ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಸ್ಟರ್ ಹಿರಣ್ಣಯ್ಯ ವೃತ್ತಿ ರಂಗಭೂಮಿಯ ಸಾರ್ವಭೌಮ: ಶಿವರಾಂ

|
Google Oneindia Kannada News

ಬೆಂಗಳೂರು, ಮೇ 11: ಇತ್ತೀಚೆಗೆ ನಿಧನರಾದ ಹಿರಿಯ ರಂಗಭೂಮಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರು ವೃತ್ತಿ ರಂಗಭೂಮಿಯ ಸಾರ್ವಭೌಮರಾಗಿದ್ದರು ಎಂದು ಹಿರಿಯ ನಟ ಶಿವರಾಂ ಪ್ರತಿಪಾದಿಸಿದರು.
ನಗರದ ಎನ್.ಆರ್. ಕಾಲೋನಿಯ ಶ್ರೀರಾಮಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಮಾಸ್ಟರ್ ಹಿರಣ್ಣಯ್ಯ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಮಾಸ್ಟರ್ ಹಿರಣ್ಣಯ್ಯ ಅವರ ಬಾಯಿಯಲ್ಲಿ ಸರಸ್ವತಿ ನಲಿದಾಡುತ್ತಿದ್ದಳು, ಅವರು ಮಾತನಾಡಲು ನಿಂತರೆ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುತ್ತಿದ್ದರು. ಹುಟ್ಟು- ಸಾವುಗಳು ನಿರಂತರ, ಅಂತೆಯೇ ಮಾಸ್ಟರ್ ಹಿರಣ್ಣಯ್ಯ ಅವರು ಕಣ್ಮರೆ ಆಗಿಲ್ಲ, ಅವರು ನಮ್ಮೊಂದಿಗೇ ಇದ್ದಾರೆ ಎಂದು ಭಾವುಕರಾಗಿ ನುಡಿದರು.

ಮಾಸ್ಟರ್ ಹಿರಣ್ಣಯ್ಯ ಮತ್ತು ತಮ್ಮ ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಮಾತನಾಡಿದ ಅವರು, ಆತಿಥ್ಯ ನೀಡುವುದರಲ್ಲಿ ಹಿರಣ್ಣಯ್ಯ ಅವರು ಎತ್ತಿದ ಕೈ, ಅವರ ಮನೆಗೆ ಹೋದೊಡನೆ ಬೇಡವೆಂದರೂ ಆರಂಭವಾಗುತ್ತಿದ್ದ ಕಾಫಿಯಿಂದ ಹಿಡಿದು ಊಟ- ತಿಂಡಿ ಹೀಗೆ ಆತಿಥ್ಯ ನಡೆಯುತ್ತಿತ್ತು ಎಂದು ಸ್ಮರಿಸಿದ ಶಿವರಾಂ, ಮಾಸ್ಟರ್ ಹಿರಣ್ಣಯ್ಯ ಅವರ ತಂದೆ ಹಿರಣ್ಣಯ್ಯ ಅವರನ್ನು ಸುಸಂಸ್ಕೃತ ಹಾಸ್ಯಗಾರ ಎಂದೇ ಕರೆಯಲಾಗುತ್ತಿತ್ತು ಎಂದರು.

"ಅಂತಹ ಮಾತುಗಾರನ ಬಗ್ಗೆ ಏನು ಮಾತನಾಡಲಿ?" ಎಂದು ಉದ್ಘರಿಸಿದ ಅವರು, ಅವರ ನಾಟಕಗಳಲ್ಲಿ ಅವರ ಎದುರಿಗೆ ಒಂದು ಪಾತ್ರವಿದ್ದರೆ ಸಾಕಾಗುತ್ತಿತ್ತು, ಸಂಭಾಷಣೆಯ ಪೂರ್ವ ತಯಾರಿ ಇರಲೇ ಇಲ್ಲ, ಎಲ್ಲವನ್ನೂ ನಾಟಕದ ವೇದಿಕೆ ಮೇಲೆಯೇ ನಿರರ್ಗಳವಾಗಿ ಹಾಸ್ಯಭರಿತವಾಗಿ ಎಲ್ಲರ ಮನಮುಟ್ಟುತ್ತಿದ್ದರು, ಇದು ಅವರಿಂದ ಮಾತ್ರ ಸಾಧ್ಯವಾಗುತ್ತಿತ್ತು, ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳನ್ನು ನೋಡಿದರೆ ದಿನಪತ್ರಿಕೆ ಓದುವ ಅಗತ್ಯವೇ ಇರುತ್ತಿರಲಿಲ್ಲ, ಹಾಗೆ ಅವರು ತತ್ಕಾಲಿಕ ಬೆಳವಣಿಗೆಗಳನ್ನು ತಮ್ಮ ನಾಟಕಗಳಲ್ಲಿ ಹಾಸುಹೊಕ್ಕಾಗಿ ಅಳವಡಿಸಿಕೊಳ್ಳುತ್ತಿದ್ದರು.

ಹಿರಿಯ ರಂಗಕರ್ಮಿ 'ನಟ ರತ್ನಾಕರ' ಮಾಸ್ಟರ್ ಹಿರಣ್ಣಯ್ಯ ನಿಧನಹಿರಿಯ ರಂಗಕರ್ಮಿ 'ನಟ ರತ್ನಾಕರ' ಮಾಸ್ಟರ್ ಹಿರಣ್ಣಯ್ಯ ನಿಧನ

ತಮ್ಮ ನಾಟಕ 'ದೇವದಾಸಿ'ಗೆ ಚಲನಚಿತ್ರ ರೂಪವನ್ನೂ ನೀಡುವುದರಲ್ಲಿಯೂ ಯಶಸ್ವಿಯಾದ ಹಿರಣ್ಣಯ್ಯ, ನಟನೆ ಜತೆಗೆ ಸಂಭಾಷಣೆಕಾರ, ಉತ್ತಮ ನಿರ್ದೇಶಕ ಸೇರಿದಂತೆ ವೃತ್ತಿ ರಂಗಭೂಮಿಯ ಹಲವು ಆಯಾಮಗಳನ್ನು ಲೀಲಾಜಾಲವಾಗಿ ಬಲ್ಲವರಾಗಿದ್ದರು ಮತ್ತು ಅವರು ನಟಿಸಿದ್ದ ಖಳನಾಯಕನ ಪಾತ್ರದಲ್ಲಿನ ಅವರ ಗೌರವಯುತ ನಟನೆ ಮೆಚ್ಚುಗೆಗಳಿಸಿತ್ತು, ಈ ಎಲ್ಲ ಕಾರಣಗಳಿಂದ ಮಾಸ್ಟರ್ ಹಿರಣ್ಣಯ್ಯ ವೃತ್ತಿರಂಗಭೂಮಿಯ ಸಾರ್ವಭೌಮರಾಗಿದ್ದರು ಎಂದರು.

ಕಂಬನಿ ಮಿಡಿದ ಶ್ರೀನಾಥ್

ಕಂಬನಿ ಮಿಡಿದ ಶ್ರೀನಾಥ್

ಮಾಸ್ಟರ್ ಹಿರಣ್ಣಯ್ಯ 'ನೋವಿನಲ್ಲೂ ನಲಿವು ಕಾಣು' ಎಂದು ನನಗೆ ಬೋಧಿಸಿದ ಗುರುಗಳು ಎಂದು ವ್ಯಾಖ್ಯಾನಿಸಿದ ಹಿರಿಯ ನಟ ರಸಿಕರರಾಜ ಶ್ರೀನಾಥ್, ಅವರಿಂದ ನಾನು ಕಲಿತದ್ದು ಸಾಕಷ್ಟಿದೆ, ಮುಂದೆಯೂ ಅವರಿಂದ ಕಲಿಯುವುದು ಸಾಕಷ್ಟಿದೆ ಎಂದು ಹೇಳಿದರು.
ತಮ್ಮ ನಾಟಕಗಳ ಮೂಲಕ ಸಾಮಾಜಿಕ ಕಳಕಳಿ ವ್ಯಕ್ತಪಡಿಸುತ್ತಿದ್ದ ಮಾಸ್ಟರ್ ಹಿರಣ್ಣಯ್ಯ, ಎದುರಿಗೆ ಕುಳಿತ ರಾಜಕಾರಣಿ- ಅಧಿಕಾರಿಗಳನ್ನು ಹಿಯಾಳಿಸುವ ಮೂಲಕ ಚಪ್ಪಾಳೆ ಗಿಟ್ಟಿಸುತ್ತಿದ್ದರು ಮತ್ತು ಅವರ ತಪ್ಪುಗಳನ್ನು ಅವರ ಅರಿವಿಗೆ ತರಿಸುತ್ತಿದ್ದರು ಎಂದರು.

ಹಿರಿಯ ನಿರ್ದೇಶಕ ಭಾರ್ಗವ ಮಾತನಾಡಿ, ಅಂದು ಮಾಸ್ಟರ್ ಹಿರಣ್ಣಯ್ಯ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸ್ಥಾಪಿಸುವ ಮೂಲಕ ಒಗ್ಗಟ್ಟಿಗೆ ಶ್ರಮಿಸಿದ್ದರು ಇದಕ್ಕೆ ಇಂದು ಕಾರ್ಯಕ್ರಮದಲ್ಲಿ ನೆರೆದಿರುವ ಹೆಚ್ಚಿನ ಸಂಖ್ಯೆಯ ಈ ಸಭಿಕರೇ ಸಾಕ್ಷಿ ಎಂದರು.
ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕವೊಂದನ್ನು 11 ಸಾವಿರ ಬಾರಿ ಪ್ರದರ್ಶಿಸುವ ಮೂಲಕ ದಾಖಲೆಯನ್ನೇ ಬರೆದಿದ್ದರು. ಕರ್ನಾಟಕದ ಮೂಲೆ-ಮೂಲೆಗಳಲ್ಲಿ ಅವರ ನಾಟಕಗಳು ಪ್ರದರ್ಶಿತವಾಗಿವೆ. ನಂತರದ ದಿನಗಳಲ್ಲಿ ವಿದೇಶಗಳಲ್ಲೂ ಅವರ ನಾಟಕಗಳು ಪ್ರದರ್ಶನಕಂಡು ಮೆಚ್ಚುಗೆ ಗಳಿಸಿವೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.

ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಮಾಸ್ಟರ್ ಹಿರಣ್ಣಯ್ಯ ಸಂದರ್ಶನ ಬದುಕಿಗೆ ಬೇಕಷ್ಟು ಲಂಚ ತಿಂದ್ರೆ ತಪ್ಪೇನಿಲ್ಲ : ಮಾಸ್ಟರ್ ಹಿರಣ್ಣಯ್ಯ ಸಂದರ್ಶನ

ಉದಾರ ಹೃದಯಿ ಹಿರಣ್ಣಯ್ಯ

ಉದಾರ ಹೃದಯಿ ಹಿರಣ್ಣಯ್ಯ

80ರ ದಶಕದಲ್ಲಿ ಹಾಸನ ಜಿಲ್ಲೆಯ ದೇಗುಲವೊಂದರ ಜೀರ್ಣೋದ್ಧಾರಕ್ಕಾಗಿ ಧನ ಸಹಾಯ ಬೇಡಿ ಸಹಾಯಾರ್ಥ ನಾಟಕ ಪ್ರದರ್ಶಿಸುವಂತೆ ಮನವಿ ಮಾಡಿದಾಗ, ಅದಕ್ಕೆ ಒಪ್ಪಿ ಆಗಮಿಸಿ ನಾಟಕ ಪ್ರದರ್ಶಿಸಿದರು ಎಂದು ಹೇಳಿದ ಹಿರಿಯ ಐಎಎಸ್ ಅಧಿಕಾರಿ ಪ್ರಸನ್ನ, ಅಂದು ಅವರ ನಾಟಕ ಪ್ರದರ್ಶನದಿಂದ ನಾವು 40 ಸಾವಿರ ರೂ. ದೇಣಿಗೆ ನಿರೀಕ್ಷಿಸಿದ್ದೆವಾದರೂ, ನಾಟಕ ಪ್ರದರ್ಶನ ನಂತರ 70 ಸಾವಿರಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಇದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದ್ದರೆ, ನಾಟಕ ಪ್ರದರ್ಶನ ನಂತರ ಸಂಭಾವನೆ ಪಡೆಯಲು ನಿರಾಕರಿಸಿದ್ದು, ಮಾಸ್ಟರ್ ಹಿರಣ್ಣಯ್ಯ ಅವರ ಹೃದಯ ವೈಶಾಲ್ಯತೆಯನ್ನು ಎತ್ತಿ ತೋರಿಸಿತ್ತು ಎಂದರು.

ರಾಜ್ಯದಲ್ಲಿ ನಡೆಯುತ್ತಿದ್ದ ಜಾತ್ರೆಗಳಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರ ನಾಟಕಗಳು ಕಿಕ್ಕಿರದ ಜನಸಂದಣಿಯಿಂದ ಪ್ರದರ್ಶನವಾಗುತ್ತಿದ್ದವು ಮತ್ತು ಜಾತ್ರೆ ಮುಗಿದ ನಂತರವೂ ಅವರ ಬಹು ದಿನಗಳ ಕಾಲ ಅವರ ನಾಟಕಗಳು ಯಶಸ್ವಿ ಪ್ರದರ್ಶನ ಕಾಣುತ್ತಿದ್ದವು, ಅವರ ನಾಟಕಗಳಲ್ಲಿ ದೈನಂದಿನ ಬೆಳವಣಿಗೆಗಳನ್ನು ಹಾಸುಹೊಕ್ಕಾಗಿ ಅಳವಡಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮನಮುಟ್ಟುತ್ತಿದ್ದರು, ಹೀಗಾಗಿ ಅವರ ನಾಟಕಗಳೆಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿರುತ್ತಿದ್ದವು ಎಂದರು.

ಸಮಾಜ ಸುಧಾರಣೆಯ ಶ್ರಮಿಕ

ಸಮಾಜ ಸುಧಾರಣೆಯ ಶ್ರಮಿಕ

ಸಮಾಜ ಸುಧಾರಣೆ ಆಗಬೇಕು ಎಂಬ ಧ್ಯೇಯೋದ್ದೇಶದಿಂದ ಶ್ರಮಿಸಿದ ಮಾಸ್ಟರ್ ಹಿರಣ್ಣಯ್ಯ ಅವರು ತಮ್ಮ ನಾಟಕಗಳಲ್ಲಿ ಅದರಲ್ಲಿಯೂ ನಾಟಕ ವೀಕ್ಷಣೆಗೆ ಆಗಮಿಸಿ ಮುಂದಿನ ಸಾಲಿನಲ್ಲಿ ಕುಳಿತಿರುತ್ತಿದ್ದ ರಾಜಕಾರಣಿಗಳನ್ನು ಗುರಿಯಾಗಿಸಿಕೊಂಡು ವಾಚಾಮ ಗೋಚರವಾಗಿ - ವಿಡಂಬನಾತ್ಮಕವಾಗಿ ತೆಗಳುತ್ತಿದ್ದರು. ಇದಕ್ಕೆ ರಾಜಕಾರಣಿಗಳ ಸುಧಾರಣೆಯಿಂದ ಸಮಾಜ ಸುಧಾರಣೆ ಆಗುತ್ತಿದೆ ಎಂಬ ಅವರ ನಂಬಿಕೆಯೇ ಕಾರಣವಾಗಿತ್ತು ಎಂದರು.

ಈ ಜಗತ್ತಿನಲ್ಲಿ ಸ್ನೇಹ ಸಂಪಾದನೆಗೆ ಎರಡು ಮಾರ್ಗಗಳಿವೆ, ಒಂದು ಅವರ ಹೊಗಳಿಕೆಯಿಂದ ಸ್ನೇಹ ಸಂಪಾದನೆ ಸಾಧ್ಯವಾದರೆ, ಮತ್ತೊಂದು ತೆಗಳಿಕೆ ಮೂಲಕ ಸ್ನೇಹ ಸಂಪಾದನೆ ಮಾಡುವುದು ಎಂದು ಹೇಳಿದ ಪ್ರಸನ್ನ, ಮಾಸ್ಟರ್ ಹಿರಣ್ಣಯ್ಯ ತಮ್ಮ ನಾಟಕಗಳಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ಎಷ್ಟೇ ತೆಗಳಿದರೂ, ಅವರೊಂದಿಗೆ ಉತ್ತಮ ಸ್ನೇಹಜೀವಿಯಾಗಿ ಒಡನಾಟವನ್ನೂ ಹೊಂದಿದ್ದರು ಮತ್ತು ತಾವು ನೀಡುತ್ತಿದ್ದ ಸಂದರ್ಶನಗಳಲ್ಲಿ 'ನನ್ನಂತಹ ಉಡಾಡಿಯನ್ನು ಕಟ್ಟಿಕೊಂಡು ಜೀವನ ನಡೆಸಿದ ಮತ್ತು ತಮ್ಮನ್ನು ಸಹಿಸಿಕೊಂಡ ಧರ್ಮಪತ್ನಿ ಶಾಂತ ಅವರಿಗೂ ತಮ್ಮ ಸಾಧನೆಯಲ್ಲಿ ಪಾಲಿದೆ' ಎಂದು ಹೇಳುತ್ತಿದ್ದದ್ದನ್ನು ಸ್ಮರಿಸಿದ ಹಿರಿಯ ಐಎಎಸ್ ಅಧಿಕಾರಿ, ಮಾಸ್ಟರ್ ಹಿರಣ್ಣಯ್ಯ ಅವರ ಬದುಕಿನ ಹಲವು ಮಜಲುಗಳನ್ನು ತೆರೆದಿಟ್ಟರು.

ಪುಷ್ಪನಮನ, ಮೌನಾಚರಣೆಯ ಶ್ರದ್ಧಾಂಜಲಿ

ಪುಷ್ಪನಮನ, ಮೌನಾಚರಣೆಯ ಶ್ರದ್ಧಾಂಜಲಿ

ಕಾರ್ಯಕ್ರಮದ ಆರಂಭದಲ್ಲಿ ನಟರತ್ನಾಕರ ದಿವಂಗತ ಮಾಸ್ಟರ್ ಹಿರಣ್ಣಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನ ಆಚರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.

ಸಮಾರಂಭದಲ್ಲಿ ದಿವಂಗತ ಮಾಸ್ಟರ್ ಹಿರಣ್ಣಯ್ಯ ಕುಟುಂಬ ವರ್ಗದವರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೇಂಕಟನಾರಾಯಣ್, ಖಜಾಂಚಿ ಕೆ. ರಾಮಕೃಷ್ಣ, ಬಸವನಗುಡಿ ಶಾಸಕ ರವಿಸುಬ್ರಮಣ್ಯ, ಹಿರಿಯ ಚಿತ್ರನಟ ರಮೇಶ್ ಭಟ್, ಹಿರಿಯ ವಕೀಲ ಅಶೋಕ್ ಹಾರ್ನಹಳ್ಳಿ ಉಪಸ್ಥಿತರಿದ್ದರು. ಎಕೆಬಿಎಂಎಸ್ ಹಿರಿಯ ಉಪಾಧ್ಯಕ್ಷ ಆರ್. ಲಕ್ಷ್ಮಿಕಾಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಕಾರ್ಯದರ್ಶಿ ರಾಮಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

English summary
Senior Kannada actors Shivaram, Srinatha and others pay tribute to senior theatre artist Master Hirannaiah, who passed away recently. The programme was organised by Aakhila Bharat Brahmana Maha Sabha in Srirama Mandir in NR Colony, Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X