ಐಎಂಎ ಹಗರಣ: ಸಿಬಿಐ ವಿಚಾರಣೆಗೂ ಮುನ್ನ ರೋಷನ್ ಬೇಗ್ ಆಸ್ಪತ್ರೆಗೆ ದಾಖಲು
ಬೆಂಗಳೂರು, ನವೆಂಬರ್ 26: ಐಎಂಎ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೇಗ್ ಅವರನ್ನು ಜೈಲಿನಿಂದ ಜಯದೇವ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಬೇಗ್ ಅವರ ಅನಾರೋಗ್ಯದ ಬಗ್ಗೆ ಹೆಚ್ಚಿನ ವಿವರ ತಿಳಿದುಬಂದಿಲ್ಲ.
ರೋಷನ್ ಬೇಗ್ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತ್ತು. ಈ ಸಂಬಂಧ ಬೇಗ್ ಅವರನ್ನು ಹೆಬ್ಬಾಳದಲ್ಲಿರುವ ಸಿಬಿಐ ಕಚೇರಿಗೆ ಕರೆತಂದು ವಿಚಾರಣೆಗೆ ಒಳಪಡಿಸುವ ಸಲುವಾಗಿ ಕರೆತರಲು ಪರಪ್ಪನ ಅಗ್ರಹಾರ ಜೈಲಿಗೆ ಅಧಿಕಾರಿಗಳು ತೆರಳಿದ್ದರು. ಆದರೆ ರೋಷನ್ ಬೇಗ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ಸಿಬಿಐ ಅಧಿಕಾರಿಗಳು ಬರಿಗೈಲಿ ಮರಳಿದ್ದಾರೆ.
ರೋಷನ್ ಬೇಗ್ಗೆ ಸಂಕಷ್ಟ; ಸಿಬಿಐ ವಶಕ್ಕೆ ನೀಡಿದ ಕೋರ್ಟ್
ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ, ರೋಷನ್ ಬೇಗ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಹಗರಣದ ಹೆಚ್ಚಿನ ವಿಚಾರಣೆಗಾಗಿ ಬೇಗ್ ಅವರನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಬುಧವಾರ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಸಿಬಿಐ ಮನವಿಗೆ ಅನುಮೋದನೆ ನೀಡಿತ್ತು. ನವೆಂಬರ್ 28ರವರೆಗೂ ಬೇಗ್ ಅವರನ್ನು ವಿಚಾರಣೆಗೆ ಒಳಪಡಿಸಿ, ಅಂದು ಬೆಳಿಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ಸೂಚಿಸಿತ್ತು.
ಆದರೆ ಈಗ ಬೇಗ್ ಅವರು ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯ ನೀಡಿರುವ ಅವಧಿಯೊಳಗೆ ಸಿಬಿಐ ಅಧಿಕಾರಿಗಳ ವಿಚಾರಣೆಗೆ ಸಿಗುವುದು ಅನುಮಾನವಾಗಿದೆ.