ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ ವಿಧಾನಸಭಾ ಕ್ಷೇತ್ರದ ರಿಪೋರ್ಟ್ ಕಾರ್ಡ್

By Shami
|
Google Oneindia Kannada News

"ನಾನು 24/7 ಶಾಸಕ!" ಹೀಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಎಷ್ಟು ಶಾಸಕರನ್ನು ಕರ್ನಾಟಕ ಕಂಡಿದೆ? ಹೀಗೆ ಹಲವರು ಹೇಳಿಕೊಳ್ಳಬಹುದು. ಆದರೆ, ಆಡಿದಂತೆ ನಡೆದುಕೊಳ್ಳುವವರು ವಿರಳಾತಿವಿರಳ. ಅಂತಹ ವಿರಾಳಾತಿವಿರಳ ಶಾಸಕರಲ್ಲಿ ಒಬ್ಬರು ಬೆಂಗಳೂರು ಜಯನಗರ ವಿಧಾನಸಭೆ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಬಿಎನ್ ವಿಜಯಕುಮಾರ್.

ಬೆಂಗಳೂರಿನ ಅತ್ಯಂತ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಜಯನಗರ ಕ್ಷೇತ್ರವನ್ನು ಸತತ ಎರಡನೇ ಬಾರಿ ಪ್ರತಿನಿಧಿಸುತ್ತಿರುವ ಬ್ರಹ್ಮಚಾರಿ ವಿಜಯಕುಮಾರ್, ಕ್ಷೇತ್ರದ ಅಭಿವೃದ್ಧಿಗಾಗಿ, ಸಮಾಜಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಕ್ಷೇತ್ರದ ಜನತೆಗೆ ಸುಲಭವಾಗಿ ಸಿಗುವ, ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಎಂಎಲ್ಎ ಎಂಬ ಖ್ಯಾತಿಯೂ ಅವರದು.

ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರ್ ಪದವಿ ಹೊಂದಿರುವ, 55 ವರ್ಷದ ವಿಜಯಕುಮಾರ್ ಪಕ್ಕಾ ಆರೆಸ್ಸೆಸ್ಸಿಗ. ಪರಿಸರ ಪ್ರೇಮಿಯೂ ಆಗಿರುವ ವಿಜಯಕುಮಾರ್ ಅವರು ತಾವು ಪ್ರತಿನಿಧಿಸುತ್ತಿರುವ ಜಯನಗರ ಕ್ಷೇತ್ರದ ಅಭಿವೃದ್ಧಿಯ ಸ್ಪಷ್ಟ ನೀಲನಕ್ಷೆ, ಸ್ಪಷ್ಟ ಪ್ಲಾನಿಂಗ್ ಹೊಂದಿದ್ದಾರೆ. ತಮ್ಮ ಮುಂದಿರುವ ಯೋಜನೆ, ಕನಸುಗಳನ್ನು ಒನ್ಇಂಡಿಯಾ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ.


ಸ್ವಚ್ಛ ಭಾರತ ಯೋಜನೆಗಾಗಿ ರಸ್ತೆ ರಾಯಭಾರಿ

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾತ್ಮಾ ಗಾಂಧಿ ಜಯಂತಿಯಂದು ಆರಂಭಿಸಿರುವ ಸ್ವಚ್ಛ ಭಾರತ ಅಭಿಯಾನದಿಂದ ಪ್ರೇರೇಪಿತರಾಗಿರುವ ವಿಜಯಕುಮಾರ್, "ಸ್ವಚ್ಛ ಭಾರತ ಅಭಿಯಾನವೆಂದರೆ ರಸ್ತೆಯಲ್ಲಿ ಬಿದ್ದಿರುವ ಕಸವನ್ನು ಎತ್ತಿ ಹಾಕುವುದಷ್ಟೇ ಅಲ್ಲ, ನಾವೆಲ್ಲ ಒಟ್ಟಾಗಿ ಈ ಅಭಿಯಾನಕ್ಕೆ ಹೊಸ ಆಯಾಮವನ್ನು ನೀಡಬೇಕು" ಎಂದು ತಮ್ಮ ಯೋಜನೆಗಳ ಸುರುಳಿಯನ್ನು ಬಿಚ್ಚಿಟ್ಟರು.

ಇದಕ್ಕಾಗಿ 'ರಸ್ತೆ ರಾಯಭಾರಿ'ಗಳಾಗಿರೆಂದು ಬೆಂಗಳೂರಿನ ಜನತೆಗೆ ಕರೆ ನೀಡಿರುವ ಅವರು, ಇದೇರೀತಿ ಯೋಚಿಸುವ ಮನಸುಗಳ, ಸ್ವಯಂಸೇವಕರ ಹುಡುಕಾಟದಲ್ಲಿ ತೊಡಗಿದ್ದು, ಸದ್ಯದಲ್ಲಿಯೇ ಮುಕ್ತ ಸಭೆಯನ್ನು ಕರೆದು ಸ್ವಚ್ಛ ಭಾರತ ಅಭಿಯಾನದ ರೂಪುರೇಷೆಯನ್ನು ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸುತ್ತೇನೆ ಎಂದು ಕನಸಿನ ಯೋಜನೆಯನ್ನು ಬಿಡಿಸಿಟ್ಟರು. ಶಾಸಕರ ಕರೆಯಿಂದ ಉತ್ತೇಜಿತರಾಗಿ ಸುಮಾರು 400ಕ್ಕೂ ಹೆಚ್ಚು ಜನರು, ತಂಡಗಳು ವಿಜಯಕುಮಾರ್ ಅವರ ಕೈಗಳನ್ನು ಬಲಪಡಿಸಲು ಮುಂದೆ ಬಂದಿರುವುದು ಅವರ ಮೇಲೆ ಜನ ಇಟ್ಟಿರುವ ನಂಬಿಕೆಗೆ ಸಾಕ್ಷಿ.

ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡ ವಿಜಯಕುಮಾರ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ ಆಡಳಿತವೇ ಇದ್ದರೂ ಅಲ್ಲಿನ ಕಾರ್ಪೊರೇಟರುಗಳು, ಅಧಿಕಾರಿಗಳು, ನೌಕರರು ನಡೆದುಕೊಳ್ಳುವ ರೀತಿಯ ಬಗ್ಗೆ ವಿಜಯಕುಮಾರ್ ಅವರಿಗೆ ಭಾರೀ ಅಸಮಾಧಾನವಿದೆ. "ಕ್ಷೇತ್ರದ ನಿರ್ವಹಣೆ ಮತ್ತು ಅಭಿವೃದ್ಧಿ ಯೋಜನೆಗಳು ಹಳ್ಳಹಿಡಿದಿವೆ, ಸೋಂಬೇರಿ ಅಧಿಕಾರಿಗಳು ತುಂಬಿಕೊಂಡಿದ್ದಾರೆ, ನಿರ್ವಹಣೆ ಅವೈಜ್ಞಾನಿಕವಾಗಿದೆ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

"ಸೋರುತ್ತಿರುವ ಪಿವಿಸಿ ನೀರಿನ ಪೈಪುಗಳನ್ನು ತೆಗೆದು ಡಿಐ (ಡಕ್ಟೈಲ್ ಐರನ್) ಪೈಪುಗಳನ್ನು ಅಳವಡಿಸುವ ಕೆಲಸವನ್ನು ಎಲ್ & ಟಿಗೆ ಬಿಬಿಎಂಪಿ ವಹಿಸಿದೆ. ಆದರೆ, ನಡೆಯುತ್ತಿರುವ ಕೆಲಸ ಕಳೆಯಿಂದ ಕೂಡಿದ್ದು, ನಿಧಾನಗತಿಯಲ್ಲಿ ಸಾಗುತ್ತಿದೆ. ಜೆಪಿ ನಗರದ ಜನತೆ ಅಳಲನ್ನು ತೋಡಿಕೊಂಡಿದ್ದಾರೆ. ಈ ಕುರಿತು ಎಲ್ & ಟಿ ನಿರ್ದೇಶಕ ಮತ್ತು ಬಿಡಬ್ಲ್ಯೂಎಸ್ಎಸ್‌ಬಿ ಚೇರ್ಮನ್ ಅವರಿಗೆ ಪತ್ರ ಬರೆದು ಅಸಧಾನ ತೋಡಿಕೊಂಡಿದ್ದೇನೆ" ಎಂದು ಉದಾಹರಣೆ ಸಮೇತ ವಿವರಿಸಿದರು.


ಎಲ್ಲವೂ ಕಲಸುಮೇಲೋಗರ

"ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಪಟ್ಟಾಭಿರಾಮನಗರ, ಭೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆಪಿ ನಗರ, ಸಾರಕ್ಕಿ, ಶಾಖಾಂಬರಿ ನಗರ 7 ಬಿಬಿಎಂಪಿ ವಾರ್ಡುಗಳಿವೆ. ಐದು ಬಿಜೆಪಿಗೆ ಸೇರಿದ್ದರೆ, 2 ಕಾಂಗ್ರೆಸ್ಸಿಗೆ. ನಾವೆಲ್ಲ ಒಟ್ಟಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯಬೇಕಿದೆ. ಆದರೆ ಬಿಬಿಎಂಪಿ ಕಿವಿ ಕಿವುಡಾಗಿದೆ. ಅಲ್ಲಿ ಎಲ್ಲವೂ ಕಲಸುಮೇಲೋಗರ" ಎಂದು ಹೇಳುತ್ತಿದ್ದಂತೆ ಅವರ ಹಣೆಯ ಮೇಲಿರುವ ಗೆರೆಗಳೇ ಎಲ್ಲವನ್ನೂ ವಿವರಿಸುವಂತಿದ್ದವು.

ಈ ಸಮಸ್ಯೆಗೆ ಪರಿಹಾರವಾದರೂ ಏನು ಎಂಬ ಪ್ರಶ್ನೆಗೆ, "ಬಿಬಿಎಂಪಿಯ ಅಧಿಕಾರ ಸರಿಯಾದ ವ್ಯಕ್ತಿಗಳ ಕೈಗೆ ಸಿಕ್ಕಿಲ್ಲ. ಇಲ್ಲಿ ಹಲವಾರು ನೌಕರರು ಡೆಪ್ಯೂಟೇಷನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯ ಅಧಿಕಾರಿಗಳು ಬೆಂಗಳೂರು ತಮ್ಮದು ಎಂದು ಪರಿಭಾವಿಸುತ್ತಿಲ್ಲ. ರಸ್ತೆ ನಿರ್ಮಾಣಕ್ಕೇ ಆಗಲಿ, ಚರಂಡಿ ನಿರ್ಮಾಣಕ್ಕೇ ಆಗಲಿ ಸರಿಯಾದ ನೀತಿ ರೂಪಿಸಿಲ್ಲ. ಒಬ್ಬ ಆಯುಕ್ತರಿಂದ ಎಲ್ಲವೂ ನಿಭಾಯಿಸಲು ಸಾಧ್ಯವಿಲ್ಲ. ಅವರ ಕೈಕೆಳಗೆ ಅಧೀನ ಕಾರ್ಯದರ್ಶಿಗಳು ಇರಲೇಬೇಕು" ಎಂದು ವಿಜಯಕುಮಾರ್ ತಮ್ಮ ಅಭಿಪ್ರಾಯ ಮಂಡಿಸಿದರು.

"ಇಂಜಿನಿಯರಿಂಗ್ ವಿಂಗ್ ನಲ್ಲಿ 'ಇಂಜಿನಿಯರ್' ಇಲ್ಲವೇ ಇಲ್ಲ. ಸರಕಾರಿ ಬಾಬುಗಳು ಎಂಪಿ, ಎಂಎಲ್ಎ, ಎನ್‌ಜಿಓ ಗಳಿಂದ 'ಸೂಚನೆ'ಗಳನ್ನು ಪಡೆದು ಈಗಾಗಲೆ ಆಗಿರುವ ಗಾಯದ ಮೇಲೆ ಉಪ್ಪು ಸುರಿಯುತ್ತಿದ್ದಾರೆ. ಬೆಂಗಳೂರಿನ ಅಭಿವೃದ್ಧಿಗಾಗಿ ಸಾಕಷ್ಟು ಎನ್‌ಜಿಓಗಳು, ಏಜೆನ್ಸಿಗಳು ಬಿಟ್ಟಿ ಸಲಹೆ ನೀಡುತ್ತಿರುವುದು ಕೂಡ ಸಮಸ್ಯೆಯ ಒಂದು ಭಾಗವೆ" ಎಂದು ಅವರು ನೋವಿನಿಂದ ನುಡಿದರು.

3,500 ಕೋಟಿ ಸಾಲವನ್ನು ಹೊತ್ತಿರುವ, ವಾರ್ಷಿಕ 524 ಕೋಟಿ ಬಡ್ಡಿ ಕಟ್ಟುತ್ತಿರುವ ಬಿಬಿಎಂಪಿಯನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣವಾಗಿ ವಿಂಗಡಿಸುವುದು ಸ್ವಾಗತಾರ್ಹ ಐಡಿಯಾ. 2015ರ ಏಪ್ರಿಲ್ ತಿಂಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಯಲಿದ್ದು, ಕನಿಷ್ಠ ವಿಂಗಡನೆಯಿಂದಲಾದರೂ ಇದರಿಂದಲಾದರೂ ಬಿಬಿಎಂಪಿಯ ಡಿಎನ್ಎ ಮುಂದಿನ ವರ್ಷ ಬದಲಾಗುತ್ತಾ? ಎಂದು ವಿಜಯಕುಮಾರ್ ಪ್ರಶ್ನಾರ್ಥಕ ಚಿಹ್ನೆಯಾದರು.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಎಚ್.ಸಿ. ವೇಣುಗೋಪಾಲ್ 12 ಸಾವಿರ ಮತಗಳಿಂದ ಸೋಲಿಸಿದ್ದ ವಿಜಯಕುಮಾರ್, ಹಲವಾರು ಕನಸುಗಳ ಬೆನ್ನತ್ತಿದ್ದಾರೆ. ಜೊತೆಗೆ, ಈ ಯೋಜನೆ ಪೂರೈಸಲು ಸಾಕಾಗುಷ್ಟು ಬಂಡವಾಳ ಸಿಗುತ್ತಿಲ್ಲ ಎಂಬ ಆರೋಪವನ್ನೂ ಮಾಡಿದರು.


ವಿಜಯಕುಮಾರ್ ಕಂಡಿರುವ ಕನಸುಗಳು

ಜಯನಗರ 3ನೇ ಬ್ಲಾಕ್ ನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣ ನಿರ್ಮಿಸುವ ಮಹತ್ತರ ಕನಸು ವಿಜಯಕುಮಾರ್ ಕಂಗಳಲ್ಲಿದೆ. ನಾಲ್ಕನೇ ಬ್ಲಾಕ್ ನಲ್ಲಿರುವ ಪುರಾತನ ಬಿಡಿಎ ಕಾಂಪ್ಲೆಕ್ ಮರುನಿರ್ಮಾಣ ಕಾರ್ಯವನ್ನು ನಾಗಾರ್ಜುನ ಕನ್‌ಸ್ಟ್ರಕ್ಷನ್ಸ್ ವಹಿಸಿಕೊಂಡಿದ್ದು, ಮೊದಲ ಹಂತ ಪೂರ್ತಿಯಾಗಿದ್ದು, ಎರಡನೇ ಹಂತ ನಿರ್ಮಾಣ ಹಂತದಲ್ಲಿದೆ. ಹೊಸ ಬಿಡಿಎ ಸಂಕೀರ್ಣದಲ್ಲಿ ಒಂದು ಆಡಿಟೋರಿಯಂ, ಎರಡು ಸಿನೆಮಾ ಮಂದಿರಗಳು ಮತ್ತಿತರ ಅನುಕೂಲಗಳು ಇರಲಿವೆ.

ಜೊತೆಗೆ, 7 ವಾರ್ಡುಗಳಲ್ಲಿ 10 ಕಡೆ ಮಾದರಿ ರಸ್ತೆ ನಿರ್ಮಾಣ ಮಾಡುವ ಕನಸಿಗೂ ನೀರು, ಗೊಬ್ಬರ ಎರೆಯುತ್ತಿದ್ದಾರೆ ವಿಜಯಕುಮಾರ್. "ಅತ್ಯುತ್ತಮ ಗುಣಟ್ಟದ ಡಾಂಬರೀಕರಣಗೊಂಡ ಈ ರಸ್ತೆಗಳು ಉತ್ತಮ ಪಾದಚಾರಿ ಮಾರ್ಗಗಳ, ಟ್ರಾಫಿಕ್ ಸಿಗ್ನಲ್ ಹೊಂದಿರಲಿವೆ. ಎಷ್ಟೇ ಅಡೆತಡೆಗಳು ಬಂದರೂ ಈ ಕನಸು ನನಸು ಮಾಡಿಕೊಳ್ಳದೆ ವಿಶ್ರಮಿಸುವುದಿಲ್ಲ" ಎಂದು ಹೆಮ್ಮೆಯಿಂದ ಹೇಳಿದರು ವಿಜಯಕುಮಾರ್.

ಸದ್ಯದಲ್ಲೇ ಸ್ಲಂ ರಹಿತ ಕ್ಷೇತ್ರವಾಗಿ ಜಯನಗರ

ಎಲ್ಲವೂ ಅಂದುಕೊಂಡಂತೆ ಜರುಗಿದರೆ 1.8 ಲಕ್ಷ ಮತದಾರರಿರುವ, ಅದರ ದುಪ್ಪಟ್ಟು ಜನಸಂಖ್ಯೆಯಿರುವ ಜಯನಗರ ವಿಧಾನಸಭಾ ಕ್ಷೇತ್ರ ಸದ್ಯದಲ್ಲಿಯೇ ರಾಜ್ಯದ ಮೊದಲ 'ಸ್ಲಂ ರಹಿತ ವಿಧಾನಸಭೆ ಕ್ಷೇತ್ರ'ವಾಗಲಿದೆ. ರಾಗಿಗುಡ್ಡ ಪ್ರದೇಶ, ಗುರಪ್ಪನಪಾಳ್ಯ, ಯಾರಬ್ ನಗರದಲ್ಲಿರುವ 11 ಸ್ಲಂಗಳನ್ನು ತೆರವುಗೊಳಿಸಲು ವಿಜಯಕುಮಾರ್ ಮತ್ತು ತಂಡ ಕಾಯುತ್ತಿದೆ.

"ಈ ಎಲ್ಲ ಸ್ಲಂಗಳು ತೆರವುಗೊಳಿಸಲಾಗುತ್ತದೆ. ಆದರೆ, ಅಲ್ಲಿನ ಜನರಿಗೆ ಪರ್ಯಾಯ ಮನೆಗಳನ್ನು ಒದಗಿಸುವ ಜವಾಬ್ದಾರಿ ಸ್ಲಂ ಕ್ಲಿಯರಿಂಗ್ ಬೋರ್ಡ್‌ನದ್ದು" ಎಂದು ಸೇರಸಲು ಅವರು ಮರೆಯುವುದಿಲ್ಲ. ಒಂದಾನೊಂದು ಕಾಲದಲ್ಲಿ ವಾಸಿಗರ ಸ್ವರ್ಗವಾಗಿದ್ದ ಜಯನಗರ ಇಂದು ಜನನಿಬಿಡ ಪ್ರದೇಶವಾಗಿದ್ದು, ಇನ್ನೂ 30 ಹೆಚ್ಚುವರಿ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಸಂಚಾರಿ ಪೊಲೀಸರ ಜೊತೆ ಅವರು ಶ್ರಮಿಸುತ್ತಿದ್ದಾರೆ.

Jayanagar assembly constituency MLA BN Vijaykumar interview

ಜಯನಗರ ಶೈಕ್ಷಣಿಕ ಸಮಿತಿ ಎಂಬ ಲಾಭರಹಿತ ಸಂಸ್ಥೆಯನ್ನು ಅವರು ಸ್ಥಾಪಿಸಿದ್ದಾರೆ. ಅಲ್ಲಿ ಉಚಿತ ಓದುವ ಕೋಣೆ, ಈ-ಲೈಬ್ರರಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್, ಮೌಖಿಕ ಇಂಗ್ಲಿಷ್ ಕಲಿಯಲು ಕ್ರಾಶ್ ಕೋರ್ಸ್, ಬೋಧನಾ ನೈಪುಣ್ಯತೆಯನ್ನು ಪಡೆಯಲು ಪ್ರೈಮರಿ ಶಾಲೆ ಶಿಕ್ಷಕರಿಗಾಗಿ ಶನಿವಾರ ಸಾಯಂಕಾಲದ ತರಗತಿಗಳು ಮತ್ತು ಕನ್ನಡೇತರರಿಗಾಗಿ ಕನ್ನಡ ಕಲಿಕಾ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ.

ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತಾರೆ?

ಬಿಡುವಿನ ವೇಳೆ ಹೇಗೆ ಕಳೀತಿರಾ, ನೆಚ್ಚಿನ ನಟನಟಿ ಯಾರು? ಎಂಬ ಪ್ರಶ್ನೆಗೆ, "ಫೆವರಿಟ್ ಅಂತ ಯಾರೂ ಇಲ್ಲ, ಇಂಥದೊಂದು ಚಿತ್ರ ಚೆನ್ನಾಗಿದೆ ಎಂದು ತಿಳಿದುಬಂದರೆ ಸ್ನೇಹಿತರೊಡಗೂಡಿ ನೋಡಿ ಬರುತ್ತೇನೆ ಅಷ್ಟೇ. ಅದು ಬಿಟ್ಟರೆ, ನನ್ನ ತಮ್ಮನ ಮಗಳು 11 ವರ್ಷದ ಅದಿತಿ ಚೆನ್ನಾಗಿ ಶಾಸ್ತ್ರೀಯ ಸಂಗೀತ ಹೇಳುತ್ತಾಳೆ. ಬಿಡುವಿನ ವೇಳೆಯಲ್ಲಿ ಆಗಾಗ ಆಕೆಯ ಸಂಗೀತವನ್ನು ಕೇಳುವುದು ನನ್ನ ಹವ್ಯಾಸ" ಎಂದು ಅವರು ಹಂಚಿಕೊಂಡರು.

ವಿದೇಶ ಪಯಣವನ್ನು ವಿರಳವಾಗಿ ಮಾಡುವ ವಿಜಯಕುಮಾರ್ ಅವರು, ಸ್ನೇಹಿತರ ಬಲವಂತದಿಂದಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಹತ್ತು ದಿನಗಳ ಸ್ಕಾಟ್ಲೆಂಡ್ ಟೂರನ್ನು ಹೊಡೆದುಬಂದಿದ್ದಾರೆ. ಕರ್ನಾಟಕ ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ವಿಜಯಕುಮಾರ್ ಅವರು, ರಾಜ್ಯಾದ್ಯಂತ ಆಗಾಗ ಸಂಚರಿಸಿ ಪಕ್ಷದ ಸಂಘಟನೆಯನ್ನು ಬಲಪಡಿಸುವ, ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವ, ಕಾಯಕದಲ್ಲಿಯೂ ತೊಡಗಿರುತ್ತಾರೆ. ಅಂತರ್ಜಾಲದಲ್ಲಿ ಕೂಡ ಸಾಕಷ್ಟು ಚಟುವಟಿಕೆಯಿಂದಿರುವ ವಿಜಯಕುಮಾರ್ ಅವರನ್ನು ಫೇಸ್ ಬುಕ್ ಮುಖಾಂತರವೂ ಸಂಪರ್ಕಿಸಬಹುದು.

English summary
Two times MLA from Jayanagar assembly constituency, RSS man, Karnataka BJP vice-president and net savvy BN Vijaykumar (https://www.facebook.com/bnvijayakumar.jayanagar?fref=ts) is 24/7 MLA. In an exclusive interview to Oneindia-Kannada Vijaykumar shares his idea about dream projects for the development of Jayanagar. Excerpts from the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X