• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಟ್ರಿ ಮೇಡ್ ಪಿಸ್ತೂಲು ಎಂದರೇನು? ಅಂಡರ್ ವರ್ಲ್ಡ್ ಗೆ ಇದೇಕೆ ಇಷ್ಟ?

By ಒನ್ ಇಂಡಿಯಾ ನ್ಯೂಸ್ ಡೆಸ್ಕ್
|

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರ ಇದೀಗ, ನಾಡ ಪಿಸ್ತೂಲ್ ಅಥವಾ ಕಂಟ್ರಿ ಮೇಡ್ ಪಿಸ್ತೂಲುಗಳ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ.

ಗೌರಿ ಲಂಕೇಶ್, ಧಾಬೋಲ್ಕರ್, ಎಂ.ಎಂ. ಕಲಬುರಗಿ ಹತ್ಯೆಗಳಲ್ಲಿ ಮಾತ್ರವಲ್ಲ ಈ ದೇಶದಲ್ಲಿ ಅಂಡರ್ ವರ್ಲ್ಡ್ ವ್ಯಕ್ತಿಗಳು ತಾವು ಗುರಿಯಿಟ್ಟ ವ್ಯಕ್ತಿಗಳನ್ನು ಮುಗಿಸಲು ಬಳಸಲು ಉಪಯೋಗಿಸುವ ಸುಲಭ ಸಾಧನ ಆಗಿದ್ದು ಈ ಕಂಟ್ರಿ ಮೇಡ್ ಪಿಸ್ತೂಲುಗಳೇ.

ಕೊಲೆಗಾರರು ಯಾಕೆ ಅಷ್ಟು ಹತ್ತಿರದಿಂದ ಶೂಟ್ ಮಾಡ್ತಾರೆ?

ಹಾಗಂತ, ಈ ಟೈಪಿನ ಪಿಸ್ತೂಲುಗಳು ಬಲು ಪರಿಣಾಮಕಾರಿ ಎಂದು ಹೇಳುವಂತೆಯೂ ಇಲ್ಲ. ಇವನ್ನು ಅಬ್ಬಬ್ಬಾ ಅಂದ್ರೆ 2 ಅಥವಾ 3 ಮೀಟರ್ ದೂರದಿಂದ ಶೂಟ್ ಮಾಡಿದರೆ ಮಾತ್ರ ಗುರಿಯಿಟ್ಟ ವ್ಯಕ್ತಿಯನ್ನು ಗಾಯಗೊಳಿಸಬಹುದು. ಕೇವಲ ಪ್ರಮುಖ ಅಂಗಾಂಗಗಳಿಗೆ ಹೊಡೆದರೆ ಮಾತ್ರವೇ ಮಾರಣಾಂತಿಕ ಗಾಯವಾಗಬಹುದು. ಆದರೆ, ದೂರದಿಂದ ಗುಂಡು ಹಾರಿಸಿದರೆ ಅದೇನೂ ಪರಿಣಾಮವಾಗದು.

ಪತ್ರಕರ್ತೆ ಗೌರಿ ಲಂಕೇಶ್ ಮೇಲೆ ಗುಂಡು ಹಾರಿಸಿ ಹತ್ಯೆ

ಆದರೂ, ಹಂತಕರು ಈ ಪಿಸ್ತೂಲುಗಳನ್ನು ಉಪಯೋಗಿಸುವುದೇಕೆ? ಇವುಗಳನ್ನೇ ಏಕೆ ಹಂತಕರು ಪ್ರಿಫರ್ ಮಾಡ್ತಾರೆ? ಎಂಬಿತ್ಯಾದಿ ಮಾಹಿತಿಯನ್ನು ಹೆಸರನ್ನೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಒನ್ ಇಂಡಿಯಾದೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಗೌರಿ, ದಾಬೋಲ್ಕರ್, ಕಲಬುರ್ಗಿ ಹತ್ಯೆ : 7.65 ಎಂಎಂ ಪಿಸ್ತೂಲ್ ಬಳಕೆ?

(ವಿಶೇಷ ಸೂಚನೆ: ಈ ಲೇಖನವು ಪೊಲೀಸ್ ಅಧಿಕಾರಿಯು ನೀಡಿರುವ ಮಾಹಿತಿಯ ಯಥಾವತ್ ನಿರೂಪಣೆ. ಇದು 'ಒನ್ ಇಂಡಿಯಾ ಕನ್ನಡ ಜಾಲತಾಣ'ದ ಅಭಿಪ್ರಾಯವಲ್ಲ. ಈ ಲೇಖನಕ್ಕಾಗಿ ಬಳಸಿಕೊಂಡಿರುವ ಚಿತ್ರಗಳು ಕೇವಲ ಸಾಂದರ್ಭಿಕ ಚಿತ್ರಗಳಷ್ಟೆ.)

ಒಂದು ಲೈಸನ್ಸ್ ಗೆ ಒಂದೇ ಶಸ್ತ್ರಾಸ್ತ್ರ

ಒಂದು ಲೈಸನ್ಸ್ ಗೆ ಒಂದೇ ಶಸ್ತ್ರಾಸ್ತ್ರ

ನಮ್ಮ ಕಾನೂನಿನ ಪ್ರಕಾರ, ಭಾರತದ ಯಾವುದೇ ನಾಗರಿಕ ಶಸ್ತ್ರಾಸ್ತ್ರಗಳನ್ನು ಹೊಂದಬೇಕಾದರೆ ಮೊದಲು ಸರ್ಕಾರದಿಂದ ಲೈಸನ್ಸ್ ಪಡೆಯುವುದು ಕಡ್ಡಾಯ. ಲೈಸನ್ಸ್ ಪಡೆದ ನಂತರವಷ್ಟೆ ಆತ ಶಸ್ತ್ರಾಸ್ತ್ರ ಖರೀದಿ ಮಾಡಬಹುದು. ಅದನ್ನೂ ಅಲ್ಲಿಲ್ಲಿ ಖರೀದಿಸುವಂತಿಲ್ಲ. ಲೈಸನ್ಸ್ ಪಡೆದ ಮಾರಾಟಗಾರರಿಂದ ಮಾತ್ರವೇ ನಿಗದಿತ ಶಸ್ತ್ರಾಸ್ತ್ರಗಳನ್ನು ಖರೀದಿಸಬೇಕು. ಒಂದು ಲೈಸನ್ಸ್ ನಡಿ ಒಂದೇ ಶಸ್ತ್ರಾಸ್ತ್ರ ಇಟ್ಟುಕೊಳ್ಳಲು ಅವಕಾಶವಿದೆ. ಒಬ್ಬ ವ್ಯಕ್ತಿಗೆ ಮೂರು ಲೈಸನ್ಸ್ ಪಡೆಯಲು ಅವಕಾಶವಿದ್ದು, ಈ ಮೂರು ಲೈಸನ್ಸ್ ಅಡಿಯಲ್ಲಿ ಮೂರು ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳಬಹುದು.

ಒಬ್ಬರಿಗೆ ಮೂರು ಲೈಸನ್ಸ್ ನಿಯಮ

ಒಬ್ಬರಿಗೆ ಮೂರು ಲೈಸನ್ಸ್ ನಿಯಮ

ಲೈಸನ್ಸ್ ಸಿಕ್ಕಿದೆಯೆಂದು ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಹಾಗಿಲ್ಲ. ಪಿಸ್ತೂಲು, ರಿವಾಲ್ವಾರ್ ನಂಥ ಚಿಕ್ಕಪುಟ್ಟ ವೆಪನ್ ಗಳನ್ನು ಕೊಳ್ಳಲು ಮಾತ್ರ ಅವಕಾಶವಿದೆ. ಜನಸಾಮಾನ್ಯರಿಗೆ ನಿರ್ಬಂಧವಿರುವ ಮೆಷೀನ್ ಗನ್, ಎ.ಕೆ. 47 ಗನ್ ಗಳನ್ನು ಕೊಳ್ಳಲು ಅವಕಾಶವಿರುವುದಿಲ್ಲ.

ಪ್ರತಿಯೊಂದಕ್ಕೂ ಲೆಕ್ಕ, ಕಾರಣ ಕೊಡಬೇಕು

ಪ್ರತಿಯೊಂದಕ್ಕೂ ಲೆಕ್ಕ, ಕಾರಣ ಕೊಡಬೇಕು

ಲೈಸನ್ಸ್ ಪಡೆದ ನಂತರ ಪರವಾನಗಿ ಪಡೆದ ಶಸ್ತ್ರಾಸ್ತ್ರ ಮಾರಾಟಗಾರರಿಂದ ಮಾತ್ರವೇ ಶಸ್ತ್ರಾಸ್ತ್ರವನ್ನು ಖರೀದಿಸಬೇಕಾಗುತ್ತದೆ. ಹಾಗೆ, ಖರೀದಿಸಿದ ಶಸ್ತ್ರಾಸ್ತ್ರಗಳನ್ನು ನೊಂದಾವಣಿ ಮಾಡಿಸಬೇಕಾಗುತ್ತದೆ. ಲೈಸನ್ಸ್ ಇದೆ ಎಂದ ಮಾತ್ರಕ್ಕೇ ನಾವು ಅನಧಿಕೃತ ಮೂಲಗಳಿಂದ ಶಸ್ತ್ರಾಸ್ತ್ರ ಪಡೆಯುವುದಾಗಲೀ, ನಿಷೇಧಿತ ಶಸ್ತ್ರಾಸ್ತ್ರಗಳನ್ನು ಹೊಂದುವುದಾಗಲೀ ಮಾಡುವಂತಿಲ್ಲ. ಅಲ್ಲದೆ, ಶಸ್ತ್ರಾಸ್ತ್ರ ಬಳಕೆಗೆ ನೀಡಲಾದ ಗುಂಡುಗಳನ್ನು ಹಾರಿಸಿದ ನಂತರ ಆ ಗುಂಡುಗಳ ಕ್ಯಾಟ್ರಿಡ್ಜ್ ಗಳನ್ನು ತಂದು ಒಪ್ಪಿಸಲೇಬೇಕು. ಇದು ನಿಯಮ. ಹಾರಿಸಿದ ಗುಂಡುಗಳಿಗೆ ಕಾರಣವನ್ನೂ ನೀಡಬೇಕಾಗುತ್ತದೆ.

ನಾಡ ಪಿಸ್ತೂಲುಗಳ ಬಳಕೆಗೆ ತಲೆನೋವಿಲ್ಲ

ನಾಡ ಪಿಸ್ತೂಲುಗಳ ಬಳಕೆಗೆ ತಲೆನೋವಿಲ್ಲ

ಮೇಲೆ ತಿಳಿಸಿದ ಇಷ್ಟು ನಿಯಮಗಳು ಕಂಟ್ರಿ ಮೇಡ್ ಪಿಸ್ತೂಲುಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ, ಅವುಗಳನ್ನು ಸರ್ಕಾರ ನಿಷೇಧಿಸಿದೆ. ಆದರೆ, ಬುಡಮೇಲು ಕೃತ್ಯಗಳನ್ನು ಮಾಡುವವರಿಗೆ ಲೈಸನ್ಸು ಪಡೆಯುವ, ಬಳಸಿದ ಗುಂಡುಗಳಿಗೆ ಲೆಕ್ಕ ಕೊಡುವ ಗೋಜು ಬೇಕಿಲ್ಲವಾದ್ದರಿಂದ ಅವರು ಸಹಜವಾಗಿ ಅಕ್ರಮವಾಗಿ ತಯಾರಾಗುವ ಕಂಟ್ರಿ ಮೇಡ್ ಪಿಸ್ತೂಲುಗಳ ಮೊರೆ ಹೋಗುತ್ತಾರೆ. ದುಷ್ಕರ್ಮಿಗಳ ಉದ್ದೇಶವೇ ಕಾನೂನು ಬಾಹಿರ ಕೆಲಸ ಮಾಡುವುದಾಗಿರುವುದರಿಂದ ಕಾನೂನಿನ ಚೌಕಟ್ಟಿನಿಂದ ಆಚೆಗಿನ ಮಾರ್ಗಗಳಲ್ಲೇ ಇಂಥ ಶಸ್ತ್ರಾಸ್ತ್ರಗಳನ್ನು ಹೊಂದಲು ಅವರು ಬಯಸುತ್ತಾರೆ.

ಕಾನೂನು ಮೀರಿದ ಕೃತ್ಯಗಳಿಗೆ ಅಡ್ಡದಾರಿ!

ಕಾನೂನು ಮೀರಿದ ಕೃತ್ಯಗಳಿಗೆ ಅಡ್ಡದಾರಿ!

ಇನ್ನು, ಭೂಗತ ಲೋಕದ ಮಂದಿ ಇಂಥ ಕಂಟ್ರಿ ಮೇಡ್ ಶಸ್ತ್ರಾಸ್ತ್ರಗಳ ಕಡೆ ಹೋಗಲು ಮತ್ತೊಂದು ಕಾರಣ ಇವುಗಳ ಬೆಲೆ. ಪರವಾನಗಿ ಪಡೆದ ನಂತರ, ನಾವು ಖರೀದಿಸುವ ಕಾನೂನು ಮಾನ್ಯತೆಯುಳ್ಳ ಯಾವುದೇ ಗುಣಮಟ್ಟವುಳ್ಳ ಪಿಸ್ತೂಲು, ರಿವಾಲ್ವಾರ್ ಖರೀದಿಗೆ ಕನಿಷ್ಠವೆಂದರೂ 70ರಿಂದ 80 ಸಾವಿರ ರು. ಹಣ ತೆರಬೇಕು. ಆದರೆ, ಕಂಟ್ರಿಮೇಡ್ ಪಿಸ್ತೂಲುಗಳು ಕೈಗೆಟಕುವ ಬೆಲೆಗೆ ಸಿಗುತ್ತವೆ. ಕಡಿಮೆ ಬೆಲೆ, ಬಳಸಲೂ ಅನುಕೂಲಕರ, ಯಾವುದೇ ನಿರ್ಬಂಧವಿಲ್ಲ - ಈ ಮೂರೂ ಕಾರಣಗಳಿಂದಾಗಿ ಕಂಟ್ರಿ ಪಿಸ್ತೂಲುಗಳು ದುಷ್ಕರ್ಮಿಗಳ ಮೊದಲ ಆಯ್ಕೆಯಾಗಿರುತ್ತದೆ.

ಬುಲೆಟ್ ತಯಾರಿಕೆ ಸುಲಭ

ಬುಲೆಟ್ ತಯಾರಿಕೆ ಸುಲಭ

ಈ ಕಂಟ್ರಿ ಮೇಡ್ ಪಿಸ್ತೂಲುಗಳ ಬಳಕೆಯಲ್ಲಿನ ಮತ್ತೊಂದು ಮಹತ್ವದ ಸಂಗತಿಯೆಂದರೆ, ಇವುಗಳ ಬುಲೆಟ್ ಅನ್ನುಮನೆಯಲ್ಲೇ ತಯಾರಿಸಿಕೊಳ್ಳಬಹುದು. ಇದರ ಸ್ವಲ್ಪ ಜ್ಞಾನವಿದ್ದರೂ ಸಾಕು ಕೇವಲ ರಂಜಕ, ಗಂಧಕ, ಸೀಸಗಳನ್ನು ಉಪಯೋಗಿಸಿ ಇವುಗಳನ್ನು ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಹಾಗಾಗಿ, ಬುಲೆಟ್ ಖಾಲಿಯಾದರೆ ಸರಬರಾಜುದಾರರಿಗೆ ಬುಲೆಟ್ ಗಳಿಗಾಗಿ ದುಂಬಾಲು ಬೀಳುವ ಅಗತ್ಯವೇ ಇರುವುದಿಲ್ಲ. ಹಾಗಾಗಿ, ದುಷ್ಕರ್ಮಿಗಳಿಗೆ ಇದರ ಮೇಲೆ ವ್ಯಾಮೋಹ ಜಾಸ್ತಿ.

ಇದಕ್ಕೆ ಹಲವಾರು ಉದಾಹರಣೆಗಳಿವೆ

ಇದಕ್ಕೆ ಹಲವಾರು ಉದಾಹರಣೆಗಳಿವೆ

ಅಂದಹಾಗೆ, ಮೇಲೆ ತಿಳಿಸಿದಂತೆ, ಈ ಕಂಟ್ರಿ ಮೇಡ್ ಪಿಸ್ತೂಲುಗಳಿಂದ ಅಷ್ಟೇನೂ ಫಾಯಿದಾ ಇಲ್ಲ. ಏಕೆಂದರೆ, ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಹೊಡೆದರೆ ಮಾತ್ರ ಇವು ಘಾಸಿ ಮಾಡಬಲ್ಲವಾದ್ದರಿಂದ ದೂರದಿಂದ ಪ್ರಯೋಗಿಸಿದರೆ ವ್ಯಕ್ತಿಯು ಗಾಯಗೊಳ್ಳುತ್ತಾರೇ ವಿನಃ ಯಾವುದೇ ಪ್ರಾಣಾಪಾಯವಾಗುವುದಿಲ್ಲ. ಪೊಲೀಸ್ ಅಧಿಕಾರಿಯೊಬ್ಬರು ಈ ಮಾತಿಗೆ ಉದಾಹರಣೆಯಾಗಿ ನೀಡುವುದು. ಇದೇ ವರ್ಷ ಬೆಂಗಳೂರಿನ ಕಡಬಗೆರೆ ಶ್ರೀನಿವಾಸ್ ಮೇಲೆ ನಡೆದಿದ್ದ ಗುಂಡಿನ ದಾಳಿಯನ್ನು. ಅಂದೂ, ದುಷ್ಕರ್ಮಿಗಳು ನಾಡ ಪಿಸ್ತೂಲನ್ನೇ ಪ್ರಯೋಗಿಸಿದ್ದರು. ಆದರೆ, ಅವರು ಶ್ರೀನಿವಾಸ್ ಮೇಲೆ ದೂರದಿಂದ ಗುಂಡು ಹಾರಿಸಿದ್ದರಿಂದಾಗಿ, ಅವರಿಗೆ ಗಾಯಗಳಾದವೇ ಹೊರತು ಅವರು ಬದುಕುಳಿದರು ಎನ್ನುತ್ತಾರೆ ಆ ಅಧಿಕಾರಿ. ಇಷ್ಟಿದ್ದರೂ ಭೂಗತ ವ್ಯಕ್ತಿಗಳಿಗೆ ಈ ಕಂಟ್ರಿ ಮೇಡ್ ಪಿಸ್ತೂಲುಗಳೇ ಅಚ್ಚುಮೆಚ್ಚು.

ಗಡಿಭಾಗದಲ್ಲಿ 'ಕಂಟ್ರಿ' ಬಳಕೆ ಹೆಚ್ಚು

ಗಡಿಭಾಗದಲ್ಲಿ 'ಕಂಟ್ರಿ' ಬಳಕೆ ಹೆಚ್ಚು

ನಮ್ಮ ರಾಜ್ಯದಲ್ಲಿ ಬಳಕೆಯಾಗುವ ಕಂಟ್ರಿ ಮೇಡ್ ಪಿಸ್ತೂಲುಗಳ ಬಗ್ಗೆ ಹೇಳುವುದಾದರೆ, ಈ ಎಲ್ಲಾ ಪಿಸ್ತೂಲುಗಳು ಉತ್ತರ ಪ್ರದೇಶ, ಬಿಹಾರ, ಪಕ್ಕದ ಆಂಧ್ರಪ್ರದೇಶದ ಕಡೆಯಿಂದ ಬರುತ್ತವೆ. ಹೆಚ್ಚಾಗಿ ಬರುವುದು ಯುಪಿ, ಬಿಹಾರಗಳಿಂದಲೇ. ರಾಜ್ಯದಲ್ಲಿ ಅವುಗಳ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳಿಲ್ಲ. ಇನ್ನು, ಇವುಗಳ ಬಳಕೆ ಬಗ್ಗೆ ಹೇಳುವುದಾದರೆ, ರಾಜ್ಯದಲ್ಲಿ ಇವುಗಳ ಬಳಕೆ ಹೆಚ್ಚಾಗಿ ಬೆಳಗಾವಿ, ಬಿಜಾಪುರ ಸೇರಿದಂತೆ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅದು ಬಿಟ್ಟರೆ, ಹೆಚ್ಚು ಬಳಕೆಯಾಗುತ್ತಿರುವುದು ಬೆಂಗಳೂರಿನಲ್ಲಿ. ಆದರೆ, ಇದರ ಪ್ರಮಾಣ ಸ್ವಲ್ಪ.

ಅಕ್ರಮ ತಡೆಯಲು ಹರಸಾಹಸ

ಅಕ್ರಮ ತಡೆಯಲು ಹರಸಾಹಸ

ಇಷ್ಟೆಲ್ಲಾ ಓದಿದ ಮೇಲೆ ಈ ನಾಡ ಪಿಸ್ತೂಲುಗಳ ಹಾವಳಿಯನ್ನು ನಿಗ್ರಹಿಸಲು ಸಾಧ್ಯವಿಲ್ಲವೇ ಎಂದು ನೀವು ಕೇಳಬಹುದು. ಸಾಧ್ಯವಿದೆ. ಈ ಬಗ್ಗೆ ಪೊಲೀಸ್ ಇಲಾಖೆಯು ಸತತವಾಗಿ ಪ್ರಯತ್ನಿಸುತ್ತಲೇ ಇದೆ. ನಾಡ ಪಿಸ್ತೂಲುಗಳನ್ನು ತಯಾರಿಸುವುದು, ಹೊಂದುವುದು - ಎರಡೂ ಅಕ್ರಮವಾಗಿರುವುದರಿಂದ ಇಂಥ ಪ್ರಕರಣಗಳು ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದು, ಈ ಅಪರಾಧ ಮಾಡಿದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲಾಗುತ್ತದೆ. ಇತ್ತೀಚೆಗಷ್ಟೇ, ಬೆಳಗಾವಿಯಲ್ಲಿ ಇಂಥ ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗಿದ್ದ ಅಡ್ಡೆಯ ಮೇಲೆ ದಾಳಿ ನಡೆಸಲಾಗಿತ್ತು. ಇಂಥ ಕಾರ್ಯಾಚರಣೆಗಳು ನಡೆಯುತ್ತಲೇ ಇವೆ.

ಇಂಥ ಕಾರ್ಯಾಚರಣೆಗಳು ಹೆಚ್ಚೆಚ್ಚು ನಡೆಯಲಿ ಹಾಗೂ ಅವು ಯಶಸ್ವಿಯಾಗಲಿ. ಅಕ್ರಮ ಶಸ್ತ್ರಾಸ್ತ್ರಗಳು ತೊಲಗಲಿ ಎಂಬುದು 'ಒನ್ ಇಂಡಿಯಾ' ಹಾರೈಕೆ.

English summary
In recent killing of Veteran Journalist Gauri Lankesh again Country made weapons sounded. Here are some informations regarding the such weapons and reasons for what anti-social elements opt them first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X