'ಮೋದಿ ಸರ್ಕಾರ', 'ಯಡಿಯೂರಪ್ಪ ಸರ್ಕಾರ' ಎಂದು ಕರೆಯಲು ಅಡ್ಡಿಯಿಲ್ಲ: ಹೈಕೋರ್ಟ್
ಬೆಂಗಳೂರು, ಜನವರಿ 27: ಭಾರತ ಸರ್ಕಾರವನ್ನು 'ಮೋದಿ ಸರ್ಕಾರ' ಮತ್ತು ಕರ್ನಾಟಕ ಸರ್ಕಾರವನ್ನು 'ಯಡಿಯೂರಪ್ಪ ಸರ್ಕಾರ' ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ) ಮತ್ತು ಮಾಧ್ಯಮಗಳು ಉಲ್ಲೇಖಿಸುವುದರ ವಿರುದ್ಧ ಕಳವಳ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಸರ್ಕಾರವನ್ನು ವರ್ಣಿಸಲು ಹೇಗೆ ಪದಗಳನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬ ಬಗ್ಗೆ ಮಾಧ್ಯಮಗಳಿಗೆ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಹೇಳಿದೆ.
ಆರೋಗ್ಯ ಸೇತು ಆಪ್: ದತ್ತಾಂಶ ಹಂಚಿಕೊಳ್ಳದಂತೆ ಹೈಕೋರ್ಟ್ ತಡೆ
ಸರ್ಕಾರವನ್ನು ಮಾಧ್ಯಮವು ಯಾವ ರೀತಿ ಉಲ್ಲೇಖಿಸಬೇಕು ಎಂದು ಸೂಚನೆ ನೀಡುವುದು ಸಾಧ್ಯವಿಲ್ಲ. ಆದರೆ ಪಿಐಬಿಗೆ ಸಂಬಂಧಪಟ್ಟಂತೆ ಅರ್ಜಿದಾರರು ಭಾರತ ಸರ್ಕಾರವನ್ನು ಮೋದಿ ಸರ್ಕಾರ ಎಂದು ಉಲ್ಲೇಖಿಸುವ ವಿಚಾರವಾಗಿ ತಮ್ಮ ಅಹವಾಲನ್ನು ಸಲ್ಲಿಸಲು ಸ್ವತಂತ್ರರು. ಅಂತಹ ಮನವಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ನಿರ್ಧರಿಸುತ್ತಾರೆ ಎಂದು ತಿಳಿಸಿದೆ. ಈ ಮೂಲಕ ಮಾಧ್ಯಮ ಹಾಗೂ ಪಿಐಬಿಗಳು ಸರ್ಕಾರವನ್ನು ಅವುಗಳ ನೇತೃತ್ವ ವಹಿಸಿರುವ ವ್ಯಕ್ತಿಗಳ ಹೆಸರಿನ ಮೂಲಕ ಕರೆಯುವುದನ್ನು ನಿರ್ಬಂಧಿಸುವಂತೆ ಮಾಡಿದ್ದ ಮನವಿಯನ್ನು ತಿರಸ್ಕರಿಸಿದೆ.
ಭಾರತದ ಪ್ರಜಾಪ್ರಭುತ್ವದ ನೆಲೆಯಲ್ಲಿ ಯಾವ ಸರ್ಕಾರವನ್ನೂ ಅದರ ಮುಖ್ಯಸ್ಥನ ಹೆಸರಿನಿಂದ ಉಲ್ಲೇಖಿಸುವಂತಿಲ್ಲ. ಕೇಂದ್ರ ಸರ್ಕಾರವನ್ನು ಯಾರಾದರೂ ಮೋದಿ ಸರ್ಕಾರ ಎಂದು ಕರೆಯಬಹುದೇ? ಸಂವಿಧಾನದ ಅಡಿಯಲ್ಲಿ ಅದಕ್ಕೆ ಅವಕಾಶವಿದೆಯೇ ಎಂದು ಅರ್ಜಿದಾರರು ಪ್ರಶ್ನಿಸಿದ್ದರು.