ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫೇಸ್ ಬುಕ್ ಈಗ ಕನ್ನಡ ಭಾಷೆಯಲ್ಲಿ ಲೋಕಾರ್ಪಣೆ

By * ವಿಕಾಸ್ ಹೆಗಡೆ, ಬೆಂಗಳೂರು
|
Google Oneindia Kannada News

ಫೇಸ್ ಬುಕ್ ಬಳಕೆದಾರರಿಗೊಂದು ಸಿಹಿ ಸುದ್ದಿ. ಫೇಸ್ ಬುಕ್ ಕನ್ನಡದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಇಷ್ಟು ದಿನ ಕೇವಲ ಅನುವಾದಕರಿಗೆ ಮಾತ್ರ ಲಭ್ಯವಿದ್ದ ಕನ್ನಡ ಫೇಸ್ ಬುಕ್ ಇನ್ನುಮುಂದೆ ಎಲ್ಲರಿಗೂ ದೊರೆಯಲಿದೆ ಎಂಬ ಪ್ರಕಟಣೆ ಇತ್ತೀಚೆಗೆ ಹೊರಬಿದ್ದಿದೆ.

ಕಂಪ್ಯೂಟರ್ ಮತ್ತು ಅಂತರಜಾಲ ಎನ್ನುವುದು ಇಂದು ಕೇವಲ ಇಂಗ್ಲೀಷ್ ಆಗಿ ಉಳಿದಿಲ್ಲ. ಗೂಗಲ್ ನಂತಹ ದೈತ್ಯರು ಕೂಡ ಭಾರತೀಯ ಭಾಷೆಗಳನ್ನೂ ಒಳಗೊಂಡು ಜಗತ್ತಿನ ಹಲವಾರು ಭಾಷೆಗಳಲ್ಲಿ ತಮ್ಮ ವಿವಿಧ ಸೇವೆಗಳನ್ನು ಕೊಡುತ್ತಿದ್ದಾರೆ. ವಿವಿಧ ಭಾಷೆಗಳಲ್ಲಿ ತಮ್ಮ ಸೇವೆಗಳನ್ನು ಒದಗಿಸಿಕೊಡುವುದಕ್ಕಾಗಿ ಕ್ರೌಡ್ ಸೋರ್ಸಿಂಗ್ ಮಾಡಿದ್ದಾರೆ. ಅಂದರೆ ಆಯಾ ಭಾಷೆಯ ಬಳಕೆದಾರರಿಗೇ ತಮ್ಮ ತಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟಿದ್ದಾರೆ.

ಫೇಸ್ ಬುಕ್ ಕೂಡ ಕ್ರೌಡ್ ಸೋರ್ಸಿಂಗ್ ಮೂಲಕ ಕನ್ನಡಿಗರಿಗೆ ಫೇಸ್ ಬುಕ್ ಇಂಟರ್ ಫೇಸನ್ನು ಕನ್ನಡಕ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಸುಮಾರು ಎರಡು ವರ್ಷದ ಹಿಂದೆಯೇ ಫೇಸ್ ಬುಕ್ ಹಲವಾರು ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಯಥಾಪ್ರಕಾರ ಕನ್ನಡಿಗರು ಹಿಂದುಳಿದಿದ್ದರು. ಕೇವಲ ಶೇಕಡಾ 20ರಷ್ಟು ಮಾತ್ರ ಅನುವಾದಗಳಾಗಿದ್ದವು. ಇದನ್ನು ಕಂಡ ಕನ್ನಡ ಉತ್ಸಾಹಿಗಳನೇಕರು ಈ ಅನುವಾದದ ಚಟುವಟಿಕೆಗಳಲ್ಲಿ ಸತತವಾಗಿ ತೊಡಗಿದರು. ಅನೇಕ ಕನ್ನಡ ಗುಂಪುಗಳಲ್ಲಿಯೂ ಇದರ ಬಗ್ಗೆ ಪ್ರಚಾರ ಕೊಡಲಾಯಿತು.

ಇದರಿಂದಾಗಿ ಕೆಲವು ಅನುವಾದಕರು ಕೈಜೋಡಿಸಿದರು. ಒಟ್ಟಿನಲ್ಲಿ ಅನುವಾದಕರ ಸಂಖ್ಯೆ ಕಡಿಮೆ ಇದ್ದರೂ ಸಹ ಸಕ್ರಿಯ ಅನುವಾದಕರ ಪ್ರಯತ್ನದಿಂದಾಗಿ ಫೇಸ್ ಬುಕ್ ಕನ್ನಡ ಅನುವಾದ ಸುಮಾರು ಶೇಕಡಾ 93ರಷ್ಟು ಆಯಿತು. ಇಷ್ಟಾಗಿ ವರ್ಷವಾಗುತ್ತಾ ಬಂದರೂ ಸಹ ಕನ್ನಡದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿರಲಿಲ್ಲ. ಸದಸ್ಯರು ಅನೇಕ ಬಾರಿ ಮನವಿಗಳನ್ನು ಸಲ್ಲಿಸಿದರೂ ಕೂಡ ಈ ಬಗ್ಗೆ ಉತ್ತರ ಬಂದಿರಲಿಲ್ಲ. ಅಂತೂ ಈಗ ಫೇಸ್ ಬುಕ್ ಕನ್ನಡದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ.

ಯೂಸರ್ ಇಂಟರ್ಫೇಸನ್ನು ಬದಲಾಯಿಸಿಕೊಳ್ಳಿ

ಯೂಸರ್ ಇಂಟರ್ಫೇಸನ್ನು ಬದಲಾಯಿಸಿಕೊಳ್ಳಿ

ಇನ್ನು ಫೇಸ್ ಬುಕ್ ಯೂಸರ್ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಳ್ಳಬಹುದು. ಅದಕ್ಕಾಗಿ ಮಾಡಬೇಕಾದ್ದಿಷ್ಟೆ. Account Settingsಗೆ ಹೋಗಿ ಅದರಲ್ಲಿನ General settingsನ Language ಆಯ್ಕೆಯಲ್ಲಿ ಕನ್ನಡವನ್ನು ಆಯ್ಕೆಮಾಡಿಕೊಂಡು Save Changes ಕೊಟ್ಟರೆ ಆಯಿತು. ಇಂಟರ್ಫೇಸ್ ಕನ್ನಡಕ್ಕೆ ಬದಲಾಗುತ್ತದೆ. 'ಮೆಚ್ಚುಗೆಗಳು', 'ಸಂದೇಶಗಳು', "ಇವರು ನಿಮ್ಮನ್ನು ತಿವಿದಿದ್ದಾರೆ", "ನಿಮ್ಮ ಮನದಲ್ಲೇನಿದೆ", "ನಿಮ್ಮ ಚಿತ್ರವನ್ನು ಇವರು ಮೆಚ್ಚಿದ್ದಾರೆ" ಎಂಬಂತಹ ಕನ್ನಡ ಬಳಕೆಗಳುಳ್ಳ ಫೇಸ್ ಬುಕ್ ಆಪ್ತವಾಗುತ್ತದೆ.

ಅನೇಕ ಹೊಸ ಹೊಸ ಪದಗಳೂ ಇವೆ

ಅನೇಕ ಹೊಸ ಹೊಸ ಪದಗಳೂ ಇವೆ

ಇಂಗ್ಲೀಷಿಗೆ ಪರ್ಯಾಯವಾಗಿ ಅನೇಕ ಹೊಸ ಹೊಸ ಪದಗಳೂ ಇವೆ. ಹಾಗಂತ ಈ ಅನುವಾದಗಳು ಎಲ್ಲವೂ ಪೂರ್ತಿ ಸರಿ ಇದೆ ಎಂದು ಹೇಳಲಾಗುವುದಿಲ್ಲ. ಇದು ನಮ್ಮ ನಿಮ್ಮಂತಹ ಸಾಮಾನ್ಯ ಜನರೇ ಮಾಡಿರುವುದರಿಂದ ಅನೇಕ ತಪ್ಪುಗಳೂ ನುಸುಳಿವೆ. ಕೆಲವು ಅನುವಾದಗಳು ಸರಿಯಿಲ್ಲ ಎಂದೂ ಅನ್ನಿಸಬಹುದು. ಹಾಗಾಗಿ ನಿಮಗೆ ಆಸಕ್ತಿ ಇದ್ದರೆ ಫೇಸ್ ಬುಕ್ ಟ್ರಾನ್ಸ್ ಲೇಷನ್ ಕೊಂಡಿಯ ಮೂಲಕ ನೀವೂ ಅನುವಾದಕರಾಗಿ ಸೇರಿಕೊಂಡು ಅನುವಾದಗಳನ್ನು ಮಾಡಬಹುದು.

ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಿ

ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಿ

ಈಗಾಗಲೇ ಮಾಡಿರುವ ಅನುವಾದಗಳಲ್ಲಿ ನಿಮಗೆ ಸರಿ ಎನ್ನಿಸುವುದಕ್ಕೆ ಮತ ಹಾಕಬಹುದು. ಅನುವಾದಕರಾಗಿ ಸೇರಿಕೊಂಡರೆ ಅನುವಾದವಾಗಬೇಕಾಗಿರುವ ಪದಗಳ ಕೆಳಗೆ ಕೆಂಪುಗೆರೆ ಕಾಣಿಸುತ್ತಿರುತ್ತದೆ. ಅದರ ಮೇಲೆ ರೈಟ್ ಕ್ಲಿಕ್ ಮಾಡಿ ನೇರವಾಗಿ ಅನುವಾದಿಸಬಹುದು. ಅಂದರೆ ಮಾಮೂಲಾಗಿ ಫೇಸ್ ಬುಕ್ ಬಳಸುತ್ತಲೇ ಅನುವಾದ ಮತ್ತು ಮತಹಾಕುವ ಕೆಲಸ ಮಾಡಬಹುದು. ಫೇಸ್ ಬುಕ್ ಅದನ್ನು ಅಪ್ಡೇಟ್ ಮಾಡುತ್ತಿರುತ್ತದೆ.

ಕನ್ನಡದ ಬೆಳವಣಿಗೆಗೆ ನೆರವಾಗಬೇಕು

ಕನ್ನಡದ ಬೆಳವಣಿಗೆಗೆ ನೆರವಾಗಬೇಕು

ಕನ್ನಡಿಗರು ತಮ್ಮ ಫೇಸ್ ಬುಕ್ ಇಂಟರ್ಫೇಸನ್ನು ಕನ್ನಡಕ್ಕೆ ಬದಲಾಯಿಸಿಕೊಂಡು ಕನ್ನಡದ ಬೆಳವಣಿಗೆಗೆ ನೆರವಾಗಬೇಕು. ಫೇಸ್ ಬುಕ್ಕನ್ನಾಗಲೀ ಅಥವಾ ಬೇರೆ ಯಾವುದನ್ನಾಗಲಿ ಕನ್ನಡಕ್ಕೆ ಮಾಡಿಕೊಂಡರೆ ಹೇಗೆ ಕನ್ನಡಕ್ಕೆ ಉಪಯೋಗ ಎಂದು ಕೇಳಬಹುದು. ಕನ್ನಡವೇ ಅನುಕೂಲವೆನ್ನಿಸುವವರಿಗೆ ಮತ್ತು ಇಂಗ್ಲೀಶ್ ತಿಳುವಳಿಕೆ ಹೆಚ್ಚು ಇಲ್ಲದವರಿಗೆ ಇದು ಸಹಕಾರಿ.

ಕನ್ನಡವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ

ಕನ್ನಡವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ

ಇಂಗ್ಲೀಷಿನಲ್ಲಿ ಬಳಸಿ ಅಭ್ಯಾಸವಾದವರಿಗೂ ಕನ್ನಡ ಫೇಸ್ ಬುಕ್ ಹೆಚ್ಚೇನೂ ತೊಡಕೆನಿಸುವುದಿಲ್ಲ. ಐ.ಟಿ ಮುಂತಾದ ಕಡೆ ಕೆಲಸ ಮಾಡುವ ಬಹುತೇಕರಿಗೆ ಕನ್ನಡ ಬಳಕೆಯೇ ತಪ್ಪಿಹೋಗಿರುತ್ತದೆ. ಇದರಿಂದಾಗಿ ಸ್ವಲ್ಪವಾದರೂ ಕನ್ನಡ ಬಳಕೆ ಉಳಿಯುತ್ತದೆ. ಹೊಸಹೊಸ ಪದಗಳೂ ತಿಳಿಯುತ್ತವೆ. ಇದು ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗೆ ಸಹಕಾರಿಯಾಗಿದೆ. ಅಂತರಜಾಲದಲ್ಲಿ ಕನ್ನಡ ಬಳಸುವವರು ಬಹಳ ಜನ ಇದ್ದಾರೆ ಎಂಬುದು ಕಂಪನಿಗಳಿಗೆ ತಿಳಿಯುತ್ತದೆ.

ಇದರಿಂದಾಗಿ ಕನ್ನಡವು ಜಾಗತಿಕ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ನೆರವಾಗುತ್ತದೆ. ಹೆಚ್ಚು ಹೆಚ್ಚು ಜನ ಬಳಸಲು ಶುರುಮಾಡಿದಂತೆ ಕನ್ನಡದ ಉತ್ಪನ್ನಗಳಿಗೂ ಬೇಡಿಕೆ ಇದೆ ಎಂಬುದು ತಿಳಿದು ಎಲ್ಲಾ ಸೇವೆಗಳಲ್ಲೂ ಕನ್ನಡದಲ್ಲಿ ಕೊಡಲು ಮುಂದಾಗುತ್ತವೆ, ಕನ್ನಡ ಗೊತ್ತಿರುವವರಿಗೆ ಉದ್ಯೋಗಾವಕಾಶದ ಬಾಗಿಲೂ ತೆರೆಯುತ್ತದೆ. ಕನ್ನಡದ ಬಳಕೆ ಹೆಚ್ಚುತ್ತದೆ.

English summary
Facebook in Kannada language officially released. We are pleased to let you know that Facebook is now available in three new languages: Javanese, Kannada and Sinhala. A big thank you to all the translators who contributed! announced Facebook Translations Team..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X