ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶೇಷ ವರದಿ: ‘ಕೈ’ನ ಮೇಕೆದಾಟು ಪಾದಯಾತ್ರೆಗೆ ಅಡ್ಡಗಾಲಾಗಿದ್ದು ಯಾರು?

|
Google Oneindia Kannada News

ಬೆಂಗಳೂರು, ಜನವರಿ 8: ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಆಡಳಿತ ಪಕ್ಷ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್ ಅಡ್ಡಿಯಾಗಿರುವುದು ಎದ್ದು ಕಾಣುತ್ತಿದೆ.

ಮೇಕೆದಾಟು ಅನುಷ್ಠಾನಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಪಾದಯಾತ್ರೆ ನಡೆಸದಂತೆ ರಾಜ್ಯ ಸರ್ಕಾರದಿಂದ ಕಾಂಗ್ರೆಸ್ ಮುಖಂಡರಿಗೆ ನೋಟಿಸ್ ನೀಡಲಾಗಿದೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಪಾದಯಾತ್ರೆ ನಡೆಸಿಯೇ ನಡೆಸುತ್ತೇವೆಂದು ಹೇಳುತ್ತಿದ್ದಾರೆ. ಜೊತೆಗೆ ಒಂದಷ್ಟು ಸಂಘಟನೆಗಳು ಬೆಂಬಲ ಘೋಷಿಸಿದ್ದರೆ, ವಿರೋಧವೂ ವ್ಯಕ್ತವಾಗುತ್ತಿದೆ. ಹೀಗಾಗಿ ಜನ ಏನಾಗಬಹುದೆಂದು ಕುತೂಹಲದಿಂದ ಕಾಯುತ್ತಿದ್ದಾರೆ.

 ಚುನಾವಣೆ ಮಾತ್ರ ಕಾಣಿಸುತ್ತಿದೆ

ಚುನಾವಣೆ ಮಾತ್ರ ಕಾಣಿಸುತ್ತಿದೆ

ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿದರೆ ಮೂರನೇ ಅಲೆ ಫಿಕ್ಸ್ ಆದಂತೆ ಕಾಣಿಸುತ್ತಿದೆ. ಆದರೆ ರಾಜಕಾರಣಿಗಳಿಗೆ 2023ರ ವಿಧಾನಸಭಾ ಚುನಾವಣೆಗಳು ಮಾತ್ರ ಕಾಣಿಸುತ್ತಿರುವುದರಿಂದ ಕೊರೊನಾಗೆ ಗೋಲಿ ಹೊಡೆದು ತಾವೇನು ಮಾಡಬೇಕು ಎಂದಷ್ಟೆ ಯೋಚಿಸುತ್ತಿರುವುದು ಸದ್ಯದ ಬೆಳವಣಿಗೆಯಾಗಿದೆ.

ಜನರ ಹಿತಕ್ಕಾಗಿ ನಾವು ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಪಾದಯಾತ್ರೆ ಆರಂಭಿಸಿರುವುದಾಗಿ ಇವತ್ತು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದರೂ, ಅದು ಆಡಳಿತ ಪಕ್ಷ ಬಿಜೆಪಿಯನ್ನು ಹಣಿಯಲು ಮತ್ತು ಮತದಾರರನ್ನು ಸೆಳೆಯಲು ಈ ಹೋರಾಟ ಎಂಬುದು ರಾಜಕೀಯ ಬಲ್ಲ ಎಲ್ಲರಿಗೂ ಅರ್ಥವಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲಿಗೆ ತಮ್ಮ ಕ್ಷೇತ್ರ ಮತ್ತು ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸಿಕೊಳ್ಳುವ ಮೂಲಕ ಮುಂದಿನ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ. ರಾಮನಗರದಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಮೇಕೆದಾಟು ಪಾದಯಾತ್ರೆ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ಗೆ ಠಕ್ಕರ್ ಕೊಡುವುದು ಅವರ ಆಲೋಚನೆಯಾಗಿದೆ.

 ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಯತ್ನ

ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಯತ್ನ

ಕೊರೊನಾ ಪ್ರಕರಣಗಳು ಹೆಚ್ಚಾಗದೆ ಹೋಗಿದ್ದರೆ, ಬಹುಶಃ ಮೇಕೆದಾಟು ಪಾದಯಾತ್ರೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಮುನ್ನುಡಿ ಬರೆದಂತೆ ಆಗುತ್ತಿತ್ತು. ಅಷ್ಟೇ ಅಲ್ಲದೆ ಶಕ್ತಿ ಪ್ರದರ್ಶನದೊಂದಿಗೆ ಬಿಜೆಪಿಗೊಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದಂತಾಗುತ್ತಿತ್ತು. ದಶಕಗಳ ಹಿಂದೆ ಹಿಂದೆ ಬೆಂಗಳೂರಿನಿಂದ ಬಳ್ಳಾರಿಗೆ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಅಧಿಕಾರ ಪಡೆದದ್ದು ನಮ್ಮ ಕಣ್ಣ ಮುಂದೆಯೇ ಇದೆ. ಇದೀಗ ಡಿ.ಕೆ. ಶಿವಕುಮಾರ್ ತಮ್ಮ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಮುಂದಿನ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರುವ ಕನಸು ಕಾಣುತ್ತಿದ್ದಾರೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ನಡೆಸುವ ಕುರಿತಂತೆ ಘೋಷಣೆ ಮಾಡಿದಾಗ ಮೊದಲಿಗೆ ಬೆಚ್ಚಿ ಬಿದ್ದಿದ್ದು ಜೆಡಿಎಸ್. ಕಾರಣ ಈ ವಿಚಾರವನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವುದು ಜೆಡಿಎಸ್‌ನ ಉದ್ದೇಶವಾಗಿತ್ತು. ಮೇಕೆದಾಟು ಬಗ್ಗೆ ಜೆಡಿಎಸ್ ‍ಪ್ರಸ್ತಾಪಿಸಿಕೊಂಡೇ ಬಂದಿತ್ತು. ಆದರೆ ಕಾಂಗ್ರೆಸ್ ಪಾದಯಾತ್ರೆಯನ್ನು ಘೋಷಣೆ ಮಾಡುವ ಮೂಲಕ ಒಂದೇ ಕಲ್ಲಿಗೆ ಎರಡು ಹಕ್ಕಿ ಬೀಳಿಸುವ ಉಮೇದಿನಲ್ಲಿತ್ತು.

 ಪಾದಯಾತ್ರೆಗೆ ಎಚ್‌ಡಿಕೆ ವಿರೋಧ

ಪಾದಯಾತ್ರೆಗೆ ಎಚ್‌ಡಿಕೆ ವಿರೋಧ

ಕಾಂಗ್ರೆಸ್ ಪಾದಯಾತ್ರೆ ಬಿಜೆಪಿಗಿಂತ ಹೆಚ್ಚಾಗಿ ಜೆಡಿಎಸ್ ಮೇಲೆ ಅದರಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಆರಂಭದಿಂದಲೇ ಇದನ್ನು ಕುಮಾರಸ್ವಾಮಿಯವರು ವಿರೋಧಿಸುತ್ತಲೇ ಬಂದರು. ಅಷ್ಟೇ ಅಲ್ಲದೆ ಅದರ ಒಳಸುಳಿಗಳನ್ನು ಬಿಚ್ಚಿಡಲಾರಂಭಿಸಿದರು. ಇದೊಂದು ರೀತಿಯಲ್ಲಿ ಕಾಂಗ್ರೆಸ್‌ಗೆ ಮುಜುಗರ ತಂದಿದ್ದಂತು ಸತ್ಯ. ತಮಗೆ ಎಚ್‌ಡಿಕೆ ಮಗ್ಗುಲ ಮುಳ್ಳಾಗಿ ಚುಚ್ಚಬಹುದೆಂಬ ಕಲ್ಪನೆಯೇ ಇರದ ಡಿಕೆಶಿಗೆ ಈಗ ಟೆನ್ಷನ್ ಆರಂಭವಾಗಿದೆ.

ಎಲ್ಲೋ ಒಂದು ಕಡೆ ನಮ್ಮನ್ನು ಹಣಿಯಲು ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಷಡ್ಯಂತ್ರ ರೂಪಿಸುತ್ತಿದೆಯೇನೋ ಎಂಬ ಸಂಶಯದ ಜತೆಗೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ರವರು ಎಚ್.ಡಿ. ಕುಮಾರಸ್ವಾಮಿ ಜತೆ ಸೇರಿ ತನ್ನನ್ನು ಮುಗಿಸಲು ತಂತ್ರ ನಡೆಸುತ್ತಿದ್ದಾರಾ? ಎಂಬ ಚಿಕ್ಕ ಅನುಮಾನವೂ ಹುಟ್ಟಿಕೊಂಡಿದೆ. ಇದೆಲ್ಲದರ ನಡುವೆ ಜೆಡಿಎಸ್ "ಜನತಾ ಜಲಧಾರೆ' ಆಂದೋಲನವನ್ನು ನಡೆಸುವ ಕುರಿತು ಪ್ರಕಟಿಸಿರುವುದು ಕಾಂಗ್ರೆಸ್ ನಾಯಕರಿಗೆ ಇನ್ನಷ್ಟು ಆತಂಕವನ್ನು ತಂದೊಡ್ಡಿದೆ.

 ಕೈ ವೇಗಕ್ಕೆ ತಡೆಯೊಡ್ಡಿದ ತೆನೆಹೊತ್ತ ಮಹಿಳೆ

ಕೈ ವೇಗಕ್ಕೆ ತಡೆಯೊಡ್ಡಿದ ತೆನೆಹೊತ್ತ ಮಹಿಳೆ

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಮೇಕೆದಾಟು ಪಾದಯಾತ್ರೆಯ ಮೂಲಕ ಆಡಳಿತರೂಢ ಬಿಜೆಪಿ ವಿರುದ್ಧ ದಂಡಯಾತ್ರೆಗೆ ಹೊರಟ ಕಾಂಗ್ರೆಸ್‌ಗೆ ಇದೀಗ ಜೆಡಿಎಸ್‌ನ ಜನತಾ ಜಲಧಾರೆ ಆಂದೋಲನ ಅಡ್ಡಗಾಲಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಮುಂದಿನ 2023ರ ವಿಧಾನಸಭಾ ಚುನಾವಣೆ ತನಕ ಇದೆಲ್ಲವನ್ನು ಜನ ಸಹಿಸಿಕೊಳ್ಳಲೇ ಬೇಕಾಗಿದೆ.

English summary
Congress leaders have been issued notice by the state government not to Mekedatu Padayatra in the backdrop of coronavirus cases Rising.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X