಾದಂತೆ ಕಾಣುತ್ತಿದ್ದರು. ಸಂಸ್ಥೆಯ ಮುಖ್ಯಸ್ಥರಾದ ಕಲಾವತಿ ಅವರೂ ನೆಲದ ಮೇಲೆ ಕುಳಿತು ಗೋಲಿ ಆಟವನ್ನಾಡಿ ಆಟದ ಸವಿ ಸವಿದರು.

ಊಟದ ವಿಶೇಷ ಮೆನು, ಸಹೋದ್ಯೋಗಿಗಳ ಕೌಶಲ್ಯ, ಪ್ರತಿಭೆಗಳ ಅನಾವರಣ

ಆ ದಿನ ಹಬ್ಬದೂಟವನ್ನೂ ಆಯೋಜಿಸಲಾಗಿತ್ತು. ಬಾಳೆ ಎಲೆ ಊಟ, ಕರ್ನಾಟಕದ ಎಲ್ಲ ಭಾಗಗಳ ಊಟದ ಶೈಲಿಯ ತಿನಿಸುಗಳು, ರಾಗಿ ಮುದ್ದೆ ಬಸ್ಸಾರು , ನಾಟಿ ಕೋಳಿ ಮುದ್ದೆ ಸಾರು, ಮೈಸೂರ್ ಪಾಕ್, ಹೀಗೆ ಹಲವು ಬಗೆಯ ತಿನಿಸುಗಳನ್ನು ಉಣಬಡಿಸಲಾಗಿತ್ತು. ಸಹೋದ್ಯೋಗಿಗಳ ಪ್ರತಿಭೆಗಳ ಅನಾವರಣಕ್ಕಾಗಿಯೇ ಚಿತ್ರಕಲಾಕೃತಿಗಳ ಸ್ಪರ್ಧೆ ಹಾಗೂ ಪ್ರದರ್ಶನ, ಫೋಟೋಗ್ರಫಿ ಸ್ಪರ್ಧೆ ಹಾಗೂ ಪ್ರದರ್ಶನ, ಕನ್ನಡ ಬರವಣಿಗೆ ಸ್ಪರ್ಧೆ, ಅಂತ್ಯಾಕ್ಷರಿ, ನಿಧಿಶೋಧ, ರಸಪ್ರಶ್ನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ, ವಿಜೇತರಿಗೆ ಪಾರಿತೋಷಕ ಹಾಗು ಪುಸ್ತಕಗಳನ್ನು ಬಹುಮಾನವನ್ನಾಗಿ ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಕಾರ್ಯಕ್ರಮದ ಭಾಗವಾಗಿ ಜಾನಪದ ಶೈಲಿಯ ನೃತ್ಯಗಳು - ಕಂಸಾಳೆ , ಪಟ ಕುಣಿತ , ವೀರಗಾಸೆ ಶೈಲಿಗಳಿಗೆ ಫಿಲಿಪ್ಸ್ ಸಂಸ್ಥೆಯ ಉದ್ಯೋಗಿಗಳೇ ನಿಬ್ಬೆರಗಾಗಿಸುವಂತೆ ಪ್ರದರ್ಶನ ನೀಡಿದರು. ಹಾಗೆಯೇ ಭರತನಾಟ್ಯ, ಯಕ್ಷಗಾನ, ನಟ ದಿವಂಗತ ಅಂಬರೀಷ್ ಅವರು ನಟಿಸಿರುವ ಹಾಡುಗಳಿಗೆ ನೃತ್ಯ, ತಮ್ಮದೇ ಆಗುಹೋಗುಗಳನ್ನು ನಗೆ ರೂಪಕದಲ್ಲಿ ಬಿಂಬಿಸುವ ಮ್ಯಾಡ್ ಆಡ್ಸ್ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದವು.

ಫಿಲಿಪ್ಸ್ ಇನೊವೇಶನ್ ಕ್ಯಾಂಪಸ್ ಮುಖ್ಯಸ್ಥೆ, ಕನ್ನಡತಿ ಕಲಾವತಿ ಜಿ.ವಿ

ಚಾಮರಾಜನಗರದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಕಲಾವತಿಯವರು, ಮೈಸೂರಿನ ಶಾರದಾ ವಿಲಾಸ ಶಾಲೆ ಹಾಗು ಪ್ರತಿಷ್ಠಿತ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಿ, ಫಿಲಿಪ್ಸ್ ಸೇರಿ ಹಲವು ವಿಭಾಗಗಳಲ್ಲಿ, ವಿದೇಶಗಳಲ್ಲಿ ಹೆಚ್ಚಿನ ಜವಾಬ್ದಾರಿ ನಿರ್ವಹಿಸಿ, ಫಿಲಿಪ್ಸ್ ಇನೊವೇಷನ್ ಕ್ಯಾಂಪಸ್ ನ ಅತ್ಯುನ್ನತ ಹುದ್ದೆಯನ್ನಲಂಕರಿಸಿ ಮುನ್ನಡೆಸುತ್ತಿರುವ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಭಾಷಾಭಿಮಾನ ಹಾಗೂ ಕನ್ನಡದ ಅಸ್ಮಿತೆಯ ಉಳಿವಿಗಾಗಿ, ರೂಪಿತವಾಗಿರುವ ಇಂಥ ಹೋರಾಟಗಳು ಯಶ ಕಾಣಲೆಂದು ಹಾರೈಸೋಣ. ಕನ್ನಡತಿ ಕಲಾವತಿಯವರಂತೆ ಇನ್ನೂ ಅನೇಕ ಕನ್ನಡಿಗರು ಉನ್ನತ ಸ್ಥಾನಗಳನ್ನಲಂಕರಿಸಿ ಇಂಥ ಕನ್ನಡಪರ ಕಾರ್ಯಗಳನ್ನು ನಡೆಸಲಿ ಎಂದು ಹಾರೈಸೋಣ...

English summary
Philips India Limited has been organizing the Kannada special programme for the past three years at the Tech Park in Hebbal, Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X