ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುತೂಹಲ ಮೂಡಿಸಿದ ಡಿ.ಕೆ.ಶಿವಕುಮಾರ್-ಎಂ.ಬಿ. ಪಾಟೀಲ್ ಭೇಟಿ

|
Google Oneindia Kannada News

ಬೆಂಗಳೂರು, ಮಾ. 02: ಉಪ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತಿವೆ. ಹಾಗೆಯೇ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಮೂರು ವಿಧಾನಸಭೆ ಹಾಗೂ ಒಂದು ಲೋಕಸಭೆ ಉಪ ಚುನಾವಣೆಗೆ ಕಾಂಗ್ರೆಸ್ ನಾಯಕರು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳನ್ನು ಗುರುತಿಸಲಾಗಿದೆ ಎಂಬ ಮಾಹಿತಿಯಿದೆ. ಆದರೆ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಹೈಕಮಾಂಡ್ ಅಂತಿಮಗೊಳಿಸಬೇಕಿದೆ. ಹೀಗಾಗಿ ಆಕಾಂಕ್ಷಿಗಳು ತಮ್ಮ ಪ್ರಯತ್ನವನ್ನು ಮುಂದುವರೆಸಿದ್ದಾರೆ.

ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆಯಾಗುವ ಮೊದಲು, ಎಂ.ಬಿ. ಪಾಟೀಲ್ ಅವರು ಡಿಕೆಶಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಅಚ್ಚರಿಯ ಅಭ್ಯರ್ಥಿ ಆಯ್ಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಅದಕ್ಕೆ ಕಾರಣವಾಗಿರುವುದು ಜೆಡಿಎಸ್ ನಿರ್ಧಾರ!

Recommended Video

ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟ ವಿಚಾರ-ಡಿಕೆಶಿ -ಸಿದ್ದು ಜೊತೆ ಮಧು ಯಕ್ಷಿ ಗೌಡ ಪ್ರತ್ಯೇಕ ಸಮಾಲೋಚನೆ | Oneindia Kannada
ಜೆಡಿಎಸ್‌ನಿಂದ ಅಚ್ಚರಿಯ ಪ್ರಕಟಣೆ

ಜೆಡಿಎಸ್‌ನಿಂದ ಅಚ್ಚರಿಯ ಪ್ರಕಟಣೆ

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್ ಗೆದ್ದುಕೊಂಡಿತ್ತು. ಆದರೆ ಜೆಡಿಎಸ್ ಹಿರಿಯ ನಾಯಕ ಎಂ.ಸಿ. ಮನಗೂಳಿ ಅವರ ಅಕಾಲಿಕ ನಿಧನದಿಂದ ಕ್ಷೇತ್ರ ತೆರವಾಗಿದೆ. ಇದೀಗ ಉಪ ಚುನಾವಣೆ ನಡೆಯಬೇಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಉಪ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ಬಗ್ಗೆ ಹೇಳಿಕೆ ಕೊಟ್ಟಿರುವ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದಿದ್ದಾರೆ. ಸಿಂದಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಇದ್ದರೂ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರುವುದು ತೀವ್ರ ಕುತೂಹಲ ಮೂಡಿಸಿದೆ. ಹೀಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಯಿದೆ.

ಬಾಯಕ್ಕ ಮೇಟಿ ಅವರಿಂದ ಬೇಡಿಕೆ

ಬಾಯಕ್ಕ ಮೇಟಿ ಅವರಿಂದ ಬೇಡಿಕೆ

ಇದೇ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಿಂದಗಿ ಕ್ಷೇತ್ರದ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ. ಮಾಜಿ ಸಚಿವ ಎಚ್‌.ವೈ. ಮೇಟಿ ಅವರು ಪುತ್ರಿ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಸಿಂದಗಿ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದಾರೆ.

ಭೇಟಿಯ ಬಳಿಕ ಮಾತನಾಡಿದ ಬಾಯಕ್ಕ ಮೇಟಿ ಅವರು, ನಾನು ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೇಳಿದ್ದೇನೆ. ಸ್ಪರ್ಧೆಗೆ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಒತ್ತಾಯವೂ ಇದೆ. ಬಾಗಲಕೋಟೆ ಹಾಗೂ ವಿಜಯಪುರ ಅವಳಿ ಜಿಲ್ಲೆಗಳು. ಆ ಕ್ಷೇತ್ರದ ಜನರ ಜೊತೆ ಮೊದಲಿನಿಂದಲೂ ಒಡನಾಟ ಇದೆ. ಸಾಕಷ್ಟು ಸಂಬಂಧಿಕರೂ ಹಾಗೂ ಬೆಂಬಲಿಗರು ಕ್ಷೇತ್ರದಲ್ಲಿದ್ದಾರೆ. ಹಿಂದುಳಿದ ವರ್ಗದ ಮಹಿಳೆಗೆ ಅವಕಾಶ ಸಿಗಬೇಕು. ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಎಂ.ಬಿ.ಪಾಟೀಲ್ ಅವರಲ್ಲಿಯೂ ಮನವಿ ಮಾಡಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸಿಂದಗಿಯಿಂದ ಸ್ಪರ್ಧಿಸಲು ನಾನು ಸಿದ್ಧ ಎಂದಿದ್ದಾರೆ.

ಬಾಯಕ್ಕ ಮೇಟಿ ಹೊರಗಿನ ಜಿಲ್ಲೆಯವರು

ಬಾಯಕ್ಕ ಮೇಟಿ ಹೊರಗಿನ ಜಿಲ್ಲೆಯವರು

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆಶಿ ಭೇಟಿ ಬಳಿಕ ಪ್ರತಿಕ್ರಿಯೆ ಕೊಟ್ಟಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು, ಉಪ ಚುನಾವಣೆ ಅಭ್ಯರ್ಥಿ ಕುರಿತು ಚರ್ಚಿಸಿದ್ದೇನೆ. ಸಿಂದಗಿ ಕ್ಷೇತ್ರಕ್ಕೆ ಮೂವರು ಅಭ್ಯರ್ಥಿಗಳ ಹೆಸರುಗಳನ್ನು ಅಧ್ಯಕ್ಷರಿಗೆ ಕೊಡಲಾಗಿದೆ. ಬೆಳಗಾವಿ ಲೋಕಸಭಾ ಚುನಾವಣೆಗೂ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇವೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ.

ಬಾಗಲಕೋಟೆ ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಅವರು ಕೂಡ ಸಿಂದಗಿ ಕ್ಷೇತ್ರದ ಟಿಕೆಟ್ ಕೇಳಿದ್ದಾರೆ. ಆದರೆ ಬಾಯಕ್ಕ ಮೇಟಿ ಅವರು ಹೊರಗಿನ‌ ಜಿಲ್ಲೆಯವರು ಎಂದಷ್ಟೆ ಪಾಟೀಲ್ ಹೇಳಿದ್ದಾರೆ.

ಆಕಾಂಕ್ಷಿಗಳ ಪಟ್ಟಿ ಕೊಟ್ಟ ಎಂಬಿಪಿ

ಆಕಾಂಕ್ಷಿಗಳ ಪಟ್ಟಿ ಕೊಟ್ಟ ಎಂಬಿಪಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಆಕಾಂಕ್ಷಿಗಳ ಪಟ್ಟಿಯನ್ನು ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಸಿದ್ದರಾಮಯ್ಯ ಅವರು ಸೂಚಿಸಿರುವ ಅಭ್ಯರ್ಥಿಗಳ ಹೆಸರುಗಳನ್ನು ಕೂಡ ಡಿಕೆ ಶಿವಕುಮಾರ್ ಅವರಿಗೆ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಇದೀಗ ಮೂರು ವಿಧಾನಸಭೆ ಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳು ಯಾರಾಗ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಜೊತೆಗೆ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಲ್ಲಿಯೂ ಪೈಪೋಟಿ ಶುರುವಾಗಿದೆ ಎಂದು ತಿಳಿದು ಬಂದಿದೆ.

English summary
In the wake of the by-election, there are significant developments in the Congress party. The number of aspirants for Congress tickets is also increasing. Former minister M.B. Patil met KPCC president DK Sivakumar and held discussions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X