ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೊದಲ ಜ್ಞಾನಪೀಠ ಪ್ರಶಸ್ತಿ ಡಿವಿ ಗುಂಡಪ್ಪಗೆ ಸಲ್ಲಬೇಕಿತ್ತು

By Srinath
|
Google Oneindia Kannada News

ಬೆಂಗಳೂರು, ಮೇ 6: ಡಿವಿ ಗುಂಡಪ್ಪನವರು ಜ್ಞಾನಪೀಠ ಏರಬೇಕಿತ್ತು. ಅದಕ್ಕಾಗಿ ಅವರಲ್ಲಿ ಎಲ್ಲ ಅರ್ಹತೆಯೂ ಇತ್ತು' ಎಂದು ಸಾಹಿತಿ ಗೋಪಾಲ ವಾಜಪೇಯಿ ತಿಳಿಸಿದ್ದಾರೆ.

'ಡಿವಿಜಿ ಅವರಿಗೆ 1966ನೇ ಸಾಲಿನಲ್ಲಿಯೇ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಕೈತಪ್ಪಿತು' ಎಂದು ವಾಜಪೇಯಿ ಅವರು ವಿಷಾದಬೆರೆತ ದನಿಯಲ್ಲಿ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ರವಿ ತಿರುಮಲೈ ವಿರಚಿಸಿರುವ ಡಿವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗಗಳ ವ್ಯಾಖ್ಯಾನ ಗ್ರಂಥ 'ಕಗ್ಗರಸಧಾರೆ' ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಈ ವಿಷಯದ ಮೇಲೆ ಬೆಳಕು ಚೆಲ್ಲಿದ್ದಾರೆ.

dvg-should-have-got-jnanpith-award-for-kannada-gopal-wajapeyi

'ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ ಪಟ್ಟಿಯಲ್ಲಿ ಡಿವಿಜಿ ಅವರ ಹೆಸರು ಮೊದಲಿತ್ತು. ಕಾರಣಾಂತರಗಳಿಂದ ಪ್ರಶಸ್ತಿ ಬಂಗಾಳಿ ಕಾದಂಬರಿಕಾರರೊಬ್ಬರಿಗೆ ಲಭಿಸಿತು. ಪ್ರಶಸ್ತಿ ಲಭಿಸಿದ್ದರೆ ಡಿವಿಜಿ ಅವರು ಜ್ಞಾನಪೀಠ ಪಡೆದ ಮೊದಲ ಕನ್ನಡಿಗರಾಗುತ್ತಿದ್ದರು' ಎಂದು ವಾಜಪೇಯಿ ಹೇಳಿದರು.

ಹಾಗಾದರೆ ಗುಂಡಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಕೈತಪ್ಪಲು ಕಾರಣವಾದ ಅಂಶಗಳನ್ನು ಯಾವುವು ತಿಳಿಸಿ ಎಂದು ಸಭಿಕರು ವಾಜಪೇಯಿ ಅವರನ್ನು ಒತ್ತಾಯಿಸಿದರು. ಆದರೆ ಗೋಪಾಲ ವಾಜಪೇಯಿ ಅವರು ಕಾರಣಗಳನ್ನು ತಿಳಿಸದೇ ಮೌನಕ್ಕೆ ಶರಣಾದರು.

{ಅಂದ ಹಾಗೆ, ತಾರಾಶಂಕರ ಬಂಡೋಪಾಧ್ಯಾಯ ಅವರ ಗಣದೇವತಾ ಕೃತಿಗೆ 1966ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತ್ತು. ಕುವೆಂಪು ಅವರ ಶ್ರೀರಾಮಾಯಣದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಲಭಿಸುವ ಮೂಲಕ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಪ್ರಾಪ್ತಿಯಾಯಿತು.}

ಡಿವಿಜಿ ಅವರಲ್ಲಿ ಜ್ಞಾನಪೀಠ ಅರ್ಹತೆಯಿತ್ತು: ನಂತರ ಸಾಹಿತಿ ಎಸ್ ದಿವಾಕರ್ ಅವರು ಮಾತನಾಡಿ, 'ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪನೆ, ಬ್ರಿಟಿಷರಿಂದ ಮೈಸೂರು ಮಹಾರಾಜರಿಗೆ ಮೈಸೂರು ಸಂಸ್ಥಾನದ ಅಧಿಕಾರ ಹಸ್ತಾಂತರ, ದಿವಾನರ ಜನಪರ ಯೋಜನೆಗಳು, 2 ವಿಶ್ವಯುದ್ಧಗಳು ಮೊದಲಾದ ಮಹತ್ವದ ಸಂಗತಿಗಳಿಗೆ ಡಿವಿಜಿ ಅವರು ಸಾಕ್ಷಿಯಾಗಿದ್ದರು. ಅವುಗಳ ಪ್ರಭಾವ ಅವರ ಬರಹದಲ್ಲಿ ಕಾಣುತ್ತದೆ' ಎಂದರು.

'ರಾಷ್ಟ್ರ ರಾಜಕಾರಣ, ದೇಶದ ಆರ್ಥಿಕತೆ ಮತ್ತು ಬ್ರಿಟಿಷರ ಆಡಳಿತ ಕುರಿತು ಡಿವಿಜಿ ಅವರು ಇಂಗ್ಲಿಷ್ ಪತ್ರಿಕೆಗಳಿಗೆ ಬರೆದ ಲೇಖನಗಳು 15 ಸಾವಿರ ಪುಟಗಳಾಗುವಷ್ಟಿವೆ. ಧರ್ಮ, ಜೀವನ, ರಾಜಕೀಯ, ಭಾಷೆ ಮತ್ತು ಸಾಹಿತ್ಯಗಳು ಒಂದೇ ಎಂದು ಪ್ರತಿಪಾದಿಸುತ್ತಿದ್ದ ಅವರ ಈ ಬರಹಗಳನ್ನು ಪುಸ್ತಕದ ರೂಪದಲ್ಲಿ ದಾಖಲಿಸಿಡುವ ಕೆಲಸವಾಗಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.

English summary
DV Gundappa should have got Jnanpith Award for Kannada said senior Kannada Journalist, writer Gopal Wajapeyi. DVG should have got the award in the year 1966. But due to some reasons it went to Bengal writer said Gopal Wajapeyi. But he didnt disclosed the reasons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X