ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಲೊಪ್ಪಿಕೊಳ್ಳುವ ಮಾತೇ ಇಲ್ಲ: ಪ್ರಯತ್ನ ಮುಂದುವರಿಸಿದ ಇಸ್ರೋ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 2: ಚಂದ್ರಯಾನ-2 ನೌಕೆಯ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಯತ್ನ ನಡೆಸಿ 25 ದಿನ ಕಳೆದಿದೆ. ಚಂದ್ರನ ಮೇಲೆ ಇಳಿಯಲು ಕೆಲವೇ ಮೀಟರ್‌ಗಳು ಬಾಕಿ ಇರುವಾಗ ವಿಕ್ರಂ ಲ್ಯಾಂಡರ್ ಇಸ್ರೋದಿಂದ ಸಂಪರ್ಕ ಕಳೆದುಕೊಂಡಿತ್ತು. ಲ್ಯಾಂಡರ್ ಇಳಿದಿರಬಹುದಾದ ಚಿತ್ರವನ್ನು ಆರ್ಬಿಟರ್ ತೆಗೆದಿರುವುದಾಗಿ ಇಸ್ರೋ ಹೇಳಿದ್ದರೂ ಅದರ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಇನ್ನು, ಲ್ಯಾಂಡರ್‌ಅನ್ನು ಹುಡುಕಲು ಹೊರಟ ನಾಸಾದ ಆರ್ಬಿಟರ್ ಕೂಡ ಅಲ್ಲಿ ಕತ್ತಲೆ ಕವಿದಿದೆ ಎಂದು ಬರಿಗೈಲಿ ಮರಳಿದೆ.

ಇಸ್ರೋದ ತಾಂತ್ರಿಕ ಯೋಜನೆ ಪ್ರಕಾರ ವಿಕ್ರಂ ಲ್ಯಾಂಡರ್ 14 ದಿನಗಳ ಬಳಿಕ ತನ್ನ ಜೀವ ಕಳೆದುಕೊಳ್ಳುತ್ತದೆ. ಏಕೆಂದರೆ ವಿಕ್ರಂ ಲ್ಯಾಂಡರ್ ಶಕ್ತಿ ಪಡೆದುಕೊಳ್ಳುವುದು ಸೂರ್ಯನ ಬಿಸಿಲಿನ ಮೂಲಕ. 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದ ಮೇಲೆ ಸೂರ್ಯ ಕಿರಣಗಳು ಬೀಳುತ್ತಿದ್ದರಿಂದ ಅದು ಅಷ್ಟು ದಿನ ಕಾರ್ಯನಿರ್ವಹಿಸುವಂತೆ ಮಾಡಲಾಗಿತ್ತು. ಆದರೆ ಅದು ಅಲ್ಲಿ ತನ್ನ ನಿಗದಿತ ಕೆಲಸವನ್ನು ಮಾಡಿದೆಯೇ ಅಥವಾ ಚಂದ್ರನ ಮೇಲೆ ಅಪ್ಪಳಿಸಿದ ವೇಗಕ್ಕೆ ನಿಷ್ಕ್ರಿಯವಾಗಿದೆಯೇ ಎನ್ನುವುದು ಖಚಿತವಾಗಿಲ್ಲ. ಏಕೆಂದರೆ ಕಡಿದುಕೊಂಡ ಸಂಪರ್ಕವನ್ನು ಇದುವರೆಗೂ ಸಾಧಿಸಲು ಸಾಧ್ಯವಾಗಿಲ್ಲ. ಜತೆಗೆ ಸೆ. 21ರ ಬಳಿಕ ಅಲಿ ಸೂರ್ಯನ ಬೆಳಕು ಮಾಯವಾಗಿ 14 ದಿನಗಳ ಕತ್ತಲೆ ಆವರಿಸುತ್ತದೆ. ಇಲ್ಲಿ -200 ಡಿಗ್ರಿಯಷ್ಟು ಶೀತ ಇರುವುದರಿಂದ ವಿಕ್ರಂ ಲ್ಯಾಂಡರ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಅವಕಾಶವಿಲ್ಲ.

ನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರನಾಸಾ ಸೆರೆ ಹಿಡಿದ 'ವಿಕ್ರಮ್ ಲ್ಯಾಂಡರ್' ಅಪ್ಪಳಿಸಿದ ಸ್ಥಳದ ಚಿತ್ರ

ವಿಕ್ರಂ ಲ್ಯಾಂಡರ್ ಮತ್ತೆಂದೂ ಸಂಪರ್ಕಕ್ಕೆ ಸಾಧ್ಯವಿಲ್ಲ ಎನ್ನುವುದು ಅದನ್ನು ರೂಪಿಸಿದ ತಂತ್ರಜ್ಞಾನವನ್ನು ಬಲ್ಲ ವಿಜ್ಞಾನಿಗಳ ಹೇಳಿಕೆ. ಆದರೆ ಇಷ್ಟು ಮಹತ್ವದ ಪ್ರಯೋಗ ನಡೆಸಿರುವ ಇಸ್ರೋ ಸಂಪೂರ್ಣ ನಂಬಿಕೆ ಕಳೆದುಕೊಂಡಿಲ್ಲ. ತಪ್ಪಿಹೋದ ವಿಕ್ರಂ ಲ್ಯಾಂಡರ್ ಮತ್ತೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆಯೊಂದಿಗೆ ಮುಂದುವರಿಯುವುದಾಗಿ ಅದು ತಿಳಿಸಿದೆ.

ಚಂದ್ರನ ಮೇಲೆ ಮತ್ತೆ ಬಿಸಿಲು ಬೀಳಲಿದೆ. ಆಗ ಲ್ಯಾಂಡರ್‌ಗೆ ಸೌರಶಕ್ತಿ ದೊರಕುವುದರಿಂದ ಅದು ಪುನಃ ಜೀವ ಪಡೆದು ಸಂಪರ್ಕ ಸಿಗಬಹುದು ಎಂಬ ಸಣ್ಣ ಆಸೆ ಇದೆ. ಹೀಗಾಗಿ ಅದರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ನಡೆಸುವುದಾಗಿ ಇಸ್ರೋ ತಿಳಿಸಿದೆ.

ಹಗಲು ಮೂಡಿದಾಗ ಮತ್ತೆ ಪ್ರಯತ್ನ

ಹಗಲು ಮೂಡಿದಾಗ ಮತ್ತೆ ಪ್ರಯತ್ನ

'ಈಗಿನ ಸಂದರ್ಭದಲ್ಲಿ ಲ್ಯಾಂಡರ್ ಜತೆ ಸಂಪರ್ಕ ಸಾಧ್ಯವಿಲ್ಲ. ಏಕೆಂದರೆ ಅಲ್ಲಿ ಈಗ ಕತ್ತಲೆಯ ಸಮಯ. ಕತ್ತಲಿನ ಅವಧಿ ಮುಗಿದ ಬಳಿಕ ಬಹುಶಃ ನಾವು ಮತ್ತೆ ಪ್ರಯತ್ನ ಮುಂದುವರಿಸುತ್ತೇವೆ. ವಿಕ್ರಂ ಲ್ಯಾಂಡರ್ ಇಳಿದ ಜಾಗದಲ್ಲಿ ಸೂರ್ಯನ ಬೆಳಕು ಇರುವುದಿಲ್ಲ. ಲ್ಯಾಂಡರ್‌ಗೆ ಶಕ್ತಿ ಪೂರೈಕೆಯಾಗದೆ ಇರುವುದರಿಂದ ಅದು ಕ್ರಿಯಾಶೀಲವಾಗಿರುವುದಿಲ್ಲ. ಹಗಲು ಮೂಡಿದ ಸಂದರ್ಭದಲ್ಲಿ ನಾವು ಅಲ್ಲಿ ಪ್ರಯತ್ನ ಮುಂದುವರಿಸುತ್ತೇವೆ' ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದರು.

ಪ್ರಯತ್ನ ತಪ್ಪೇನಿಲ್ಲ

ಪ್ರಯತ್ನ ತಪ್ಪೇನಿಲ್ಲ

ಲ್ಯಾಂಡರ್ ಒಮ್ಮೆ ನಿಷ್ಕ್ರಿಯಗೊಂಡಿರುವುದರಿಂದ ಮತ್ತು ಅದು ಆರಂಭದಿಂದಲೇ ಸಂಪರ್ಕ ಕಡಿದುಕೊಂಡಿದ್ದರಿಂದ ಮತ್ತೆ ಅದರೊಂದಿಗೆ ನಂಟು ಪಡೆದುಕೊಳ್ಳುವುದು ಬಹಳ ಕಷ್ಟ ಎಂದು ಬಾಹ್ಯಾಕಾಶ ತಜ್ಞರು ಹೇಳುತ್ತಾರೆ. 'ಅನೇಕ ದಿನಗಳು ಕಳೆದ ಬಳಿಕ ಸಂಪರ್ಕ ಹುಡುಕುವುದು ಬಹಳ ಕಷ್ಟಕರ. ಆದರೆ ಪ್ರಯತ್ನಿಸುವುದರಲ್ಲಿ ತಪ್ಪೇನಿಲ್ಲ' ಎಂದು ಇಸ್ರೋದ ಅಧಿಕಾರಿಯೊಬ್ಬರು ಹೇಳಿರುವುದಾಗಿ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದೆ.

ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್ಚಂದ್ರಯಾನ 2- ಆರ್ಬಿಟರ್ ಬಗ್ಗೆ ಸಿಹಿಸುದ್ದಿ ನೀಡಿದ ಕೆ.ಶಿವನ್

ಲ್ಯಾಂಡರ್ ಆಘಾತದಿಂದ ಒಳಭಾಗಕ್ಕೆ ಹಾನಿ

ಲ್ಯಾಂಡರ್ ಆಘಾತದಿಂದ ಒಳಭಾಗಕ್ಕೆ ಹಾನಿ

'ಚಂದ್ರನ ಮೇಲೆ ಈಗ ಆವರಿಸಿರುವ ಶೀತ ಮಾತ್ರವಲ್ಲದೆ, ಲ್ಯಾಂಡರ್‌ಗೆ ಆಗಿರಬಹುದಾದ ಆಘಾತ ಚಿಂತೆಯುಂಟು ಮಾಡಿರುವ ಸಂಗತಿ. ಅಧಿಕ ವೇಗದಿಂದ ಲ್ಯಾಂಡರ್ ಚಂದ್ರನಿಗೆ ಅಪ್ಪಳಿಸಿರುವುದರಿಂದ ಅದಕ್ಕೆ ಹಾನಿಯಾಗಿರಬಹುದು. ಆ ಆಘಾತದಿಂದ ಲ್ಯಾಂಡರ್ ಒಳಗಿನ ಅನೇಕ ಅಂಶಗಳಿಗೆ ಹಾನಿಯಾಗಿರಬಹುದು. ಹೀಗಾಗಿಯೇ ಅದರ ಮರುಸಂಪರ್ಕ ಹೆಚ್ಚು ಅನುಮಾನ ಮೂಡಿಸಿರುವುದು' ಎಂದು ಅವರು ತಿಳಿಸಿದ್ದಾರೆ.

ಶೇ 98ರಷ್ಟು ಯಶಸ್ಸು ತಮ್ಮ ಅಭಿಪ್ರಾಯವಲ್ಲ

ಶೇ 98ರಷ್ಟು ಯಶಸ್ಸು ತಮ್ಮ ಅಭಿಪ್ರಾಯವಲ್ಲ

ಚಂದ್ರಯಾನ-2 ಯೋಜನೆಯು ಶೇ 98ರಷ್ಟು ಯಶಸ್ವಿಯಾಗಿದೆ ಎಂದು ಈ ಹಿಂದೆ ಹೇಳಿದ್ದ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು ಅದು ತಮ್ಮ ಹೇಳಿಕೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಂದ್ರಯಾನದ ಯಶಸ್ಸಿನ ಮೌಲ್ಯಮಾಪನವನ್ನು ಆಂತರಿಕ ಮೌಲ್ಯನಿರ್ಣಯ ಸಮಿತಿ ಪ್ರಕಟಿಸಿದೆ ಎಂದು ಅವರು ಹೇಳಿದ್ದಾರೆ.

ಆರ್ಬಿಟರ್ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬ ಕಾರಣಕ್ಕಾಗಿ ಯೋಜನೆಯ ಯಶಸ್ಸಿನ ಬಗ್ಗೆ ಹೇಳಿಕೊಂಡಿಲ್ಲ, ಈ ಯೋಜನೆಯ ಹಲವು ಹಂತದ ಉದ್ದೇಶಗಳು ಈಡೇರಿರುವುದರಿಂದ ಇದು ಯಶಸ್ವಿಯಾಗಿದೆ ಎಂದು ವಿವರಿಸಿದ್ದಾರೆ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ಕಕ್ಷೆಯಲ್ಲಿ ಆರ್ಬಿಟರ್ ಕಾರ್ಯಾಚರಣೆ

ಕಕ್ಷೆಯಲ್ಲಿ ಆರ್ಬಿಟರ್ ಕಾರ್ಯಾಚರಣೆ

ಆರ್ಬಿಟರ್‌ಅನ್ನು ಚಂದ್ರನ ಉದ್ದೇಶಿತ ಕಕ್ಷೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದು ಚಂದ್ರನ ಹುಟ್ಟು, ಅಲ್ಲಿರುವ ಖನಿಜಗಳ ಅಧ್ಯಯನ, ಧ್ರುವ ಭಾಗದಲ್ಲಿರುವ ನೀರಿನ ಅಂಶಗಳು ಮುಂತಾದವುಗಳನ್ನು ತನ್ನ ಎಂಟು ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಆರ್ಬಿಟರ್ ಅಧ್ಯಯನ ಮಾಡಲಿದೆ. ಇದುವರೆಗಿನ ಯಾವುದೇ ಚಂದ್ರಯಾನ ಯೋಜನೆಗಿಂತಲೂ ಅತ್ಯಧಿಕ ರೆಸಲ್ಯೂಷನ್‌ನ ಕ್ಯಾಮೆರಾ (0.3 ಮೀಟರ್) ಹೊಂದಿದ್ದು ಅತ್ಯಂತ ಸ್ಪಷ್ಟ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಆರ್ಬಿಟರ್ ತೆಗೆಯುವ ಚಿತ್ರಗಳನ್ನು ಪರಿಶೀಲಿಸಿ, ಪರಿಷ್ಕರಿಸಿ ಇಸ್ರೋ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಲಾಗುವುದು ಎಂದು ಕೆ. ಶಿವನ್ ತಿಳಿಸಿದ್ದಾರೆ.

English summary
ISRO has not given up effort to regain its link with Chadrayaan-2's Vikram lander which had lost its communication during landing on moon three weeks ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X