ಬೆಂಗಳೂರು:ಕೊರೊನಾದಿಂದ ಗುಣಮುಖರಾಗಿದ್ದ 35 ಮಂದಿಗೆ ಮರು ಸೋಂಕು
ಬೆಂಗಳೂರು, ನವೆಂಬರ್ 27: ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದ 35 ಮಂದಿಯಲ್ಲಿ ಮರು ಸೋಂಕು ಕಾಣಿಸಿಕೊಂಡಿರುವುದು ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾಗುವ ಆತಂಕವನ್ನು ಸೃಷ್ಟಿಸಿದೆ.
ಜಯನಗರ ಜನರಲ್ ಆಸ್ಪತ್ರೆಯಲ್ಲಿ 10 ಮಂದಿಯಲ್ಲಿ ಮರುಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ. ಈಗಾಗಲೇ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗೆ ಮರಳಿ ಸೋಂಕು ತಗುಲುವುದ ಅಪಾಯಕಾರಿಯಾಗಿರಲಿದ್ದು, ಇಂತಹ ವ್ಯಕ್ತಿಗಳು ಆಕ್ಸಿಜನ್ ಮೇಲೆ ಹೆಚ್ಚಿನ ಅವಲಂಬಿತವಾಗಿರುವಂತಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಇಂತಹ ರೋಗಿಗಳನ್ನು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗ ಆಸ್ಪತ್ರೆಗೆ ದಾಖಲಾಗುವಂತೆ ಶಿಫಾರಸು ಮಾಡಲಾಗುತ್ತಿದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್' ವರದಿ ಮಾಡಿದೆ.
ನಗರದ ಫೋರ್ಟಿಸ್ ಆಸ್ಪತ್ರೆಯಲ್ಲೂ ಮರು ಸೋಂಕು ತಗುಲಿರುವ ಒಂದು ಪ್ರಕರಣ ಪತ್ತೆಯಾಗಿದೆ. ರಾಮಯ್ಯ ಆಸ್ಪತ್ರೆಯಲ್ಲಿಯೂ ಮೂವರು ಆರೋಗ್ಯ ಕಾರ್ಯಕರಲ್ಲಿ ಎರಡು ಬಾರಿ ಸೋಂಕು ಪತ್ತೆಯಾಗಿದೆ. ಆದರೆ, ಎರಡನೇ ಬಾರಿ ತಗುಲಿರುವ ಸೋಂಕು ಲಕ್ಷಣರಹಿತವಾಗಿದೆ ಎಂದು ಹೇಳಲಾಗುತ್ತಿದೆ.
ಆಗಸ್ಟ್ ಹೊತ್ತಿಗೆ ಭಾರತದಲ್ಲಿ 7.40 ಕೋಟಿ ಕೊರೊನಾ ಸೋಂಕಿತರು
ಜೀನೋಮಿಕ್ ಸ್ಟಡಿ ಮತ್ತು ವೈರಲ್ ಕಲ್ಚರಲ್ ಪರೀಕ್ಷೆಗಾಗಿ ಮಾದರಿಗಳನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (ಪುಣೆ) ಗೆ ಕಳುಹಿಸಲಾಗಿದೆ, ಮರು ಸೋಂಕು ಯಾವ ರೀತಿ, ಎರಡನೇ ಬಾರಿ ತಗುಲಿದ ಸೋಂಕು ಒಂದೇ ರೀತಿಯಲ್ಲಿಯೇ ಇರುತ್ತದೆಯೇ ಎಂಬುದನ್ನು ಪತ್ತೆಹಚ್ಚಲಾಗುತ್ತದೆ ಎಂದು ಡಾ.ನಾಗರಾಜ್ ಅವರು ಹೇಳಿದ್ದಾರೆ.
ಪ್ರಿಸ್ಟೈನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಮೂರು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ 5 ಮಂದಿಯಲ್ಲಿ ಮರು ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

17 ಆಸ್ಪತ್ರೆಗಳಲ್ಲಿ ಯಾವುದೇ ಪ್ರಕರಣಗಳಿಲ್ಲ
ಆದರೆ, ಇನ್ನುಳಿದ 17 ಆಸ್ಪತ್ರೆಗಳಲ್ಲಿ ಮರುಸೋಂಕು ತಗುಲಿರುವ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ದಾಖಲಾತಿಗಳೂ ಪತ್ತೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ 35 ಮಂದಿಗೆ ಮರು ಸೋಂಕು
ನಗರದಲ್ಲಿರುವ 7 ಆಸ್ಪತ್ರೆಗಳಲ್ಲಿ 35 ಮಂದಿ ಕೊರೋನಾ ಮರು ಸೋಂಕಿಗೊಳಗಾಗಿದ್ದಾರೆ. ಬೆಂಗಳೂರಿನ 28 ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಏಳುಅಧಿಕಾರಿಗಳು ಇದೂವರೆಗೂ 35 ಮಂದಿಯಲ್ಲಿ ಮರು ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಹೊಸ ಲಕ್ಷಣಗಳು ಗೋಚರ
ಮರಳಿ ಸೋಂಕು ತಗುಲಿ 7 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡನೇ ಬಾರಿ ಸೋಂಕು ತಗುಲಿದವರಲ್ಲಿ ಹೊಸ ರೋಗಲಕ್ಷಣಗಳು ಪತ್ತೆಯಾಗಿವೆ. ಇಂತಹವರಿಗೂ ಮೊದಲಿನಂತೆಯೇ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಚಿಕಿತ್ಸೆಗೆ ಮರು ಸೋಂಕಿತರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ಮಣಿಪಾಲ್ ಆಸ್ಪತ್ರೆಯ ವೈದ್ಯ ಡಾ.ಸಚಿನ್ ಅವರು ಹೇಳಿದ್ದಾರೆ.

ರೋಗ ನಿರೋಧ ಶಕ್ತಿ ಹೆಚ್ಚಿಸುವ ಚಿಕಿತ್ಸೆ
ಇತ್ತೀಚೆಗಷ್ಟೇ ನಡೆದ ಬ್ರಿಟೀಷ್ ಅಧ್ಯಯನದ ಪ್ರಕಾರ, ಮೊದಲ ಬಾರಿಗೆ ಸೋಂಕು ತಗುಲಿದ ವ್ಯಕ್ತಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕಿತ್ಸೆಗಳನ್ನು ನೀಡಿರುವುದರಿಂದ 6 ತಿಂಗಳಳೊಳಗೆ ಮರು ಸೋಂಕು ತಗುಲುವುದು ವಿರಳವಾಗಿರುತ್ತದೆ. ಚಿಕಿತ್ಸೆಯು ಅಸಮರ್ಪಕವಾಗಿದ್ದಾಗ ಮಾತ್ರ ಮರು ಸೋಂಕು ತಗುಲುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ ಎಂದು ತಿಳಿಸಿದ್ದಾರೆ.