• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೆಚ್ಚುತ್ತಿರುವ ಕೋವಿಡ್: ಬೆಂಗಳೂರಿನಲ್ಲಿ ಆಸ್ಪತ್ರೆಗಳಾಗಿ ಬದಲಾಗುತ್ತಿವೆ ಹೋಟೆಲ್‌ಗಳು

|

ಬೆಂಗಳೂರು, ಏಪ್ರಿಲ್ 17: ಜನನಿಬಿಡ ಬೆಂಗಳೂರು ಕೋವಿಡ್ ಎರಡನೆಯ ಅಲೆಯ ಹೊಡೆತಕ್ಕೆ ಮತ್ತೆ ನಲುಗುತ್ತಿದೆ. ಮುಂಬೈ, ದೆಹಲಿಗಳಂತೆಯೇ ಬೆಂಗಳೂರು ಮುಂದಿನ ದಿನಗಳಲ್ಲಿ ಭಾರಿ ಸಂಖ್ಯೆಯ ಕೋವಿಡ್ ಪ್ರಕರಣಗಳನ್ನು ಕಾಣಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇತರೆ ರಾಜ್ಯಗಳಲ್ಲಿ ಆಗುತ್ತಿರುವಂತೆಯೇ ಬೆಂಗಳೂರಿನಲ್ಲಿ ಕೂಡ ಕೋವಿಡ್ ರೋಗಿಗಳಿಗೆ ಬೆಡ್‌ಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ನಡುವೆ ಕೋವಿಡ್ ಆರೈಕೆ ಕೇಂದ್ರಗಳಾಗಿ ಪರಿವರ್ತನೆಯಾಗಲು ನಗರದ ಅನೇಕ ಹೋಟೆಲ್‌ಗಳು ಮುಂದೆಬಂದಿವೆ.

ಭವಿಷ್ಯದಲ್ಲಿ ತಲೆದೋರಬಹುದಾದ ಹಾಸಿಗೆ ಕೊರತೆಯನ್ನು ನೀಗಿಸಲು ಹೋಟೆಲ್‌ಗಳನ್ನೇ ಕೋವಿಡ್ ಕೇಂದ್ರಗಳನ್ನಾಗಿ ಮಾರ್ಪಾಟು ಮಾಡುವ ಸಂಬಂಧ ಬಿಬಿಎಂಪಿ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ಈಗಾಗಲೇ ವಿವಿಧ ಹೋಟೆಲ್‌ಗಳ ಮಾಲೀಕರೊಂದಿಗೆ ಸಭೆ ನಡೆಸಿವೆ. ರಾಜ್ಯದಲ್ಲಿ ಇದುವರೆಗೂ 11,24,509 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 1,07,315 ಸಕ್ರಿಯ ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಬೆಂಗಳೂರು ನಗರವೊಂದರ ಪಾಲು ಶೇ 60ಕ್ಕೂ ಹೆಚ್ಚು.

ಇನ್ನೊಂದು ತಿಂಗಳಲ್ಲಿ ಕರ್ನಾಟಕದಲ್ಲಿ ಕೊರೊನಾ ಸ್ಥಿತಿ ಹೇಗಿರುತ್ತೆ? ಇಲ್ಲಿದೆ ವಿಶ್ಲೇಷಕರ ಮಾತು...

ಇತರೆ ಮೆಟ್ರೊಪಾಲಿಟನ್ ನಗರಗಳಂತೆಯೇ ಬೆಂಗಳೂರು ಕೂಡ ವಿವಿಧ ರಾಜ್ಯಗಳಿಂದ, ಹಳ್ಳಿಗಳಿಂದ ಬೇರೆ ಬೇರೆ ಕೆಲಸಗಳಿಗಾಗಿ ಬಂದ ಜನರ ತಾಣ. ಹೀಗೆ ಕೆಲಸಕ್ಕಾಗಿ ಬಂದ ಬಹುಪಾಲು ವಲಸಿಗರು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಹಾಗೆಂದು ನಗರದಲ್ಲಿನ ಜನದಟ್ಟಣೆಯೇನೂ ಕಡಿಮೆಯಾಗಿಲ್ಲ.

ರಾಜ್ಯದ ಗಡಿಯನ್ನು ದಾಟಿ ಬರುವವರಿಗೆ ಆರ್‌ಟ೦-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಕಡ್ಡಾಯವಾಗಿದ್ದರೂ ಪರೀಕ್ಷೆಗಳು ಯಾವಾಗಲೂ ಶೇ 100ರಷ್ಟು ನಿಖರವಲ್ಲ ಎಂದು ಪರಿಣತರು ಹೇಳುತ್ತಾರೆ. ಕೆಲವೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಇರುವ ವೈರಸ್ ಪ್ರಮಾಣ ಅಷ್ಟು ಶಕ್ತಿಶಾಲಿಯಾಗಿಲ್ಲದೆ ಇದ್ದರೆ ಅದು ಪತ್ತೆಯಾಗದೆಯೇ ಇರಬಹುದು.

ಏ.18ರಂದು ನಿಗದಿಯಾಗಿದ್ದ ಸರ್ವಪಕ್ಷ ಸಭೆ ಮುಂದೂಡಿಕೆ

ಗ್ರಾಮೀಣ ಭಾಗಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಜನಸಾಂದ್ರತೆ ಹೆಚ್ಚಿರುವುದರಿಂದ ಕೋವಿಡ್ ಪ್ರಸರಣದ ಪ್ರಮಾಣವೂ ಅಧಿಕ. ಅಲ್ಲದೆ ನಗರದಲ್ಲಿ ಸೋಂಕಿನ ದಾಳಿಗಳಿಂದ ಸುರಕ್ಷಿತವಾಗಿಡುವಂತಹ ಪರಿಸರ ವ್ಯವಸ್ಥೆ ಉಳಿದಿಲ್ಲ. ಇಷ್ಟೆಲ್ಲಾ ಅಪಾಯದ ಅರಿವಿದ್ದರೂ ಮಾರುಕಟ್ಟೆಗಳು ಜನರಿಂದ ತುಂಬಿತುಳುಕುತ್ತಿವೆ. ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ಜನರು ನಿರಾತಂಕವಾಗಿ ಅಡ್ಡಾಡುತ್ತಿದ್ದಾರೆ. ಕೋವಿಡ್ ಮಾರ್ಗಸೂಚಿಗಳು, ನಿಯಮಗಳನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ. ಜನನಿಬಿಡ ಸ್ಥಳಗಳಲ್ಲಿಯೂ ಜನರು ಮಾಸ್ಕ್ ಧರಿಸಿದೆ, ದೈಹಿಕ ಅಂತರ ಕಾಪಾಡದೆ ಓಡಾಡುವುದನ್ನು ಕಂಡರೆ ಅಚ್ಚರಿ ಮತ್ತು ಗಾಬರಿ ಎರಡೂ ಆಗುತ್ತದೆ.

ರಾಜ್ಯದ ಒಂದು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಿಗೆ ಶನಿವಾರ ಉಪ ಚುನಾವಣೆ ನಡೆಯುತ್ತಿದೆ. ಕಳೆದ ಕೆಲವು ದಿನಗಳಿಂದ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಚುನಾವಣಾ ಪ್ರಚಾರ, ಸಭೆಗಳಿಗೆಂದು ಊರಿಂದೂರಿಗೆ ಓಡಾಡಿದ್ದಾರೆ. ಇಲ್ಲಿಯೂ ಕೋವಿಡ್ ನಿಯಮಾವಳಿಗಳನ್ನು ಸ್ವತಃ ರಾಜಕೀಯ ನಾಯಕರೇ ಗಾಳಿಗೆ ತೂರಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಜ್ವರವಿದ್ದಾಗಲೂ ಮಾತ್ರೆ ತೆಗೆದುಕೊಂಡು ಚುನಾವಣಾ ಪ್ರಚಾರ, ಸರ್ಕಾರದ ಸಭೆಗಳಲ್ಲಿ ಭಾಗವಹಿಸಿದ್ದರು. ಅವರಲ್ಲಿ ಈಗ ಎರಡನೆಯ ಬಾರಿ ಕೋವಿಡ್ ಕಾಣಿಸಿಕೊಂಡಿದೆ. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕೋವಿಡ್ ಸೋಂಕು ವೇಗವಾಗಿ ಹರಡುತ್ತಿರಲು ವೈದ್ಯಕೀಯ ಹಾಗೂ ಸಾಮಾಜಿಕ ಕಾರಣಗಳಿವೆ. ಇಲ್ಲಿ ಸರ್ಕಾರದ ಸಂಸ್ಥೆಗಳು ಅಥವಾ ಜನರ ಮೇಲೆ ಆರೋಪ ಮಾಡಲಾಗುತ್ತಿದೆ. ವೈರಸ್ ಹರಡುವುದನ್ನು ತಪ್ಪಿಸುವುದು ಇಬ್ಬರ ಜವಾಬ್ದಾರಿಯೂ ಹೌದು. ಕಳೆದ ವರ್ಷ ಪ್ರತಿ ಪಾಸಿಟಿವ್ ವ್ಯಕ್ತಿಯಿಂದ ವೈರಸ್ ಸರಾಸರಿ ಇಬ್ಬರಿಗೆ ಹರಡುವಂತಿತ್ತು. ಆದರೆ ಈಗ ಆ ಸಂಖ್ಯೆ 3-5 ಜನರಿಗೆ ಹೆಚ್ಚಿದೆ. ಶೇ 30ರಷ್ಟು ಜನರಲ್ಲಿ ಸೋಂಕಿನ ಲಕ್ಷಣಗಳು ಇರುವುದಿಲ್ಲ ಮತ್ತು ಅವರು ಪರೀಕ್ಷೆಗೂ ಒಳಪಟ್ಟಿರುವುದಿಲ್ಲ. ಇದು ಸೋಂಕು ಹರಡಲು ಪ್ರಮುಖ ಕಾರಣ ಎಂದು ತಜ್ಞರು ಹೇಳುತ್ತಾರೆ.

ಕಳೆದ ವರ್ಷ ಮೊದಲ ಅಲೆಯ ವೇಳೆ ಬೆಂಗಳೂರಿನಲ್ಲಿ ಸುಮಾರು 18 ಹೋಟೆಲ್‌ಗಳು ಸಕ್ರಿಯ ಕೋವಿಡ್ ಕೇಂದ್ರಗಳಾಗಿ ಕೆಲಸ ಮಾಡಿದ್ದವು. ಈಗ ಮೂರು ಹೋಟೆಲ್‌ಗಳು ಪ್ರಸ್ತುತ ಕೋವಿಡ್ ಸೇವೆ ಸಲ್ಲಿಸುತ್ತಿವೆ. ನಗರದಲ್ಲಿ 50ಕ್ಕೂ ಅಧಿಕ ಬೆಡ್‌ಗಳಿರುವ ಒಂದು ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಆದರೆ ಯೋಗ್ಯ ಕಟ್ಟಡಗಳನ್ನು ಮಾತ್ರವೇ ಕೋವಿಡ್ ಆಸ್ಪತ್ರೆಗಳನ್ನು ಪರಿವರ್ತಿಸಲಾಗುತ್ತಿದೆ.

ಲಕ್ಷಣವಿಲ್ಲದ ಅಥವಾ ಲಘು ಲಕ್ಷಣಗಳಿರುವ ರೋಗಿಗಳನ್ನು ಹೋಟೆಲ್‌ಗಳಲ್ಲಿ ಇರಿಸಲಾಗುತ್ತಿದೆ. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಅವರಿಗೆ ಆಕ್ಸಿಜನ್ ಸೌಲಭ್ಯಗಳನ್ನು ಕೂಡ ನೀಡಲಾಗಿದೆ. ರೋಗಿಯ ಸ್ಥಿತಿ ವಿಕೋಪಕ್ಕೆ ತೆರಳಿದರೆ ಅವರನ್ನು ಆ ಹೋಟೆಲ್ ಉಸ್ತುವಾರಿ ನಿರ್ವಹಿಸುವ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈಗಿನ ಸನ್ನಿವೇಶದಲ್ಲಿ ಶೇ 10ರಷ್ಟು ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗುವಂತಿದೆ. ಇದನ್ನು ನಿಭಾಯಿಸುವುದು ತೀರಾ ಸವಾಲಾಗುತ್ತಿಲ್ಲ. ಆದರೆ ಪರಿಸ್ಥಿತಿ ಕೈಮೀರಿದರೆ ಕಷ್ಟ ಎದುರಾಗಲಿದೆ.

   ಕುಮಾರಸ್ವಾಮಿಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ | Oneindia Kannada

   ಹೋಟೆಲ್‌ಗಳು ಕೂಡ ಅತಿಥಿಗಳಿಲ್ಲದೆ ಹೆಚ್ಚು ಖಾಲಿ ಇವೆ. ಕೋವಿಡ್ ಕಾರಣದಿಂದ ಜನರು ಬರುತ್ತಿಲ್ಲ. ಹೀಗಾಗಿ ಅವುಗಳನ್ನು ಕೋವಿಡ್ ಕೇಂದ್ರಗಳನ್ನಾಗಿ ಪರಿವರ್ತಿಸಿದರೆ ಹೋಟೆಲ್‌ಗಳಿಗೆ ಆದಾಯವಾದರೂ ಸಿಗಲಿದೆ.

   English summary
   BBMP and state Health Department offering Bengaluru hoteliers to turn their hotels into Covid Care Centres to fulfill the beds demand.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X