ಶರತ್ ಗೆ ಪಕ್ಷದಿಂದ ಗೇಟ್ ಪಾಸ್: ಆರ್. ಅಶೋಕ್ ಫೈನಲ್ ವಾರ್ನಿಂಗ್
ಬೆಂಗಳೂರು, ನವೆಂಬರ್ 18: ಡಿಸೆಂಬರ್ 05 ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಶರತ್ ಬಚ್ಚೇಗೌಡರ ಮನವೊಲಿಸುವ ಕಾಲ ಮುಗಿದಿದೆ.
ಇನ್ನೇನಿದ್ರು ಪಕ್ಷದಿಂದ ಉಚ್ಛಾಟನೆ ಕಟ್ಟಿಟ್ಟ ಬುತ್ತಿ ಎಂದು ಸಚಿವ ಆರ್.ಅಶೋಕ್ ಕೊನೆಯ ಎಚ್ಚರಿಕೆ ಕೊಟ್ಟಿದ್ದಾರೆ. ಅಪ್ಪ-ಮಗನ ವಿರುದ್ಧ ಅಶೋಕ್ ಫುಲ್ ಗರಂ ಆಗಿದ್ದು ಶರತ್ ಗೆ ಫೈನಲ್ ವಾರ್ನಿಂಗ್ ಮಾಡಿದ್ದಾರೆ.
ಹೊಸಕೋಟೆಯಲ್ಲಿ ಮಾತನಾಡಿರುವ ಅಶೋಕ್, ಬಚ್ಚೇಗೌಡರನ್ನು ಪಕ್ಷಕ್ಕೆ ಕರೆತಂದನ್ನು ನಾನು. ಶರತ್ ಈಗ ಪಕ್ಷದ ವಿರುದ್ಧ ನಿಂತಿದ್ದಾರೆ. ಯಾರೇ ಆಗಲಿ ಪಕ್ಷದ ಆದೇಶಕ್ಕೆ ತಲೆಬಾಗಬೇಕು, ಶರತ್ ನಾಮಪತ್ರ ವಾಪಸ್ ಪಡೀಬೇಕು, ಪಕ್ಷಕ್ಕಾಗಿ ದುಡೀಬೇಕು. ಇಲ್ಲದಿದ್ದರೆ ಉಚ್ಛಾಟನೆ ಮಾಡಿ, ಅಜೀವ ನಿಷೇಧ ಹೇರಲಾಗುವುದು. ಮತ್ತೆ ಪ್ರವೇಶವಿರುವುದಿಲ್ಲ ಎಂದಿದ್ದಾರೆ.
ಶರತ್ ಬಚ್ಚೇಗೌಡಗೆ ಆರ್.ಅಶೋಕ್ ಎಚ್ಚರಿಕೆ
ಹೊಸಕೊಟೆ ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಣಕ್ಕಿಳಿದಿದ್ದಾರೆ. ಇಂದು ಅವರು ಭರ್ಜರಿ ಮೆರವಣಿಗೆ ಮೂಲಕ ಶಕ್ತಿ ಪ್ರದರ್ಶನ ಮಾಡಿ ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಅವರಿಗೆ ಸಚಿವ ಆರ್.ಅಶೋಕ್, ಕೋಲಾರ ಸಂಸದ ಮುನಿಸ್ವಾಮಿ ಸಾಥ್ ನೀಡಲಿದ್ದಾರೆ.
ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಇಲ್ಲ: ಶರತ್
ಈ ಮುಂಚೆ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಮಾತನಾಡಿ, ಯಾವುದೇ ಕಾರಣಕ್ಕೂ ನಾನು ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ನಾನು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದೆ, ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಆದ್ದರಿಂದ ನಾನು ಸ್ವಾಭಿಮಾನಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು.
ಬಂಡಾಯವೆದ್ದ ಶರತ್ ಬಚ್ಚೇಗೌಡ ಉಚ್ಚಾಟನೆಗೆ ಬಿಜೆಪಿ ಸಜ್ಜು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನಸ್ಸಿನಲ್ಲಿ ನಾನು ನೀಲಿಗಣ್ಣಿನ ಹುಡುಗ ಅಂದುಕೊಂಡಿದ್ದೆ, ನನ್ನ ಮೇಲೆ ಅವರಿಗೆ ಪ್ರೀತಿ ಇದೆ. ಅದರೆ ಕೆಲವು ರಾಜಕೀಯ ವಿರೋಧಿಗಳ ಪಿತೂರಿಯಿಂದಾಗಿ ಅವರು ನನ್ನ ಮೇಲೆ ಕಿಡಿಕಾರಿದ್ದಾರೆ ಎಂದರು.
ನಾನು ಈಗಾಗಲೇ ನಾಮಪತ್ರ ಸಲ್ಲಿಸಿದ್ದೇನೆ, ಹೊಸಕೋಟೆಯ ಜನರು ಈ ಬಾರಿ ನನಗೆ ಆಶೀರ್ವದಿಸಲಿದ್ದಾರೆ. ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಉಪ ಚುನಾವಣೆ ಎದುರಿಸುತ್ತೇನೆ. ಎಂದು ತಿಳಿಸಿದ್ದಾರೆ.