• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉರ್ದು ಎಂದರೆ ಒಪ್ಪಿಗೆ, ಹಿಂದಿ ಎಂದರೆ ವಿರೋಧ ಎನ್ನುವುದು ಮೂರ್ಖತನ: ರಕ್ಷಿತ್ ಬರಹ

By ರಕ್ಷಿತ್ ಎಸ್. ಪೊನ್ನತ್ಪುರ್
|

ರಾಜ್ಯದಲ್ಲಿ ಕನ್ನಡದ ಮೇಲೆ ನಡೆಯುತ್ತಿರುವ ಪ್ರಹಾರ ಮತ್ತು ಹಿಂದಿ ಹೇರಿಕೆಯ ವಿರುದ್ಧ ಮತ್ತೊಮ್ಮೆ ಒಕ್ಕೊರೊಲ ಧ್ವನಿ ಕೇಳಿಬಂದಿದೆ. ಹಿಂದಿ ಬ್ಯಾನರ್ ತೆರವುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್, ಕನ್ನಡ ಪ್ರೇಮಿಗಳನ್ನು ಕೆರಳಿಸಿದೆ. ಅಲ್ಲದೆ, ಈ ಘಟನೆಗೆ ಕೋಮು ಬಣ್ಣ ಕಟ್ಟುವ ಪ್ರಯತ್ನ ನಡೆಸಿದ್ದಾರೆ ಎಂದೂ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹಿಂದಿ ಭಾಷೆ ವಿರುದ್ಧ ಹೋರಾಟ ಮಾಡುವವರು ಉರ್ದು ಬಳಕೆ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಕೆಲವರು ಛೇಡಿಸುತ್ತಿದ್ದಾರೆ. ಈ ಮೂಲಕ ಕನ್ನಡ ಭಾಷೆಯ ಕುರಿತಾದ ಹೋರಾಟವನ್ನು ಧರ್ಮಗಳ ಬಣ್ಣ ಕೊಟ್ಟು ವಿಭಜಿಸುವ ಪ್ರಯತ್ನಗಳು ನಡೆಯುತ್ತಿವೆ.

ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪಬ್ಲಿಕ್ ಪಾಲಿಸಿ ವಿದ್ಯಾರ್ಥಿಯಾಗಿರುವ ರಕ್ಷಿತ್ ಎಸ್. ಪೊನ್ನತ್ಪುರ್ ಅವರು ಫೇಸ್‌ಬುಕ್‌ನಲ್ಲಿ ಬೆಂಗಳೂರಿನ ವಲಸಿಗರು ಮತ್ತು ಬಡಾವಣೆಗಳಲ್ಲಿನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಗತಿಗಳು ಹಾಗೂ ಸ್ಥಳೀಯ ಭಾಷೆಯೊಂದಿಗಿನ ಅವರ ಮುಖಾಮುಖಿಯ ಕುರಿತು ಬರೆದಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ಪ್ರಕಟವಾಗಿರುವುದು ಅವರ ವೈಯಕ್ತಿಕ ಅಭಿಪ್ರಾಯ

ಹಿಂದಿ ಬ್ಯಾನರ್ ವಿವಾದ, #ReleaseKannadaActivists ಟ್ರೆಂಡಿಂಗ್

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿಗೆ ವಲಸೆ ಬಂದಿರುವ ಜೈನರು-ಮಾರ್ವಾಡಿಗಳ ಜೊತೆಗೆ ಇಲ್ಲಿನ ದೀರ್ಘಕಾಲದ ಸ್ಥಳೀಯರಾದ ಮುಸಲ್ಮಾನರನ್ನು ಹಾಗೂ ಅವರ ಕೆಲ ಬಡಾವಣೆಗಳನ್ನು ಹೋಲಿಸುವುದೇ ಸರಿಯಲ್ಲ ಹಾಗೂ ಅದು ದುರುದ್ದೇಶದಿಂದ ಕೂಡಿರುವಂತದ್ದು!

ಸದಾ ಕೈ ಮಾಡಿ ತೋರಿಸಲಾಗುವ ಮುಸಲ್ಮಾನ ಬಡಾವಣೆಗಳು ಆ ಸ್ವರೂಪ ಪಡೆಯಲು ಕಾರಣ ಕೆಂಪೇಗೌಡನ ಕಾಲದಿಂದ ಬ್ರಿಟೀಷರ ಕಾಲದವರೆಗೂ ಜಾರಿಯಲ್ಲಿದ್ದ ಜಾತಿ-ಮತ ಕೇಂದ್ರಿತ ಬಡಾವಣೆಗಳ ಪಾಲಿಸಿ. ಈಗಲೂ ಅವು ಬಡ ಹಾಗೂ ಕೆಳ ಮಧ್ಯಮ ವರ್ಗದ ಮುಸಲ್ಮಾನರ ಬಡಾವಣೆಗಳಾಗಿ ಮುಂದುವರೆದಿವೆ. ಇವರಿಗೆ ಬೇರೆಡೆ ಸಲೀಸಾಗಿ‌ ಮನೆ ಖರೀದಿಸಲು ಅಥವಾ ಬಾಡಿಗೆಗೆ ಪಡೆಯಲು ಆಗದಿರುವುದರಿಂದ ಅವರ ಬಡಾವಣೆಗಳಲ್ಲೇ ಮುಂದುವರೆಯುವ ಅನಿವಾರ್ಯತೆಯೂ ಇದೆ!

ಈ ಬಡಾವಣೆಗಳು ಹಿಂದಿನಿಂದಲೂ ಪೇಟೆ ಬೆಂಗಳೂರಿನ ಮುಖ್ಯವಾಹಿನಿಯಿಂದ ಹೊರಗಡೆ ಉಳಿದಿವೆ. ಈ ಬಡಾವಣೆಗಳಲ್ಲಿ ಬಹುತೇಕ ಮುಸಲ್ಮಾನರೇ ಇರುವುದರಿಂದ ಅವರ ಪ್ರಮುಖ ಭಾಷೆಯಾದ ಉರ್ದು ಹಿಂದಿನಿಂದಲೂ ಕಾಣಿಸಿಕೊಂಡು ಬಂದಿದೆ. ಇತ್ತೀಚಿನ ಸರ್ಕಾರಿ ನಿಯಮಾವಳಿ‌ಗಳ ಪ್ರಕಾರ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನ ಇಲ್ಲಿನ ಬಹುತೇಕ ನಾಮಫಲಕಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತದೆ.

ಕನ್ನಡ ಅಭಿಮಾನಿಗಳಲ್ಲಿ ಕಿಡಿ ಹಚ್ಚಿಸಿದ ತೇಜಸ್ವಿ ಸೂರ್ಯ ಟ್ವೀಟ್

ಈ ಬಡಾವಣೆಗಳ ಮುಸಲ್ಮಾನರು ಆರ್ಥಿಕವಾಗಿ ದುರ್ಬಲರು. ಅವರು ಈ ಬಡಾವಣೆಗಳಲ್ಲಿರುವುದು ಐತಿಹಾಸಿಕ ಕಾರಣಗಳಿಂದ, ಅನಿವಾರ್ಯತೆಗೆ ಹಾಗೂ ಸಾಮಾಜಿಕ ಸುರಕ್ಷತೆಗೆ ಹೊರತು ಯಾವುದೇ ರೀತಿಯ ಪ್ರಾಬಲ್ಯವನ್ನು ಸ್ಥಾಪಿಸುವುದಕ್ಕಲ್ಲ. ತಮ್ಮ ಆರ್ಥಿಕ ಪ್ರಾಬಲ್ಯದಿಂದ ಬೇರೆಯವರ ಹತ್ತಿರ ಇದ್ದ ನೆಲವನ್ನು ಖರೀದಿಸಿ ಈ ಬಡಾವಣೆಗಳನ್ನು ನಿರ್ಮಿಸಿಕೊಂಡಿಲ್ಲ.

ತಮ್ಮ ಬಡಾವಣೆಯಲ್ಲೇ ಬಹುತೇಕ ಜೀವನ ಕಳೆಯುವವರು ಕನ್ನಡವನ್ನು ಕಲಿಯದೇ ಇರಬಹುದು. ಆದರೆ ಊರ‌ ಜೊತೆ ಒಡನಾಟವಿರುವ ಬಹುತೇಕ ಮುಸಲ್ಮಾನರು ಮಾತನಾಡುವಷ್ಟಾದರೂ ಕಲಿತಿದ್ದಾರೆ. ಕನ್ನಡ ಬರದಿದ್ದರೂ ತಮ್ಮ ಭಾಷೆಯಲ್ಲೇ ಮಾತನಾಡಬೇಕೆಂದು ಯಾರನ್ನೂ ತಾಕೀತು ಮಾಡೋಲ್ಲ. ಊರಲ್ಲಿ ತಮ್ಮ ಭಾಷೆಯ‌ ಪ್ರಾಬಲ್ಯತೆಯನ್ನು ಸೃಷ್ಟಿಸುವ ಯೋಜನೆ ಅವರಿಗಿಲ್ಲ.

ಆದರೆ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಜೈನ-ಮಾರ್ವಾಡಿ ವಲಸಿಗರ ಕಥೆಯೇ ಬೇರೆ. ಅವರಿಗೆ ತಮ್ಮದೇ ಬಡಾವಣೆಗಳನ್ನು ಕಟ್ಟಿಕೊಳ್ಳುವ ಯಾವುದೇ ಅನಿವಾರ್ಯತೆ ಇಲ್ಲ. ಆದರೆ ಬೇರೆಯವರ ನೆಲವನ್ನು ಖರೀದಿಸಿ ತಮಗೆಂದೇ ಪುಟ್ಟ ಐಷಾರಾಮಿ ಬಡಾವಣೆಗಳನ್ನು ಕಟ್ಟಿಕೊಳ್ಳುವ ಎಲ್ಲ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಶಕ್ತಿಯೂ ಅವರಿಗಿದೆ. ಊರಿನ ಹಲವೆಡೆ ಅವರು ಇದನ್ನು ಮಾಡುತ್ತಿದ್ದಾರೆ ಕೂಡ.

ಹಿಂದಿ ಬ್ಯಾನರ್, ಕನ್ನಡಿಗರ ಬಂಧನ; ಏನಿದು ವಿವಾದ?

ಮುಸಲ್ಮಾನ ಬಡಾವಣೆಗಳು ಹಿಂದಿನಿಂದಲೂ ಪೇಟೆ ಬೆಂಗಳೂರಿನ ಮುಖ್ಯವಾಹಿನಿಯಿಂದ ಹೊರಗುಳಿದಿವೆ. ಆದರೆ ಇಂದು ಜೈನರು, ಮಾರ್ವಾಡಿಗಳು ಪ್ರಾಬಲ್ಯತೆ ಸ್ಥಾಪಿಸುತ್ತಿರುವ ಬಡಾವಣೆಗಳು ಊರಿನ ಮುಖ್ಯವಾಹಿನಿಯೊಳಗಿರುವ ಬಡಾವಣೆಗಳು. ಹಾಗಾಗಿ ಈ ಬಡಾವಣೆಗಳ ಗುರುತು ವ್ಯವಸ್ಥಿತವಾಗಿ ಬದಲಾಗುತ್ತಿರುವಾಗ ಅದನ್ನು ಜನರು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಾರೆ.

ಇದನ್ನು 'ಉರ್ದು ಎಂದರೆ ಒಪ್ಪಿಗೆ, ಹಿಂದಿ ಎಂದರೆ ವಿರೋಧ' ಎಂದು ತಿಳಿಯುವುದು ಶುದ್ಧ ಮೂರ್ಖತನ‌. ಆದರೆ ಅದನ್ನು ಹೀಗೆ ಬಿಂಬಿಸುವುದರಿಂದ ಬಿಜೆಪಿಗೆ ಲಾಭವಾದ್ದರಿಂದ ಬಿಜೆಪಿ ಇದನ್ನು ಹಾಗೆಯೇ ಬಿಂಬಿಸಲಿದೆ. ಇದನ್ನು ಹಿಂದೂ-ಮುಸ್ಲಿಂ ವಿಷಯ ಮಾಡುವುದರಿಂದ ಅದರ ಸ್ವಂತ ಮತದಾರರು ತೆಪ್ಪಗೆ ಹಳಿಗೆ ಬರುತ್ತಾರೆ, ಹೊಸ ವಲಸಿಗರ ಮತಗಳು ಕೂಡ ಒಲಿಯುತ್ತವೆ. Win-win!

ಊರಿನ ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವ ಜವಾಬ್ದಾರಿ ಸ್ಥಳೀಯರ ಹಾಗೂ ವಲಸಿಗರಿಬ್ಬರ ಮೇಲೂ ಇದೆ. ನಡೆದ ಒಂದು ಬ್ಯಾನರ್ ಹರಿದ ಘಟನೆಯನ್ನು ಇತ್ಯರ್ಥ ಮಾಡಿಕೊಳ್ಳುವ ಬದಲು ಅದನ್ನು ಒಂದು ದೊಡ್ಡ ರಾಜಕೀಯ ವಿಷಯವನ್ನಾಗಿ ಮಾಡಿ ತಮ್ಮ ರಾಜಕೀಯ ಕಪಿಮುಷ್ಠಿಯನ್ನು ಸ್ಥಳೀಯರಿಗೆ ಒಬ್ಬ ಸ್ಥಳೀಯ ರಾಜಕಾರಣಿಯ ಮೂಲಕವೇ ತೋರಿಸುವ ಮಟ್ಟಕ್ಕೆ ಹೋಗಿದ್ದಾರೆಂದರೆ ಇದು ಅವರ ರಾಜಕೀಯ ಶಕ್ತಿ ಪ್ರದರ್ಶನವಷ್ಟೆ!

ಸ್ಥಳೀಯರ ಉದ್ದೇಶ ಭಾಷೆ ಹೇರಿಕೆಯ ವಿರುದ್ಧ ಪ್ರತಿಭಟಿಸುವುದಷ್ಟೇ ಆಗಿದ್ದರೂ ಆ ಸನ್ನಿವೇಶದಲ್ಲಿ ಪ್ರಸ್ತುತವಾದ ಬೇರೆಲ್ಲ ಆಯಾಮಗಳ ಕುರಿತು ಒಂದು ಸಲ ಯೋಚಿಸಿ, ಆನಂತರ ಮುಂದಿನ ಹೆಜ್ಜೆಯನ್ನು ಇಡುವುದು ಒಳ್ಳೆಯದು‌. ಇಲ್ಲದಿದ್ದರೆ ಇಂದು ಆದಂತೆ ಅದಕ್ಕೆ ಬೇರೆಯವರು ಬೇರೆ ಆಯಾಮ ಕೊಡಲು‌ ನಾವೇ ಆಸ್ಪದ ಕೊಟ್ಟಂತಾಗುತ್ತದೆ. ಸಂಯಮ ಹಾಗೂ ಎಚ್ಚರವಿರಲಿ!

ಕನ್ನಡ ಕಾರ್ಯಕರ್ತರ ಬಂಧನ : ಜೈನರು ಕೊಟ್ಟ ದೂರಿನಲ್ಲಿ ಏನಿದೆ?

ಬೆಂಗಳೂರು ಎಂದಿಗೂ ಎಲ್ಲ ಭಾಷೆ, ಧರ್ಮ, ಸಂಸ್ಕೃತಿಗಳ ನೆಲೆಬೀಡಾಗಿಯೇ ಇರುವುದು. ಇಲ್ಲಿನ ಮುಖ್ಯವಾಹಿನಿ ಈ ಎಲ್ಲವನ್ನೂ ಒಳಗೊಂಡ ಕನ್ನಡ ಕೇಂದ್ರಿತ ಸಂಸ್ಕೃತಿಯಾಗಿದೆ. ಆ ಮುಖ್ಯವಾಹಿನಿಯನ್ನು ಗೌರವಿಸಿದರೆ, ಅದನ್ನು ತಮ್ಮ ಆರ್ಥಿಕ ಬಲದಿಂದ ವ್ಯವಸ್ಥಿತವಾಗಿ ಬದಲಿಸಲು ಯತ್ನಿಸದಿದ್ದರೆ, ಯಾರೇ ಆಗಿರಲಿ, ಅವರನ್ನು ನಾವು ನಮ್ಮ ಸೋದರರಂತೆಯೇ ಕಾಣುವುದು.

ಯಾವ ಧರ್ಮ, ಭಾಷೆ, ಜನಾಂಗದವರ ವಿರುದ್ಧವೂ ನಾವು ತಿರುಗಬಾರದು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ನಮ್ಮ ಗಮನವೇನಿದ್ದರೂ ನಮ್ಮ ಮುಖ್ಯವಾಹಿನಿಯ ಸಂಸ್ಕೃತಿಯನ್ನು ಯಾರೂ ವ್ಯವಸ್ಥಿತವಾಗಿ ಬದಲಿಸದಂತೆ ಎಲ್ಲ ಸಾಂವಿಧಾನಿಕ, ಮಾನವೀಯ ವಿಧಾನಗಳಲ್ಲಿ ಏರ್ಪಾಟನ್ನು ಮಾಡಿಕೊಳ್ಳುವುದರ ಮೇಲಿರಬೇಕಷ್ಟೆ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Student of National law college, Rakshith S Ponnathpur wrote about fight over Kannada in Bengaluru and religious perceptions around it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more