ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲದಲ್ಲಿ ಮಳೆ ಆರ್ಭಟಕ್ಕೆ ಗಾಬರಿ ಬಿದ್ದವರು ಹೇಳಿಕೊಂಡ ಅನುಭವ

|
Google Oneindia Kannada News

ನೆಲಮಂಗಲ, ಅಕ್ಟೋಬರ್ 11: "ನೋಡನೋಡುತ್ತಿದ್ದ ಹಾಗೆ ಗೇಟ್ ಒಳಗೆ ಹರಿದು ಬಂದ ಮಳೆ ನೀರು, ಮನೆಯೊಳಗಿನ ಬಾಗಿಲು ಹಾಕಿದರೂ ಸಂದಿಯಿಂದ ಬಂದೇ ಬಿಟ್ಟಿತು. ಅಷ್ಟರೊಳಗೆ ಕೆಲವು ವಸ್ತುಗಳನ್ನು ಮೊದಲ ಮಹಡಿಗೆ ಸ್ಥಳಾಂತರ ಮಾಡಿದ್ದರಿಂದ ಹೆಚ್ಚಿನ ಅನಾಹುತ ಅಂತೇನೂ ಆಗಲಿಲ್ಲ".

ಮಳೆ ಅವಾಂತರ: ಜಲಾವೃತವಾದ ಚಾಮಮರಾಜನಗರದ ಕೆಸ್ತೂರುಮಳೆ ಅವಾಂತರ: ಜಲಾವೃತವಾದ ಚಾಮಮರಾಜನಗರದ ಕೆಸ್ತೂರು

-ಇಷ್ಟು ಮಾತನಾಡುವಷ್ಟರಲ್ಲಿ ನೆಲಮಂಗಲದ ವಿಠ್ಠಲ್ ಅವರ ಧ್ವನಿಯಲ್ಲಿ ಬೆಳಗಿನ ಜಾವ ಮನೆಯೊಳಗೆ ಮಳೆ ನೀರು ನುಗ್ಗಿ ಅನಾಹುತ ಮಾಡಿದ ಆತಂಕವೇ ಇಣುಕುತ್ತಿತ್ತು. ಒನ್ಇಂಡಿಯಾ ಕನ್ನಡದ ಜತೆಗೆ ಫೋನ್ ನಲ್ಲಿ ಮಾತನಾಡಿದ ಅವರು, ತಮ್ಮ ಮನೆಯಲ್ಲಿ ನೀರು ನುಗ್ಗಿದ ಚಿತ್ರ, ವಿಡಿಯೋ ಕೂಡ ಕಳುಹಿಸಿದ್ದರು.

ವಯಸ್ಸಾದ ತಂದೆ-ತಾಯಿ, ಪತ್ನಿ ಹಾಗೂ ಚಿಕ್ಕ ವಯಸ್ಸಿನ ಮಗಳ ಜತೆಗೆ ನೆಲಮಂಗಲದಲ್ಲಿ ವಾಸವಿರುವ ವಿಠ್ಠಲ್ ತಮ್ಮ ಸಂಕಷ್ಟವನ್ನು ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟರು. "ಎಲ್ಲ ವಸ್ತುಗಳನ್ನು ಮಹಡಿ ಮೇಲೆ ಸಾಗಿಸಲು ಸಾಧ್ಯವಾಗಲಿಲ್ಲ. ಮನೆಯೊಳಗಿಂದ ಮೇಲಕ್ಕೆ ಹೋಗಲು ಇರುವ ಮೆಟ್ಟಿಲ ಮೇಲೆ ಕುಳಿತು ಏನಾಗುತ್ತದೋ ಎಂಬ ದಿಗಿಲಿನಲ್ಲಿ ಕಾಯುತ್ತಾ ಕುಳಿತೆವು" ಎಂದು ಹೇಳಿದರು.

ಕನಕಪುರ ಮಾರ್ಗದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 3 ಅಡಿ ನೀರುಕನಕಪುರ ಮಾರ್ಗದ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ 3 ಅಡಿ ನೀರು

ಆ ನಂತರ ಆಗಿದ್ದೇನು ಎಂಬುದನ್ನು ಅವರ ಮಾತಿನಲ್ಲೇ ಇಲ್ಲಿ ಕೊಡಲಾಗಿದೆ.

ನೆಲದ ಮೇಲೆ ಬಿದ್ದ ರೆಫ್ರಿಜರೇಟರ್

ನೆಲದ ಮೇಲೆ ಬಿದ್ದ ರೆಫ್ರಿಜರೇಟರ್

"ಮೊದಲಿಗೆ ದಬ್ ಎಂಬ ಶಬ್ದವಾಯಿತು. ಏನು ಅಂತ ಹೋಗಿ ನೋಡಿದರೆ ರೆಫ್ರಿಜರೇಟರ್ ಮುಂದಕ್ಕೆ ವಾಲಿದಂತೆ ನೆಲದ ಮೇಲೆ ಬಿದ್ದಿತ್ತು. ಇನ್ನು ಅಡುಗೆ ಮನೆಯಲ್ಲಿ ತುಂಬಿದ ಸಿಲಿಂಡರ್ ಹಾಗೂ ಬಚ್ಚಲ ಮನೆಯಲ್ಲಿದ್ದ ಖಾಲಿ ಸಿಲಿಂಡರ್ ಕೂಡ ನೆಲಕ್ಕೆ ಬಿದ್ದು, ಜೋರಾಗಿ ಶಬ್ದವಾಯಿತು".

ಸುಟ್ಟು ಹೋದ ಬೋರ್ ವೆಲ್ ಮೋಟಾರ್

ಸುಟ್ಟು ಹೋದ ಬೋರ್ ವೆಲ್ ಮೋಟಾರ್

"ಬೆಳಗಿನ ಜಾವದ ಹೊತ್ತಿಗೆ ನಿಧಾನವಾಗಿ ಮಳೆ ನೀರು ಹೊರಗೆ ಹೋಗಲಾರಂಭಿಸಿತು. ಆಚೆ ಹೋಗಿ ನೋಡಿದರೆ ನನ್ನ ಬೈಕ್, ಸ್ಕೂಟರ್ ನೆಲಕ್ಕೆ ಬಿದ್ದಿದ್ದವು. ಕಾರಿನ ಚಕ್ರದವರೆಗೆ ನೀರು ತುಂಬಿಕೊಂಡಿತ್ತು. ಈಚೆಗಷ್ಟೇ ಬೋರ್ ವೆಲ್ ಮೋಟಾರ್ ಕೆಲಸ ಮಾಡಿಸಿದ್ದೆ. ಅದು ಸುಟ್ಟುಹೋಗಿ ವಾಸನೆ ಬರುತ್ತಿತ್ತು. ಇವುಗಳೆಲ್ಲದರ ರಿಪೇರಿ ಆಗಲೇ ಬೇಕು ಅನ್ನೋದು ಖಾತ್ರಿಯಾಯಿತು".

ಎಲ್ಲ ಮನೆಯವರದೂ ಅದೇ ಪಾಡು

ಎಲ್ಲ ಮನೆಯವರದೂ ಅದೇ ಪಾಡು

"ಮನೆಯ ಮುಂದಿನ ರಸ್ತೆಯ ಮೇಲೆ ಕೊಡ, ಬಕೆಟ್, ತಪ್ಪಲೆ... ಕಡೆಗೆ ಮೋರಿ ನಿರ್ಮಾಣಕ್ಕಾಗಿ ರಸ್ತೆಯಲ್ಲಿ ಸಿಮೆಂಟ್ ಮೇಲಿನ ಹಾಸು ನಿರ್ಮಾಣಕ್ಕೆ ಬಳಸುವ ಕಬ್ಬಿಣದ ಅಚ್ಚಿನಂಥ ವಸ್ತು ಸಹ ತೇಲುತ್ತಾ ಬರುತ್ತಿತ್ತು. ನಮ್ಮ ಬಡಾವಣೆಯಲ್ಲಿ ಬಹುತೇಕ ಎಲ್ಲ ಮನೆಗಳ ಸ್ಥಿತಿಯೂ ಹೀಗೆ ಅನ್ನೋದು ನೋಡಿದರೆ ತಿಳಿಯುತ್ತಿತ್ತು".

ನೀರು ಸಾಗುವ ದಾರಿಯಲ್ಲಿ ಕಟ್ಟಡ

ನೀರು ಸಾಗುವ ದಾರಿಯಲ್ಲಿ ಕಟ್ಟಡ

"ನಮ್ಮ ಬಡಾವಣೆಯಲ್ಲಿ ಈ ಹಿಂದೆ ಸಮಸ್ಯೆ ಇತ್ತು. ಈಗೆಲ್ಲ ಸರಿ ಮಾಡಿದ್ದೀವಿ ಎಂದು ಜನ ಪ್ರತಿನಿಧಿಗಳು ಹೇಳಿದ್ದರು. ಅದೇ ಧೈರ್ಯದ ಮೇಲೆ ಮನೆಯಲ್ಲಿ ನೆಮ್ಮದಿಯಾಗಿ ಮಲಗಿದ್ದಿವಿ. ಆದರೆ ನೆಲಮಂಗಲದ ಕೆರೆ ಕೋಡಿ ಒಡೆದರೆ ಅದರ ನೀರು ಬಿನ್ನಮಂಗಲ ಕೆರೆಗೆ ಹೋಗುವುದಕ್ಕೆ ವ್ಯವಸ್ಥೆ ಇದೆ. ಯಾರೋ ಭೂಪ ಆ ನೀರು ಸಾಗುವ ಮಾರ್ಗ ಮಧ್ಯೆಯೇ ಕಟ್ಟಡ ಕಟ್ಟಿರುವುದರಿಂದ ಈ ಸಮಸ್ಯೆಯಾಗಿದೆ. ಯಾರಿಗೆ ಹೇಳೋಣ ಸ್ವಾಮಿ ನಮ್ಮ ಸಮಸ್ಯೆ" ಎಂದು ವಿಠ್ಠಲ್ ಮಾತು ಮುಗಿಸಿದರು.

English summary
How Wednesday morning rain in Nelamangala panic people? Here is an experience shared by Vittal, who is the resident of Nelamangala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X