ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆರೆ ಪಾಲಿಟಿಕ್ಸ್ ನಲ್ಲಿ ಒಂದಾದ ಜೆಡಿಎಸ್ ಕುಚುಕು ಗೆಳೆಯರು

By ಬಾಲರಾಜ್ ತಂತ್ರಿ
|
Google Oneindia Kannada News

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರು ಮಂಗಳವಾರ (ಮೇ 12) ಬಾಣಸವಾಡಿ, ಸಾರಕ್ಕಿ, ಜರಗನಹಳ್ಳಿ, ಇಟ್ಟುಮಡು ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ಕಣ್ಣೀರು ಒರೆಸಲು ಹೋಗಿದ್ದರು.

ಕಾರ್ಯಾಚರಣೆ ನಡೆದು ಎಷ್ಟೋ ದಿನಗಳಾದ ಮೇಲೆ ಕುಮಾರಸ್ವಾಮಿಯವರು ಮನೆ ಕಳೆದುಕೊಂಡವರನ್ನು ಭೇಟಿ ಮಾಡಲು ಹೋಗಿದ್ದು 'ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದ್ರು' ಎನ್ನುವ ಗಾದೆ ಮಾತಿಗೆ ಅನ್ವಯವಾಗುವಂತಿತ್ತು.

ಕಾರ್ಯಾಚರಣೆ ನಡೆದಾಗ ಭೇಟಿ ನೀಡದ, ಸೊಲ್ಲೆತ್ತದ ಕುಮಾರಸ್ವಾಮಿಯಾಗಲಿ ಅಥವಾ ಜೆಡಿಎಸ್ ಪ್ರಮುಖರು ಈಗ ನ್ಯಾಯ ಕೊಡಿಸುತ್ತೇನೆ ಎನ್ನುವುದು ಅದ್ಯಾವ ನ್ಯಾಯವೋ? (ಕೆರೆ ಒತ್ತುವರಿ ತೆರವು ನಿಲ್ಲಿಸಲು ಕುಮಾರಸ್ವಾಮಿ ಆಗ್ರಹ)

JDS state president H D Kumaraswamy and Jameer visit to lake bed demolition area

ಕೆರೆ ಒತ್ತುವರಿ ಕಾರ್ಯಾಚರಣೆ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಬಂದಿಲ್ಲ, ನೊಂದ ಜನರ ದುಃಖ ಆಲಿಸುವುದಕ್ಕಾಗಿ ಭೇಟಿ ನೀಡಿದ್ದೇನೆ ಎನ್ನುವ ಕುಮಾರಸ್ವಾಮಿಯವರು, ಕಾರ್ಯಾಚರಣೆ ನಡೆಯುತ್ತಿದ್ದ ವೇಳೆ ಜನರ ಪ್ರತಿಭಟನೆಗೆ ಸಾಥ್ ನೀಡಿದ್ದರೆ, ಕುಮಾರಸ್ವಾಮಿಯವರ ಹೇಳಿಕೆಯಲ್ಲಿ ರಾಜಕೀಯ ಇಲ್ಲ 'ಬ್ರದರ್' ಅನ್ನಬಹುದಿತ್ತು.

ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ಮುಂದೆ ಬಿಡಿಎ ಅಧಿಕಾರಿಗಳನ್ನು ಬೆಂಡೆತ್ತಿದ ಕುಮಾರಸ್ವಾಮಿ, ಅಂದೇ ಈ ಕೆಲಸ ಮಾಡಿದ್ದರೆ ಬೆಂಗಳೂರು ಜಿಲ್ಲಾಡಳಿತ ಮಾಜಿ ಮುಖ್ಯಮಂತ್ರಿಗಳು ಎನ್ನುವ ಕಾರಣಕ್ಕಾದರೂ ಮೃದು ಧೋರಣೆ ತೋರುತ್ತಿದ್ದರೋ ಏನೋ?

ಒಟ್ಟಾರೆ, ಕುಮಾರಸ್ವಾಮಿಯವರ ಈ ಭೇಟಿಯ ವೇಳೆ ಹೈಲೈಟ್ ಆಗಿದ್ದು ತನ್ನ ಜೊತೆ ಅಂದು ಮುನಿಸಿಕೊಂಡು ದೂರ ಹೋಗಿದ್ದ ತನ್ನ ಪರಮಾಪ್ತ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಎಚ್ಡಿಕೆಗೆ ಸಾಥ್ ನೀಡಿದ್ದು.

ಒಂದು ರೀತಿಯಲ್ಲಿ ಸಾರ್ವಜನಿಕವಾಗಿ ನಾವಿಬ್ಬರು ಒಂದಾಗಿದ್ದೇವೆ ಎಂದು ತೋರಿಸಲು ಕುಮಾರಸ್ವಾಮಿ ಮತ್ತು ಜಮೀರ್, ಕೆರೆ ಒತ್ತುವರಿ ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರೋ ಅನ್ನುವ ಅನುಮಾನ ಕಾಡದೇ ಇರದು. (ಕೆರೆ ಒತ್ತುವರಿ ತೆರವು, ಹೋರಾಟ ಆರಂಭಿಸಲಿದೆ ಜೆಡಿಎಸ್)

ಜೆಡಿಎಸ್ ವರಿಷ್ಠ ದೇವೇಗೌಡ್ರ ಹಠ ಮತ್ತು ಸತತ ಪ್ರಯತ್ನ ಕೊನೆಗೂ ಫಲ ನೀಡಿದೆ. ಜಮೀರ್ ಮತ್ತು ಕುಮಾರಸ್ವಾಮಿಯವರು ಈಗ ಮತ್ತೆ ಒಂದಾಗಿದ್ದಾರೆ. ಈ ಮಾತನ್ನು ಖುದ್ದು ಜಮೀರ್ ಅವರೇ ಕುಮಾರಸ್ವಾಮಿ ಜೊತೆಗಿದ್ದ ಸಂದರ್ಭದಲ್ಲಿ ಹೇಳಿದ್ದಾರೆ.

JDS state president H D Kumaraswamy and Jameer visit to lake bed demolition area

ದೊಡ್ಡ ಗೌಡ್ರ ಪದ್ಮನಾಭ ನಗರದ ನಿವಾಸದಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯಲ್ಲಿ, ಕುಮಾರಣ್ಣ, ಜಮೀರ್ ಭಾಯ್ ಮತ್ತು ಚೆಲುವರಾಯಸ್ವಾಮಿಯವರನ್ನು ಮತ್ತೆ ಪಕ್ಷದ ಮೈನ್ ಸ್ಟ್ರೀಮ್ ನಲ್ಲಿ ತರುವಲ್ಲಿ ಗೌಡ್ರು ಯಶಸ್ವಿಯಾಗಿದ್ದಾರೆ.

ಕುಮಾರಸ್ವಾಮಿಯವರು ಸಂತ್ರಸ್ತರನ್ನು ಭೇಟಿ ಮಾಡಿದ ವೇಳೆ, ಅವರನ್ನು ನೋಡುತ್ತಿದ್ದಂತೆಯೇ ಅವರ ಪಾದಗೆರಗಿ, ಕಣ್ಣೀರು ಇಡುತ್ತಿದ್ದ ದೃಶ್ಯ, ವಿಷ ಸೇವಿಸುತ್ತೇವೆ ಎನ್ನುವ ಮಾತು ಮನಕಲಕುವಂತಿತ್ತು.

ರಾಜಕೀಯ ಆಮೇಲೆ ಮೊದಲು ಮಾನವೀಯತೆ ಎಂದು, ಲೇಟಾದರೂ ಲೇಟೆಸ್ಟಾಗಿ ಕುಮಾರಸ್ವಾಮಿ ಮನೆ ಕೆಳೆದುಕೊಂಡ ಅರ್ಹರಿಗೆ ನ್ಯಾಯ ಕೊಡಿಸಿದರೆ ಇವರನ್ನು ನೋಡಿ ಕಣ್ಣೀರಿಟ್ಟ ಜೀವಗಳಿಗೆ ನೆಮ್ಮದಿ ಸಿಗಬಹುದು.

ಹಾಗೇ, ಬೆಂಗಳೂರು ನಗರದ ಪ್ರತಿಷ್ಟಿತ ಡಾಲರ್ಸ್ ಕಾಲೋನಿಯಲ್ಲೂ ಒತ್ತುವರಿ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕುಮಾರಸ್ವಾಮಿಯವರೂ ಆ ಭಾಗದಲ್ಲೂ ತನ್ನ ಪ್ರತಿಭಟನೆ, ಹೋರಾಟ ಮುಂದುವರಿಸ ಬೇಕು ಎನ್ನುವುದು ಮನವಿ.

English summary
JDS state president H D Kumaraswamy and Jameer Ahmed visit to lake bed demolition area in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X