ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಆನ್ ಲೈನ್ ಮೇಳ, ಬೆಂಗಳೂರಿನಲ್ಲಿ ಈ ಭಾನುವಾರ

ಕನ್ನಡ ಭಾಷೆ ಮತ್ತು ಭಾಷಾ ಸಂಪತ್ತನ್ನು ಮಾಹಿತಿ ತಂತ್ರಜ್ಞಾನಕ್ಕೆ ಜೋಡಿಸುತ್ತಿರುವ ಬಗೆ - ಈ ವಿಷಯ ಕುರಿತು ಬೆಂಗಳೂರಿನಲ್ಲಿ ಒಂದು ದಿನದ ' ಇ-ಕನ್ನಡ ಪ್ರದರ್ಶನ ಮತ್ತು ಸಂವಾದ ಮಾರ್ಚ್ 5ರಂದು ಆಯೋಜನೆಯಾಗಿದೆ.

By ಎಸ್ಕೆ ಶಾಮಸುಂದರ
|
Google Oneindia Kannada News

ಬೆಂಗಳೂರು, ಮಾರ್ಚ್ 1 : ಮಾಹಿತಿ ತಂತ್ರಜ್ಞಾನದ ತೆಕ್ಕೆಗೆ ಕನ್ನಡ ಭಾಷೆ ಹೊಂದಿಕೊಳ್ಳುತ್ತಿರುವ ರೀತಿ; ಕನ್ನಡ ಭಾಷೆ ಮತ್ತು ಭಾಷಾ ಸಂಪತ್ತನ್ನು ಮಾಹಿತಿ ತಂತ್ರಜ್ಞಾನಕ್ಕೆ ಜೋಡಿಸುತ್ತಿರುವ ಬಗೆ - ಈ ವಿಷಯ ಕುರಿತು ಬೆಂಗಳೂರಿನಲ್ಲಿ ಒಂದು ದಿನದ ' ಇ-ಕನ್ನಡ ಪ್ರದರ್ಶನ ಮತ್ತು ಸಂವಾದ" ಏರ್ಪಾಟಾಗಿದೆ. ನೀವು ಭಾಗವಹಿಸಬೇಕು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡಕ್ಕೆ ಸಂಬಂಧಪಟ್ಟ ಬೇಕಾದಷ್ಟು ಕೆಲಸಗಳು ನಡೆದಿವೆ, ನಡೆಯುತ್ತಿವೆ. ಆ "ಎಲ್ಲ" ಪ್ರಯತ್ನಗಳ ಪರಿಚಯವನ್ನು ಸಾಧ್ಯವಾದಷ್ಟು ಒಂದೇ ಸೂರಿನಡಿ ಮಾಡಿಕೊಳ್ಳಬಹುದಾದ Kannada Online Exhibition ಇದೇ ಪ್ರಥಮ ಬಾರಿಗೆ ವ್ಯವಸ್ಥೆಯಾಗಿರುವುದು ಗಮನಾರ್ಹ.

ದಿನಾಂಕ - 5 ಮಾರ್ಚ್, ಭಾನುವಾರ
ಸ್ಥಳ - ರವೀಂದ್ರ ಕಲಾಕ್ಷೇತ್ರ
ಸಮಯ - ಬೆಳಗ್ಗೆ 10 ರಿಂದ ಸುಮಾರು 3 ಗಂಟೆಯವರೆಗೆ
ವ್ಯವಸ್ಥೆ - ಕನ್ನಡ ಮತ್ತು ಸಂಸ್ಕೃತಿ ಇಲಾಖೆ/ ಇಜ್ಞಾನ ಡಾಟ್ ಕಾಮ್/ ಕಣಜ

ಕನ್ನಡ ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸುತ್ತಿರುವ ನಮ್ಮ ನಿಮ್ಮಂಥ ಫಲಾನುಭವಿಗಳಲ್ಲದೆ ಐಟಿ ಕ್ಷೇತ್ರದಲ್ಲಿ ಕನ್ನಡ ವ್ಯವಸಾಯ ಮಾಡುತ್ತಿರುವ ರೈತಾಪಿವರ್ಗ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ತಮ್ಮ ತಮ್ಮ ಆವಿಷ್ಕಾರಗಳನ್ನು, ಪ್ರಯೋಗಗಳನ್ನು ಪ್ರದರ್ಶನಕ್ಕಿಟ್ಟು ವಿಚಾರ ವಿನಿಮಯ ಮತ್ತು ಸಂದೇಹ ನಿವಾರಣೆ ಮಾಡಿಕೊಳ್ಳುವವರಿಗೆ ಮುಕ್ತ ಸ್ವಾಗತವಿದೆ ಎಂದು ಕನ್ನಡ ಇಲಾಖೆಯ ನಿರ್ದೇಶಕ ಕೆ ಎ ದಯಾನಂದ ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Kannada Online Expo and Open House with Developers Users -Bengaluru

ಪ್ರದರ್ಶನದಲ್ಲಿ ಕನ್ನಡದ ವಿವಿಧ ತಂತ್ರಾಂಶಗಳು, ಮೊಬೈಲ್ ಆಪ್ ಗಳು, ಕನ್ನಡ ಜಾಲತಾಣಗಳ ಬಗ್ಗೆ ಮಾಹಿತಿ ಸಿಕ್ಕತ್ತೆ. ಸಾರ್ವಜನಿಕರಿಗೂ ಮುಕ್ತ ಪ್ರವೇಶ ಇರುತ್ತದೆ. ಆಗಬೇಕಾದದ್ದು ಬೆಟ್ಟದಷ್ಟಿದೆ, ಆದದ್ದನ್ನು ಪರಸ್ಪರ ಹಂಚಿಕೊಳ್ಳುವ ಆಸಕ್ತ ಸಮುದಾಯಕ್ಕೆ ನಮ್ರತೆಯ ಆಹ್ವಾನ ನೀಡಲಾಗಿದೆ ಎಂದೂ ದಯಾನಂದ ಹೇಳಿದರು.

ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕಿಡುವವರು ತಮ್ಮ ಹೆಸರು ಮತ್ತು ಸಂಸ್ಥೆಯನ್ನು ನೊಂದಾಯಿಸಿಕೊಳ್ಳಬೇಕು. ಅದು ಉಚಿತ. ಈಗಾಗಲೇ ಸುಮಾರು 20 ಸಂಸ್ಥೆ/ವ್ಯಕ್ತಿಗಳು ನೊಂದಾವಣೆ ಮಾಡಿಕೊಂಡಿದ್ದು ಸಂಖ್ಯೆ 40ಕ್ಕೆ ಏರಬಹುದು. ನಾಳೆ, ಅಂದರೆ ಗುರುವಾರ 2 ನೇ ತಾರೀಕು ಸಂಜೆಯೊಳಗೆ ನೊಂದಣಿಗಳಿಗೆ ಕಿಟಕಿ ತೆರೆದಿರುತ್ತದೆ ಎಂದು ಇ-ಜ್ಞಾನ ಡಾಟ್ ಕಾಮ್ ನ ರೂವಾರಿ ಟಿ ಜಿ ಶ್ರೀನಿಧಿ ಹೇಳಿದರು.

ಕಣಜ ಅಂತರ್ಜಾಲ ತಾಣ ಸುಮಾರು 2 ವರ್ಷಗಳ ಕಾಲ ಪಾಳು ಬಿದ್ದಿತ್ತು. ಅದು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ವ್ಯಾಪ್ತಿಗೆ ಬಂದನಂತರ ಪುಟ ವಿನ್ಯಾಸ ಮತ್ತು ಮಾಹಿತಿ ಭಂಡಾರದ ಅಭಿವೃದ್ಧಿಯ ಕೆಲಸಗಳಿಗೆ ಪುನಃ ಜೀವ ಬಂದಿದೆ ಎಂದು ಕಣಜ ತಾಣ ನಿರ್ವಾಹಕ ಕೆ ವಿ ರಾಧಾಕೃಷ್ಣ ನುಡಿದರು.

ಮಾಹಿತಿ ತಂತ್ರಜ್ಞಾನ ಮತ್ತು ಕನ್ನಡ ಭಾಷೆ ಕ್ಷೇತ್ರದಲ್ಲಿ ಈವರೆಗೆ ಸಾಕಷ್ಟು ಕೆಲಸ ಕಾರ್ಯಗಳು ನಡೆದಿವೆ, ನಡೆಯುತ್ತಿವೆ. ಆದ್ರೆ, ತಂತ್ರಜ್ಞರ ಸಮೂಹ ಚದುರಿದ ಚಿತ್ರಗಳಂತಾಗಿದೆ. ನಾನು ಎನ್ನುವುದನ್ನು ಬದಿಗಿಟ್ಟು ನಾವು ಎಂಬ ಮಂತ್ರ ಜಪಿಸುವ ತನಕ ಕನ್ನಡ ನೆಲದಲ್ಲಿ ಮಾಹಿತಿ ಇಳುವರಿ ಕೊರತೆ ಇರ್ತದೆ ಎಂಬ ಭಾವ ಸುದ್ದಿಗೋಷ್ಟಿಯಲ್ಲಿ ಮನೆಮಾಡಿತು.

English summary
Information Technology and Kannada. An exhibition of online resources and innovations scheduled for 5 March 2017, Venue - Raveendra Kalakshetra, Bengaluru. An initiative by the Dept of Kannada and Culture, egnana.com and Kanaja, a Kannada knowledge portal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X