• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಲಹಂಕದಲ್ಲಿ ಯುವ ದಿನದಿ ’ಕೆರೆಗಾಗಿ ಕರೆ’

By ಜಗದೀಶ್, ಜಂಟಿ ಕಾರ್ಯದರ್ಶಿ, ಯುವ
|

ಬೆಂಗಳೂರು, ಜ.15: ಹಿಂದೊಮ್ಮೆ 'ಕೆರೆಗಳ ನಗರ' ಎಂದು ಕರೆಸಿಕೊಂಡಿದ್ದ ಬೆಂಗಳೂರಿನಲ್ಲಿ ಈಗ ಕೆರೆಗಳನ್ನು ದುರ್ಬೀನು ಹಾಕಿ ಹುಡುಕಬೇಕಾಗಿದೆ. ಈ ಮಹಾನಗರದ ತೀರದ ಬಾಯಾರಿಕೆಯ ದಾಹಕ್ಕೆ ಎಷ್ಟೋ ಕೆರೆಗಳು ಕೇವಲ 'ಒಂದು ಗುಟುಕಾಗಿ' ಕಣ್ಮರೆಯಾಗಿಬಿಟ್ಟಿವೆ. ಈಗ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ಕೆರೆಗಳಲ್ಲಿ ಯಲಹಂಕ ನ್ಯೂಟೌನಿನ 'ಅಳ್ಳಾಲ ಸಂದ್ರ'ದ ಕೆರೆಯೂ ಒಂದು.

ಸುಮಾರು 44 ಎಕರೆ ವಿಸ್ತೀರ್ಣದಷ್ಟು ಜಾಗದಲ್ಲಿರುವ ಈ ಕೆರೆಯೂ ಎಂದಿನಂತೆ ಸರಿಯಾದ ನಿರ್ವಹಣೆಯಿಲ್ಲದೆ ಕೊಳಕಾಗುತ್ತಿದೆ. ಚರಂಡಿಯ ನೀರಿನಿಂದ, ಕಳೆ ಗಿಡಗಳಿಂದ, ಜೊಂಡು ಹುಲ್ಲು, ಬಳ್ಳಿಗಳಿಂದ, ತ್ಯಾಜ್ಯದಿಂದ ಕಲುಷಿತಗೊಂಡಿದೆ. ಅಲ್ಲದೇ, ಈ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಬಾವಿ, ಬೋರ್ವೆಲ್ ಮೂಲಕ ದೊರೆಯುವ ಅಂತರ್ಜಲ ಸಹ ಈಗಾಗಲೇ ಕಲುಷಿತಗೊಂಡು ಆ ಪ್ರದೇಶದ ನಾಗರಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳೂ ಕಾಣುತ್ತಿವೆ.

ಈ ಸಂದರ್ಭದಲ್ಲಿ, ಅಲ್ಲಿನ ಸ್ಥಳೀಯರೇ ಸೇರಿ ಕಟ್ಟಿಕೊಂಡಿರುವ 'ಯಲಹಂಕ ಯುನೈಟೆಡ್ ಎನ್ವಿರಾನ್ಮೆಂಟ್ ಅಸೋಸಿಯೇಶನ್' (Yelahanka United Environment Association - YUVA) ಸಂಸ್ಥೆಯು ಈ ಕೆರೆಯ ಶುದ್ದೀಕರಣಕ್ಕೆ ಮುಂದಾಗಿರುವುದು ಗಮನಾರ್ಹವಾಗಿದೆ. ಸ್ವಾಮಿ ವಿವೇಕಾನಂದ ರ 150ನೇ ಜನ್ಮದಿನಾಚರಣೆ ಹಾಗೂ 'ರಾಷ್ಟ್ರೀಯ ಯುವ ದಿನ'ದ ಪ್ರಯುಕ್ತ, 'ಯುವ' ಸಂಸ್ಥೆಯು ಕಳೆದ ಭಾನುವಾರದಂದು (12-ಜನವರಿ-2014) 'ಕೆರೆಗಾಗಿ ಕರೆ' ಎಂಬ ಶ್ರಮದಾನದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಕೆರೆಯನ್ನು ಸಂರಕ್ಷಿಸುವುದರ ತಕ್ಷಣದ ಅಗತ್ಯದ ಜೊತೆಗೆ, ಕೆರೆಯ ಹಾಗೂ ಬಡಾವಣೆಯ ಶುಚಿತ್ವದ ಮಹತ್ವದ ಬಗ್ಗೆ, ಪರಿಸರ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ, ಈ ನಿಟ್ಟಿನಲ್ಲಿ ಪೌರಸಂಸ್ಥೆಗಳಿಂದ ದೊರಕುವ ಸೌಲಭ್ಯಗಳ ಬಗ್ಗೆ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಸ್ಥಳೀಯರಲ್ಲಿ ಅರಿವು ಮೂಡಿಸಿ ಸ್ವಯಂ ಕಾರ್ಯಪ್ರವೃತ್ತರಾಗುವಂತೆ ಮಾಡುವುದೂ ಸಹ ಅಂದಿನ ಕಾರ್ಯಕ್ರಮದ ಆಶಯವಾಗಿತ್ತು. ಅಂದಿನ ಕೆರೆ ನಿರ್ಮಲೀಕರಣ ಕಾರ್ಯಕ್ರಮದಲ್ಲಿ 'ಯುವ' ಸಂಸ್ಥೆಯ ಜೊತೆಗೆ 'ಅವಿರತ ಪ್ರತಿಷ್ಟಾನ' ಎಂಬ ಸ್ವಯಂ ಸೇವಕರ ತಂಡವೂ ಕೈ ಜೋಡಿಸಿದ್ದು, ನಾಗರೀಕರಲ್ಲಿ ಹೆಚ್ಚುತ್ತಿರುವ ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು.

’ಕೆರೆಗಾಗಿ ಕರೆ’ ಕಾರ್ಯಕ್ರಮದ ಅತಿಥಿ

’ಕೆರೆಗಾಗಿ ಕರೆ’ ಕಾರ್ಯಕ್ರಮದ ಅತಿಥಿ

ಅಂದಿನ ಕಾರ್ಯಕ್ರಮದಲ್ಲಿ ನಗರ ಅಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಪಿ.ಎನ್.ಶ್ರೀನಿವಾಸಾಚಾರಿ, ಆದಾಯ ಇಲಾಖೆಯ ಮಾಜಿ ಕಾರ್ಯದರ್ಶಿ ಜಿ.ಎಸ್.ನಾರಾಯಣಸ್ವಾಮಿ, ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಆಯುಕ್ತರಾದ ಡಾ.ಎಸ್.ಸುಬ್ರಹ್ಮಣ್ಯ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಮಾಜಿ ಕಾರ್ಯದರ್ಶಿಯಾದ ಜಿ.ವಿ.ಕೊಂಗವಾಡ್, ಮಹಾನಗರ ಪಾಲಿಕೆಯ ಯಲಹಂಕ ವ್ಯಾಪ್ತಿಯ ಜಂಟಿ ಆಯುಕ್ತರಾದ ವಿರೂಪಾಕ್ಷ ಮೈಸೂರು, ಪಾಲಿಕೆ ಹಾಗೂ ಒಳಚರಂಡಿ ನಿಗಮದ ಕೆಲವು ಅಧಿಕಾರಿಗಳು ಹಾಗೂ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್.ವಿಶ್ವನಾಥ್ ಅವರು ಭಾಗವಹಿಸಿ, ತಾವೇ ಖುದ್ದಾಗಿ ಕೆರೆಯ ಏರಿಯ ಮೇಲೆ ಸುತ್ತಲೂ ವಾಯುವಿಹಾರಕ್ಕೆಂದು ನಿರ್ಮಿಸಿರುವ ಕಾಲುದಾರಿಯಲ್ಲಿ ನಡೆದು, ಕೆರೆಯ ಸ್ಥಿತಿಯನ್ನು ಪರಿಶೀಲಿಸಿದ್ದೂ ಅಲ್ಲದೇ, ಅಲ್ಲಿನ ಉದ್ಯಾನವನದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.

ಅಲಕ್ಷ್ಯಕ್ಕೊಳಗಾಗಿದ್ದ ಕೆರೆಯನ್ನು ಸುಧಾರಿಸುವ ಅಭಿಯಾನವನ್ನು ಸ್ವಯಂ ಪ್ರೇರಿತರಾಗಿ ಪ್ರಾರಂಭಿಸಿರುವ 'ಯುವ' ಸಂಸ್ಥೆಯ ಕಾರ್ಯವನ್ನು ಮೆಚ್ಚಿ ಮಾತನಾಡಿದ ನಗರ ಅಭಿವೃದ್ದಿ ಇಲಾಖೆಯ ಮುಖ್ಯ ಕಾರ್ಯದರ್ಶಿಯಾದ ಪಿ.ಎನ್.ಶ್ರೀನಿವಾಸಾಚಾರಿ ಅವರು ಕೆರೆ ನಿರ್ಮಲೀಕರಣಕ್ಕೆ ಸಂಬಂಧಪಟ್ಟ ಸರ್ಕಾರೀ ಇಲಾಖೆಗಳಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.

’ಯುವ’ ಸಂಸ್ಥೆ ಸಿದ್ದಪಡಿಸಿರುವ ಕೋರಿಕೆಗಳು

’ಯುವ’ ಸಂಸ್ಥೆ ಸಿದ್ದಪಡಿಸಿರುವ ಕೋರಿಕೆಗಳು

ಒಳಚರಂಡಿಯ ಕೆಲವು ಪೈಪುಗಳು ಒಡೆದುಹೋಗಿ, ಅಲ್ಲಿನ ಹೊಲಸು ಕೆರೆಗೆ ಸೇರುತ್ತಿರುವುದನ್ನು ತಡೆಯಲು ತುರ್ತಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು 'ಯುವ' ಸಂಸ್ಥೆ ಸಲ್ಲಿಸಿದ ಕೋರಿಕೆಯ ಮೇರೆಗೆ ೧೫ ಅಕ್ಟೋಬರ್ ೨೦೧೩ ರಂದು, ಉಪ ಲೋಕಾಯುಕ್ತ ಜಸ್ಟಿಸ್ ಆದ ಎಸ್.ಬಿ.ಮಜ್ಜಿಗೆ, ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಲಕ್ಷ್ಮೀ ನಾರಾಯಣ ಮತ್ತು ಒಳಚರಂಡಿ ಆಯೋಗ ಮುಖ್ಯಸ್ಥರಾದ ಎಮ್.ಎಸ್.ರವಿಶಂಕರ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಒಡೆದು ಹೋಗಿರುವ ಒಳಚರಂಡಿಯ ಪೈಪುಗಳನ್ನು ಕೂಡಲೆ ಬದಲಾಯಿಸಲು ಸೂಚಿಸಿದ್ದರು ಹಾಗೂ ಕೆರೆಗೆ ಹರಿದು ಬರುತ್ತಿದ್ದ ಒಳಚರಂಡಿಯ ಕೊಳಕನ್ನು ತ್ಯಾಜ್ಯ ನೀರು ಶುದ್ದೀಕರಣ ಘಟಕದ ಕಡೆ ತಿರುಗಿಸುವಂತೆಯೂ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದರು.

ಒಳಚರಂಡಿ ಹೊಲಸು ಹಾಗೂ ಪೈಪುಗಳು

ಒಳಚರಂಡಿ ಹೊಲಸು ಹಾಗೂ ಪೈಪುಗಳು

ಈ ಕಾಮಗಾರಿಗಾಗಿ ತಂದಿರುವ ಒಳಚರಂಡಿಯ ಪೈಪುಗಳನ್ನು ಕೆರೆಯ ಏರಿಯ ಮೇಲಿನ ಕಾಲುದಾರಿಯಲ್ಲಿ, ಪಾರ್ಕಿನಲ್ಲಿ ಹಾಕಿರುವುದು, ವಾಯುವಿಹಾರಕ್ಕೆಂದು ಬರುವವರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದರಿಂದ ಈ ಪೈಪುಗಳನ್ನು ಕೆರೆ ಪ್ರಾಂಗಣದ ಹೊರಗೆ, ಹತ್ತಿರದಲ್ಲೇ ಇರುವ ಖಾಲಿ ನಿವೇಶನಗಳಿಗೆ ವರ್ಗಾಯಿಸಬೇಕೆಂದು ಕೇಳಿಕೊಳ್ಳಲಾಗಿದೆ. ಈ ಪೈಪುಗಳನ್ನು ತಮ್ಮ ಖಾಲಿ ನಿವೇಶನದಲ್ಲಿ ಇಟ್ಟುಕೊಳ್ಳಲು ಆಯಾ ಮಾಲೀಕರೂ ಒಪ್ಪಿರುವುದರಿಂದ ಅವುಗಳನ್ನುಆದಷ್ಟು ಬೇಗ ವರ್ಗಾಯಿಸಲಾಗುವುದೆಂದು ಮುಖ್ಯ ಕಾರ್ಯದರ್ಶಿಗಳು ಹೇಳಿದರು.

ಕೊಳಚೆ ನೀರು ಸಂಸ್ಕರಣ

ಕೊಳಚೆ ನೀರು ಸಂಸ್ಕರಣ

ಯಲಹಂಕ ನಾಲ್ಕನೇ ಹಂತ ಹಾಗೂ ನ್ಯಾಯಾಂಗ ಬಡಾವಣೆಯಿಂದ ತಲಾ ಒಂದೊಂದು ರಾಜಾ ಕಾಲುವೆ / ಮೋರಿ (ಹೆಚ್ಚು ಮಳೆಯಿಂದಾಗಬಹುದಾದ ಪ್ರವಾಹ ತಡೆಗಟ್ಟಲು) ಯನ್ನು ಈ ಕೆರೆಗೆ ಹೊಂದಿಸಲಾಗಿದ್ದು, ಅವುಗಳಿಂದಲೂ ಸಹ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದು ಕೆರೆ ಮತ್ತಷ್ಟು ಮಲಿನವಾಗಲು ಕಾರಣವಾಗಿದೆ. ಇದನ್ನು ಪರಿಶೀಲಿಸಿದ ಪಾಲಿಕೆಯ ಮಾಜಿ ಆಯುಕ್ತರಾದ ಡಾ. ಸುಬ್ರಹ್ಮಣ್ಯ ಅವರು, ಕೆರೆಯ ಬಳಿಯೇ ಇರುವ ಸರ್ಕಾರಿ ಜಾಗದಲ್ಲಿ ಕೊಳಚೆ ನೀರು ಸಂಸ್ಕರಣ ಘಟಕವೊಂದನ್ನು ಸ್ಥಾಪಿಸಿ, ಅದರಿಂದ ಬಂದ ಸಂಸ್ಕರಿಸಿದ ನೀರು ಮಾತ್ರ ಕೆರೆಗೆ ಸೇರುವಂತೆ ಮಾಡಬಹುದು ಎಂಬ ಯೋಚನೆಯನ್ನು ಎಲ್ಲರೊಂದಿಗೆ ಹಂಚಿಕೊಂಡು, ಈ ಕೂಡಲೇ ಒಳಚರಂಡಿ ಆಯೋಗ ಹಾಗೂ ಪಾಲಿಕೆಯ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟಂತೆ ಯೋಜನೆಯನ್ನು ಸಿದ್ದಪಡಿಸಬೇಕೆಂದು ಸೂಚಿಸಿದರು.

ಕಳೆ ಗಿಡ ನಿರ್ಮೂಲನೆ ಮತ್ತು ನಿರ್ವಹಣೆ

ಕಳೆ ಗಿಡ ನಿರ್ಮೂಲನೆ ಮತ್ತು ನಿರ್ವಹಣೆ

ಹೈದರಾಬಾದಿನ ಜಿ.ಎಚ್.ಎಮ್.ಸಿ, ಸಂಸ್ಥೆಯಿಂದ ಧೃಡಪಟ್ಟಿರುವ ಮಾದರಿಯನ್ನೇ ಇಲ್ಲಿನ ಕೆರೆಯಲ್ಲಿನ ಕಳೆಗಿಡಗಳ ನಿರ್ಮೂಲನೆಗೂ ಬಳಸಬೇಕು ಎಂದು ಕೋರಿಕೊಳ್ಳಲಾಯಿತು. ದೀರ್ಘ ಕಾಲದ ನಿರ್ವಹಣೆ ಮತ್ತು ಶಾಶ್ವತ ಪರಿಹಾರ ಸೂಚನೆಗಾಗಿ, ಮಧ್ಯಪ್ರದೇಶದ ಜಬಾಲ್ ಪುರದ ಸಂಶೋಧನಾ ಕೇಂದ್ರದ ಮುಖ್ಯ ವಿಜ್ಞಾನಿಯಾದ ಡಾ.ಸುಶೀಲ್ ಕುಮಾರ್ ಅವರನ್ನು ಕೇಳಿಕೊಳ್ಳಲಾಗಿದೆ. 'ಯುವ' ಸಂಸ್ಥೆಯ ಆಹ್ವಾನವನ್ನು ಒಪ್ಪಿಕೊಂಡಿರುವ ಅವರು ಫೆಬ್ರವರಿ ಮೊದಲ ವಾರದಲ್ಲಿ ಬೆಂಗಳೂರಿಗೆ ಬಂದು ಕಳೆ ನಿರ್ವಹಣೆ ಬಗ್ಗೆ ತಿಳಿಸಿಕೊಡಲಿದ್ದಾರೆ. ಒಳಚರಂಡಿ ಆಯೋಗ ಮತ್ತು ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಈ ಸೆಮಿನಾರಿನಲ್ಲಿ ಭಾಗವಹಿಸಬಹುದಾಗಿದೆ.

ಕೆರೆ ಹಾಗೂ ಕೆರೆ ಸುತ್ತಲಿನ ಜೈವಿಕ ಪರಿಸರದ ಅಭಿವೃದ್ದಿ

ಕೆರೆ ಹಾಗೂ ಕೆರೆ ಸುತ್ತಲಿನ ಜೈವಿಕ ಪರಿಸರದ ಅಭಿವೃದ್ದಿ

ಕಳೆ / ಜೊಂಡು ಹುಲ್ಲು ನಿರ್ವಹಣೆ ಸ್ವಾಭವಿಕವಾಗಿಯೇ ಆಗುವಂತೆ, ಹುಲ್ಲು ತಿನ್ನುವ ಮೀನುಗಳನ್ನು ಈ ಕೆರೆಗೆ ತಂದು ಬಿಡಬಹುದೆಂದು 'ಯುವ' ಸಂಸ್ಥೆಯ ಸದಸ್ಯರು ಕೊಟ್ಟ ಸಲಹೆ ಔಚಿತ್ಯಪೂರ್ಣ. ಅಷ್ಟೇ ಅಲ್ಲದೆ, ಕೆರೆ ಏರಿಯ ಮೇಲಿನ ಹಾಗೂ ಸುತ್ತಲಿನ ಉದ್ಯಾನವನವನ್ನು ಪಕ್ಷಿಗಳ ಆಶ್ರಯತಾಣವಾಗಿ ಅಭಿವೃದ್ದಿಪಡಿಸಲು ಅಗತ್ಯವಾಗಿ ಬೇಕಾದ ಮರ-ಗಿಡಗಳನ್ನು ಬೆಳೆಸಲು ಹಾಗೂ ಉದ್ಯಾನವನವನ್ನು ಮತ್ತಷ್ಟು ಸುಂದರಗೊಳಿಸಲು ಗಾಂಧಿ ಕೃಷಿ ವಿದ್ಯಾಲಯ ಕೇಂದ್ರದ ಉಪಕುಲಪತಿಗಳು ಮತ್ತು ಹೂಗಾರಿಕೆ ಸಂಶೋಧನಾ ಸಂಸ್ಥೆಯ ಮುಖ್ಯ ವಿಜ್ಞಾನಿಯಾದ ಡಾ.ಸುಮಂಗಲಾ ಅವರುಗಳು 'ಯುವ' ಸಂಸ್ಥೆಯ ಕೋರಿಕೆಯನ್ನು ಒಪ್ಪಿಕೊಂಡಿರುವುದು ಸಂತಸದ ವಿಷಯ.

 ದುರ್ವಾಸನೆಯ ತಡೆ, ಘನ ತ್ಯಾಜ್ಯ ನಿರ್ವಹಣೆ

ದುರ್ವಾಸನೆಯ ತಡೆ, ಘನ ತ್ಯಾಜ್ಯ ನಿರ್ವಹಣೆ

ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಸೂಚನೆಗಳನ್ನು/ ಶಿಸ್ತುಕ್ರಮಗಳನ್ನು ಪಾಲಿಸದೇ ಇರುವುದರಿಂದ ಕೆರೆಯ ಬಳಿಯಿರುವ ಕೊಳಚೆ ಪರಿಷ್ಕರಣ ಘಟಕದಿಂದ ವಿಪರೀತ ದುರ್ವಾಸನೆ ಹಬ್ಬಿ ಸುತ್ತಲಿನ ಸ್ಥಳೀಯರಿಗೆ, ಅಲ್ಲಿ ಓಡಾಡುವವರಿಗೆ ಸಹಿಸಲಸಾಧ್ಯ ಕಸಿವಿಸಿಯಾಗುತ್ತಿರುವುದರಿಂದ, ಈ ಕೂಡಲೇ ಅಗತ್ಯ ಕ್ರಮ ಕೈಗೊಂಡು, ಘಟಕದಲ್ಲಿನ ಅನಾನುಕೂಲಗಳನ್ನು ಸರಿಪಡಿಸಿ ದುರ್ವಾಸನೆ ಬರದಂತೆ ಆದಷ್ಟು ಬೇಗ ತಡೆಯಬೇಕೆಂದು ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಯಿತು. ಮಾಲಿನ್ಯ ನಿಯಂತ್ರಣ ಮಂಡಲಿ ಅಲ್ಲಿನ ಘಟಕವನ್ನು ಪರಿಶೀಲಿಸಿದ ನಂತರ ಸಿದ್ದಪಡಿಸಿದ ವರದಿಯನ್ನೂ ಮುಖ್ಯ ಕಾರ್ಯದರ್ಶಿಗಳಿಗೆ ಕೊಡಲಾಯಿತು.

ಘನ ತ್ಯಾಜ್ಯ ನಿರ್ವಹಣೆ ಬಗ್ಗೆ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಪೌರ ಸಂಸ್ಥೆಗಳ ಮಾರ್ಗದರ್ಶನದಲ್ಲಿ 'ಯುವ' ಸಂಸ್ಥೆಯು ಯಲಹಂಕ ನ್ಯೂ ಟೌನಿನ ನಿವಾಸಿಗಳಿಗೆ ಫೆಬ್ರವರಿ ಮೊದಲವಾರದಲ್ಲಿ ಒಂದು ಕಾರ್ಯಾಗಾರವನ್ನು ಆಯೋಜಿಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
National Youth Day Celebrated in Yelahanka new town in a unique way. Yelahanka MLA S.R.Vishwanath and YUVA President Dr.Tayappa, NGO Aviratha Trust and local citizens participated in 'Keregagi Kare' a program to save and protect Allalasandra Lake near Yelahanka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more