ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗ್ರಾಮಾಂತರ: ಅನಧಿಕೃತ ಬಡಾವಣೆಗಳ ಹಾವಳಿ, ಇದು ಗ್ರಾಹಕರಿಗೆ ಅಧಿಕಾರಿಗಳ ಬಳುವಳಿ!

By ಶ್ರೀಧರ್ ಎಂ. ಬೂದಿಗೆರೆ
|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಇಂದಿನ ದಿನಗಳಲ್ಲಿ ಸೈಟ್ ಮಾರುವುದಿದೆ ಅಂದರೆ ಬಡ, ಮದ್ಯಮ ಮತ್ತು ಶ್ರೀಮಂತ ವರ್ಗದವರು ಸಹ ನಾ ಮುಂದು ತಾ ಮುಂದು ಅಂತಾ ಬರುತ್ತಾರೆ. ಇನ್ನು ಕಡಿಮೆ ಬೆಲೆಗೆ ಸೈಟ್​ ದೊರೆಯುತ್ತದೆ ಅಂದರೆ ಸಾಕು ಬಡವರಾದರೂ ಅಲ್ಪ ಸ್ವಲ್ಪ ದುಡ್ಡು ಜೋಡಿಸಿ ಸೈಟ್​ ಕೊಂಡುಕೊಳ್ಳೋಣವೆಂದು ಮುಗಿಬೀಳುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಅನಧಿಕೃತ ಬಡಾವಣೆಗಳ ಹಾವಳಿ ಹೆಚ್ಚಾಗಿದ್ದು, ನೀವು ಸೈಟ್​ ಕೊಂಡುಕೊಳ್ಳಬೇಕಾದರೆ ಹುಷಾರಾ​​ಗಿರುವುದು ಒಳ್ಳೆಯದು. ಒಮ್ಮೆ ನೀವು ಕೊಳ್ಳುವ ಸೈಟ್​(ನಿವೇಶನ)ಗೆ ಸಂಬಂಧಿಸಿದ ದಾಖಲೆಗಳನ್ನೊಮ್ಮೆ ಕೂಲಂಕಶವಾಗಿ ಪರಿಶೀಲನೆ ಮಾಡಿಕೊಂಡರೆ ಒಳಿತು. ಇನ್ನು ಬೆಂಗಳೂರಿಗೆ ಹೊಂದಿಕೊಂಡಂತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಂತೂ ಈ ಅನಧಿಕೃತ ಬಡಾವಣೆಗಳ ಹಾವಳಿ ಮಿತಿ ಮೀರಿದ್ದು, ಕಡಿಮೆ ಬೆಲೆಯಲ್ಲಿ ನಿವೇಶನ ನೀಡುತ್ತೇವೆ ಅಂತ ಹೇಳಿ ಗ್ರಾಹಕರಿಗೆ ಮಕ್ಮಲ್​ ಟೋಪಿ ಹಾಕುತ್ತಿದ್ದಾರೆ. ಜೊತೆಗೆ ಸರಕಾರದ ಬೊಕ್ಕಸಕ್ಕೂ ಸಹ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ.

ಬಿಡಿಎ ಭೂ ಒತ್ತುವರಿ ತೆರವು: 60 ಕೋಟಿ ರೂ.ಮೌಲ್ಯದ ಆಸ್ತಿ ವಶಬಿಡಿಎ ಭೂ ಒತ್ತುವರಿ ತೆರವು: 60 ಕೋಟಿ ರೂ.ಮೌಲ್ಯದ ಆಸ್ತಿ ವಶ

 ಸರಕಾರದ ನಿಯಮಗಳು ಗಾಳಿಗೆ!

ಸರಕಾರದ ನಿಯಮಗಳು ಗಾಳಿಗೆ!

ಯಾವುದೇ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಮಾಡಿ ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಸರಕಾರ ಸಾಕಷ್ಟು ನಿಯಮಗಳನ್ನು ರೂಪಿಸಿದೆ. ಬಡಾವಣೆ ನಿರ್ಮಾಣ ಮಾಡುವ ಭೂಮಿ ಯಾವ ಪ್ರದೇಶದ​ಲ್ಲಿದೆ ಎಂಬುದು ಪ್ರಮುಖವಾಗುತ್ತದೆ. ಜಮೀನು ಗ್ರೀನ್​ ಝೋನ್​ನಲ್ಲಿದ್ದರೆ ಅಂತಹ ಜಮೀನನ್ನು ಎಲ್ಲೋ ಝೋನ್‌ಗೆ ಬದಲಾಯಿಸಿ ತದನಂತರ ಅಂತಹ ಎಲ್ಲೋ ಝೋನ್​ ಜಮೀನನ್ನು ನಿವೇಶನಗಳ ಉದ್ದೇಶಕ್ಕಾಗಿ ಬಳಸುವುದಾಗಿ ಸಂಬಂಧಪಟ್ಟ ಜಿಲ್ಲಾಡಳಿತದಿಂದ ಕನ್ವರ್ಷನ್​ ಮಾಡಿಸಬೇಕಾಗುತ್ತದೆ.

ತದನಂತರ ಬಡಾವಣೆ ನಿರ್ಮಾಣ ಮಾಡುವ ನಕ್ಷೆ ತಯಾರು ಮಾಡಿ ಸಂಬಂಧಪಟ್ಟ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಅನಧಿಕೃತ ಬಡಾವಣೆಗಳನ್ನು ನಿರ್ಮಾಣ ಮಾಡುವ ಮಾಫಿಯಾಗಳು ಇದಾವುದೇ ಸರಕಾರದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕೃಷಿ ಜಮೀನಿನಲ್ಲಿ ಎಗ್ಗಿಲ್ಲದೆ ಅಕ್ರಮವಾಗಿ ಬಡಾವಣೆಗಳನ್ನು ರಾಜಾರೋಷವಾಗಿ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿದ್ದಾರೆ.

 ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬಡಾವಣೆಗಳು

ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಬಡಾವಣೆಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳು ನಾಯಿಕೊಡೆಗಳಂತೆ ತಲೆಯೆತ್ತಿವೆ. ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಹಾಗೂ ಹೊಸಕೋಟೆ ತಾಲೂಕುಗಳಲ್ಲಿ ನೂರಾರು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಮಾತ್ರವಲ್ಲ ಇಂದಿಗೂ ಸಾಕಷ್ಟು ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಲೇ ಇವೆ. ಜೊತೆಗೆ ಇಂತಹ ಬಡಾವಣೆಗಳಲ್ಲಿನ ನಿವೇಶನಗಳು ಸಬ್​ ರಿಜಿಸ್ಟರ್​ಗಳಲ್ಲಿ ಸಹ ರಿಜಿಸ್ಟರ್ ಆಗುತ್ತಿವೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ದೇವನಹಳ್ಳಿ ತಾಲೂಕಿನ ಒಂದರಲ್ಲಿಯೇ 2015ರ ತಹಶೀಲ್ದಾರ ವರದಿ ಪ್ರಕಾರ 107 ಅನಧಿಕೃತ ಬಡಾವಣೆಗಳು ನಿಮಾಣವಾಗಿವೆ. ಇನ್ನು ಜಿಲ್ಲೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳಿವೆ ಎಂದು ಆಯಾ ತಾಲೂಕಿನ ತಹಶೀಲ್ದಾರಗಳು 2015ರಲ್ಲಿ ವರದಿ ನೀಡಿದ್ದಾರೆ. ಇನ್ನು 2022ರ ಹೊತ್ತಿಗೆ ಇಂತಹ ಅನಧಿಕೃತ ಬಡಾವಣೆಗಳ ಸಂಖ್ಯೆ ದ್ವಿಗುಣಗೊಂಡಿದೆ. ಆದರೆ ಇಂತಹ ಬಡಾವಣೆಗಳಿಗೆ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಮಾತ್ರ ವಿಪರ್ಯಾಸ.

 ಕ್ರಮ ಕೈಗೊಳ್ಳದ ಅಧಿಕಾರಿಗಳು

ಕ್ರಮ ಕೈಗೊಳ್ಳದ ಅಧಿಕಾರಿಗಳು

ಅನಧಿಕೃತ ಬಡಾವಣೆಗಳಲ್ಲಿ ನಿವೇಶನಗಳು ಕೊಳ್ಳುವುದರಿಂದ ಸಾಕಷ್ಟು ಗ್ರಾಹಕರು ಮೋಸಕ್ಕೆ ಒಳಗಾಗುತ್ತಿದ್ದು, ಇಂತಹ ಅಕ್ರಮವನ್ನು ತಡೆಯುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದೆ. ಆದರೆ ಇಂತಹ ಅಕ್ರಮವನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೃಷಿ ಜಮೀನಿನಲ್ಲಿ ಸರಕಾರದ ನಿಯಮ ಪಾಲಿಸದೆ ಅಕ್ರಮವಾಗಿ ನಿರ್ಮಾಣವಾದ ಬಡಾವಣೆಗಳನ್ನು ತೆರವುಗೊಳಸಬೇಕಾದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಕೇವಲ ನೆಪ ಮಾತ್ರಕ್ಕೆ ಲೇಔಟ್​ಗಳನ್ನು ತೆರವುಗೊಳಿಸುವ ನಾಟಕ ಮಾಡಿ ಸುಮ್ಮನಾಗುತ್ತಿದ್ದಾರೆ. ಇನ್ನು ಇಂತಹ ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ರಿಜಿಸ್ಟರ್​ ಮಾಡುವುದಿಲ್ಲ ಎಂದು ಹೇಳುತ್ತಿರುವ ಸಬ್​ ರಿಜಿಸ್ಟರ್​ಗಳು ಸಹ ಯಾವುದೇ ದಾಖಲೆ ಕೇಳದೇ ರಿಜಿಸ್ಟರ್ ಮಾಡುತ್ತಿದ್ದಾರೆ.

 ಪಹಣಿಗಳಲ್ಲಿ ಎಂಟ್ರಿಯಾಗುತ್ತಿದೆ ಹುಷಾರ್

ಪಹಣಿಗಳಲ್ಲಿ ಎಂಟ್ರಿಯಾಗುತ್ತಿದೆ ಹುಷಾರ್

ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಬಡಾವಣೆಗಳ ಕುರಿತಾಗಿ ಪಹಣಿಗಳಲ್ಲಿ ಮಾಹಿತಿ ನೀಡಲು ಕಂದಾಯ ಅಧಿಕಾರಿಗಳು ಮುಂದಾಗಿದ್ದಾರೆ. ಯಾವ ಸರ್ವೇ ನಂಬರ್​ನಲ್ಲಿ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ ಅಂತಹ ಸರ್ವೇ ನಂಬರ್​ಗಳ ಪಹಣಿಗಳಲ್ಲಿ ಅನಧಿಕೃತ ಬಡಾವಣೆ ಎಂದು ನಮೂದು ಮಾಡಲಾಗುತ್ತಿದೆ. ಇದಾಗಲೇ ಇಂತಹ ಕಾರ್ಯಕ್ಕೆ ಚಾಲನೆ ದೊರೆತಿದ್ದು, ಪಹಣಿಗಳಲ್ಲಿ ಅನಧಿಕೃತ ಬಡಾವಣೆಗಳು ಎಂದು ನಮೂದಾಗುತ್ತಿದೆ. ಆದರೆ ಕೆಲವೊಂದು ಭಾಗಗಳಲ್ಲಿ ತೋಟಗಳಿರುವ ಸರ್ವೇ ನಂಬರ್​ಗಳಿಗೂ ಸಹ ಅನಧಿಕೃತ ಬಡಾವಣೆ ಎಂದು ನಮೂದಾಗುತ್ತಿದ್ದು, ರೈತರು ಸಾಕಷ್ಟು ಗೊಂದಲಕ್ಕೆ ಸಿಲುಕಿ, ತಾಲೂಕು ಕಚೇರಿಗಳತ್ತ ಅಲೆಯುತ್ತಿದ್ದಾರೆ.

 ಬೂದಿಗೆರೆ ಗ್ರಾಮದಲ್ಲೇ ಅತೀ ಹೆಚ್ಚು

ಬೂದಿಗೆರೆ ಗ್ರಾಮದಲ್ಲೇ ಅತೀ ಹೆಚ್ಚು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮವೊಂದರಲ್ಲೇ ಇಡೀ ಜಿಲ್ಲೆಗೆ ಅತೀ ಹೆಚ್ಚು ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಮಾತ್ರವಲ್ಲ ಇಲ್ಲಿನ ಹಲವು ಬಡಾವಣೆಗಳಲ್ಲಿ ಮನೆಗಳು ಸಹ ನಿರ್ಮಾಣವಾಗಿವೆ. ಬೂದಿಗೆರೆ ಗ್ರಾಮ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಹಾಗೂ ಹೊಸಕೋಟೆ ತಾಲೂಕುಗಳಿಗೆ ಹೊಂದಿಕೊಂಡಿದ್ದು, ಲೇಔಟ್​ ಮಾಫಿಯಾದ ಕಣ್ಣು ಇಲ್ಲಿ ಬಿದ್ದಿದೆ. ಇದರಿಂದ ಬೂದಿಗೆರೆ ಗ್ರಾಮವೊಂದರಲ್ಲೇ ನಾಯಿಕೊಡೆಗಳಂತೆ ಬಡಾವಣೆಗಳು ತಲೆಯೆತ್ತಿವೆ. ಮಾತ್ರವಲ್ಲ ಇಲ್ಲಿನ ಗೋಮಾಳ ಜಮೀನುಗಳಲ್ಲಿ ಸಹ ಲೇಔಟ್​ಗಳನ್ನು
ನಿರ್ಮಾಣ ಮಾಡಿರುವುದು ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಷ್ಟೆಲ್ಲ ಬಡಾವಣೆಗಳು ಅನಧಿಕೃತವಾಗಿ ನಿರ್ಮಾಣವಾಗಿದ್ದರೂ ಸಹ, ಇಲ್ಲಿನ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಏನು ಗೊತ್ತೇ ಇಲ್ಲ ಎಂಬಂತೆ ಸುಮ್ಮನೆ ಕುಳಿತಿದ್ದಾರೆ.

Recommended Video

ಹಿಜಾಬ್ ಗೆ ಅವಕಾಶ ಕೊಡಿ ಎಂದು ಪ್ರತಿಭಟಿಸಿದ್ದ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ | Oneindia Kannada

English summary
Illegal Layouts Raised at Devanahalli, Hosakote taluks in Bengaluru Rural District; Cheating People in the Name of Sites in Cheap Price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X