• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಜಯ ದಿವಸ್ ಅಂಗವಾಗಿ ಸಂಸದ ರಾಜೀವ್ ಚಂದ್ರಶೇಖರ್ ವಿಶೇಷ ಲೇಖನ

|

1971ರ ಡಿಸೆಂಬರ್ 16ರಂದು ಪಾಕಿಸ್ತಾನದ ವಿರುದ್ಧ ಪಡೆದ ವಿಜಯದ ನಂತರ, ಪಾಕಿಸ್ತಾನದ ಮತ್ತೊಂದು ದುರದೃಷ್ಟಕರ ಆಕ್ರಮಣವನ್ನು ತಡೆದ ಆಪರೇಷನ್ ವಿಜಯ್ ನಮ್ಮ ದೇಶದ ಸಶಸ್ತ್ರ ಸೇನಾಪಡೆಯ ಸೇವೆ ಮತ್ತು ದೇಶದ ಇತಿಹಾಸ ಕಂಡ ಶ್ರೇಷ್ಠ ಕ್ಷಣಗಳಲ್ಲಿ ಒಂದಾಗಿದೆ. ಅಂತಹ ಕಾರ್ಗಿಲ್ ವಿಜಯ ದಿವಸದ 18ನೇ ವಾರ್ಷಿಕೋತ್ಸವವನ್ನು ಇಂದು (ಜುಲೈ 26) ನಾವು ಆಚರಿಸುತ್ತಿದ್ದೇವೆ.

ಶಾಂತಿ ಮಾತುಕತೆಗಳ ಹಿನ್ನೆಲೆಯಲ್ಲಿಯೇ 1999ರಲ್ಲಿ ಪಾಕಿಸ್ತಾನವು ಆಕಸ್ಮಿಕವಾಗಿ ನಡೆಸಿದ ಅಪ್ರಚೋದಿತ ದಾಳಿಯನ್ನು ನಮ್ಮಲ್ಲಿ ಬಹಳಷ್ಟು ಮಂದಿ ಮರೆಯಲು ಸಾಧ್ಯವೇ ಇಲ್ಲ. 1999ರ ಈ ದಿನ- ಜುಲೈ 26ರಂದು ನಮ್ಮ ಸಶಸ್ತ್ರ ಸೇನಾಪಡೆಯ ಕಠಿಣ ಹೋರಾಟಕ್ಕೆ ಎದೆಯೊಡ್ಡಿ ನಿಂತ ಪಡೆಗಳು ಪಾಕಿಸ್ತಾನಿ ಸೇನೆಯು ಜಿಹಾದಿಗಳ ವೇಷದಲ್ಲಿ ವಶಪಡಿಸಿಕೊಂಡಿದ್ದ ನಿರ್ಣಾಯಕ ಔಟ್‍ಪೋಸ್ಟ್‍ಗಳ ಮೇಲೆ ನಿಯಂತ್ರಣ ಸಾಧಿಸಿತು.

ಕಾರ್ಗಿಲ್ ವಿಜಯ್ ದಿವಸ್: ಭಾರತೀಯ ವೀರಯೋಧರ ಸಾಹಸಗಾಥೆ

ಇಂದು, ಸರಿಸುಮಾರು ಎರಡು ದಶಕಗಳ ನಂತರ, ಭಾರತದ ಪರವಾಗಿ ಈ ಯುದ್ಧಕ್ಕೆ ಇತಿಶ್ರೀ ಹಾಡಿದ ಬಹಳಷ್ಟು ಧೈರ್ಯಶಾಲಿಗಳ ಸೇವೆ ಮತ್ತು ತ್ಯಾಗ ನಮ್ಮ ನೆನನಪಿನಂಗಳದಲ್ಲಿ ದೃಢವಾಗಿ ಬೇರೂರಿದೆ- ಲೆಫ್ಟಿನೆಂಟ್ ಸೌರಭ್ ಕಾಲಿಯಾ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಪಿವಿಸಿ ಹವಾಲ್ದಾರ್ ಚುನ್ನಿ ಲಾಲ್, ರೈಫಲ್‍ಮ್ಯಾನ್ ಸಂಜಯ್ ಕುಮಾರ್ ಅವರನ್ನು ನಾವು ನೆನೆಪಿಸಿಕೊಳ್ಳಲೇಬೇಕಿದೆ.

ಅವರು ಮಾತ್ರವಲ್ಲ, ಕ್ಯಾಪ್ಟನ್ ಹನೀಫುದ್ದೀನ್, ಮೇಜರ್ ಆಚಾರ್ಯ, ಮೇಜರ್ ಸರ್ವನನ್, ಸ್ಕ್ವಾಡರ್ನ್ ಲೀಡರ್ ಅಜಯ್ ಅಹುಜಾ, ಲೆಫ್ಟಿನೆಂಟ್ ಮನೋಜ್ ಪಾಂಡೆ, ಗ್ರೆನಡಿಯರ್ ಯೋಗೇಂದ್ರ ಯಾದವ್, ಲೆಫ್ಟಿನೆಂಟ್ ಕೆಂಗುರುಸ್, ಕ್ಯಾಪ್ಟನ್ ವಿಕ್ರಂ, ಕ್ಯಾಪ್ಟನ್ ವಿಜಯಂತ್ ಥಾಪರ್, ಲೆಫ್ಟಿನೆಂಟ್ ನಾಂಗ್ರುಮ್, ಮೇಜರ್ ವಾಂಗ್‍ಚುಕ್, ಕ್ಯಾಪ್ಟನ್ ಅನುಜ್ ನಯ್ಯರ್, ನಾಯಕ್ ಜಸ್ವೀರ್ ಸಿಂಗ್, ಲ್ಯಾನ್ಸ್ ನಾಯಕ್ ಅಹಮದ್ ಅಲಿ ಮತ್ತು ಇನ್ನೂ ಬಹಳಷ್ಟು ಮಂದಿಯನ್ನು ನಾವು ಸ್ಮರಿಸಬೇಕಿದೆ.

ಕಾರ್ಗಿಲ್ ವಿಜಯ ದಿವಸ: ಟ್ವಿಟ್ಟರ್ ನಲ್ಲಿ ರೋಚಕ ದಿನದ ಮೆಲುಕು

ಸೈನಿಕರ ತ್ಯಾಗ ಮತ್ತು ಕೊಳಕು ರಾಜಕೀಯ

ದೇಶದ ವಿಭಿನ್ನ ಭಾಗಗಳಿಗೆ ಸೇರಿದ ಸಮವಸ್ತ್ರ ಧರಿಸಿದ ಯುವ ಸೈನಿಕರು ನಮ್ಮ ದೇಶದ ಧ್ವಜದ ಅಡಿಯಲ್ಲಿ ಒಂದಾದರು. ಸುಮಾರು 500 ಕ್ಕೂ ಅಧಿಕ ಮಂದಿ ರಾಷ್ಟ್ರ ರಕ್ಷಣೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದರು.

ನಮ್ಮ ಸೈನಿಕರ ನೆನಪುಗಳಿಗೆ ಮತ್ತು ಅವರ ಕುಟುಂಬಗಳಿಗೆ ಗೌರವಾರ್ಪಣೆ ಮಾಡುತ್ತಿದ್ದಂತೆಯೇ- ಯುಪಿಎ ಸರ್ಕಾರದ ಬಹಳಷ್ಟು ವರ್ಷಗಳ ಕಾಲ ಕಾರ್ಗಿಲ್ ವಿಜಯ ದಿವಸದ ಸಂಭ್ರಮಾಚರಣೆ ಮಾಡಲೇ ಇಲ್ಲ ಎನ್ನುವುದನ್ನು ನೆನಪಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ನಾಚಿಕೆಗೇಡಿನ ವಿಷಯವೆಂದರೆ, ಕಾಂಗ್ರೆಸ್ ನಾಯಕತ್ವದ ಬಹುತೇಕರು ಈ ಯುದ್ಧವನ್ನು ಬಿಜೆಪಿ ಯುದ್ಧವೆಂದು ಕರೆದಿದ್ದರು ಮತ್ತು 1971ರ ಇಂದಿರಾಗಾಂಧಿಯವರ ಯುದ್ಧದ ಕತೆ ಇದರಿಂದಾಗಿ ಹಿನ್ನೆಲೆಗೆ ಸರಿಯಬಹುದು ಎಂಬ ಭಯ ಅವರನ್ನು ಕಾಡುತ್ತಿತ್ತು.

ಕ್ಷುಲ್ಲಕ ರಾಜಕೀಯವನ್ನು ಮುಂದಿಟ್ಟು ಸೈನಿಕರ ಸೇವೆ ಮತ್ತು ತ್ಯಾಗವನ್ನು ಮರೆಮಾಚಲಾಯಿತು. 2009 ಜುಲೈನಲ್ಲಿ ಸಂಸತ್ತಿನಲ್ಲಿ ನಾನು ಪದೇ ಪದೇ ಈ ವಿಷಯವನ್ನು ಎತ್ತಿದ ಮೇಲಷ್ಟೇ, ಆಗಿನ ರಕ್ಷಣಾ ಸಚಿವ ಎಕೆ ಆ್ಯಂಟನಿ, ಕಾರ್ಗಿಲ್ ವಿಜಯ ದಿವಸದ ಆಚರಣೆಯನ್ನು ಮರಳಿ ಆರಂಭಿಸಿದರು ಮತ್ತು ಆ ದಿನದಂದು ರಕ್ಷಣಾ ಸಚಿವರು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಭೇಟಿ ನೀಡುವ ಅಭ್ಯಾಸವನ್ನು ಬೆಳೆಸಿದರು.

ಈ ಕೆಟ್ಟ ರಾಜಕೀಯಗೊಳಿಸುವ ರೀತಿ ಇಂದಿಗೂ ಚಾಲ್ತಿಯಲ್ಲಿದೆ- ಭೂತಾನ್‍ನಲ್ಲಿ ಚೀನಾದ ಅತಿಕ್ರಮಣವನ್ನು ಏಕತೆಯಿಂದ ನಿಂತು ಎದುರಿಸಬೇಕಾಗಿರುವ ಸಂದರ್ಭದಲ್ಲಿ ಚೀನಾ ರಾಯಭಾರಿ ಜೊತೆಗೆ ರಹಸ್ಯ ಮಾತುಕತೆ ನಡೆಸುವುದು ಅಥವಾ ಯುವ ಮೇಜರ್‍ನ ಧೈರ್ಯವನ್ನು ಕುಂದಿಸಲು ಪ್ರಯತ್ನಿಸುವುದು ಅಥವಾ ಸೇನಾ ಮುಖ್ಯಸ್ಥರ ಹೆಸರುಗಳನ್ನು ಎಳೆಯುವಂತಹ ಕೆಲಸಗಳನ್ನು ಮಾಡಲಾಗುತ್ತಿದೆ.

ಆದಾಗ್ಯೂ ನಮ್ಮ ಸ್ಥಳೀಯ ರಾಜಕೀಯ ಶತ್ರುಗಳು - ನಮ್ಮ ಎಲ್ಲಾ ಸಂಘರ್ಷಗಳು ಮತ್ತು ಹಲವು ಅಮಾಯಕರ ಸಾವಿಗೆ ಒಂದೇ ಎಳೆಯಾಗಿ ಪಾಕಿಸ್ತಾನ ಇದೆ ಎನ್ನುವುದನ್ನು ಮರೆಯುತ್ತಾರೆ. ಪ್ರಶ್ನೆ ಎಂದರೆ, ಕಳೆದ 18 ವರ್ಷಗಳಿಂದ ದೇಶದ ಮೇಲಿನ ದಾಳಿ ನಡೆಸುವ ಅಪರಾಧಿಯಾಗಿರುವ ಪಾಕಿಸ್ತಾನದ ನಡತೆಯನ್ನು ಬದಲಾಯಿಸಲು ಮತ್ತು ಬದ್ಧತೆಯನ್ನು ಕೇಳಲು ಒಂದು ರಾಷ್ಟ್ರವಾಗಿ ಒಗ್ಗೂಡಲು ನಮಗೆ ಸಾಧ್ಯವಾಗಿದೆಯೆ?

ಈ ತಟಸ್ಥ ಸ್ಥಿತಿ ಮುಂದುವರಿದೇ ಇದೆ. ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಯನ್ನು ಪ್ರೋತ್ಸಾಹಿಸುವಲ್ಲಿ ಮತ್ತು ಸಾವಿರಾರು ಅಮಾಯಕರ ಮರಣಕ್ಕೆ ಕಾರಣವಾದಲ್ಲಿ ಪಾಕಿಸ್ತಾನದ ನೇರ ಪಾತ್ರವನ್ನು ಗುರುತಿಸಲು ಈ ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಮಹಿಳೆಗೆ ಇನ್ನೂ ಸಾಧ್ಯವಾಗಿಲ್ಲ.

ಇದು ಕಳೆದ ಕೆಲವು ವರ್ಷಗಳಲ್ಲಿ ನಡೆಯುತ್ತಿಲ್ಲ, ಬದಲಾಗಿ ಹಲವು ದಶಕಗಳಿಂದ ನಡೆಯುತ್ತಾ ಬಂದಿದೆ. ದೊಡ್ಡ ವ್ಯಂಗ್ಯವೆಂದರೆ, ತಿರಸ್ಕರಿಸಲಾಗದ ಸಾಕ್ಷ್ಯ ಮತ್ತು ಭಾರತೀಯರಲ್ಲಿ ಈ ಬಗ್ಗೆ ವ್ಯಾಪಕವಾದ ಆಸಕ್ತಿ ಇದ್ದರೂ, ನಾವು ಪಾಕಿಸ್ತಾನದ ಜೊತೆಗೆ ರಾಜತಾಂತ್ರಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಆರ್ಥಿಕವಾಗಿ ಅರ್ಥರಹಿತವಾದ ವ್ಯವಹಾರವನ್ನು ಮುಂದುವರಿಸಿದ್ದೇವೆ. ನನ್ನ ಅಭಿಪ್ರಾಯದಲ್ಲಿ ಇದು ಕೇವಲ ಒಂದು ಉದ್ದೇಶವನ್ನಷ್ಟೇ ಈಡೇರಿಸುತ್ತದೆ. ಕಳೆದ ಭಯೋತ್ಪಾದನಾ ದಾಳಿಯನ್ನು ನಮ್ಮ ನೆನಪುಗಳಿಂದ ಮರೆಸಲು ಇರುವ ಸಮಯ ಕಳೆಯುವ ಕ್ರಮ.

ಇವರ ತ್ಯಾಗ, ಬಲಿದಾನ ಮರೆಯುವಂಥದ್ದಲ್ಲ

ದೇಶದ ಗಡಿಗಳನ್ನು ಕಾಯುವವರು ಮತ್ತು ಸೇವೆಯನ್ನು ಸಲ್ಲಿಸುವವರು ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗಮಾಡುತ್ತಿದ್ದಾರೆ ಎನ್ನುವುದನ್ನು ನಾವು ಸುಲಭವಾಗಿ ಮರೆತುಬಿಡುತ್ತೇವೆ. 1988ರಿಂದ 2017 ಜುಲೈ 16ವರೆಗಿನ ಅಂಕಿಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಭಯೋತ್ಪಾದನಾ ದಾಳಿಗೆ 14,776 ಅಮಾಯಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 6,314 ಭದ್ರತಾ ಪಡೆಗಳ ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವೇ 23,238 ಭಯೋತ್ಪಾದಕರನ್ನು ನಾವು ಕೊಲೆಗೈದಿದ್ದೇವೆ.

ಪ್ರತೀ ದಾಳಿಯ ನಂತರ ಈ ಸಂಖ್ಯೆಗಳು ವೃದ್ಧಿಸುತ್ತಲೇ ಹೋಗುತ್ತಿವೆ. ಇತ್ತೀಚೆಗಿನ ಪ್ರಕರಣ ಜುಲೈ 10ರಂದು ಅತೀ ಹೀನಾಯವಾಗಿ ನಡೆದ ಅಮರನಾಥ ಯಾತ್ರೆಯ ಮೇಲೆ ನಡೆದ ಮಾರಣಹೋಮ. ಇದರಲ್ಲಿ 7 ಅಮಾಯಕರು ಜೀವ ಕಳೆದುಕೊಂಡು 19 ಮಂದಿ ಗಾಯಗೊಂಡಿದ್ದಾರೆ. ಇದರಿಂದಾಗಿ ಮತ್ತೊಮ್ಮೆ ನಮ್ಮ ಸೈನಿಕರು ಯಾತ್ರಿಗಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಮತ್ತು ಮರಳಿ ಮನೆಗೆ ತರುವ ಹೊಣೆಯನ್ನು ಹೊತ್ತುಕೊಳ್ಳುವಂತೆ ಮಾಡಿದೆ.

ಗಡಿಗಳಲ್ಲಿ ದೇಶ ರಕ್ಷಣೆಗೆ ನಮ್ಮ ರಕ್ಷಣಾ ಪಡೆ ಸಿಬ್ಬಂದಿ ಮಾಡಿದ ಶೌರ್ಯ ಹಾಗೂ ಬಲಿದಾನಗಳು ಹಾಗೂ ಆಂತರಿಕ ಶತ್ರುಗಳ ಜತೆಗಿನ ಹೋರಾಟಕ್ಕೆ ಪ್ರಮಾಣೀಕರಣದ ಅಗತ್ಯವಿಲ್ಲ. ವಿಪರ್ಯಾಸವೆಂದರೆ ಇತ್ತೀಚಿನ ಅವರ ಬಲಿದಾನಗಳ ವರೆಗೆ- ಅಂದರೆ ಪ್ರಾಣತ್ಯಾಗ, ಅಂಗಾಂಗ ಕಳೆದುಕೊಳ್ಳುವಿಕೆ, ಕುಟುಂಬದಿಂದ ಬಹಳ ಸಮಯ ದೂರ ಇರುವಿಕೆ ಇವೆಲ್ಲವನ್ನು ಗುರುತಿಸಲಾಗಿಲ್ಲ. ಕಳೆದ ನಾಲ್ಕು ದಶಕಗಳಿಂದ ಬಾಕಿ ಇದ್ದ ಒಂದೇ ಶ್ರೇಣಿ ಒಂದೇ ಪಿಂಚಣಿ ಯೋಜನೆಯನ್ನು ಈ ಸರ್ಕಾರ ಅಂತಿಮಗೊಳಿಸಬೇಕಾಯಿತು.

ನಾಯಕರ ನಡೆ ವಿಪರ್ಯಾಸ

ವೃತ್ತಿಪರತೆ ಹಾಗೂ ವಿಶ್ವದಲ್ಲಿ ಅತ್ಯುತ್ತಮ ಎಂದು ಪರಿಗಣಿಸುವ ನಡತೆ ಇದ್ದಾಗಿಯೂ, ಪ್ರಾಣ ತ್ಯಾಗ, ಅಂಗಾಂಗ ಕಳೆದುಕೊಳ್ಳುವಂತಹ ಬಲಿದಾನಗಳ ನಡುವೆಯೂ, ಕಾಂಗ್ರೆಸ್ ಹಾಗೂ ಎಡ ಪಕ್ಷಗಳವರೆಗೆ ಕೆಲವು ಬುದ್ಧಿಜೀವಿಗಳು ನಮ್ಮ ಸೈನಿಕರನ್ನು ಅವಮಾನಗೊಳಿಸುವ ಹಾಗೂ ಬೆದರಿಸುವ ಮೂಲಕ ನಮ್ಮ ಶತ್ರುಗಳ ಕಾರ್ಯತಂತ್ರಕ್ಕೆ ತುಪ್ಪ ಸುರಿಯುವುದನ್ನು ಮುಂದುವರಿಸಿದ್ದು ಮತ್ತಷ್ಟು ವಿಪರ್ಯಾಸವೇ ಸರಿ.

ಸೇನಾಪಡೆ ನಮ್ಮ ಪ್ರೇರೇಪಣೆ ಹಾಗೂ ಬೆಂಬಲದ ಮೇಲೆ ಭರವಸೆ ಇಡುತ್ತದೆ ಮತ್ತು ಅದಕ್ಕೆ ಅದರ ಅಗತ್ಯವಿದೆ. ಅವರಿಗೆ ಸಲ್ಲಬೇಕಾದ ಬೆಂಬಲವನ್ನು ಕೊಡಬೇಕು. ಅಪಾಯಗಳು ಹಾಗೂ ಗಂಡಾಂತರಗಳನ್ನು ಲೆಕ್ಕಿಸದೇ ನೈಸರ್ಗಿಕ ವಿಕೋಪದ ಸನ್ನಿವೇಶದಲ್ಲಿ ಇದೇ ಸೈನಿಕರು ನಮ್ಮ ನೆರವಿಗೆ ಬರುವುದನ್ನು ನಾವು ಮರೆಯಕೂಡದು.

2013ರ ಜೂನ್‍ನಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಮಹಾಪ್ರವಾಹ ಹಾಗೂ ಭೂಕುಸಿತಗಳ ಸಮಯದಲ್ಲಿ ಐಎಎಫ್ 18,424 ಮಂದಿಯನ್ನು ರಕ್ಷಣೆ ಮಾಡಿತು. 2,000 ಕ್ಕೂ ಹೆಚ್ಚು ಬಾರಿ ಹಾರಾಟ ನಡೆಸಿತ್ತು. ಅಲ್ಲದೇ 36,930 ಕೆ.ಜಿ. ಪರಿಹಾರ ಸಾಮಗ್ರಿ ಹಾಗೂ ಸಲಕರಣೆಗಳನ್ನು ಸಂತ್ರಸ್ತರಿಗೆ ವಿತರಿಸಿತು. ಅತ್ಯಂತ ಶಿಸ್ತಿನಿಂದ ಮಾಡಿದ ಈ ಕೆಲಸವು ನಮ್ಮ ಸಶಸ್ತ್ರಪಡೆಯ ಹೆಗ್ಗುರುತು.

ತೀರ ಇತ್ತೀಚೆಗೆ ವಿಂಗ್ ಕಮಾಂಡರ್ ಮನ್‍ದೀಪ್ ಸಿಂಗ್ ದಿಲ್ಲೋನ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪಿ.ಕೆ. ಸಿಂಗ್ ಅವರು ಅರುಣಾಚಲಪ್ರದೇಶದಲ್ಲಿ ಅಹರ್ನಿಶಿ ಪರಿಹಾರ ಕಾರ್ಯ ನಡೆಸುವಾಗ ತಾವಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಜೀವತೆತ್ತರು. ಅವರು 5 ಬಾರಿಯ ಹಾರಾಟದಲ್ಲಿ 169 ಜನರನ್ನು ರಕ್ಷಿಸಿದ್ದರು.

ಯುದ್ಧ ಹಾಗೂ ಶಾಂತಿಕಾಲದಲ್ಲಿ ನಮ್ಮ ಸೈನಿಕರು ಹಾಗೂ ಅವರ ಕುಟುಂಬ ನಿಸ್ವಾರ್ಥದಿಂದ ತಮ್ಮ ನಾಳೆಗಳನ್ನು ನಮ್ಮ ಇಂದಿಗಾಗಿ ಬಿಟ್ಟುಕೊಡುತ್ತಾರೆ. ನಾವು ಒಂದು ದೇಶವಾಗಿ ನಮ್ಮ ಸೈನಿಕರ ಬಲಿದಾನಗಳನ್ನು ಸ್ಮರಿಸಲು ಹಾಗೂ ಗೌರವಿಸಲು ಸಾಮೂಹಿಕ ಹೊಣೆಗಾರರಾಗಿರುತ್ತೇವೆ. ನಮಗಾಗಿ ಇಂದು ಸೇವೆ ಸಲ್ಲಿಸುತ್ತಿರುವವರಿಗೆ ನಾವು ಕೃತಜ್ಞತೆ ಹೇಳಬೇಕು ಹಾಗೂ ಬೆಂಬಲಿಸಬೇಕು.

ಈ ಪರಿಸ್ಥಿತಿಯನ್ನು ಬದಲಿಸೋಣ

ಆದಕಾರಣ ನಾವು ಅವರ ಪ್ರಾಣ ಹಾಗೂ ಸೇವೆಯನ್ನು ವಂದಿಸುತ್ತೇವೆ. ಈ ಎಲ್ಲ ಹಿಂಸೆಗೆ, ಉದಾಹರಣೆಗೆ ಹೇಳುವುದಾದರೆ ಪಾಕಿಸ್ತಾನ ಸಂಘರ್ಷಕ್ಕೆ ಕಾರಣ ಏನು ಎನ್ನುವುದರ ಕುರಿತು ಚರ್ಚೆ ಶುರುಮಾಡಲು, ನಮ್ಮ ಕೈಲಾದ ಕೆಲಸ ಮಾಡಲು ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಗಡಿಗಳು ಹಾಗೂ ನಗರಗಳ ರಕ್ಷಣೆಯಲ್ಲಿ ಹಾಗೂ ಪ್ರಜೆಗಳ ರಕ್ಷಣೆಯಲ್ಲಿ ನೂರಾರು ಹಾಗೂ ಸಾವಿರಾರು ಯುವ ಸೈನಿಕರು ಪ್ರಾಣ ಕಳೆದುಕೊಳ್ಳುತ್ತಿರುವ ಈ ಪ್ರಸ್ತಕ ಸನ್ನಿವೇಶವನ್ನು ನಾವು ಬದಲಿಸಬೇಕಿದೆ.

ನಮ್ಮ ದೇಶದ ಮೇಲೆ ಈ ದಾಳಿಗಳ ರೂವಾರಿಗಳು ಹಾಗೂ ಸೂತ್ರಧಾರಿಗಳೊಂದಿಗೆ ನಾವು ಈಗಲೂ ನಿರಂತರ ವ್ಯವಹಾರವನ್ನು ಮುಂದುವರಿಸಿದ್ದೇವೆ. ನಾವು ಒಂದು ದೇಶವಾಗಿ ರಾಜಕೀಯವಾಗಿ ಹಾಗೂ ಸಾರ್ವಜನಿಕವಾಗಿ ಮಾಡಬೇಕಾಗಿರುವ ಕೆಲಸ ಮಾಡಲು ಅಶಕ್ತರಾಗಿದ್ದೇವೆ ಎನ್ನುವ ಕಾರಣಕ್ಕೆ ಹೆಚ್ಚಿನ ಯುವಜನರು ಪ್ರಾಣ ಕಳೆದುಕೊಳ್ಳಬಾರದು.

ಸಂಸತ್ತಿನಲ್ಲಿ ನಿರ್ಣಯ ಮಂಡನೆ

ಹೀಗಾಗಿ, 28ನೇ ಜುಲೈನಿಂದ- ಕಾರ್ಗಿಲ್ ಅನ್ನು ನಾವು ನೆನಪು ಮಾಡಿಕೊಂಡ ಎರಡು ದಿನಗಳ ನಂತರ- ನಾನು ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಒಂದು ನಿರ್ಣಯವನ್ನು ಸಂಸತ್ತಿನ ಮುಂದಿಡುತ್ತೇನೆ.

ಕಾರ್ಗಿಲ್ ಯುದ್ಧದಲ್ಲಿ ಮಾತ್ರವಲ್ಲ, ಬದಲಾಗಿ ಅದಕ್ಕೂ ಮೊದಲು ವರ್ಷಗಳಿಂದ ಪಾಕಿಸ್ತಾನದಿಂದ ನಡೆದ ಹಲವು ದಾಳಿಗಳಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡ ಕರ್ತವ್ಯಬದ್ಧರಾದ ದಿಟ್ಟ ಪುರುಷ ಮತ್ತು ಮಹಿಳೆಯರಿಗಾಗಿ ನಾವು ಇಷ್ಟು ನಿಷ್ಠೆಯನ್ನಾದರೂ ತೋರಿಸುವ ಅಗತ್ಯವಿದೆ.

English summary
Dirty politics should not be mixed with the sacrifises of soldiers says MP Rajeev Chandrasekhar. And he stress on the need to declare Pakistan as a terror state by Government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X