ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಪುತ್ರ 'ವಿಜಯೇಂದ್ರ' ಮೇಲೆ ಕಾಂಗ್ರೆಸ್ ನಾಯಕರ 'ಕಿಕ್‌ಬ್ಯಾಕ್' ಆರೋಪ!

|
Google Oneindia Kannada News

ಬೆಂಗಳೂರು, ಸೆ. 23: ಈ ಮೊದಲು ಮುಖ್ಯಮಂತ್ರಿ ಆಗಿದ್ದಾಗ ಚೆಕ್ ರೂಪದಲ್ಲಿ ಲಂಚದ ಹಣ ಪಡೆದಿದ್ದ ಯಡಿಯೂರಪ್ಪ ಕುಟುಂಬಸ್ಥರು, ಈಗ ಆರ್‌ಟಿಜಿಎಸ್ ಮೂಲಕ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬಸ್ಥರ ಮೇಲೆ ಕೇಳಿ ಬಂದಿರುವ ಲಂಚದ ಆರೋಪದ ಕುರಿತು ಹಾಲಿ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅಥವಾ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ತನಿಖೆ ಮುಗಿಯುವವರೆಗೆ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಥವಾ ಅವರನ್ನು ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಜಂಟಿ ಸುದ್ದಿಗೋಷ್ಠಿ ನಡೆಸಿ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಜಯೇಂದ್ರ ಹಣ ಪಡೆದಿದ್ದಾರೆ ಎಂದು ಆರೋಪಿಸಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಹಣ ಕೊಟ್ಟಿಲ್ಲ ಎಂಬ ಕಾರಣಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ಬಿಡಿಎ ಆಯುಕ್ತರ ವರ್ಗಾವಣೆಗೆ ಶಿಫಾರಸು ಮಾಡಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿದೆ. ಇಷ್ಟೆಲ್ಲಾ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇದ್ದರೂ ಅವರ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.

ವಿಜಯೇಂದ್ರ ಮೇಲೆ ಲಂಚದ ಆರೋಪ

ವಿಜಯೇಂದ್ರ ಮೇಲೆ ಲಂಚದ ಆರೋಪ

ಇಡೀ ಭ್ರಷ್ಟಾಚಾರದಲ್ಲಿ ಸಿಎಂ ಪುತ್ರ ಬಿ.ವೈ. ವಿಜಯೇಂದ್ರ, ಮೊಮ್ಮಗ ಹಾಗೂ ಅಳಿಯ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ಸಿಎಂ ಪುತ್ರ ವಿಜಯೇಂದ್ರ, ಅಳಿಯ ವೀರೂಪಾಕ್ಷಪ್ಪ ಮರಡಿ ಮೊಮ್ಮಗ ಶಶಿಧರ್ ಮರಡಿ ಅವರು ಲಂಚ ಪಡೆದಿದ್ದಾರೆ. ಬಿಡಿಎ ನಿಂದ 576 ಕೋಟಿ ರೂಪಾಯಿಗಳ ಟೆಂಡರ್ ಘೋಷಣೆಯಾಗುತ್ತು. ವಸತಿ ಸಮುಚ್ಛಯ ನಿರ್ಮಾಣಕ್ಕಾಗಿ ಟೆಂಟರ್ ಕರೆಯಲಾಗಿತ್ತು.


ಆ ಟೆಂಡರ್ ಆದ ಮೇಲೆ ಇಬ್ಬರು ಬಿಲ್ಡರ್ ಭಾಗವಹಿಸುತ್ತಾರೆ. ರಾಮಲಿಂಗಂ ಕನ್‌ಸ್ಟ್ರಕ್ಷನ್ ಕಂಪನಿ ಕೂಡ ಇರುತ್ತದೆ. 666,66,22,500 ರೂಪಾಯಿಗಳಿಗೆ ಟೆಂಡರ್ ಆಗುತ್ತದೆ. ಅವರು 331 ಕೋಟಿ ರೂ. ಠೇವಣಿ ಇಡುತ್ತಾರೆ. 22.02.2020ರಂದು ಕಾಮಗಾರಿಗೆ ಒಪ್ಪಿಗೆಯೂ ಸಿಗುತ್ತದೆ. ಯಡಿಯೂರಪ್ಪ ಅವರು ಜುಲೈ 26, 2019 ರಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಹೀಗಾಗಿ ಇದು ಅವರ ಅಧಿಕಾರದಲ್ಲಿಯೇ ಬರುತ್ತಲೇ ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಹುದ್ದೆಗೆ ಹಣಕೊಟ್ಟು ಬಂದಿದ್ದೇನೆ

ಹುದ್ದೆಗೆ ಹಣಕೊಟ್ಟು ಬಂದಿದ್ದೇನೆ

ಸಿಎಂ ಪುತ್ರ ವಿಜಯೇಂದ್ರ ಅವರು ರಾಮಲಿಂಗಂ ಕಂಪನಿ ಟೆಂಡರ್ ರದ್ದು ಮಾಡುವ ಬೆದರಿಕೆ ಹಾಕುತ್ತಾರೆ. ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ಕೊಡಲಾಗುತ್ತದೆ. ಯೋಜನೆ ಮುಂದುವರಿಸಲು ಕಿಕ್‌ಬ್ಯಾಕ್‌ಗೆ ಸೂಚನೆ ನೀಡುತ್ತಾರೆ. ಅದರಂತೆ ಬಿಡಿಎ ಆಯುಕ್ತ ಪ್ರಕಾಶ್ 12 ಕೋಟಿ ರೂ. ಹಣ ಪಡೆಯುತ್ತಾರೆ. ಜಯೇಂದ್ರ ಅವರಿಗೆ ಕೊಡುತ್ತೇನೆ ಎಂದು ಪ್ರಕಾಶ್ ಹಣವನ್ನು ತೆಗೆದುಕೊಂಡಿರುತ್ತಾರೆ.

ಆ ವೇಳೆ ಕಂಟ್ರಾಕ್ಟರ್‌ಗೆ ವಿಜಯೇಂದ್ರ ಅವರು ಫೋನ್ ಮಾಡಿ ಹಣ ಬಂದಿಲ್ಲ ಎಂದು ಕೇಳುತ್ತಾರೆ. ಆದರೆ ಪ್ರಕಾಶ್ ಅವರಿಗೆ ಹಣವನ್ನು ಕೊಟ್ಟಿರುವುದಾಗಿ ಆ ಕಂಟ್ರಾಕ್ಟರ್ ಹೇಳುತ್ತಾರೆ. ಬಿಡಿಎ ಕಮೀಷನರ್ ಹುದ್ದೆಗೆ ಬರಲು ಬಿಡಿಎ ಆಯುಕ್ತ ಪ್ರಕಾಶ್ ಅವರು ಯಡಿಯೂರಪ್ಪ ಅವರಿಗೆ 15 ಕೋಟಿ ರೂ. ಕೊಟ್ಟಿದ್ದಾರಂತೆ. ವಿಜಯೇಂದ್ರ ಹಣ ಕೇಳಿದಾಗ ಇದನ್ನೇ ಪ್ರಕಾಶ್ ಅವರು ವಿಜಯೇಂದ್ರ ಅವರ ಮುಂದಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಆರ್‌ಟಿಜಿಎಸ್ ಮೂಲಕ ಹಣ ಸಂದಾಯ

ಆರ್‌ಟಿಜಿಎಸ್ ಮೂಲಕ ಹಣ ಸಂದಾಯ

ಕೊನೆಗೆ ಮತ್ತೊಮ್ಮೆ 7.40 ಕೋಟಿ ಹಣ ಆರ್‌ಟಿಜಿಎಸ್ ಮೂಲಕ ಸಂದಾಯವಾಗುತ್ತದೆ. ಶಶಿಧರ್ ಮರಡಿ ಖಾತೆಗೆ ಆ ಕಾಂಟ್ರಾಕ್ಟರ್ ಹಣ ಹಾಕಿದ್ದಾರೆ. ಶೇಷಾದ್ರಿಪುರಂನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ. ನಂತರ ಹುಬ್ಬಳ್ಳಿಯ ಸಿಎಂ ಯಡಿಯೂರಪ್ಪ ಅವರ ಅಳಿಯನಿಗೂ ಹಣ ಸಂದಾಯವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ.

ಈ ಕಾಮಗಾರಿ ಗುತ್ತಿಗೆದಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುಟುಂಬದ ಸದಸ್ಯರಿಗೆ ಲಂಚ ನೀಡಿರುವ ಆರೋಪ ಇದೆ. ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರ ದೂರವಾಣಿ ಕರೆ ಆಡಿಯೋ ತುಣುಕು, ಕೋಟ್ಯಂತರ ರೂಪಾಯಿಗಳನ್ನು RTGS ಮೂಲಕ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಗುತ್ತಿಗೆದಾರ ಹಾಗೂ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರ ವಾಟ್ಸಾಪ್ ಸಂದೇಶಗಳು, ಇವರ ಸಂದೇಶದಲ್ಲಿ 'V' ಎಂದು ವಿಜಯೇಂದ್ರ ಅವರ ಹೆಸರು ಉಲ್ಲೇಖ, ಈ ಹಣವನ್ನು ಕೋಲ್ಕತಾ ಮೂಲದ ಏಳು ಶೆಲ್ ಕಂಪನಿಗಳು ಹಾಗೂ ಶಶಿಧರ್ ಅವರ ಬೆಂಗಳೂರಿನ ಕಂಪನಿಗೆ ಅಕ್ರಮವಾಗಿ ಹಣ ರವಾನೆ ಮಾಡಿರುವ ವಿವರವಿದ್ದು, ಇದರಲ್ಲಿ ಮುಖ್ಯಮಂತ್ರಿಗಳ ಕಚೇರಿ ಹಾಗೂ ಗೃಹ ಕಚೇರಿ ಸಿಬ್ಬಂದಿ ಕೂಡ ಒಳಗೊಂಡಿರುವ ಮಾಹಿತಿ ಇದೆ ಎಂದು ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.

10% ಸರ್ಕಾರ ಎಂದಿದ್ದ ಪ್ರಧಾನಿ ಮೋದಿ

10% ಸರ್ಕಾರ ಎಂದಿದ್ದ ಪ್ರಧಾನಿ ಮೋದಿ

ಬಿಜೆಪಿ ನಾಯಕ ಶಂಕರ್ ಬಿದರಿ ಅವರು ಡಿಜಿಪಿ ಆಗಿದ್ದವರು. ಅವರೇ ಪ್ರಹ್ಲಾದ್ ಜೋಶಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಸಿಎಂ, ಮಕ್ಕಳು, ಮೊಮ್ಮಕ್ಕಳ ಭ್ರಷ್ಟಾಚಾರದ ಬಗ್ಗೆ ತಿಳಿಸಿದ್ದಾರೆ. ನಾನೂ ತಿನ್ನಲ್ಲ, ತಿನ್ನೋಕೂ ಬಿಡಲ್ಲ ಅಂತ ಪ್ರಧಾನಿ ಮೋದಿ ಹೇಳುತ್ತಿದ್ದರು. ನಮ್ಮ ಸರ್ಕಾರಕ್ಕೆ 10% ಸರ್ಕಾರ ಅಂತ ಮೋದಿ ಹೇಳ್ತಿದ್ದರು. ಈಗ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.


ಈ ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಚರ್ಚೆಯಾಗಲಿದೆ. ಎರಡೂ ಸದನಗಳಲ್ಲಿ ಪ್ರತಿಪಕ್ಷ ನಾಯಕರು ಪ್ರಸ್ತಾಪ ಮಾಡುತ್ತಾರೆ. ಸುಪ್ರೀಂಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಇದರ ಬಗ್ಗೆ ವಿಶೇಷ ತನಿಖಾ ತಂಡಕ್ಕೆ ನೀಡಬೇಕು ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರಕ್ಕೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಲು ಬಯಸುತ್ತೇವೆ ಎಂದು ಕಾಂಗ್ರೆಸ್ ನಾಯಕರು 19 ಪ್ರಶ್ನೆಗಳನ್ನು ಕೇಳಿದ್ದಾರೆ.

ಯಡಿಯೂರಪ್ಪ ಅವರಿಗೆ 19 ಪ್ರಶ್ನೆಗಳು

ಯಡಿಯೂರಪ್ಪ ಅವರಿಗೆ 19 ಪ್ರಶ್ನೆಗಳು

1. ಬಿಡಿಎ ಆಯುಕ್ತರು ಬಿ.ಎಸ್ ಯಡಿಯೂರಪ್ಪ ಅವರು ಹಾಗೂ ಅವರ ಪುತ್ರನ ಹೆಸರಲ್ಲಿ 12 ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪದ ಬಗ್ಗೆ ವಿಜಯೇಂದ್ರ ಅವರಿಗೆ ತಿಳಿದಿತ್ತು ಎಂಬುದು ನಿಜವಲ್ಲವೇ?

2. ಅಧಿಕಾರ ದುರ್ಬಳಕೆ ಮಾಡಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಗುತ್ತಿಗೆದಾರ ಹಾಗೂ ಬಿಡಿಎ ಆಯುಕ್ತರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ ಏಕೆ?

3. ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಅವರು ಬಿಡಿಎ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸಿ ಎಂದು ಆಗ್ರಹಿಸದೇ, ಕೇವಲ ವರ್ಗಾವಣೆ ಮಾಡಿ ಎಂದು ಕೇಳುತ್ತಿರುವುದೇಕೆ?

4. ಗುತ್ತಿಗೆದಾರರು ಹಾಗೂ ಆಯುಕ್ತರ ವಿರುದ್ಧ ಎಫ್ ಐಆರ್ ದಾಖಲಿಸದೆ, ವಿಜಯೇಂದ್ರ ಅವರು ಕೇವಲ ಆಯುಕ್ತರಿಂದ ಗುತ್ತಿಗೆದಾರ ಹಣ ವಾಪಸ್ ಪಡೆಯುವಂತೆ ಸೂಚಿಸುತ್ತಿರುವುದೇಕೆ?

5. ಈ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆದಿರುವುದು ಸ್ಪಷ್ಟವಾಗಿದ್ದರೂ ಯಡಿಯೂರಪ್ಪನವರು ಗುತ್ತಿಗೆ ರದ್ದು ಮಾಡದೇ, ಎಫ್ ಐಆರ್ ದಾಖಲಿಸಲು ಯಾಕೆ ಆದೇಶ ನೀಡುತ್ತಿಲ್ಲ?

6. ಬಿಡುಗಡೆಯಾಗಿರುವ ವಾಟ್ಸಾಪ್ ಸಂದೇಶದ ಪ್ರಕಾರ ಗುತ್ತಿಗೆದಾರ ಯಡಿಯೂರಪ್ಪ ಅವರ ಮೊಮ್ಮಗ ಶಶಿಧರ್ ಮರಡಿ ಅವರಿಗೆ ಹಣ ನೀಡಿರುವುದೇಕೆ?

7. ಹಣದ ವರ್ಗಾವಣೆ ವಿಚಾರವಾಗಿ 14-10-2019, 19-10-2019,21-10-2019, 25-10-2019, 1-11-2019, 4-11-2019, 20-11-2019, 29-11-2019, , 28-01-2020, 29-01-2020, 05-05-2020, 06-05-2020, 11-06-2020 ಹಾಗೂ 21-07-2020 ರಂದು ಗುತ್ತಿಗೆದಾರ ಹಾಗೂ ಶಶಿಧರ್(ಮುಖ್ಯಮಂತ್ರಿಗಳ ಮೊಮ್ಮಗ) ನಡುವಣ ವಾಟ್ಸಾಪ್ ಸಂದೇಶವನ್ನು ಭ್ರಷ್ಟಾಚಾರದ ಪ್ರಕರಣವಾಗಿ ಪರಿಗಣಿಸಿಲ್ಲ ಯಾಕೆ?

8. 25-06-2020 ಮತ್ತು 16-07-2020 ದಿನಾಂಕದಂದು ಗುತ್ತಿಗೆದಾರ ಮತ್ತು ಶಶಿಧರ್ (ಮುಖ್ಯಮಂತ್ರಿಗಳ ಮೊಮ್ಮಗ) ನಡುವಣ ವಾಟ್ಸಾಪ್ ಸಂದೇಶದಲ್ಲಿ ಪ್ರಸ್ತಾಪ ಮಾಡಲಾಗಿರುವ ಪ್ರಕಾರ ಶಶಿಧರ್ ಖಾತೆಗೆ ರವಾನಿಸಿರುವ 7.40 ಕೋಟಿ ರೂಪಾಯಿ ಹಣವನ್ನು ಲಂಚ ಎಂದು ಘೋಷಿಸಿಲ್ಲ ಏಕೆ?

9. ಲಂಚ ವರ್ಗಾವಣೆಯಲ್ಲಿ ಮಂಜು, ಉಮೇಶ್, ಸಂಜಯ್ ಎಂಬುವವರ ಹೆಸರು ಕೇಳಿಬಂದಿದ್ದು, ಇವರು ಯಡಿಯೂರಪ್ಪ ಅವರ ನಿವಾಸ ಹಾಗೂ ಗೃಹ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿರುವುದು ನಿಜವೇ?

10. ಈ ಲಂಚ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಅಳಿಯ ವಿರೂಪಾಕ್ಷ ಮರಡಿ ಅವರ ಪಾತ್ರ ಇದೆಯೇ? 05-05-2020ರಂದು ನಡೆದಿರುವ ವಾಟ್ಸಪ್ ಸಂದೇಶದಲ್ಲಿ ಹಣ ತಂದು ಕೊಡಲು ನೀಡಲಾಗಿದ್ದ ವಿಳಾಸ ವಿರೂಪಾಕ್ಷ ಅವರದ್ದಾಗಿದ್ದು, ಆ ಹಣವನ್ನು ವಿರೂಪಾಕ್ಷ ಅವರಿಗೆ ನೀಡಲಾಗಿದೆಯೇ ಅಥವಾ ಬೇರೆಯವರಿಗೆ ನೀಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆಯಾಗಬೇಕು? ಲಂಚದ ಹಣವನ್ನು ವಿರೂಪಾಕ್ಷ ಅರಿಗಾಗಲಿ ಅಥವ ಅವರ ಪರವಾಗಿ ಅವರ ಮನೆಯವರಿಗೆ ನೀಡಿರುವುದೇಕೆ?

11. ವಾಟ್ಸಾಪ್ ಸಂದೇಶವು ಶಶಿಧರ್ ಹಾಗೂ ವಿಜಯೇಂದ್ರ ಅವರು ಈ ಎಲ್ಲ ಬೆಳವಣಗೆಗಳ ಬಗ್ಗೆ ಅರಿವು ಹೊಂದಿದ್ದರೇ? ಇದು ನಿಜವಾಗಿದ್ದರೆ, ಗುತ್ತಿಗೆದಾರರಿಂದ ಹಣ ಪಡೆಯುತ್ತಿರುವ ಮಾಹಿತಿ ಇವರಿಬ್ಬರಿಗೆ ಇರಲಿಲ್ಲವೇ?

12. 29-01-2020, 05-03-2020, 03-06-2020, 06-08-2020, 07-08-2020 ಹಾಗೂ 14-08-2020 ರಂದು ನಡೆದಿರುವ ವಾಟ್ಸಾಪ್ ಸಂದೇಶ ಮಾತುಕತೆಯಲ್ಲಿ ಗುತ್ತಿಗೆದಾರ ಮತ್ತು ಶಶಿಧರ್ ನಡುವೆ ಬಾಕಿ ಹಣ ನೀಡುವ ಬಗ್ಗೆ ಚರ್ಚೆ ಆಗಿಲ್ಲವೇ?

13. 06-08-2020 ಹಾಗೂ 07-08-2020 ರಂದು ಶಶಿಧರ್ ಹಾಗೂ ಗುತ್ತಿಗೆದಾರನ ನಡುವಣ ಸಂದೇಶದಲ್ಲಿ ವಿಜಯೇಂದ್ರ ಅವರನ್ನು 'V' ಎಂದು ನಮೂದಿಸಿ ವಿಜಯೇಂದ್ರ ಅವರು ಗುತ್ತಿಗೆದಾರನ ಪರವಾಗಿದ್ದಾರೆ ಎಂದು ಹೇಳಿರುವುದು ನಿಜವಲ್ಲವೇ?

14. ಶೆಲ್ ಕಂಪನಿಗಳ (REMAC Distributors Pvt Ltd., Shakambari Merchants Pvt. Ltd, Strategic Vincom Pvt. Ltd., Jagdamba Cosmosales Pvt. Ltd., Gannayak Commodities Trade Pvt. Ltd., Navteek Creation Pvt. Ltd.& Rajgharana Sales Pvt. Ltd.) ಮೂಲಕ ಶಶಿಧರ್ ಮರಡಿ ಅವರು ನಿರ್ದೇಶಕರಾಗಿರುವ Belgravia Enterprises Limited ಗೆ 5 ಕೋಟಿ ಹಣ ವರ್ಗಾವಣೆಯಾಗಿರುವುದು ನಿಜವಲ್ಲವೇ?

15. ಕೋಲ್ಕತಾ ಮೂಲಕ ಶೆಲ್ ಕಂಪನಿಗಳಿಂದ ಹಾಗೂ ಶಶಿಧರ ಅವರ ಕಂಪನಿಗೆ 13-03-2020ಯಿಂದ 22-07-2020 ಕಾಲಾವಧಿಯಲ್ಲಿ (ಕೋವಿಡ್ ಲಾಕ್ ಡೌನ್ ಸಮಯದಲ್ಲಿ ದೇಶದ ಎಲ್ಲ ಆರ್ಥಿಕತೆ ಬಂದ್ ಆಗಿದ್ದಾಗ) 5 ಕೋಟಿ ಹಣ ವರ್ಗಾವಣೆ ನಡೆದಿಲ್ಲವೇ?

16. ಶೆಲ್ ಕಂಪನಿಯಿಂದ ಪೆಡೆದ 5 ಕೋಟಿ ರೂಪಾಯಿಯನ್ನು Belgravia Enterprises Limited ನಿಂದ VSS Estates Pvt. Ltdಗೆ ವರ್ಗಾವಣೆ ಮಾಡಿರುವುದು ನಿಜವಲ್ಲವೇ?

17. ನಂತರ ಈ 5 ಕೋಟಿ ಹಣ VSS works LLP ಗೆ ನೀಡಿರುವುದು ನಿಜವಲ್ಲವೇ?

18. ಈ ಎಲ್ಲವೂ Money laundering ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಅಪಾರಾಧವಲ್ಲವೇ?

19 ಈ ಪ್ರಕರಣದ ಪ್ರಮುಖ ಆರೋಪಿಯನ್ನು ಸಿಎಂ ಯಡಿಯೂರಪ್ಪ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ರಕ್ಷಿಸುತ್ತಿಲ್ಲವೇ? ಇದು ಯಡಿಯೂರಪ್ಪ ಅವರು ಸಿಎಂ ಸ್ಥಾನದಲ್ಲಿ ಒಂದೇ ಒಂದು ನಿಮಿಷ ಮುಂದುವರಿಯಲು ಅನರ್ಹರಲ್ಲವೇ? ಎಂದು ಒಟ್ಟು 19 ಪ್ರಶ್ನೆಗಳನ್ನು ಸಿಎಂ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ನಾಯಕರು ಹೇಳಿದ್ದಾರೆ.

ಹೀಗಾಗಿ ಈ ಪ್ರಕರಣದ ತನಿಖೆ ಮುಗಿಯುವವರೆಗೂ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.

English summary
Congress leaders allege that Yediyurappa's family members, who had earlier received bribes in the form of checks when they were chief minister, have now received kickbacks through RTGS. Rangeep Singh Surjewala, in charge of the State Congress, held a joint press conference at the KPCC office. KPCC President DK Shivakumar and Opposition Leader Siddaramaiah released the documents alleging that Vijayendra had received the money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X