ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಕ್ಸ್‌ಕ್ಲೂಸಿವ್ : ಜಯಾ ಕೇಸಿನಲ್ಲಿ ಎದುರಿಸಿದ ಸಂಕಷ್ಟಗಳು ಅಷ್ಟಿಷ್ಟಲ್ಲ - ಭವಾನಿ ಸಿಂಗ್

By Oneindia Staff Writer
|
Google Oneindia Kannada News

ತಮಿಳುನಾಡಿನ ಗಟ್ಟಿಗಿತ್ತಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಜಯರಾಂ ಅವರ ವಿರುದ್ಧ ಕಾನೂನು ಹೋರಾಟ ನಡೆಸುವುದು ಸಾಮಾನ್ಯ ಸಂಗತಿಯಲ್ಲ ಎಂಬುದು ಎಷ್ಟು ಸತ್ಯವೋ, ದಶಕಗಳ ಕಾಲ ನಡೆಸಿದ ಕಾನೂನು ಹೋರಾಟದ ಫಲದಿಂದಾಗಿ ತಮಿಳುನಾಡಿನ ರಾಜಕೀಯ ಚೆಹರೆಯೇ ಬದಲಾಗಿದೆ ಎಂಬುದು ಕೂಡ ಅಷ್ಟೇ ಸತ್ಯ.

ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ, ಮೊದಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನಿಯೋಜಿತರಾಗಿದ್ದ ಬಿ.ವಿ. ಆಚಾರ್ಯ ಅವರು ಜಯಲಲಿತಾ ವಿರುದ್ಧ ವಾದ ಮಂಡಿಸುತ್ತಿದ್ದರು. ಆದರೆ, ಕೆಲವೊಂದು ವಿವಾದಗಳಿಂದಾಗಿ ಅವರು ಹಿಂದೆ ಸರಿಯಬೇಕಾಯಿತು ಮತ್ತು ಹಲವಾರು ಬಾರಿ ತಮ್ಮ ಮೇಲೆ ಪ್ರಭಾವ ಬೀರಲು ಯತ್ನಿಸಲಾಯಿತು ಎಂದು ಕೂಡ ಅವರು ತಿಳಿಸಿದ್ದರು.

ನಂತರ ಈ ಜವಾಬ್ದಾರಿಯನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಭವಾನಿ ಸಿಂಗ್ ಅವರು ವಹಿಸಿಕೊಂಡ ನಂತರವೇ ಜಯಲಲಿತಾ ಅವರ ವಿರುದ್ಧ ಅಂತಿಮ ತೀರ್ಪು (ನ್ಯಾ. ಜಾನ್ ಮೈಕಲ್ ಕುನ್ಹಾ) ಪ್ರಕಟವಾಯಿತು ಮತ್ತು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಈ ತೀರ್ಪಿನಿಂದಾಗಿ ಜಯಲಲಿತಾ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವಂತಾಯಿತು ಮತ್ತು ಮುಖ್ಯಮಂತ್ರಿ ಪದವಿಯನ್ನೂ ತ್ಯಜಿಸುವಂತಾಯಿತು.

ಭವಾನಿ ಸಿಂಗ್ ಅವರಿಗೂ ಇದು ಭಾರೀ ಸವಾಲಿನ ಸಂಗತಿಯಾಗಿತ್ತು. ಇದು ಅವರ ವೃತ್ತಿಜೀವನದ ಅತ್ಯಂತ ಕಠಿಣ ಚಾಲೆಂಜ್ ಆಗಿತ್ತು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರು ನಡೆಸಿದ ಹೋರಾಟ, ಎದುರಿಸಿದ ಅಡೆತಡೆಗಳು, ಮತ್ತು ಅವರ ಮುಂದಿನ ಹಾದಿಯ ಕುರಿತು ಒನ್ಇಂಡಿಯಾ ಜೊತೆ ಭವಾನಿ ಸಿಂಗ್ ಮಾತನಾಡಿದ್ದಾರೆ. [ಜಯಲಲಿತಾ ಪ್ರಕರಣದ ಟೈಮ್ ಲೈನ್]

Jayalalithaa Case : Prosecutor Bhavani Singh interview, Oneindia exclusive

ಬಿವಿ ಆಚಾರ್ಯ ಅವರು ಮಾಡಿರುವ ಆರೋಪಗಳ ಬಗ್ಗೆ

ಆಚಾರ್ಯ ಅವರು ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಆರಂಭಿಕ ಹಂತದಲ್ಲಿ ಕೇಸ್ ನಡೆಸಿದ್ದರು. ತಮ್ಮ ಮೇಲೆ ಹೇರಲಾಗಿದ್ದ ಒತ್ತಡ ಮತ್ತು ಬೆದರಿಕೆಯ ಕಾರಣದಿಂದಾಗಿ ಈ ಕೇಸಿನಿಂದ ಹಿಂದೆ ಸರಿದಿದ್ದಾಗಿ ಅವರು ಹೇಳಿಕೆ ನೀಡಿದ್ದಾರೆ. ಅರೆ, ವಕೀಲನಿಗೆ ಒತ್ತಡ ಇರುವುದೆಂದರೇನು?

ಇದೆಲ್ಲ ನಮ್ಮ ವೃತ್ತಿಯ ಭಾಗವೆ. ಇಂತಹ ಒತ್ತಡಗಳನ್ನು ನಾವು ನಿಭಾಯಿಸಲೇಬೇಕು. ಒಂದು ಪ್ರಕರಣದಲ್ಲಿ ಯಾರು ಆರೋಪಿ ಸ್ಥಾನದಲ್ಲಿದ್ದಾರೆ ಎಂಬುದನ್ನು ನೋಡಿ ನಾವು (ವಕೀಲರು) ಕೇಸನ್ನು ತೆಗೆದುಕೊಳ್ಳಬಾರದು. ಹೆಚ್ಚು ಅಥವಾ ಕಡಿಮೆ ಪ್ರಭಾವಿ ವ್ಯಕ್ತಿ ಅಂತ ಇರುವುದೇ ಇಲ್ಲ.

ಕಾನೂನಿನ ಮುಂದೆ ಎಲ್ಲರೂ ಒಂದೇ. ಹಲವಾರು ಕೇಸುಗಳಲ್ಲಿ ಒತ್ತಡ ಮತ್ತು ಬೆದರಿಕೆಗಳು ಇದ್ದೇ ಇರುತ್ತವೆ. ಆದರೆ, ಒಂದು ಕೇಸಿನಿಂದ ಹಿಂದೆ ಸರಿಯಲು ಅದು ಕಾರಣವಾಗಲೇಬಾರದು. ಅವರು ಹೇಳಿದ್ದನ್ನು ನಾನು ಖಂಡಿತ ಒಪ್ಪುವುದಿಲ್ಲ. ಅವರು ಹಾಗೆ ಹೇಳಿದ್ದು ಸರಿಯೂ ಅಲ್ಲ. [ನಾನೇನು ತಪ್ಪು ಮಾಡಿಲ್ಲ : ಭವಾನಿ ಸಿಂಗ್]

ಸಿಕ್ಕಾಪಟ್ಟೆ ಕಠಿಣ ಪ್ರಕರಣ

ನನ್ನ ಪ್ರಕಾರ ಬಿವಿ ಆಚಾರ್ಯ ಅವರು ಕಾಲು ಭಾಗದಷ್ಟು ಮಾತ್ರ ಈ ಕೇಸನ್ನು ನಿಭಾಯಿಸಿದ್ದರು. ಅವು ವಿಚಾರಣೆ ಮತ್ತು ಆರಂಭಿಕ ವಾದ ಮಂಡಿಸುವ ಹಂತ. ನಿಜ ಹೇಳಬೇಕೆಂದರೆ, ಕುದಿಬಿಂದುವಿನ ಹಂತವನ್ನು ಈ ಪ್ರಕರಣ ಮುಟ್ಟಿರಲೇ ಇಲ್ಲ.

ಅತ್ಯಂಥ ಕಠಿಣ ಹಂತದಲ್ಲಿ ನಾನು ಈ ಕೇಸನ್ನು ತೆಗೆದುಕೊಂಡೆ. ಈ ಹಂತದಿಂದಲೇ ಕೇಸು ಮುಂದೆ ಸಾಗಲು ಆರಂಭವಾಯಿತು ಮತ್ತು ಈ ಪ್ರಕರಣ ತಾರ್ಕಿಕ ಅಂತ್ಯ ಮುಟ್ಟಿದ್ದೇ ಒಂದೂವರೆ ವರ್ಷದಲ್ಲಿ. ಒಂದರ್ಥದಲ್ಲಿ ಈ ಪ್ರಕರಣದ ಮುಕ್ಕಾಲು ಭಾಗವನ್ನು ನಾನೇ ನಿಭಾಯಿಸಿದ್ದೇನೆ.

ನಾನೆದುರಿಸಿದ ಒತ್ತಡ, ಆರೋಪ ಹಲವಾರು

ಮೊದಲೇ ಹೇಳಿದಂತೆ ಇದು ನಾನೆದುರಿಸಿದ ಅತ್ಯಂತ ಕಠಿಣ ಪ್ರಕರಣ. ಇದು ಸಾಕಷ್ಟು ಸಮಯ ತಿಂದಿದ್ದು ಮತ್ತು ಅಸಂಖ್ಯಾತ ದಾಖಲೆಗಳನ್ನು ಅಧ್ಯಯನ ನಡೆಸುವುದು ನಿಜಕ್ಕೂ ಸವಾಲಿನದಾಗಿತ್ತು. ನಿಜ ಹೇಳಬೇಕೆಂದರೆ, ಈ ಕೇಸನ್ನು ತೆಗೆದುಕೊಂಡಾಗ ನನ್ನ ಮೇಲೆ ಯಾವುದೇ ಒತ್ತಡ ಇರಲಿಲ್ಲ. ನಾನು ಪಕ್ಷಪಾತ ಮಾಡುತ್ತಿದ್ದೇನೆ ಮತ್ತು ಆರೋಪಿಗಳ ಪರ ವಾದಿಸುತ್ತಿದ್ದೇನೆ ಎಂಬೆಲ್ಲ ಆರೋಪಗಳನ್ನು ನನ್ನ ಮೇಲೆಯೂ ಹೊರಿಸಲಾಯಿತು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಕೂಡ ನನ್ನ ಮೇಲೆ ಆರೋಪ ಹೊರಿಸಿದರು. ನಾನು ಅದ್ಯಾವುದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಮತ್ತು ವೃತ್ತಿಪರವಾಗಿ ಏನು ಮಾಡಬೇಕೋ ಅದನ್ನೇ ಮಾಡಿದೆ. ಆದರೆ, ಕೊನೆಗೆ ಜಯಲಲಿತಾ ಅವರಿಗೆ ಶಿಕ್ಷೆ ಘೋಷಣೆಯಾದಾಗ, ತಾವು ಅಂದಿಕೊಂಡಿದ್ದು ತಪ್ಪು ಅಂತ ಕರುಣಾನಿಧಿ ಅವರಿಗೂ ಅರಿವಾಯಿತು.

ನ್ಯಾವಾದಿಗಳಾಗಿ ಒತ್ತಡ ಮತ್ತು ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ನಮ್ಮ ಆತ್ಮಸಾಕ್ಷಿ ಹೇಗೆ ಹೇಳುತ್ತೋ ಹಾಗಿಯೇ ನಡೆದುಕೊಳ್ಳಬೇಕು. ರಾಜಕಾರಣಿಗಳು ಭಾಗಿಯಾಗಿರುವಂಥ ಇಂಥ ಕೇಸುಗಳಲ್ಲಿ ಇದೆಲ್ಲ ಸಾಮಾನ್ಯ. ಕೇಸಿನ ಸಾಧಕ ಬಾಧಕಗಳ ಬಗ್ಗೆಯೇ ನಮ್ಮ ಚಿತ್ತ ಕೇಂದ್ರೀಕರಿಸಬೇಕು.

ಯಾವ ಬೆದರಿಕೆಗಳೂ ಬಂದಿರಲಿಲ್ಲ

ನನ್ನ ಮೇಲೆ ಹಲವಾರು ಆರೋಪಗಳನ್ನು ಹೊರಿಸಲಾಯಿತು. ಆದರೆ, ನನಗೆ ಯಾವುದೇ ಬೆದರಿಕೆಗಳು ಬರಲಿಲ್ಲ. ಪ್ರಭಾವಿ ರಾಜಕಾರಣಿ ಭಾಗಿಯಾಗಿದ್ದರಿಂದ ಈ ಪ್ರಕರಣ ಭಾರೀ ಮಹತ್ವ ಪಡೆದುಕೊಂಡಿದ್ದು ಮಾತ್ರ ನಿಜ. ನನಗೆ ಹೀಗೆಯೇ ಮಾಡಬೇಕೆಂದು ಯಾರೂ ಬೆದರಿಕೆ ಒಡ್ಡಲಿಲ್ಲ ಎಂದು ವಿಶ್ವಾಸದಿಂದ ಹೇಳಬಲ್ಲೆ.

ನಾನು ಪ್ರವೇಶಿಸಿದಾಗ ಈ ಪ್ರಕರಣದಲ್ಲಿ ಸಾಕಷ್ಟು ನಾಟಕಗಳು ನಡೆಯುತ್ತಿದ್ದವು. ನಾನು ಆರೋಪಿಗೆ ಶಿಕ್ಷೆ ಆಗಲೇಬೇಕೆಂದು ವಾದಿಸುತ್ತಿದ್ದರಿಂದ ಬೆದರಿಕೆಗಳು ಬರುವುದು ಸಹಜವಾಗಿತ್ತು. ಆದರೆ, ನಾವು ನಮ್ಮ ಕೆಲಸಕ್ಕೆ ಅಂಟಿಕೊಂಡರೆ ಇಂಥವೆಲ್ಲ ಹೆಚ್ಚು ಬಾಧಿಸುವುದಿಲ್ಲ.

ಭವಿಷ್ಯದ ಹಾದಿ

ಮುಂದೆ ಸಾಕಷ್ಟು ಕೆಲಸಗಳಿವೆ. ಜಯಲಲಿತಾ ಜಾಮೀನು ಅರ್ಜಿ ವಿಚಾರಣೆಯೂ ಒಂದು ಸವಾಲಿನದಾಗಿತ್ತು. ಸದ್ಯಕ್ಕೆ ಸುಪ್ರೀಂ ಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ವಿಚಾರಣೆ ಮುಂದುವರಿಸಲು ದಿನಾಂಕ ನಿಗದಿಪಡಿಸಬಹುದು.

ಅವರು ಮೇಲ್ಮನವಿ ಸಲ್ಲಿಸಿದ್ದಾರೆ ಮತ್ತು ಶಿಕ್ಷೆ ಆಗಿರುವುದು ಮುಂದುವರಿಸಲು ನಾವು ವಾದ ಮಾಡಬೇಕಾಗಿದೆ. ಆದರೆ, ಹಿಂದಿನಂತೆ ವಿಳಂಬ ಆಗುವುದಿಲ್ಲ ಎಂಬುದು ನನ್ನ ಅನಿಸಿಕೆ. ವಿಶೇಷ ಕೋರ್ಟ್ ನೀಡಿದ ತೀರ್ಪಿಗೆ ವ್ಯತಿರಿಕ್ತವಾದ ತೀರ್ಪು ನೀಡಬಾರದೆಂದು ಹೈಕೋರ್ಟ್ ಮುಂದೆ ನಾವು ವಾದ ಮಾಡಲಿದ್ದೇವೆ. ಆದರೆ, ಶಿಕ್ಷೆಯ ಪ್ರಮಾಣ ಕುರಿತು ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಶಿಕ್ಷೆಯ ಪ್ರಮಾಣವನ್ನು ಎತ್ತಿಹಿಡಿಯಬೇಕು ಅಥವಾ ಇನ್ನಷ್ಟು ಹೆಚ್ಚಿಸಬೇಕು ಎಂಬ ವಾದ ನಮ್ಮದಾಗಿರಲಿದೆ. ಈ ಕುರಿತು ಕೆಲವೊಂದು ಕೆಲಸ ಬಾಕಿಯಿದ್ದು, ಸದ್ಯದಲ್ಲಿಯೇ ಸಂಬಂಧಿತರ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು.

English summary
Oneindia Exclusive : Special public prosecutor Bhavani Singh speaks about the challenges, threats, ordeal he has faced while fighting against former Chief minister of Tamil Nadu J Jayalalithaa in disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X