• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

’ಅಸಹಿಷ್ಣುತೆ’ಗೆ ಭಾರತೀಯ ಮುಸ್ಲಿಂ ಮಹಿಳೆ ಹಿಡಿದ ಕನ್ನಡಿ

By ಸೋಫಿಯಾ ರಂಗವಾಲಾ, ವೈದ್ಯೆ, ಬೆಂಗಳೂರು
|

"ಕಳೆದ ಒಂದೆರಡು ತಿಂಗಳಿಂದ ಭಾರತದಲ್ಲಿ 'ಅಸಹಿಷ್ಣುತೆ'ಯ ವಾತಾವರಣ ಇದೆ ಎಂಬ ಪೊಳ್ಳು ಸೃಷ್ಟಿ ಆಗುತ್ತಲೇ ಇರುವ ಸಂದರ್ಭದಲ್ಲಿ, ಭಾರತದಲ್ಲೇ ನೆಲೆಸಿ ಉದ್ಯೋಗವನ್ನೂ ಮಾಡುತ್ತಿರುವ ಓರ್ವ ಮುಸ್ಲಿಂ ಮಹಿಳೆಯಾಗಿ ನನ್ನ ನಿಲುವು ಏನು ತಿಳಿಸುವುದಕ್ಕೆ ಇಚ್ಛಿಸುತ್ತೇನೆ. ಇದನ್ನು ಬರೆಯಬೇಕೆಂದು ಕೆಲ ದಿನಗಳಿಂದ ಅಂದುಕೊಳ್ಳುತ್ತಿದ್ದೆ, ಈಗ ಆ ಪೊಳ್ಳು ಸೃಷ್ಟಿಯ ಜಲಪ್ರಳಯವು ತಲೆ ಮುಳುಗುವಷ್ಟು ನೀರುಕ್ಕಿಸಿದೆ ಎಂದು ಅನಿಸುತ್ತಿರುವುದರಿಂದ ಈಗಲೇ ಬರೆಯುವುದು ಸೂಕ್ತವೆಂದು ಇಲ್ಲಿ ಬರೆದಿದ್ದೇನೆ. ಇದೋ ಇಲ್ಲಿದೆ ನನ್ನ ಅನಿಸಿಕೆ.

ನಾನೋರ್ವ ಮುಸ್ಲಿಂ ಮಹಿಳೆ, ಬೆಂಗಳೂರಿನಲ್ಲಿ ಸ್ವಂತ ಸುಸಜ್ಜಿತ ಕ್ಲಿನಿಕ್ ಇಟ್ಟುಕೊಂಡು ಪ್ರಾಕ್ಟೀಸ್ ಮಾಡುತ್ತಿರುವ ಚರ್ಮವೈದ್ಯೆ. ನನ್ನ ಬಾಲ್ಯವನ್ನು ನಾನು ಕುವೈಟ್ ದೇಶದಲ್ಲಿ ಕಳೆದನಂತರ 18 ವರ್ಷದವಳಿದ್ದಾಗ ವೈದ್ಯಕೀಯ ಶಿಕ್ಷಣಕ್ಕಾಗಿ ಭಾರತಕ್ಕೆ ಬಂದೆ. ಶಿಕ್ಷಣ ಮುಗಿದ ನಂತರ ನನ್ನ ಸಹಪಾಠಿ ಸ್ನೇಹಿತರಲ್ಲಿ ಹೆಚ್ಚಿನವರೆಲ್ಲ ಆದಾಯದ ಆಕರ್ಷಣೆಯಿಂದ ಬೇರೆಬೇರೆ ದೇಶಗಳಿಗೆ ತೆರಳಿದರು, ನಾನು ಭಾರತದಲ್ಲೇ ಇರಲು ನಿಶ್ಚಯಿಸಿದೆ. ಮುಸ್ಲಿಂ ಆಗಿರುವುದರಿಂದ ಇಲ್ಲಿ ನನಗೆ ತೊಂದರೆ ಆಗಬಹುದು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಸುಳಿಯಲೇ ಇಲ್ಲ. ನನ್ನ ಕುಟುಂಬದ ಮೂಲ ಇರುವುದು ಭಾರತದಲ್ಲಿ, ನನ್ನ ರಾಷ್ಟ್ರೀಯತೆಯೂ ಭಾರತವೇ. ಹಾಗಾಗಿ ನಾನು ಇಲ್ಲೇ ನೆಲೆಸಬೇಕೆಂದು ನಿರ್ಧರಿಸಿ ಕಳೆದ 20 ವರ್ಷಗಳಿಂದ ಚರ್ಮವೈದ್ಯೆಯಾಗಿ ಸೇವೆಸಲ್ಲಿಸುತ್ತಿದ್ದೇನೆ.

ನಾನು ವೈದ್ಯಕೀಯ ಓದಿದ್ದು ಮಣಿಪಾಲದಲ್ಲಿ. ಅಲ್ಲಿ ಮಿಕ್ಕೆಲ್ಲ ವಿದ್ಯಾರ್ಥಿಗಳಂತೆ ನಾನೂ ಒಬ್ಬಳೇ ಇದ್ದೆ. ಕಾಲೇಜಿನಲ್ಲಿ ನನ್ನ ಪ್ರಾಧ್ಯಾಪಕರೆಲ್ಲ, ಹಾಗೆಯೇ ಒಡನಾಡಿ ಸ್ನೇಹಿತರೆಲ್ಲ ಬಹುತೇಕವಾಗಿ ಹಿಂದೂಗಳೇ ಇದ್ದರು. ಅವರಲ್ಲಿ ಪ್ರತಿಯೊಬ್ಬರೂ ನನ್ನೊಡನೆ ಸೌಹಾರ್ದದಿಂದಲೇ ಇರುತ್ತಿದ್ದರು, ನಾನೂ ಅವರಲ್ಲೊಬ್ಬಳು ಎಂಬ ಭಾವನೆ ನನ್ನಲ್ಲಿ ಮೂಡುವಂತೆ ಕೆಲವೊಮ್ಮೆ ಅವರು ಹೆಚ್ಚಿನ ಮುತುವರ್ಜಿಯನ್ನು ವಹಿಸುತ್ತಿದ್ದಾರೆ ಎಂದೇ ನನಗನಿಸುತ್ತಿತ್ತು. ನಾನೋರ್ವ ಮುಸ್ಲಿಂ ಹುಡುಗಿಯಾದ್ದರಿಂದ ನನ್ನ ಬಗ್ಗೆ ಭೇದಭಾವ ತೋರಲಾಗುತ್ತಿದೆ ಅಂತನಿಸುವ ಒಂದೇಒಂದು ಘಟನೆ ನಡೆದದ್ದಿಲ್ಲ. ಮಣಿಪಾಲದಲ್ಲಿನ ನನ್ನ ದಿನಗಳನ್ನು ಅತ್ಯಂತ ಸುಖಶಾಂತಿಯುಳ್ಳದ್ದಾಗಿಸಿದ್ದಕ್ಕೆ ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. [ಎಲ್ಲಿಯ ಶಾಶ್ವತಿ, ಎಲ್ಲಿಯ ಕಿರಣ್; ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!]

ಮಣಿಪಾಲದಲ್ಲಿ ಶಿಕ್ಷಣದ ನಂತರ ನನ್ನ ಮದುವೆಯಾಯಿತು. ಗಂಡನೊಂದಿಗೆ ಬೆಂಗಳೂರಿಗೆ ಬಂದೆ, ನಾವಿಬ್ಬರೂ ಇಲ್ಲೇ ನೆಲೆಸಲು ನಿರ್ಧರಿಸಿದೆವು. ಬೆಂಗಳೂರೇ ಯಾಕೆ ಎನ್ನುವುದಕ್ಕೂ ಕಾರಣ ಇದೆ. ನನ್ನ ಗಂಡನ ಬಗ್ಗೆಯೂ ಒಂದಿಷ್ಟು ವಿವರ ತಿಳಿಸುತ್ತೇನೆ. ಆತನೂ ಓರ್ವ ಮುಸ್ಲಿಂ. ಸರ್ವೇಸಾಮಾನ್ಯವಾದ 'ಇಕ್ಬಾಲ್' ಎಂದು ಹೆಸರು. ಏರೋಸ್ಪೇಸ್ ಎಂಜಿನಿಯರಿಂಗ್ ಓದಿ ಚೆನ್ನೈ ಐಐಟಿಯಲ್ಲಿ ಎಂ.ಟೆಕ್ ಮುಗಿಸಿ ಜರ್ಮನಿಯಲ್ಲಿ ಪಿಎಚ್‌ಡಿ ಮಾಡಿದ ಓರ್ವ ಸುಶಿಕ್ಷಿತ ವ್ಯಕ್ತಿ. ಏರೋಸ್ಪೇಸ್ ಕ್ಷೇತ್ರದ ವೃತ್ತಿಯಿಂದಾಗಿ ಅವರು ಭಾರತದ ಪ್ರತಿಷ್ಠಿತ ಸಂಸ್ಥೆಗಳಾದ DRDO, NAL, HAL, GTRE, ISRO, IISc, BHEL ಮುಂತಾದೆಡೆಗಳಿಗೆಲ್ಲ ಭೇಟಿ ಕೊಡುತ್ತಿರುತ್ತಾರೆ. ಬಿಗಿಬಂದೋಬಸ್ತಿನ ಆ ಸಂಸ್ಥೆಗಳಿಗೆ ಭೇಟಿಕೊಡುವಾಗ ಅವರಿಗೆ ಎಂದೂ ಯಾವ ತೊಂದರೆಯೂ ಆಗಿದ್ದಿಲ್ಲ. ಅವರಿಗೋಸ್ಕರ ವಿಶೇಷ ತಪಾಸಣೆಗಳು ವಿಚಾರಣೆಗಳು ಅಂತೆಲ್ಲ ನಡೆದದ್ದಿಲ್ಲ.

ಇಲ್ಲ, ಮೋದಿ ನೇತೃತ್ವದ ಸರಕಾರ ಆಡಳಿತಕ್ಕೆ ಬಂದಮೇಲೂ ಇದ್ಯಾವುದರಲ್ಲೂ ಒಂದುಸ್ವಲ್ಪವೂ ಬದಲಾವಣೆ ಆಗಿಲ್ಲ. ಅಷ್ಟೇ ಅಲ್ಲ, ನನ್ನ ಗಂಡ ಹೇಳುವ ಪ್ರಕಾರ ಸರಕಾರೀ ಸಂಸ್ಥೆಗಳ ಈ ಶಿಷ್ಟಾಚಾರಗಳನ್ನು ಈಗ ಹೆಚ್ಚು ಕ್ರಮಬದ್ಧ ಮತ್ತು ಏಕರೂಪದ ಶಿಸ್ತುಳ್ಳವನ್ನಾಗಿ ಮಾಡಿದ್ದಾರೆ. ಹಾಗೆ ನೋಡಿದರೆ ಅಮೆರಿಕ ದೇಶಕ್ಕೆ ಪಯಣಿಸಿದಾಗಲೆಲ್ಲ ನನ್ನ ಗಂಡನನ್ನು ಅಲ್ಲಿ ಅವರು ಸಂಪೂರ್ಣ ಜಪ್ತಿ ಮಾಡಿದ್ದಾರಂತೆ. ಜರ್ಮನಿಯಲ್ಲಿ ಪಿಎಚ್‌ಡಿ ಮಾಡುವಾಗಲೂ ಅವರ ಮೇಲೆ ಗುಪ್ತಚರದಳ ನಿರಂತರ ನಿಗಾ ಇಟ್ಟಿತ್ತು. 'ಈಗ ನಿಮ್ಮ ಮೇಲೆ ನಮಗೆ ಸಂದೇಹವಿಲ್ಲ. ಕ್ಲಿಯರೆನ್ಸ್ ಕೊಡಲಾಗಿದೆ' ಎಂದು ಕೊನೆಗೆ ಜರ್ಮನ್ ಸರಕಾರದಿಂದ ಪತ್ರ ಬಂದದ್ದೂ ಇದೆ. [ಅಸಹಿಷ್ಣುತೆ ಬಗ್ಗೆ ಸೊಲ್ಲೆತ್ತಿದ್ದ ಅಮೀರ್ ಗೆ ಬಹಿರಂಗ ಪತ್ರ]

ಇಲ್ಲಿ ಭಾರತದಲ್ಲಿ ಮುಸ್ಲಿಮರಿಗೆ ಅಭದ್ರತೆ ಎಂಬ ಮಾತು! ನನಗೂ ಅರ್ಥವಾಗುತ್ತದೆ, ಪ್ರಪಂಚದಲ್ಲಿ ಬೇರೆಬೇರೆ ಕಡೆಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದಾಗಿ ಅದು ಸಹಜವೇ. ನನ್ನ ಗಂಡನಿಗೆ ಯಾವತ್ತೂ ಅಂಥ ಅಭದ್ರತೆ ಅನುಭವ ಆಗಿಲ್ಲ. ಹಿಂದೂ ಸಹೋದ್ಯೋಗಿಗಳಿಂದ ನನ್ನ ಗಂಡ ಗಳಿಸಿರುವ ಪ್ರೀತ್ಯಾದರಗಳಿಗೆ ಒಂಚೂರೂ ಧಕ್ಕೆ ಬಂದದ್ದಿಲ್ಲ. ಇತ್ತೀಚಿನ ದಿನಗಳಲ್ಲೂ ಅದೇನೂ ಬದಲಾಗಿಲ್ಲ. ಹಾಗಾಗಿ 'ಅಸಹಿಷ್ಣುತೆ' ಎನ್ನುವುದು ನಮಗೆ ಕೇವಲ ಒಂದು ಪದ ಅಷ್ಟೇ ಹೊರತು ನಮ್ಮ ಅನುಭವ ಖಂಡಿತ ಅಲ್ಲ.

ಕಳೆದ ವರ್ಷ, ಮೋದಿಯವರು ಪ್ರಧಾನಿಯಾಗುವುದಕ್ಕೆ ಸ್ವಲ್ಪ ದಿನಗಳ ಮೊದಲಷ್ಟೇ ನನ್ನ ಕ್ಲಿನಿಕ್‌ನ ಶುಭಾರಂಭವಾದದ್ದು. ಈ ದೇಶದ ಕಾನೂನು ನೀತಿನಿಯಮಗಳನ್ನು ಪ್ರಾಮಾಣಿಕವಾಗಿ ಪರಿಪಾಲಿಸುವ ಪ್ರಜೆಗಳಲ್ಲೊಬ್ಬಳು ನಾನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ. ಕಾಲಕಾಲಕ್ಕೆ ತೆರಿಗೆ ಪಾವತಿ ಮುಂತಾದವನ್ನೆಲ್ಲ ನಾನು ಕ್ಲಪ್ತವಾಗಿ ಶಿಸ್ತುಬದ್ಧವಾಗಿ ಮಾಡುತ್ತೇನೆ. ಇಕ್ಕಟ್ಟಿನಲ್ಲಿ ಸಿಲುಕಿಸಿಕೊಳ್ಳುವ ಯಾವ ಕೆಟ್ಟ ಕೆಲಸಗಳನ್ನು, ಯೋಚನೆಗಳನ್ನು ಮಾಡುವುದಕ್ಕೆ ನಾನು ಹೋಗುವುದಿಲ್ಲ. ನನ್ನ ಕ್ಲಿನಿಕ್ ಅಂತೂ ಚೆನ್ನಾಗಿಯೇ ನಡೆಯುತ್ತಿದೆ. ನನ್ನಲ್ಲಿಗೆ ಚಿಕಿತ್ಸೆಗೆ ಬರುವ ರೋಗಿಗಳು, ಅಥವಾ ಸಲಹೆಗೆ ಬರುವ ಗ್ರಾಹಕರು ಬಹುತೇಕ ಹಿಂದೂಗಳೇ. ಕೆಲವರು ಬೇರೆ ಮತಧರ್ಮದವರೂ ಇರುತ್ತಾರೆನ್ನಿ. ಆದರೆ ಇದಾವುದೂ ನನ್ನ ಕ್ಲಿನಿಕ್‌ನ ಕಾರ್ಯಭಾರಗಳಿಗೆ ಯಾವತ್ತಿಗೂ ಅಡ್ಡಿ ಆದದ್ದಿಲ್ಲ. ನನ್ನ ಸಿಬ್ಬಂದಿಯಂತೂ ಎಲ್ಲರೂ ಹಿಂದೂಗಳೇ. ನನ್ನ ಕ್ಲಿನಿಕ್‌ನ ಬಗ್ಗೆ ನನಗಿಂತ ಹೆಚ್ಚು ಕಾಳಜಿಯನ್ನು ಅವರು ಪ್ರದರ್ಶಿಸುತ್ತಾರೆಂದು ಹೇಳಿದರೆ ನನ್ನ ಮಾತನ್ನು ದಯವಿಟ್ಟು ನಂಬಿ.

ದೈನಂದಿನ ವ್ಯವಹಾರಗಳಿಗಾಗಿ ಬ್ಯಾಂಕ್, ಇತರ ವಾಣಿಜ್ಯ ಸಂಸ್ಥೆಗಳು, ಸರಕಾರಿ ಕಾರ್ಯಾಯಲಗಳ ಜತೆಗೆಲ್ಲ ನನಗೆ ಸಂಪರ್ಕವಿದೆ. ಕಳೆದ 20 ವರ್ಷಗಳ ಜೀವನದಲ್ಲಿ ನನಗೆ ಯಾವತ್ತಿಗೂ "ಆಬ್ಬಾ ಈ ದೇಶವನ್ನು ಬಿಟ್ಟುಹೋಗಬೇಕು" ಎಂದು ಅನಿಸಿದ್ದಿಲ್ಲ. ಹಾಗೆ ನೋಡಿದರೆ ನನ್ನ ಸಂಬಂಧಿಕರನೇಕರು ವಿದೇಶಗಳಲ್ಲಿ ನೆಲೆಸಿದ್ದಾರೆ. ನಾನೂ ಹೋಗುತ್ತೇನೆ ಎಂದು ತೀರ್ಮಾನ ಮಾಡುವುದಷ್ಟೇ ಉಳಿದಿರೋದು, ಆದರೆ ನಾನು ಹಾಗೆ ಮಾಡುವುದಿಲ್ಲ! ಕುವೈಟ್‌ನಲ್ಲಿ ಕ್ಲಿನಿಕ್ ತೆರೆಯುವಂತೆ ನನಗೆ ಸಲಹೆ-ಆಮಿಷಗಳು ಬಂದದ್ದಿವೆ. ಅದು ಹೆಚ್ಚು ಹಣಗಳಿಕೆಗೆ ದಾರಿಯಾಗಬಹುದು ಎನ್ನುವುದೂ ನನಗೆ ಗೊತ್ತಿದೆ. ಹಾಗಿದ್ದರೂ ನಾನು ಭಾರತದಲ್ಲೇ ಏಕೆ ಗಟ್ಟಿಯಾಗಿ ನೆಲೆಯೂರಿದ್ದೇನೆ?

ಕುವೈಟ್‌ನಲ್ಲಿ ನಮಗೆ ಹೆಚ್ಚಿನ ಸ್ಥಾನಮಾನಗಳೇನೂ ಇಲ್ಲ. ಅಲ್ಲಿ ನಾವು ನಿಕೃಷ್ಟರು. ಕಳೆದ ನಲ್ವತ್ತು ವರ್ಷಗಳಿಂದ ನನ್ನ ಕುಟುಂಬಸ್ಥರು ಕುವೈಟ್‌ನಲ್ಲಿ ನೆಲೆಸಿದ್ದರೂ ಅವರು ಈಗಲೂ ಅಲ್ಲಿ 'ಪರದೇಸಿ'ಗಳೇ. ಯಾವ ಹಕ್ಕುಗಳೂ ಇಲ್ಲ. ನಮ್ಮ ವಾಸ್ತವ್ಯ ಅನುಮತಿಪತ್ರಗಳನ್ನು ಆಗಾಗ ನವೀಕರಿಸುತ್ತಲೇ ಇರಬೇಕು. ಅದಲ್ಲದೇ ಅಲ್ಲಿ ನಿಯಮಗಳು ಸತತ ಬದಲಾವಣೆ ಆಗುತ್ತಲೇ ಇರುವುದರಿಂದ ಅನಿವಾಸಿಗಳಿಗೆ ತೊಂದರೆಗಳು ಹೆಚ್ಚುತ್ತಲೇ ಇರುತ್ತವೆ. ಕಾನೂನು ನೀತಿ-ನಿಯಮಗಳನ್ನು ಪ್ರಾಮಾಣಿಕವಾಗಿ ಪರಿಪಾಲಿಸಿದ ಮೇಲೂ ಅಲ್ಲಿ ನಮ್ಮ ಮೇಲೆ ಖುಲ್ಲಂಖುಲ್ಲಾ ಆಗಿಯೇ ಭೇದಭಾವ ತೋರಿಸುತ್ತಾರೆ. ಏಷ್ಯಾ ಖಂಡದವರೆಂದರೆ ತೃತೀಯ ದರ್ಜೆಯ ಜನರು, ಕುವೈಟಿನ ಪ್ರಜೆಗಳು ಅರಬರು ಮತ್ತು ಬಿಳಿಯರು ಮಾತ್ರ ಶ್ರೇಷ್ಠರು ಎಂಬ ಭಾವನೆ ಅಲ್ಲಿ ಇದೆ. ಅಲ್ಲಿ ನಮಗೆ ಜೀವನದಲ್ಲಿ ಅತೃಪ್ತಿ ಇರಲಿಕ್ಕಿಲ್ಲವಾದರೂ 'ನಾವು ಈ ದೇಶಕ್ಕೆ ಸೇರಿದವರು' ಎಂಬ ಅಭಿಮಾನ ಮೂಡುವುದಿಲ್ಲ.

ಕುವೈಟ್‌ನಲ್ಲಿ ಬಾಲ್ಯವನ್ನು ಕಳೆದಾಗ ಅಥವಾ ಈಗ ಯಾವಾಗಾದರೂ ಭೇಟಿಯಿತ್ತಾಗ ಕೂಡ ನನಗೆ ಆ ಭಾವನೆ ಅಲ್ಲಿ ಮೂಡಿದ್ದೇ ಇಲ್ಲ. ಆ ಮುಸ್ಲಿಂ ದೇಶದಲ್ಲಿ ನಾವು ಮುಸ್ಲಿಮರು, ಆದರೂ ನಮ್ಮನ್ನು 'ಇಂಡಿಯನ್ಸ್' ಎಂದು ಒಂಥರದ ಅಗೌರವದಿಂದ ನೋಡುತ್ತಾರೆ. ಭಾರತದಲ್ಲಿ ಹಾಗಲ್ಲ. ನನಗೆ ಸುಮಾರು ವರ್ಷಗಳ ಹಿಂದೆಯೇ ಇದು ಅರಿವಿಗೆ ಬಂತು. ಇಲ್ಲಿ 'ನಾನು ಈ ದೇಶಕ್ಕೆ ಸೇರಿದವಳು' ಎಂಬ ಭಾವನೆ ತಾನೇತಾನಾಗಿ ಬರುತ್ತದೆ. ಅಮೆರಿಕದಲ್ಲಿ ಭಾರತೀಯರನ್ನು 'ಇಂಡಿಯನ್ ಅಮೆರಿಕನ್ಸ್' ಎನ್ನಬಹುದು, ಕೆನಡಾದಲ್ಲಿ 'ಇಂಡಿಯನ್ ಕೆನಡಿಯನ್ಸ್' ಎನ್ನಬಹುದು. ಯುಕೆಯಲ್ಲಿ 'ಇಂಡಿಯನ್ ಬ್ರಿಟಿಷ್' ಎನ್ನಬಹುದು.

ಆದರೆ ಭಾರತದಲ್ಲಿ ಮಾತ್ರ ನಾವು 'ಭಾರತೀಯ'ರು! ಯಾರು ಏನೇ ಹೇಳಲಿ ಅದು ಅವರವರ ಇಷ್ಟ ಮತ್ತು ಆಯ್ಕೆ. ಆದರೆ ನಿಜ ಸಂಗತಿ ಇಷ್ಟೇ. 'ನಾನು ಈ ಮನೆಯವನು/ಳು' ಎಂದು ನಿಮಗನಿಸುವುದು ನೀವು ನಿಮ್ಮ ಮನೆಯಲ್ಲಿದ್ದರೆ ಮಾತ್ರ. ಪ್ರಪಂಚದ ಬೇರೆಬೇರೆ ಸ್ಥಳಗಳನ್ನು ನೋಡಿದ್ದೇನೆ, ಅಲ್ಲಿ ಕೆಲ ದಿನಗಳನ್ನು ಕಳೆದಿದ್ದೇನೆ, ಅಲ್ಲೆಲ್ಲ ಎಷ್ಟೆಂದರೂ ನಾನು ಪರಕೀಯಳೇ ಆಗಿರುತ್ತೇನೆ. ಭಾರತದಲ್ಲಿ ಮಾತ್ರ ನನಗೆ ಯಾರೂ "ನೀನು ಭಾರತೀಯಳೇ?" ಎಂದು ಕೇಳುವುದಿಲ್ಲ. ಇಲ್ಲೇ ಇರುವುದು ಬೇರೆ ದೇಶಗಳಿಗೂ ನಮ್ಮ ದೇಶಕ್ಕೂ ವ್ಯತ್ಯಾಸ!

ಹಾಗಿದ್ದರೆ ಈ ಸೆಲೆಬ್ರಿಟಿಗಳ ಹುಚ್ಚಾಟ ಅರಚಾಟಗಳು ಏನು? ನನ್ನಂಥ ಅಥವಾ ನನ್ನ ಗಂಡನಂಥ ಓರ್ವ ಸಾಮಾನ್ಯ ಪ್ರಜೆ ಇಲ್ಲಿ ಯಾವ ತೊಂದರೆಯನ್ನೂ ಅನುಭವಿಸಿಲ್ಲ ಅಂದಮೇಲೆ ಈ ಸೆಲೆಬ್ರಿಟಿಗಳಿಗೆ ಅದೇನು ತೊಂದರೆ? ಆಮಿರ್ ಖಾನನ ಹೆಂಡತಿ ಕಿರಣ್ ರಾವ್‌ಗೆ ಯಾಕೆ ಅಂತಹ ಅನಾವಶ್ಯಕ ಭಯ? ಅವರೆಲ್ಲ ಸ್ಥಿತಿವಂತರು, ಭವ್ಯ ಬಂಗಲೆಗಳಲ್ಲಿ ವಾಸಿಸುವವರು. ಅಂಗರಕ್ಷಕರಿಂದ ಆಳುಕಾಳುಗಳಿಂದ ಸೇವೆ ಪಡೆಯುವವರು. ಅವರ ಮಕ್ಕಳು ಪ್ರತಿಷ್ಠಿತ ಶಾಲೆಗಳಲ್ಲಿ ಕಲಿಯುತ್ತಿರುವರು. ಅವರಿಗೆಲ್ಲ ಯೇತರ ಭಯ? ನಾನಾದರೋ ಒಬ್ಬಂಟಿಯಾಗಿ ಎಲ್ಲ ಕಡೆಗಳಿಗೂ ಹೋಗುತ್ತಿರುತ್ತೇನೆ. ನನಗೆ ಯಾವ ಹೆದರಿಕೆಯೂ ಇಲ್ಲ.

ಓರ್ವ ಜವಾಬ್ದಾರಿಯುತ ಪ್ರಜೆಯಾಗಿ ನನಗೆ ಇದನ್ನು ತಿಳಿದುಕೊಳ್ಳಬೇಕಿದೆ- ಏನೆಂದರೆ ಆಮೀರ್ ಖಾನ್ ಅಗಲೀ ಶಾಹ್‌ರುಖ್ ಖಾನ್ ಆಗಲೀ ಆಥರದ ಬೇಜವಾಬ್ದಾರಿ ಹೇಳಿಕೆಗಳನ್ನು ಕೊಟ್ಟು ಹದಿಮೂರು ಕೋಟಿಯಷ್ಟಿರುವ ಭಾರತೀಯ ಮುಸ್ಲಿಂ ಜನತೆಯ ಗೌರವವನ್ನು ಹಾಳುಗೆಡವಿದ್ದೇಕೆ? ತಂತಮ್ಮ ವೈಯಕ್ತಿಕ ದೃಷ್ಟಿಕೋನಗಳನ್ನಿಟ್ಟುಕೊಂಡು ಸಾರ್ವಜನಿಕ ಹೇಳಿಕೆಗಳನ್ನು ಕೊಡಲಿಕ್ಕೆ ಅವರು ಯಾವ ಮಹಾ ನಾಯಕರು? ಭಾರತದಲ್ಲಿ ಮುಸ್ಲಿಮರಿಗೆ ಭದ್ರತೆ ಇಲ್ಲ ಎನ್ನುತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ನನ್ನ ದೇಶದ ಬಗೆಗಿನ ಗೌರವವನ್ನು ಸುಖಾಸುಮ್ಮನೆ ಹಾಳುಮಾಡುವುದಕ್ಕೆ ಅವರಿಗೆ ಅಧಿಕಾರ ಕೊಟ್ಟವರಾರು? ಅವರನ್ನು 'ಇಲ್ಲಿ ಬಂದು ನೆಲೆಸಿ' ಎಂದು ಹೇಳಲಿಕ್ಕೆ ಪಾಕಿಸ್ತಾನಕ್ಕೆ ಏಕೆ ತುರಿಕೆ?

ನನ್ನ ಹಿಂದೂ ಸ್ನೇಹಿತರೆಲ್ಲ ಮುಸ್ಲಿಮರ ಬಗ್ಗೆ ಇಲ್ಲಸಲ್ಲದ ಮಾತಾಡಿದರೆ ನನಗೆ ನಿಜಕ್ಕೂ ಬೇಸರವಾಗುತ್ತದೆ. ನನ್ನ ಹಿಂದೂ ಸ್ನೇಹಿತರನ್ನೆಲ್ಲ ಅನಾವಶ್ಯಕವಾಗಿ ಕೆರಳಿಸಲಾಗುತ್ತಿದೆ, ಅವರ ತಾಳ್ಮೆ ಪರೀಕ್ಷಿಸಲಾಗುತ್ತಿದೆ ಎಂದು ನನಗನಿಸುತ್ತಿದೆ. ಇಷ್ಟು ವರ್ಷಗಳೂ ನಾನು ಅನುಭವಿಸಿ ಆನಂದಿಸಿದ ಸಹಿಷ್ಣುತೆಯನ್ನು ಬೇಕಂತಲೇ ಹಾಳುಮಾಡಲಾಗುತ್ತಿದೆ ಎಂದು ನನಗೆ ಅನಿಸುತ್ತಿದೆ. ಕೈಬೆರಳೆಣಿಕೆಯ ಕೃತಘ್ನ ಜನರ ಮೂರ್ಖ ಅವಿವೇಕಿ ನಡತೆಗಳಿಂದಾಗಿ ನನ್ನ ಹಿತೈಷಿ ಜನರೆಲ್ಲ ಇನ್ನು ನನ್ನನ್ನು ಪ್ರತ್ಯೇಕಭಾವದಿಂದ ನೋಡಬಹುದು, ನನ್ನ ದೇಶದಲ್ಲೇ ನನ್ನನ್ನು ದೂರಗೊಳಿಸಬಹುದು ಎಂದು ನನಗೆ ಹೆದರಿಕೆಯಾಗುತ್ತಿದೆ. ಈ ಉಪದ್ವ್ಯಾಪಗಳನ್ನು ನನ್ನ ಹಿಂದೂ ಸ್ನೇಹಿತರಾದರೂ ಎಷ್ಟು ದಿನ ಅಂತ ತಡೆದುಕೊಳ್ಳಬೇಕು? ದೇವರಲ್ಲಿ ನನ್ನದು ಇಷ್ಟೇ ಪ್ರಾರ್ಥನೆ. ಇನ್ನಾದರೂ ಮುಸ್ಲಿಮರು ಇಲ್ಲಿನ ಸ್ವಾತಂತ್ರ್ಯದ ನಿಜಾರ್ಥವನ್ನು ಅರಿತುಕೊಳ್ಳಲಿ. ಅಂತೆಯೇ ನನ್ನ ಹಿಂದೂ ಸ್ನೇಹಿತರೆಲ್ಲ ತಾಳ್ಮೆಗೆಡದಿರಲಿ."

[ಬೆಂಗಳೂರಿನಲ್ಲಿ ಚರ್ಮತಜ್ಞ ವೃತ್ತಿಯಲ್ಲಿರುವ Dr. Sofiya Rangwala ಅವರ ಫೇಸ್‌ಬುಕ್ ಪೋಸ್ಟ್‌ನ ಕನ್ನಡ ಅನುವಾದ.] ಮೂಲ ಇಂಗ್ಲಿಷ್ ಪೋಸ್ಟ್ ಇಲ್ಲಿದೆ.

ಕನ್ನಡ ಅನುವಾದ: ಶ್ರೀವತ್ಸ ಜೋಶಿ.

English summary
Soliloquy of a Muslim dermatologist practicing in Bengaluru on intolerance : 'Amidst a fake atmosphere of Intolerance being created in India, in the last 1 month, I owe my version of what I, a Muslim lady, living and working in India feel like. This has been due from me since sometime. Now, I feel the water has gone above the head and I too need to share my views. So, here it is.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more