ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾಖಲೆಯ ಆಹಾರ ಉತ್ಪಾದನೆ, ರಫ್ತಿನಲ್ಲೂ ದೇಶ ಮುಂಚೂಣಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

|
Google Oneindia Kannada News

ಬೆಂಗಳೂರು, ಆಗಸ್ಟ್ 20: "ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಅಕ್ಕಿ, ಗೋಧಿಗಾಗಿ ಬೇರೆ ದೇಶದತ್ತ ನೋಡುತ್ತಿದ್ದ ಭಾರತ, ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಶ್ರಮ ಮತ್ತು ದೂರದೃಷ್ಟಿಯ ಯೋಜನೆಗಳ ಫಲ ಇದಾಗಿದೆ," ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

"ಈ ಬಾರಿ 305 ಮಿಲಿಯನ್ ಮೆಟ್ರಿಕ್ ಟನ್ ಆಹಾರ ಉತ್ಪಾದನೆ ಮತ್ತು 326 ಮಿಲಿಯನ್ ಮೆಟ್ರಿಕ್ ಟನ್ ತೋಟಗಾರಿಕಾ ಬೆಳೆ ಉತ್ಪಾದನೆ ಆಗಿದ್ದು, ಈ ವಿಚಾರದಲ್ಲಿ ದಾಖಲೆ ಉತ್ಪಾದನೆ ಸಾಧ್ಯವಾಗಿದೆ," ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ರಫ್ತು ವಿಚಾರದಲ್ಲೂ ವಿಶೇಷ ಸಾಧನೆ ಮಾಡಲು ನಾವು ಮುಂದಾಗಿದ್ದೇವೆ. ಆಹಾರ ಪದಾರ್ಥ ರಫ್ತಿನಲ್ಲೂ ನಾವೀಗ 9ನೇ ಸ್ಥಾನದಲ್ಲಿದ್ದೇವೆ ಎಂದು ತಿಳಿಸಿದರು.

Indias Record In Food Production And Exports: Union Minister Shobha Karandlaje

"ಕಾಂಗ್ರೆಸ್ ಆಡಳಿತದಲ್ಲಿ ಕೃಷಿ ಮೂಲದಿಂದ ಜಿಡಿಪಿಗೆ ಕೇವಲ ಶೇ.13ರಿಂದ 14 ರಷ್ಟು ಕೊಡುಗೆ ಲಭಿಸುತ್ತಿತ್ತು. ಏಳು ವರ್ಷಗಳ ಬಿಜೆಪಿ ಆಡಳಿತದ ಬಳಿಕ ಅದು ಶೇ.20.22ಕ್ಕೆ ಏರಿದೆ. ಈ ರೀತಿ ಕೃಷಿ ಇಲಾಖೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಿದೆ," ಎಂದರು.

"ಪ್ರಧಾನಮಂತ್ರಿಯವರು ಕಿಸಾನ್ ಸಮ್ಮಾನ್ ಯೋಜನೆಯಡಿ ಇಲ್ಲಿಯವರೆಗೆ 21 ಕೋಟಿ ರೈತರಿಗೆ 1,57,000 ಕೋಟಿ ರೂಪಾಯಿ ಬ್ಯಾಂಕ್ ಖಾತೆಗಳಿಗೆ ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮಾಡಿದ್ದಾರೆ. ಫಸಲ್ ಭಿಮಾ ಯೋಜನೆಯನ್ನೂ ಸರಳಗೊಳಿಸಲಾಗಿದೆ. ಯಾವುದೇ ಸಮಸ್ಯೆಗಳಿಲ್ಲದೆ ಖಾತೆಗೆ ಪರಿಹಾರ ಧನ ಬರುವಂತಾಗಿದೆ. ಇದೊಂದು ಕ್ರಾಂತಿಕಾರಿ ಬದಲಾವಣೆ," ಎಂದು ಅಭಿಪ್ರಾಯಪಟ್ಟರು.

"ನೈಸರ್ಗಿಕ ಕೃಷಿಗೆ ಆದ್ಯತೆ ಮತ್ತು ಪ್ರೋತ್ಸಾಹ ಕೊಡಲಾಗುತ್ತಿದೆ. ಹನಿ ನೀರಾವರಿಯಲ್ಲಿ ರಾಜ್ಯವು ದೇಶದಲ್ಲಿ ನಂಬರ್ ಒನ್ ಆಗಿದೆ. ತೆಂಗು ರಫ್ತಿನ ಮೇಲೆ ಇದ್ದ ನಿಷೇಧವನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ತೆಂಗಿನ ಸಂಸ್ಕರಿತ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ಸಾಧ್ಯವಾಗಲಿದೆ," ಎಂದು ವಿವರಿಸಿದರು.

Indias Record In Food Production And Exports: Union Minister Shobha Karandlaje

"ಟ್ರ್ಯಾಕ್ಟರ್, ಟಿಲ್ಲರ್, ಕೃಷಿ ಪರಿಕರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಉತ್ಪನ್ನಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‍ಪಿ) ಆನ್‌ಲೈನ್‌ನಲ್ಲಿ ಪ್ರಕಟಿಸಲು ಕೇಂದ್ರ ಸರಕಾರ ಸೂಚಿಸಿದೆ. ಡೀಲರ್ ಅಂಗಡಿಯಲ್ಲೂ ಅದನ್ನು ದೊಡ್ಡದಾಗಿ ಪ್ರಕಟಿಸಬೇಕು. ಕೃಷಿ ಇಲಾಖೆಗಳಲ್ಲೂ ಈ ಕುರಿತ ಮಾಹಿತಿ ಸಿಗುವಂತಾಗಬೇಕೆಂದು ಕೇಂದ್ರ ಸರಕಾರ ತಿಳಿಸಿದೆ," ಎಂದರು.

"ಹೆಚ್ಚು ಸವಾಲು ಇರುವ ಜನರಿಗೆ ಅತ್ಯಂತ ಹತ್ತಿರವಾದ ಇಲಾಖೆ ಎಂದೇ ಕೃಷಿಯನ್ನು ಗುರುತಿಸಲಾಗಿದೆ. ಇಡೀ ದೇಶದಲ್ಲಿ ಕೆಲಸ ಮಾಡಲು ಅವಕಾಶ ಇದೆ. ದೇಶದ ಶೇ.70 ಜನರು ರೈತಾಪಿ ಕೆಲಸ ಮಾಡುತ್ತಾರೆ. ಕೃಷಿಕರಲ್ಲಿ ಶೇ.80 ಜನರು ಕಡಿಮೆ ಜಮೀನು ಹೊಂದಿ ಸಣ್ಣ ಮತ್ತು ಮಧ್ಯಮ ವರ್ಗಕ್ಕೆ ಸೇರಿದ್ದಾರೆ. ಕೃಷಿ ಲಾಭದಾಯಕವಲ್ಲ ಎಂದು ರೈತರು ಭೂಮಿಯಲ್ಲಿ ಕೃಷಿ ಮಾಡುತ್ತಿಲ್ಲ. ನಗರದ ಕೆಲಸಕ್ಕಾಗಿ ವಲಸೆ ಹೆಚ್ಚುತ್ತಿದೆ. ಸಣ್ಣ ಮತ್ತು ಮಧ್ಯಮ ರೈತರನ್ನು ಒಗ್ಗೂಡಿಸಿ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಸರಕಾರ ಗರಿಷ್ಠ ಪ್ರಯತ್ನ ಮಾಡುತ್ತಿದೆ," ಎಂದು ತಿಳಿಸಿದರು.

"2013- 14ರಲ್ಲಿ ಯುಪಿಎ ಸರಕಾರವು ಬಜೆಟ್‍ನಲ್ಲಿ ಸುಮಾರು 21,350 ಕೋಟಿಯನ್ನು ಕೃಷಿ ಕ್ಷೇತ್ರಕ್ಕೆ ನೀಡಿ ಆ ಕ್ಷೇತ್ರವನ್ನು ಕಡೆಗಣಿಸಿತ್ತು. ಆದರೆ, ಕಳೆದ ಆರೇಳು ವರ್ಷಗಳಲ್ಲಿ ಕೃಷಿ ಬಜೆಟ್ ಶೇ.460ರಷ್ಟು ಹೆಚ್ಚಾಗಿ 2020-21ರಲ್ಲಿ 1.31 ಲಕ್ಷ ಕೋಟಿ ಆಗಿದೆ," ಎಂದು ಮಾಹಿತಿ ನೀಡಿದರು.

"ದೇಶದಲ್ಲಿ 10 ಸಾವಿರ ಕೃಷಿ ಉತ್ಪಾದಕರ ಘಟಕಗಳನ್ನು (ಎಫ್‍ಪಿಒ) ಆರಂಭಿಸುವ ಗುರಿಯನ್ನು ನಮ್ಮ ಜನಪರ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದಾರೆ. ಪ್ರತಿ ಎಫ್‍ಪಿಒಗೆ 25 ಬೇರೆ ಬೇರೆ ಉತ್ಪನ್ನ ಉತ್ಪಾದಿಸಲು ಅನುಮತಿ ಮತ್ತು ಸಾಲ ಸೌಕರ್ಯ ಸಿಗಲಿದೆ. ಇದಲ್ಲದೆ ಕೃಷಿ ಮೂಲಸೌಕರ್ಯ ಹೆಚ್ಚಳಕ್ಕೆ 1 ಲಕ್ಷ ಕೋಟಿಯ ಹೆಚ್ಚುವರಿ ಹಣವನ್ನು ನೀಡಲಾಗಿದೆ," ಎಂದರು.

"ಖಾದ್ಯ ತೈಲ ಕ್ಷೇತ್ರದಲ್ಲಿ ಸ್ವಾವಲಂಬಿತನ ಸಾಧನೆಗೆ ಒತ್ತು ಕೊಡಲಾಗುತ್ತಿದೆ. ಒಣ ಭೂಮಿಯಲ್ಲಿ ಸಿರಿ ಧಾನ್ಯ ಬೆಳೆಯಲು ಉತ್ತೇಜನ ನೀಡಲಾಗುವುದು. ಕೃಷಿಕರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ," ಎಂದು ತಿಳಿಸಿದರು.

"ಕೃಷಿ ಇಲಾಖೆಯ ದೊಡ್ಡ ಜವಾಬ್ದಾರಿ ನನ್ನ ಮೇಲೆ ಹೊರಿಸಿದ್ದಾರೆ. ಸಚಿವೆಯಾದ ಬಳಿಕ ಮೊದಲ ಬಾರಿಗೆ ಜನಾಶೀರ್ವಾದ ಯಾತ್ರೆ ಮೂಲಕ ರಾಜ್ಯಕ್ಕೆ ಬಂದಿದ್ದೇನೆ. ನೂತನ ಸಚಿವರನ್ನು ಲೋಕಸಭೆಗೆ ಪರಿಚಯಿಸುವ ರೀತಿ ರಿವಾಜುಗಳಿಗೆ ಕಾಂಗ್ರೆಸ್ ಪಕ್ಷ ಬೆಲೆ ಕೊಡಲಿಲ್ಲ. ವಿರೋಧ ಪಕ್ಷಗಳಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕ ನಡೆದಿದೆ ಎಂದು ಆಕ್ಷೇಪಿಸಿದರು. ಇದೇ ಕಾರಣಕ್ಕಾಗಿ ಪಕ್ಷದ ತೀರ್ಮಾನದಂತೆ ಜನಾಶೀರ್ವಾದ ಯಾತ್ರೆ ನಡೆದಿದೆ," ಎಂದರು.

"ಸದ್ಯ ಚುನಾವಣೆ ಇಲ್ಲದಿದ್ದರೂ ಜನಾಶೀರ್ವಾದ ಯಾತ್ರೆಗೆ ದೇಶದೆಲ್ಲೆಡೆ ಮತ್ತು ರಾಜ್ಯದಲ್ಲೂ ಅದ್ಭುತವಾಗಿ ಸ್ವಾಗತ ಲಭಿಸಿದೆ. ರಾಜ್ಯದಲ್ಲಿ 4 ಸಚಿವರ ಯಾತ್ರೆ ಯಶಸ್ವಿಯಾಗಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ಒಟ್ಟು 27 ಹಿಂದುಳಿದ ವರ್ಗಗಳ ಸಚಿವರಿದ್ದಾರೆ. 11 ಮಹಿಳೆಯರಿಗೆ ಅವಕಾಶ ಲಭಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೂ ಗರಿಷ್ಠ ಸಚಿವ ಸ್ಥಾನ ಕೊಟ್ಟಿದ್ದು, ಪ್ರಾದೇಶಿಕ ಅವಕಾಶವನ್ನೂ ನೀಡಿದ್ದಾರೆ. ಇದರಿಂದ ವಿರೋಧ ಪಕ್ಷಗಳಿಗೆ ಆತಂಕ ಉಂಟಾಗಿದೆ, ಇದನ್ನು ಅರಗಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ," ಎಂದು ನುಡಿದರು.

"ಒಬಿಸಿ ಬಿಲ್ ಮಂಡನೆ ಹೊರತುಪಡಿಸಿ ಬೇರೆ ಯಾವ ದಿನವೂ ಸದನ ಸರಿಯಾಗಿ ನಡೆಸಲು ಅವಕಾಶ ಕೊಡಲಿಲ್ಲ. ರೈತರ ಕುರಿತ ಚರ್ಚೆ, ನೆರೆ, ಕೋವಿಡ್ ಸೇರಿ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ಇದ್ದರೂ ಅದನ್ನು ಬಳಸಿಕೊಂಡಿಲ್ಲ," ಎಂದು ಆಕ್ಷೇಪ ವ್ಯಕ್ತಪಡಿಸಿದರು.

"ಪ್ರಧಾನಿ ನರೇಂದ್ರ ಮೋದಿ ಸರಕಾರದಲ್ಲಿ ಕೃಷಿ ಸಚಿವೆ ಆಗುವ ಅವಕಾಶ ಸಿಕ್ಕಿದ್ದು, ರಾಜಕೀಯ ಹಿನ್ನೆಲೆ, ಕುಗ್ರಾಮದಿಂದ ಬಂದವರು ಕೂಡ ಬಿಜೆಪಿಯಲ್ಲಿ ಇಂಥ ಪದವಿ ಪಡೆಯಲು ಸಾಧ್ಯ ಎಂಬುದು ಸಾಬೀತಾಗಿದೆ. ಇದಕ್ಕಾಗಿ ಪ್ರಧಾನಿಯವರಿಗೆ ಮತ್ತು ಪಕ್ಷಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ," ತಿಳಿಸಿದರು.

"ಒಂದು ರೈತ ಕುಟುಂಬದಲ್ಲಿ, ಅತ್ಯಂತ ಕುಗ್ರಾಮದಲ್ಲಿ ಹುಟ್ಟಿದ, ಪದವಿ ಪೂರೈಸುವವರೆಗೆ ವಿದ್ಯುತ್, ರಸ್ತೆ ಇಲ್ಲದಂಥ ಗ್ರಾಮದಿಂದ ಬಂದ ನನಗೆ ಬಿಜೆಪಿ ಬಹಳಷ್ಟನ್ನು ಕೊಟ್ಟಿದೆ. ವಿಧಾನ ಪರಿಷತ್ ಸದಸ್ಯತ್ವ, ವಿಧಾನಸಭಾ ಸದಸ್ಯತ್ವ, ರಾಜ್ಯದ ಸಚಿವೆಯಾಗುವ, ಬಳಿಕ 2 ಬಾರಿ ಲೋಕಸಭಾ ಸದಸ್ಯರಾಗುವ ಅವಕಾಶವನ್ನು ಪಕ್ಷ ನೀಡಿದೆ. ಇದಕ್ಕಾಗಿ ಪಕ್ಷಕ್ಕೆ ಮತ್ತು ಮತದಾರರಿಗೆ ಚಿರಋಣಿ," ಎಂದರು.

Recommended Video

ಬಸವರಾಜ್ ಬೊಮ್ಮಾಯಿ ಅವರ ಫೇವರೆಟ್ ಟಾಪ್ 3 ಹೀರೋಯಿನ್ಸ್ | Oneindia Kannada

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರು ಮತ್ತು ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷರೂ ಆದ ಭಾರತಿ ಶೆಟ್ಟಿ, ರಾಜ್ಯ ಮಾಧ್ಯಮ ಸಂಚಾಲಕರಾದ ಕರುಣಾಕರ ಖಾಸಲೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

English summary
This time around India is produce 305 million metric tonnes of food and 326 million metric tonnes of horticultural crop, said Union Minister of State for Agriculture and Farmers' Welfare Shobha Karandlaje.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X