ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಾತಂತ್ರ್ಯ ಹೋರಾಟಗಾರ ಪಂಡಿತ್ ಸುಧಾಕರ ಚತುರ್ವೇದಿ ಇನ್ನಿಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಸಮೀಪದಿಂದ ಕಂಡಿದ್ದ ಸ್ವಾತಂತ್ರ್ಯ ಹೋರಾಟಗಾರ, ನಾಲ್ಕೂ ವೇದಗಳ ಪಾರಂಗತ, ಶತಾಯುಷಿ ಸುಧಾಕರ ಚತುರ್ವೇದಿ (124) ಗುರುವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.

1897ರ ಏಪ್ರಿಲ್ 20ರಂದು ಬೆಂಗಳೂರಿನ ಬಳೇಪೇಟೆಯಲ್ಲಿ ಜನಿಸಿದ್ದ ಅವರು 11ನೇ ವಯಸ್ಸಿನಲ್ಲಿಯೇ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲದಲ್ಲಿ ಸೇರಿಕೊಂಡು ನಾಲ್ಕೂ ವೇದಗಳನ್ನು ಅಧ್ಯಯನ ಮಾಡಿದ್ದರು. ವೇದಗಳ ಕುರಿತು ಅನೇಕ ಲೇಖನಗಳನ್ನು ಬರೆದಿರುವ ಅವರು, ನಾಲ್ಕೂ ವೇದಗಳಿಗೆ ಭಾಷ್ಯ ಬರೆಯುವ ಮೂಲಕ ಚತುರ್ವೇದಿ ಎಂಬ ವಿಶೇಷಣ ಪಡೆದುಕೊಂಡಿದ್ದರು.

ಇಡೀ ಭಾರತವನ್ನೇ ನಡುಗಿಸಿದ ಆ ಘೋರ ದುರಂತಕ್ಕೆ ಇಂದಿಗೆ ನೂರು ವರ್ಷಇಡೀ ಭಾರತವನ್ನೇ ನಡುಗಿಸಿದ ಆ ಘೋರ ದುರಂತಕ್ಕೆ ಇಂದಿಗೆ ನೂರು ವರ್ಷ

ಸುಧಾಕರ್ ಅವರ ತಂದೆ ತುಮಕೂರಿನ ಕ್ಯಾತಸಂದ್ರ ಮೂಲದವರು. ತಂದೆ ಟಿ.ವಿ. ಕೃಷ್ಣರಾವ್ ಶಿಕ್ಷಣ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್ ಆಗಿದ್ದರು. ಅವರ ತಾಯಿ ಲಕ್ಷ್ಮಮ್ಮ. 1915ರಲ್ಲಿ ಹರಿದ್ವಾರದ ಗುರುಕುಲಕ್ಕೆ ಸೇರಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ಅಲ್ಲಿಯೇ ಅವರಿಗೆ ಗಾಂಧೀಜಿ ಅವರ ಪರಿಚಯವಾಗಿತ್ತು.

Freedom Fighter Sudhakar Chaturvedi Passed Away At 124

ಲಾಹೋರ್‌ನಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಇವರ ವಿದ್ಯಾರ್ಥಿಯಾಗಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಸುಧಾಕರ ಚತುರ್ವೇದಿ ಅವರು, ಗಾಂಧೀಜಿ ಹಾಗೂ ಅನೇಕ ಹೋರಾಟಗಾರರ ಒಡನಾಡಿಯಾಗಿದ್ದರು. 13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು.

1919ರ ಏಪ್ರಿಲ್ 13ರಂದು ಪಂಜಾಬ್‌ನ ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಶಾಂತಿಯುತ ಪ್ರತಿಭಟನೆಗೆ ಸೇರಿದ್ದ ಜನರ ಮೇಲೆ ಕರ್ನಲ್ ರಿಜಿನಾಲ್ಡ್ ಡಯರ್ ಗುಂಡು ಹಾರಿಸಲು ಆದೇಶ ನೀಡಿದ್ದ. ಆಗ ಸಾವಿರಾರು ಜನರು ಜೀವ ಕಳೆದುಕೊಂಡಿದ್ದರು. ಅದೇ ಸ್ಥಳದಲ್ಲಿದ್ದ ಸುಧಾಕರ ಚತುರ್ವೇದಿ ಅವರು ಚರಂಡಿಯಲ್ಲಿ ಅಡಗಿಕುಳಿತು ಜೀವ ಉಳಿಸಿಕೊಂಡಿದ್ದರು. ಬಳಿಕ ಹತ್ಯಾಕಾಂಡದಲ್ಲಿ ಬಲಿಯಾದವರನ್ನು ಮಹಾತ್ಮ ಗಾಂಧಿ ಅವರ ಸೂಚನೆಯಂತೆ ನದಿ ತೀರದಲ್ಲಿ ಅಂತ್ಯಸಂಸ್ಕಾರ ಮಾಡಿದ್ದರು.

ಕನ್ನಡ, ಸಂಸ್ಕೃತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು 50 ಕೃತಿಗಳನ್ನು ರಚಿಸಿದ್ದಾರೆ. ಹಾಗೆಯೇ ಅವರ ನಾಲ್ಕು ವೇದಗಳ ಬರಹ 20 ಬೃಹತ್ ಸಂಪುಟಗಳಲ್ಲಿ ಪ್ರಕಟಗೊಂಡಿವೆ. ರಾಜ್ಯದ ವಿವಿಧೆಡೆ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಆರ್ಯಮಿತ್ರ, ಸುಧಾಕರ ಚತುರ್ವೇದಿ ಅವರ ದತ್ತುಪುತ್ರರಾಗಿದ್ದಾರೆ.

ಜಯನಗರದ ಕೃಷ್ಣಸೇವಾಶ್ರಮದ ಎದುರು ಮೊಮ್ಮಕ್ಕಳ ಜತೆ ವಾಸವಾಗಿದ್ದರು. ಅವರ ಪಾರ್ಥಿವ ಶರೀರ ವೀಕ್ಷಣೆಗೆ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, 4 ಗಂಟೆಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

English summary
Freedom fighter, Vedic scholar Sudhakar Chaturvedi (124) has passed Away on Thursday morning in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X