ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿಶಿರದಲ್ಲಿ ಉದುರಿಬಿದ್ದ ಎಲೆಯಂತೆ ಇರುಳಿನ ಬೆಂಗಳೂರು!

ಒಬ್ಬರು ಎಷ್ಟು ಚೆಂದಾಗಿ ಟ್ವೀಟಿಸಿದ್ದಾರೆ ಗೊತ್ತಾ? ಬೆಂಗಳೂರಿನ ಟಿಪಿಕಲ್ ಖಾದ್ಯ, ನನ್ನ ಫೆವರಿಟ್ ತಿಂಡಿ, ಬಿಸಿಬಿಸಿಬೇಳೆ ಬಾತ್ ನಂತೆ ರಾತ್ರಿಯ ಬೆಂಗಳೂರು ಕಾಣುತ್ತಿದೆ ಎಂದು ತಮ್ಮ ಅದ್ಬುತ ಕಲ್ಪನೆಯನ್ನು ಹರಿಯಬಿಟ್ಟಿದ್ದಾರೆ.

By Prasad
|
Google Oneindia Kannada News

ಬೆಂಗಳೂರು, ಮಾರ್ಚ್ 04 : ಮುಂಬೈ ರೀತಿಯಲ್ಲಿ ಬೆಂಗಳೂರು ಕೂಡ ರಾತ್ರಿ ಮಲಗುವುದಿಲ್ಲ. ರಾತ್ರಿ 1 ಗಂಟೆಯ ನಂತರ ಬಾರುಗಳು ತೆರೆದಿರುವುದಿಲ್ಲ ನಿಜ, ಆದರೆ ಬೆಂಗಳೂರ ಇರುಳ ಜೀವನ ನಿಂತ ನೀರಲ್ಲ. ವಿಭಿನ್ನ, ವೈವಿಧ್ಯಮಯ, ವಿವರಿಸಲೂ ಸಾಧ್ಯವಾಗದಂತಹ ಚಟುವಟಿಕೆಗಳು ನಡೆದೇ ಇರುತ್ತವೆ. ಬೆಂಗಳೂರೇ ವಿಸ್ಮಯ!

ಇತ್ತೀಚಿನ ದಿನಗಳಲ್ಲಿ ನಮ್ಮ ಹೆಮ್ಮೆಯ ಬೆಂಗಳೂರು ವಿಪರೀತ ಬದಲಾಗಿದೆ. ಐಟಿ ನಗರ ಪುಣೆಯನ್ನು ನಿವಾಳಿಸುವ ರೀತಿಯಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಊರು ತುಂಬ ಮೇಲ್ಸೇತುವೆಗಳು ತುಂಬಿವೆ, ಶತಮಾನಗಳ ಕಾಲ ನೆರಳು ನೀಡುತ್ತಿದ್ದ ಮರಗಳು ಸಾವನ್ನಪ್ಪಿವೆ, ಕಸದ ರಾಶಿಗಳು ದುರ್ವಾಸನೆಯನ್ನು ಆಕಾಶಕ್ಕೆ ಚಿಮ್ಮುತ್ತಿವೆ.

How Namma Bengaluru looks at night from space station?

ಇಂಥ ನಮ್ಮ ಬೆಂಗಳೂರು ಬಾಹ್ಯಾಕಾಶದಿಂದ ಹೇಗೆ ಕಂಡೀತು ಎಂಬುದನ್ನು ನೋಡಲು ಕುತೂಹಲವೆ? ಶಿಶಿರ ಋತು ಆರಂಭವಾಗಿದೆ. ಚೈತ್ರವನ್ನು ಸ್ವಾಗತಿಸುವ ಹುಮ್ಮಸ್ಸಿನಲ್ಲಿ ಎಲೆಗಳೆಲ್ಲ ಉದುರಿ ರಸ್ತೆ, ಬೀದಿಗಳಲ್ಲೆಲ್ಲ ಚಿತ್ತಾರ ಮೂಡಿಸಿವೆ. ಬಾಹ್ಯಾಕಾಶದ ನೋಟವೂ, ಉದುರಿದ ಎಲೆಗೂ ಎಲ್ಲಿಂದೆಲ್ಲಿಯ ಸಂಬಂಧ ಅಂತ ಅನ್ನಿಸುತ್ತಿರಬಹುದು.

ಹೌದು, ಬಾಹ್ಯಾಕಾಶದಿಂದ ಇರುಳಿನಲ್ಲಿ ಕಣ್ಣುಮುಚ್ಚದ ಬೆಂಗಳೂರಿನ ಚಿತ್ರ ತೆಗೆದರೆ, ಶಿಶಿರದಲ್ಲಿ ಉದುರಿಬಿದ್ದು, ಅಸ್ತಿಪಂಜರದಂತಾದ ಆಲದ ಮರದಂತೆಯೇ ಥೇಟ್ ಕಾಣುತ್ತದೆ. ಇಂಥದೊಂದು ಅಪರೂಪದ ಚಿತ್ರವನ್ನು ಬಾಹ್ಯಾಕಾಶದಿಂದ ತೆಗೆದವರು ಫ್ರೆಂಚ್ ಗಗನಯಾತ್ರಿ ಥಾಮಸ್ ಪೆಸ್‌ಕ್ವೆಟ್.

"ಭಾರತದಲ್ಲಿರುವ ಬೆಂಗಳೂರು. ರಾತ್ರಿಯಲ್ಲಿ ಈ ನಗರಗಳು ಎಷ್ಟು ವಿಚಿತ್ರವಾಗಿ ಕಾಣಿಸುತ್ತವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ. ನಾಸಾ ಮತ್ತು ಯುರೋಪಿನ ಬಾಹ್ಯಾಕಾಶ ಸಂಸ್ಥೆಯ ಪರವಾಗಿ, ಭೂಮಿಯನ್ನು ಸುತ್ತುತ್ತಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನೌಕೆಯಲ್ಲಿ ವಿಹರಿಸುತ್ತ ಈ ಅದ್ಭುತ ಚಿತ್ರ ತೆಗೆದಿದ್ದಾರೆ.

ಈ ಟ್ವೀಟಿಗೆ ಹಲವಾರು ಜನರು ಪ್ರತಿಕ್ರಿಯಿಸಿದ್ದಾರೆ. ದಿನೇಶ್ ಸಿಂಗ್ ಸಮ್ಯಾಲ್ ಎಂಬುವವರು, "ಇದು ನಮ್ಮ ಊರು ಬೆಂಗಳೂರು. ಬ್ಯಾಂಗಲೋರ್ ಅನ್ನು ಬೆಂಗಳೂರನ್ನಾಗಿ ಬದಲಾಯಿಸಲಾಗಿದೆ" ಎಂದು ಥಾಮಸ್ ಪೆಸ್‌ಕ್ವೆಟ್ ಅವರಿಗೆ ಉತ್ತರಿಸಿದ್ದಾರೆ.

ಹಗಲು ಹೊತ್ತಿನಲ್ಲಿ ಬೆಂಗಳೂರು ಎಷ್ಟು ಚೆಂದವಾಗಿ ಕಾಣುತ್ತದೋ, ಇರುಳಿನಲ್ಲಿಯೂ ಅಷ್ಟೇ ಚೆಂದವಾಗಿ ಕಾಣುತ್ತದೆ ಎಂದು ಮತ್ತೊಬ್ಬರು ಟ್ವೀಟಿಸಿದ್ದಾರೆ. ಎಲ್ಲವೂ ಗೋಜಲು ಗೋಜಲಾಗಿ ಕಾಣಿಸುತ್ತದೆ. ಆ ಆರೇಂಜು, ಆ ಎಲ್ಲೋ... ಎಲ್ಲೋ ಎಲ್ಲೋ ಡರ್ಟಿ ಫೆಲೋ ಹಾಡು ನೆನಪಿದೆಯಾ ಎಂದು ಮಗದೊಬ್ಬರು ಬಾಲ್ಯದ ನೆನಪಿಗೆ ಜಾರಿದ್ದಾರೆ.

ಇನ್ನೊಬ್ಬರು ಎಷ್ಟು ಚೆಂದಾಗಿ ಟ್ವೀಟಿಸಿದ್ದಾರೆ ಗೊತ್ತಾ? ಬೆಂಗಳೂರಿನ ಟಿಪಿಕಲ್ ಖಾದ್ಯ, ನನ್ನ ಫೆವರಿಟ್ ತಿಂಡಿ, ಬಿಸಿಬಿಸಿಬೇಳೆ ಬಾತ್ ನಂತೆ ಕಾಣುತ್ತಿದೆ ಎಂದು ತಮ್ಮ ಅದ್ಬುತ ಕಲ್ಪನೆಯನ್ನು ಹರಿಯಬಿಟ್ಟಿದ್ದಾರೆ. ಇನ್ನೊಬ್ಬರು, ಬೆಂಗಳೂರಿನ ಪರಿಸರದಲ್ಲಿ ಎಷ್ಟೊಂದು ಕಾವು ಏರುತ್ತಿದೆ ಎಂಬುದನ್ನು ಬಿಂಬಿಸಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಚಿತ್ರ ಬ್ರೀಲಿಯೆಂಟ್ ಅಂದ್ರೆ ಬ್ರೀಲಿಯೆಂಟ್. ನನಗೆ ಹೈದರಾಬಾದ್ ಚಿತ್ರ ಬೇಕು, ಅಂಕಲ್ ನನಗೆ ಚೆನ್ನೈ ರಾತ್ರಿಯ ಚಿತ್ರ ಕಳಿಸಿ ಎಂದು ಥಾಮಸ್ ಅವರನ್ನು ದುಂಬಾಲು ಬೀಳುತ್ತಿದ್ದಾರೆ. ಒಂದು ಚಿತ್ರ ಎಷ್ಟೊಂದು ಭಾವನೆಗಳನ್ನು, ಕಲ್ಪನೆಗಳನ್ನು, ಬೇಡಿಕೆಗಳನ್ನು ಹುಟ್ಟುಹಾಕುತ್ತದೆ ಎಂಬುದಕ್ಕೆ ಈ ಚಿತ್ರವೇ ಸಾಕ್ಷಿ. ಹ್ಯಾಟ್ಸಾಫ್ ಟುಯು ಥಾಮಸ್ ಸರ್.

English summary
How Namma Bengaluru looks at night from space station? French astronaut Thomas Pesquet shared a picture of Bengaluru at night, which he shot from the International Space Station (ISS). Many people have expressed their imagination on twitter. ಶಿಶಿರದಲ್ಲಿ ಉದುರಿಬಿದ್ದ ಎಲೆಯಂತೆ ಇರುಳಿನ ಬೆಂಗಳೂರು!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X