ಹಿಟಾಚಿಯಲ್ಲಿ ಹಣ ಬಗೆಯೋದು ಸಚಿವರು ನಿಲ್ಲಿಸಲಿ: ಎಚ್ಡಿಕೆ ಕಿಡಿ
ಬೆಂಗಳೂರು, ಮೇ. 20: ಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ವಿಧಾನಸಭಾ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರ, ಸಿದ್ಧಾರ್ಥ ನಗರ ಕೊಳಗೇರಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಮುಂತಾದ ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ನಂತರ ಕುಮಾರಸ್ವಾಮಿ ಸುದ್ದಿಗಾರರ ಜತೆ ಮಾತನಾಡಿದರು.
ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ, ಯಶವಂತಪುರ ಸೇರಿದಂತೆ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣವನ್ನು ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಭೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ ಕಿಡಿಕಾರಿದರು.
ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಬೆಳಗ್ಗೆ 8 ಗಂಟೆಯಿಂದ 12.30 ವರೆಗೂ ದಾಸರಹಳ್ಳಿ ಕ್ಷೇತ್ರದಲ್ಲಿ ಸಂಚಾರ ಮಾಡಿದ ಮಾಜಿ ಮುಖ್ಯಮಂತ್ರಿಗಳು, 28 ಕ್ಷೇತ್ರಗಳಿಗೆ ಎಷ್ಟು ಹಣವನ್ನು 15 ವರ್ಷಗಳಲ್ಲಿ ಬಿಡುಗಡೆ ಮಾಡಿದ್ದಾರೆ ಮಾಹಿತಿ ಪಡೆಯುತ್ತೇನೆ. ಜನರ ಬದುಕಿನ ಪ್ರಶ್ನೆ. ಇದರಲ್ಲಿ ರಾಜಕಾರಣ ನಾನು ಮಾಡ್ತಿಲ್ಲ ಎಂದು ಹೇಳಿದರು.
ಶೇ.75ರಷ್ಟು ಪರಿಹಾರ ಕೊಡಲು ಆಗ್ರಹ: ಮಳೆಯಿಂದ ನಷ್ಟ ಆಗಿರುವವರಿಗೆ ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆ ಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ನಷ್ಟ ಆಗಿರುವ ಶೇ. 75 ದರಷ್ಟು ಪರಿಹಾರ ಕೊಡಬೇಕು. ಅದರಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ನನ್ನ ಕಾಲದಲ್ಲಿ ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿಗೆ 750 ಕೋಟಿ ರೂ. ನೀಡಿದ್ದೆ. ಆಮೇಲೆ ರಾಜಕೀಯ ಮಾಡಿ ಹಣ ವಾಪಸ್ಸು ಪಡೆದರು. ನಾನು ಕೂಡ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಭೇಟಿ ಮಾಡಿದ್ದೆ. ದಾಸರಹಳ್ಳಿ ಕ್ಷೇತ್ರಕ್ಕೆ ಹಣ ಬಿಡುಗಡೆ ಮಾಡಿ ಅಂತ ಹತ್ತು ಸಾರಿ ಮನವಿ ಮಾಡಿದೆ. ನಂತರ ಶಾಸಕರು ಕೂಡ ಪ್ರತಿಭಟನೆ ಮಾಡಿದರು. ಆದರೂ ಕೂಡ ಅನುದಾನ ಬಿಡುಗಡೆ ಆಗಿಲ್ಲ ಎಂದು ಅವರು ದೂರಿದರು. ಅದೇ ರಾಜರಾಜೇಶ್ವರಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಬೇರೆ ಬೇರೆ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಹತ್ತು ವರ್ಷಗಳ ಕಾಲ ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರ ಅಂತ ಗೊತ್ತು. ಅದರ ದಾಖಲೆ ತೆಗೆಸಿ ಮಾತನಾಡುತ್ತೇನೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಚಂಬಲ್ ಕಣಿವೆ ಡಕಾಯಿತರು:
ಮುಖ್ಯಮಂತ್ರಿ ಅವರೇ ಮಂತ್ರಿಗಳ ಕ್ಷೇತ್ರಕ್ಕೆ ಹೋಗಬೇಡಿ. ಜನರು ಸಮಸ್ಯೆ ಪಡುತ್ತಿರುವ ಕ್ಷೇತ್ರಕ್ಕೆ ಹೋಗಿ. ಏಳು ಮಂದಿ ವಲಸೆ ಸಚಿವರು ಏನು ಮಾಡ್ತಿದ್ದಾರೆ. ಆ ಸಚಿವರ ಕ್ಷೇತ್ರಕ್ಕೆ ಯಾಕೆ ಹೋಗ್ತೀರಾ.1200 ಕೋಟಿ ಬಿಡುಗಡೆ ಮಾಡಿದ್ದೇನೆ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಅ ಹಣ ಏನು ಆಯಿ ? ನಗರ ಪ್ರದಕ್ಷಿಣೆ ಪೋಟೋ ಸೆಷನ್ ಆಗಬಾರದು. ನಗರ ಪ್ರದಕ್ಷಿಣೆ ಹಾಕಿದರೆ ಸಾಲದು. ಯಾವ ಕಡೆ ಸಮಸ್ಯೆ ಆಗಿದೆ ಪರಿಹಾರ ಮಾಡಿ. ಎಲ್ಲಿ ಹಣ ಪೋಲು ಆಗುತ್ತಿದೆ ಅದನ್ನು ಸರಿ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ ಹೆಚ್ ಡಿಕೆ, ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಜನರ ಜೊತೆ ಚೆಲ್ಲಾಟ ಆಡಬೇಡಿ. ಹಣ ಮಾಡುವುದಕ್ಕೆ ಬೇರೆ ದಾರಿ ಇದೆ. ಹಣ ಲೂಟಿ ಮಾಡುವುದು ನಿಲ್ಲಿಸಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಆಗ್ರಹಿಸಿದರು.
ದರೋಡೆ ಮಾಡುವವರನ್ನು ನೋಡುವುದಕ್ಕೆ ಚಂಬಲ್ ಕಣಿವೆಗೆ ಹೋಗುವುದು ಬೇಡ. ಇಲ್ಲೇ ಚಂಬಲ್ ಕಣಿವೆ ದರೋಡೆಕೋರರು ಇದ್ದಾರೆ. ಜನರ ಹಣ ಲೂಟಿ ಮಾಡಬೇಡಿ. ಲೂಟಿ ಮಾಡಿದ್ದು ಸಾಕು. ಎರಡು ಹೊತ್ತು ಊಟಕ್ಕೆ ಯಾಕೆ ಇಷ್ಟು ಮಾಡ್ತೀರಾ ಎಂದು ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.