ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂ. ದಕ್ಷಿಣ ಅಭ್ಯರ್ಥಿ ನೀನಾ ನಾಯಕ್ ಸಂದರ್ಶನ

By ಮಹೇಶ್ ಮಲ್ನಾಡ್
|
Google Oneindia Kannada News

ಬೆಂಗಳೂರು, ಏ.8: ಆದರ್ಶ, ತತ್ತ್ವ, ಸಿದ್ಧಾಂತಕ್ಕೆ ಸಮಾಜದಲ್ಲಿ ಇನ್ನೂ ಬೆಲೆ ಇದೆ. ಭ್ರಷ್ಟಾಚಾರ ರಹಿತ ಸಮಾಜ ಸ್ಥಾಪನೆ ಸಾಧ್ಯವಿದೆ ಎಂಬ ನಂಬಿಕೆಯೊಂದಿಗೆ ಲೋಕಸಭೆ ಚುನಾವಣೆ ಕಣಕ್ಕೆ ಆಮ್ ಆದ್ಮಿ ಪಕ್ಷ ಧುಮುಕಿದೆ. ಇದೇ ಆಶಯಗಳೊಂದಿಗೆ ಸಾಮಾಜಿಕ ಕಾರ್ಯಕರ್ತೆ ನೀನಾ ನಾಯಕ್ ಅವರು ಸಂಸತ್ ಪ್ರವೇಶ ಬಯಸಿದ್ದಾರೆ.

ಜನ ಸಾಮಾನ್ಯರ ಪಕ್ಷದಿಂದ ಸ್ಪರ್ಧಿಸಿರುವ ನೀನಾ ಪಿ. ನಾಯಕ್ ಅವರು ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ಶ್ರೀಮಂತ ಅಭ್ಯರ್ಥಿ ನಂದನ್ ನಿಲೇಕಣಿ (ಕಾಂಗ್ರೆಸ್), ಅನುಭವಿ ರಾಜಕಾರಣಿ ಅನಂತ್ ಕುಮಾರ್ (ಬಿಜೆಪಿ) ರೈಟ್ ಲಿವ್ಲಿಹುಡ್ ಪ್ರಶಸ್ತಿ ವಿಜೇತೆ ರೂತ್ ಮನೋರಾಮ (ಜೆಡಿಎಸ್) ವಿರುದ್ಧ ನೇರ ಹಣಾಹಣಿ ನಡೆಸಿದ್ದಾರೆ. [ನೀನಾ ನಾಯಕ್ ಪರಿಚಯ]

ಪೊರಕೆ ಹಿಡಿದು ದೇಶದ ಭ್ರಷ್ಟಾಚಾರವನ್ನು ಗುಡಿಸಿ ಎಸೆಯುವ ಉತ್ಸಾಹದಲ್ಲಿರುವ ಎಲ್ಲಾ ಎಎಪಿ ಅಭ್ಯರ್ಥಿಗಳಂತೆ ನೀನಾ ಅವರು ಕೂಡಾ ಭ್ರಷ್ಟಾಚಾರ ನಿರ್ಮೂಲನೆ ನಮ್ಮ ಪರಮಗುರಿ ಎಂದಿದ್ದಾರೆ. ಆದರೆ, ಅವರ ಜತೆ ನಡೆಸಿದ ಸಂದರ್ಶನ ನೀನಾ ಅವರ ರಾಜಕೀಯ ಆಶಯಕ್ಕಿಂತ ಸಮಾಜಮುಖಿ ಚಿಂತನೆಯ ಪರಿಚಯ ಮಾಡಿಕೊಡುವ ಸ್ಥೂಲ ಯತ್ನ ಮಾಡಲಾಗಿದೆ.. ಪ್ರಶ್ನೋತ್ತರ ಸರಣಿ ನಿಮ್ಮ ಮುಂದಿದೆ....[2ನೇ ಪ್ರಶ್ನೋತ್ತರ ಮುಗಿಯುವ ಹೊತ್ತಿಗೆ ಗದ್ದಲ ಶುರು]

ಸಮಾಜಸೇವಕಿ ರಾಜಕಾರಣಿಯಾಗಿದ್ದು ಹೇಗೆ?

ಸಮಾಜಸೇವಕಿ ರಾಜಕಾರಣಿಯಾಗಿದ್ದು ಹೇಗೆ?

1. ಸಾಮಾಜಿಕ ಕಾರ್ಯಕರ್ತೆಯಾಗಿದ್ದ ನೀವು ರಾಜಕೀಯಕ್ಕೆ ಧುಮುಕಲು ಕಾರಣ?
ಉ: ಸುಮಾರು 30 ವರ್ಷಗಳಿಂದ ಸರ್ಕಾರದ ದುರಾಡಳಿತವನ್ನು ನೋಡುತ್ತಾ ಬಂದಿದ್ದೇನೆ ಹಾಗೂ ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡಿದ್ದೇನೆ.

ಎಲ್ಲಾ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಕಾಣುತ್ತಿದ್ದವು. ಹೀಗಾಗಿ ಯಾವ ಪಕ್ಷವೂ ನನ್ನನ್ನು ಆಕರ್ಷಿಸಿರಲಿಲ್ಲ. ಆದರೆ, ಆಮ್ ಆದ್ಮಿ ಪಕ್ಷ ನನ್ನ ನಿರ್ಣಯ ಬದಲಿಸಿತು. ನಿಷ್ಠಾವಂತ, ಧೈರ್ಯವುಳ್ಳ ಸಮಾಜಮುಖಿ ಪಕ್ಷ ಎಂಬ ನಂಬಿಕೆ ಬಂದಿದ್ದರಿಂದ ನಾನು ರಾಜಕೀಯ ಪ್ರವೇಶ ಮಾಡಬೇಕಾಯಿತು.

ರಾಜ್ಯದಲ್ಲಿನ ಅಪೌಷ್ಟಿಕತೆಗೆ ಪರಿಹಾರವಿದೆಯೇ?

ರಾಜ್ಯದಲ್ಲಿನ ಅಪೌಷ್ಟಿಕತೆಗೆ ಪರಿಹಾರವಿದೆಯೇ?

ಪ್ರ.2. ರಾಜ್ಯದಲ್ಲಿನ ಅಪೌಷ್ಟಿಕತೆ ಸಮಸ್ಯೆ ನಿರ್ಮೂಲನೆ ಸಾಧ್ಯವೇ? ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ ಎನ್ನುತ್ತೀರಾ?

ಉ: ಅಹಾರ ಹಾಗೂ ಪೌಷ್ಟಿಕತೆ ನಡುವೆ ವ್ಯತ್ಯಾಸವಿದೆ. ಪೌಷ್ಟಿಕತೆ ಬದಲಿಗೆ ಅಹಾರದ ಮೇಲೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಈ ಬಗ್ಗೆ ಪುನರ್ ಚಿಂತನೆ ನಡೆಸಬೇಕಿದೆ. Right to food ಎಂಬುದನ್ನು ಪುನರ್ ನಾಮಕಾರಣ ಮಾಡಿ ಹೊಸ ವ್ಯಾಖ್ಯೆ ನೀಡಬೇಕಿದೆ.

ಕಾನೂನು ಏನೇ ಇದ್ದರೂ ಬದಲಾವಣೆ ಆಗಬೇಕಾಗಿರುವುದು ಬೇರು ಮಟ್ಟದಲ್ಲಿ ಎಂಬುದನ್ನು ಮರೆಯಬಾರದು. ಸಾರ್ವಜನಿಕ ಪಡಿತರ ವ್ಯವಸ್ಥೆ(ಪಿಡಿಎಸ್)ಯಲ್ಲಿ ಪಾರದರ್ಶಕತೆ, ಅನುಷ್ಠಾನದಲ್ಲಿ ಬದ್ಧತೆ ತರಬೇಕು. ಪಿಡಿಎಸ್ ಭ್ರಷ್ಟಾಚಾರ, ಸೋರಿಕೆ, ಕೆಟ್ಟ ಆಡಳಿತದ ಕೇಂದ್ರ ಬಿಂದುವಾಗಿದೆ. ಸಾರ್ವಜನಿಕರ ಮೂಲ ಹಕ್ಕುಗಳ ಉಲ್ಲಂಘನೆ ಮಾನವೀಯತೆ ವಿರುದ್ಧದ ಅಪರಾಧಕ್ಕೆ ಸಮನಾಗಿದ್ದು, ಈ ಬಗ್ಗೆ ಗಮನ ಹರಿಸಬೇಕಿದೆ.

ಮಕ್ಕಳ ಹಕ್ಕುಗಳ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತೆ?

ಮಕ್ಕಳ ಹಕ್ಕುಗಳ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತೆ?

3. ಬೆಂಗಳೂರು ದಕ್ಷಿಣ ಕ್ಷೇತ್ರದ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕಿನ ಬಗ್ಗೆ ಎಷ್ಟರಮಟ್ಟಿಗೆ ಅರಿವಿದೆ?
ಉ: ಪ್ರತಿಯೊಬ್ಬ ತಾಯಿಗೂ ತನ್ನ ಮಗುವಿನ ಹಕ್ಕಿನ ಬಗ್ಗೆ ಅರಿವಿರುತ್ತದೆ. ಆದರೆ, ನೈಜತೆಯಲ್ಲಿ ಹಕ್ಕು ರಕ್ಷಣೆ ಸಾಧ್ಯವಿಲ್ಲ ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ವರ್ಗದವರು ಸೂಕ್ತ ಸಬಲೀಕರಣ ಸಿಗದಿದ್ದರೆ ಕಷ್ಟ. ಈ ಬಗ್ಗೆ ಅನೇಕ ಹಕ್ಕು, ನಿಯಮ ಹಾಗೂ ಯೋಜನೆಗಳಿವೆ ಆದರೆ ಅನುಷ್ಠಾನಗೊಂಡು ಜನರಿಗೆ ತಲುಪುವಲ್ಲಿ ವಿಫಲವಾಗಿದೆ. ಈ ಬಗ್ಗೆ ಸಮಗ್ರ ಶಿಕ್ಷಣ ಅಗತ್ಯ. ಜನರಿಗೆ ತಮ್ಮ ಹಕ್ಕುಗಳನ್ನು ಪ್ರಶ್ನಿಸಲು ಅವಕಾಶ ಹಾಗೂ ವ್ಯವಸ್ಥೆ ಕಲ್ಪಿಸಬೇಕಿದೆ.

ಆದರೆ, ಈಗಿನ ಆಡಳಿತ ವೈಖರಿ ನೋಡಿದರೆ, ಮಕ್ಕಳ ಹಕ್ಕು ಸಂರಕ್ಷಣೆ ಬಗ್ಗೆ ಕ್ಷೇತ್ರದ ಜನತೆಯಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಸರ್ಕಾರದ ಜತೆಗೆ ನಾಗರಿಕ ಸಮಾಜ ಕೂಡಾ ಮಕ್ಕಳ ರಕ್ಷಣೆ, ಬೆಳವಣಿಗೆಗೆ ಸಹಕರಿಸಬೇಕಿದೆ.
ಮೀಸಲಾತಿ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮೀಸಲಾತಿ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

4. ಸಂಸತ್ತಿನಲ್ಲಿ ಮೀಸಲಾತಿ ಮಸೂದೆ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಉ.ಎಲ್ಲಾ ಸ್ತರಗಳಲ್ಲೂ ಲಿಂಗಾನುಪತವಾಗಿ ಮೀಸಲಾತಿಯನ್ನು ನಾನು ಬೆಂಬಲಿಸುತ್ತೇನೆ. ಮತ್ತೊಂದೆಡೆ ಉಳಿದ ಮೀಸಲಾತಿ ಬಗ್ಗೆ ನಾನು ಸಂವಿಧಾನ ಬದ್ಧ ನಿಯಮಕ್ಕೆ ತಲೆಬಾಗುತ್ತೇನೆ.

ಆದರೆ, ದೇಶ ರಚನೆ ಸಂದರ್ಭದಲ್ಲಿ ಯಾವುದೇ ಗುಂಪಿಗೆ ಶಾಶ್ವತ ಮೀಸಲಾತಿ ಕಲ್ಪಿಸುವ ಆಲೋಚನೆ ಇರಲಿಲ್ಲ. ಮೀಸಲಾತಿಯಿಂದ ಕುಟುಂಬ ವರ್ಗಗಳಿಗೆ ಶಾಶ್ವತ ಪರಿಹಾರ ಅಥವಾ ಬದುಕು ಸುಧಾರಣೆಗೊಂಡಿದ್ದು ವಿರಳ.

ಮೀಸಲಾತಿಯ ಮುಖ್ಯ ಉದ್ದೇಶ ಸಮಾಜದ ಕೆಳಸ್ತರದವರಿಗೂ ಸಕಲ ಸೌಲಭ್ಯ ಸಮಾನತೆ ಒದಗಿಸುವುದಾಗಿದೆ. ಆದರೆ, 65 ವರ್ಷಗಳ ನಂತರವೂ ನಾವು ಇದನ್ನು ಸಾಧಿಸಿಲ್ಲವೆಂದರೆ ಸಮಸ್ಯೆ ಬೇರೆಡೆ ಎಲ್ಲೋ ಇದೇ ಎಂದರ್ಥ.ಇಂದಿನ ರಾಜಕೀಯ ಪಕ್ಷಗಳು ಮೀಸಲಾತಿಯನ್ನು ಮತ ಬ್ಯಾಂಕ್ ನಂತೆ ಮಾತ್ರ ಕಾಣುತ್ತಿರುವುದನ್ನು ನಾನು ವಿರೋಧಿಸುತ್ತೇನೆ.

ಮತಯಾಚನೆ, ಪ್ರಚಾರ, ಮೊದಲ ಅನುಭವ

ಮತಯಾಚನೆ, ಪ್ರಚಾರ, ಮೊದಲ ಅನುಭವ

5. ಮತಯಾಚನೆ, ಪ್ರಚಾರ, ಮೊದಲ ಅನುಭವ, ಜನರೊಡನೆ ಸ್ಪಂದನೆ ಹೇಗಿತ್ತು?
ಉ: ನಿಜಕ್ಕೂ ನನಗೆ ಅಚ್ಚರಿ ಹಾಗೂ ಆಘಾತವಾಯಿತು. ಜನರಿಗೆ ಅರಿವಿನ ಕೊರತೆಯ ಜತೆಗೆ ಈ ಹಿಂದಿನ ಸರ್ಕಾರಗಳು, ರಾಜಕೀಯ ಪಕ್ಷಗಳು ನೀಡಿರುವ ಪೊಳ್ಳು ಭರವಸೆಗಳ ಬಗೆಗಿನ ಆಕ್ರೋಶ ಕಂಡು ಬಂದಿತು. ಜನರನ್ನು ಅಸಹಾಯಕ ಪರಿಸ್ಥಿತಿಗೆ ದೂಡುವಲ್ಲಿ ಎಲ್ಲಾ ಪಕ್ಷಗಳು ಮುಂಚೂಣಿಯಲ್ಲಿರುವುದನ್ನು ಕಂಡು ಆಘಾತವಾಯಿತು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೊಸ ಅಲೆ ಹಾಗೂ ಆಶಾವಾದ ಜನರಲ್ಲಿ ಮೂಡುತ್ತಿದೆ. ಭಾರತದಲ್ಲಿ ಮೊದಲ ಬಾರಿಗೆ ಭ್ರಷ್ಟ ಪ್ರಜಾ ಪ್ರಭುತ್ವ ವಿರೋಧಿ ರಾಜಕೀಯ ಪಕ್ಷಗಳನ್ನು ತಡೆಗಟ್ಟುವ ಶಕ್ತಿ ಜನರಲ್ಲಿ ಮೂಡುತ್ತಿದೆ. ಜನರ ಉತ್ಸಾಹ ಕಂಡು ನನಗೆ ನಿಜಕ್ಕೂ ತುಂಬಾ ಸಂತಸವಾಯಿತು.

ನೀನಾ ಅವರಿಗೆ ಜನರು ಏಕೆ ಮತ ಹಾಕಬೇಕು?

ನೀನಾ ಅವರಿಗೆ ಜನರು ಏಕೆ ಮತ ಹಾಕಬೇಕು?

6.ನೀನಾ ಅವರೇ, ಜನರು ನಿಮಗೇ ಏಕೆ ಮತ ಹಾಕಬೇಕು?

ಉತ್ತರ:ಹೊಸ ಆಶಾವಾದ, ನಿಷ್ಠೆ, ಭಯರಹಿತ ಪಕ್ಷ, ಭ್ರಷ್ಟರಹಿತ ಪಕ್ಷ, ನುಡಿದಂತೆ ನಡೆವ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ನನಗೆ ಮತ ಹಾಕಲು ಅಡ್ಡಿಯಿಲ್ಲ. ನಿಮ್ಮ ಮಕ್ಕಳ ಭವಿಷ್ಯ, ಹೊಸ ಭಾರತ ನಿರ್ಮಾಣಕ್ಕಾಗಿ ಮತ ಹಾಕಿ.

ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಚಿಂತನೆ

ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಚಿಂತನೆ

7. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ನಿಮ್ಮ ಚಿಂತನೆ, ಪರಿಹಾರ?
ಉ.ಸಾಮಾನ್ಯವಾಗಿ ಸಾರ್ವಜನಿಕ ಸಮಸ್ಯೆಗಳೆಂದರೆ ನೀರು, ರಸ್ತೆ, ಒಳಚರಂಡಿ, ಸಾರಿಗೆ ಇತ್ಯಾದಿ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಮಾತುಕತೆ ನಡೆಯುತ್ತದೆ. ಇವೆಲ್ಲವು ಮುಖ್ಯವಾಗಿವೆಯಾದರೂ ಬಹುಮುಖ್ಯ ಸಮಸ್ಯೆಯೆಂದರೆ ಭ್ರಷ್ಟಾಚಾರ.

ಭ್ರಷ್ಟಾಚಾರವನ್ನು ಬುಡ ಸಮೇತ ಕಿತ್ತು ಹಾಕಬೇಕು. ಸಣ್ಣ ಮಟ್ಟದ ಭ್ರಷ್ಟಾಚಾರವನ್ನು ಬೆಳೆಯಲು ಬಿಟ್ಟರೆ ಬಂಡವಾಳ ಶಾಹಿಗಳು, ಭ್ರಷ್ಟ ರಾಜಕಾರಣಿಗಳು-ಅಧಿಕಾರಿ ವರ್ಗ-ಗುತ್ತಿಗೆದಾರರ ಮಾಫಿಯಾ ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.

ನಿಷ್ಠಾವಂತ ರಾಜಕಾರಣಿಗಳು ಹಾಗೂ ಅಧಿಕಾರವರ್ಗ ಇರುವ ಸ್ವಚ್ಛ ಪರಿಸರ ನಿರ್ಮಾಣ ಮಾಡಿದಾಗ ಮತ್ರ ಭ್ರಷ್ಟಾಚಾರದ ನೆರಳು ಸೋಕದಂತೆ ಸಮಾಜ ಮುಂದುವರೆಯಲು ಸಾಧ್ಯ. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಜನ ಸಾಮಾನ್ಯರಲ್ಲಿ ಅನೇಕ ಬುದ್ಧಿವಂತರು, ಸಮಾನ ಮನಸ್ಕರಿದ್ದಾರೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕರ ಬೇಡಿಕೆಗೆ ಸ್ಪಂದಿಸುವ ರಾಜಕೀಯ ಶಕ್ತಿ ರೂಪುಗೊಂಡರೆ ಸಮಗ್ರ ಚಿತ್ರಣ ಬದಲಾಗುತ್ತದೆ.

ರಾಜಕೀಯದ ಬಗ್ಗೆ ಬೆಂಗಳೂರಿಗರಿಗೆ ಅರಿವಿದೆಯೆ?

ರಾಜಕೀಯದ ಬಗ್ಗೆ ಬೆಂಗಳೂರಿಗರಿಗೆ ಅರಿವಿದೆಯೆ?

8. ರಾಜಕೀಯದ ಬಗ್ಗೆ ಬೆಂಗಳೂರಿಗರಿಗೆ ಅರಿವಿದೆಯೆ?
ಉ: ಬೆಂಗಳೂರಿನ ಜನತೆಗೆ ಸ್ಥಳೀಯ ರಾಜಕಾರಣವಲ್ಲದೆ ದೇಶದ ರಾಜಕೀಯದ ಆಗು ಹೋಗುಗಳ ಬಗ್ಗೆ ಅರಿವಿದೆ. ಆದರೆ, ಭ್ರಷ್ಟ ರಾಜಕಾರಣಿಗಳ ಸತತ ಹಿಂಸೆಯಿಂದ ಬೇಸತ್ತು ಮತದಾನ ಮಾಡಲು ಹಿಂಜರಿಯುತ್ತಿರುವುದು ಕಂಡು ಬಂದಿದೆ. ಸೂಕ್ತ ವೇದಿಕೆ, ಬದಲಿ ಆಡಳಿತ ವ್ಯವಸ್ಥೆಗಾಗಿ ಹಾತೊರೆಯುತ್ತಿದ್ದಾರೆ. ದುಷ್ಟರಲ್ಲಿ ಕಡಿಮೆ ಪ್ರಮಾಣದ ತಪ್ಪೆಸಗಿದವರನ್ನು ಆಯ್ಕೆ ಮಾಡುವ ಅನಿವಾರ್ಯತೆಗೆ ಒಳಪಟ್ಟಿದ್ದಾರೆ.

ಆದರೆ, ಈಗ ಎಎಪಿ, ಭ್ರಷ್ಟಾಚಾರ ವಿರೋಧಿ ಚಳವಳಿ ನಂತರ ಬದಲಾವಣೆಯ ಹಾದಿಯನ್ನು ಕಂಡುಕೊಂಡಿದ್ದಾರೆ. ಅದು ಬೆಂಗಳೂರಾಗಲಿ ಅಥವಾ ಭಾರತವಾಗಲಿ ವ್ಯವಸ್ಥೆ ಬದಲಾವಣೆಯಲ್ಲಿ ಜನತೆ ಪಾತ್ರ ಹಿರಿದಾಗಿದೆ.

ಚುನಾವಣಾ ಪ್ರಚಾರದ ಮುಖ್ಯ ಟಾರ್ಗೆಟ್ ಏನು?

ಚುನಾವಣಾ ಪ್ರಚಾರದ ಮುಖ್ಯ ಟಾರ್ಗೆಟ್ ಏನು?

9. ಚುನಾವಣಾ ಪ್ರಚಾರದ ಮುಖ್ಯ ಟಾರ್ಗೆಟ್ ಏನು? ಹೇಗೆ ನಿಮ್ಮ ಮತಯಾಚನೆ ಯೋಜನೆ ಮಾಡಿದ್ದೀರಿ?
ಉ: ನಿಷ್ಠಾವಂತ ಅಭ್ಯರ್ಥಿ ಹಾಗೂ ನಿಷ್ಠಾವಂತ ಪಕ್ಷಕ್ಕೆ ಮತ ಹಾಕಿ ಎಂಬುದು ನಮ್ಮ ಮುಖ್ಯ ಧ್ಯೇಯವಾಕ್ಯವಾಗಿದೆ. ರಾಜಕೀಯ ಹಾಗೂ ಆಡಳಿತದಲ್ಲಿ ಭಯ ಹೊಗಲಾಡಿಸಬೇಕಿದೆ.

ಎಎಪಿ ಆಶಯ, ಪ್ರಣಾಳಿಕೆಯನ್ನು ಜನರಿಗೆ ತಲುಪಿಸಲು ಸಂಘಟಿತ ರೀತಿಯಲ್ಲಿ ಅಭಿಯಾನ ನಡೆಸಿದ್ದೇವೆ. ನನ್ನ ಎದುರಾಳಿಗಳ ಬಳಿ ಹಣ ಬಲವಿದೆ. ಆದರೆ, ನಮ್ಮ ಬಳಿ ಕಾರ್ಯಕರ್ತರ ದೊಡ್ಡ ಬಲವಿದೆ. ನಮ್ಮ ಉದ್ದೇಶ ಜನರಿಗೆ ಅರ್ಥವಾಗುತ್ತಿದ್ದು, ಜನರು ಸ್ವಯಂಪ್ರೇರಣೆಯಿಂದ ನಮ್ಮ ಜತೆ ಮತಯಾಚನೆ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

 ಕೊಳಗೇರಿ ಮುಕ್ತ ಬೆಂಗಳೂರು ಸಾಧ್ಯವೇ?

ಕೊಳಗೇರಿ ಮುಕ್ತ ಬೆಂಗಳೂರು ಸಾಧ್ಯವೇ?

10: ಕೊಳಗೇರಿ ಮುಕ್ತ ಬೆಂಗಳೂರು ಸಾಧ್ಯವೇ?
ಉ: ಸ್ಲಮ್ ಎಂಬ ಪದವೇ ನನಗೆ ಇಷ್ಟವಾಗುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗದವರು ಎಂದು ಕರೆಯಬಹುದು. ಸರ್ಕಾರ ತನ್ನ ಆದ್ಯ ಕರ್ತವ್ಯಗಳನ್ನು ಮರೆತಿದೆ. ನಾಗರಿಕರಿಗೆ ಭದ್ರತೆ ಒದಗಿಸುವುದು, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ನೀಡುವುದು ಮುಂತಾದ ಮೂಲ ಸೌಕರ್ಯ ವ್ಯವಸ್ಥೆ ಒದಗಿಸದಿದ್ದ ಮೇಲೆ ಸರ್ಕಾರ ಇದ್ದು ಪ್ರಯೋಜನವಿಲ್ಲ.

ರಾಜ್ಯದ ಪ್ರತಿಯೊಬ್ಬ ಪುರುಷ, ಮಹಿಳೆ, ಮಕ್ಕಳಿಗೆ ಈ ಮೂಲ ಸೌಕರ್ಯ ಸಿಕ್ಕರೆ ಆರ್ಥಿಕ ಸಬಲೀಕರಣ ತಾನಾಗೇ ಒದಗಿಬರುತ್ತದೆ. ಕೊಳಗೇರಿ ಮುಕ್ತಗೊಳಿಸುವುದು ವ್ಯಾಪಾರೀಕರಣ ವಿಷಯವಾಗಿದೆ.

ಬೆಂಗಳೂರಿನಲ್ಲಿ ಅಪಾರ ಸಂಪನ್ಮೂಲವಿದೆ ಆದರೆ, ಸ್ಲಮ್ ಫ್ರೀ ಮಾಡುವ ಮನಸ್ಸಿಲ್ಲ. ಸರ್ಕಾರದ ಆದ್ಯತೆ ಬೇರೆಡೆ ಇದೆ. ಸಮಾಜದ ಎಲ್ಲಾ ಸ್ತರದ ಜನರನ್ನು ಒಂದುಗೂಡಿಸಿಕೊಂಡು ಅಭಿವೃದ್ಧಿಗೊಳಿಸುವ ಮನಸ್ಥಿತಿ ಬೆಳೆಯಬೇಕಿದೆ. ಮತಬ್ಯಾಂಕ್ ಭದ್ರ ಪಡಿಸಲು ಮಾತ್ರ ಆರ್ಥಿಕವಾಗಿ ಹಿಂದುಳಿದವರನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕಿದೆ. ಆಗ ಬೆಂಗಳೂರು ಕೊಳಗೇರಿ ಮುಕ್ತವಾಗಲು ಸಾಧ್ಯ

English summary
Elections 2014: I entered politics because of AAP. I saw an honest and fearless party ready to serve people said Aam Aadmi Party candidate from Bangalore South lok sabha constituency Nina P Nayak in an interview with Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X