ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ನಡುವೆ ಬ್ಲೇಡ್ ವಾರ್
ಬೆಂಗಳೂರು, ಫೆಬ್ರವರಿ 26: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ಬಿಗ್ ಫೈಟ್ ನಡೆದಿದೆ. ವಿಚಾರಣಾಧೀನ ಕೈದಿಯೊಬ್ಬರಿಗೆ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಮರ ಅಲಿಯಾಸ್ ಪೆಪ್ಸಿ ಎಂಬ ವಿಚಾರಣಾಧೀನ ಕೈದಿ ಗಾಯಗೊಂಡಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿದ ಸಯ್ಯದ್ ನಯಾಜ್ ಅಜ್ಮತ್,ಉಲ್ಲಾ ಸಯ್ಯದ್ ಸಮೀರ್, ರಿಯಾಜ್ ಇಮ್ರಾನ್ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪರಪ್ಪನ ಅಗ್ರಹಾರ ಕಾರಾಗೃಹ ಮುಖ್ಯ ಅಧೀಕ್ಷಕ ಶೇಷುಮೂರ್ತಿ ನೀಡಿದ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಚಾರಣಾಧೀನ ಕೊಠಡಿಗೆ ಬಂದ ಅಮರನಾಥ್ ಅಲಿಯಾಸ್ ಅಮರ್ ಎಂಬಾತನ ಜತೆ ಸಯ್ಯದ್ ಮತ್ತು ಸಹಚರರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದಾರೆ. ಜೈಲಿನಲ್ಲಿ ಸಯ್ಯದ್ ನ ಗುಂಡಾಗಿರಿ ಬಗ್ಗೆ ಅಮರನಾಥ್ ತಿರುಗಿ ಬಿದ್ದಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಈವೇಳೆ ಸಯ್ಯದ್ ಸಹಚರರು ಏಕಾಏಕಿ ಅಮರನಾಥ್ ಕೆನ್ನೆ ಮೇಲೆ ಹಲ್ಲೆ ನಡೆಸಿದ್ದು, ಬ್ಲೇಡ್ ನಿಂದ ರಕ್ತ ಬರುವ ರೀತಿ ಹಲ್ಲೆ ಮಾಡಿದ್ದಾರೆ. ಕೂಡಲೇ ಜೈಲು ಸಿಬ್ಬಂದಿ ಎಲ್ಲರನ್ನು ವಶಕ್ಕೆ ಪಡೆದು ಅನಾಹುತ ತಪ್ಪಿಸಿದೆ. ಗಾಯಾಳು ಅಮರನಾಥ್ ಗೆ ಜೈಲು ಆಸ್ಪತ್ರೆಯಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಸದಾ ಒಂದಲ್ಲಾ ಒಂದಿಷ್ಟು ಅಕ್ರಮಗಳಿಗೆ ಸುದ್ದಿಯಾಗುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇತ್ತೀಚೆಗೆ ಗಾಂಜಾ ಹಾಗೂ ಮೊಬೈಲ್ ಗಳು ಸಿಕ್ಕಿದ್ದವು. ಇದಾದ ಬಳಿಕ ಅಲ್ಲಿ ಕೈದಿಗಳ ಬಳಿ ಅಧಿಕಾರಿಗಳ ಲಂಚ ಸ್ವೀಕಾರ, ಕೈದಿಗಳ ವಿಲಾಸಿ ಜೀವನದ ಬಗ್ಗೆ ಖಾಸಗಿ ವಾಹಿನಿ ಸುದ್ದಿ ಬಿತ್ತರಿಸಿತ್ತು. ಇಡೀ ಜೈಲು ಅಕ್ರಮಗಳಿಗೆ ಕಡಿವಾಣ ಹಾಕುವುದಾಗಿ ಖುದ್ದು ಗೃಹ ಸಚಿವರೇ ಹೇಳಿಕೆ ನೀಡಿದ್ದರು. ಆದರೆ, ಜೈಲಿನಲ್ಲಿ ಇದೀಗ ಎರಡು ಬಣಗಳ ನಡುವೆ ಹೊಡೆದಾಟ ನಡೆದಿದೆ.