• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈರಣ್ಣ ಅಂದ್ರೆ ನೆನಪಾಗೋದೇ 'ಚೆಂದಕ್ಕಿಂತ ಚೆಂದ' ಹಾಡು: ದೇಸಾಯಿ ನೆನಪು

|

ಸುದೀಪ್ ಅವರ ಅಭಿನಯದ, 1999ರಲ್ಲಿ ತೆರೆಕಂಡಿದ್ದ 'ಸ್ಪರ್ಶ' ಚಿತ್ರದ 'ಚೆಂದಕ್ಕಿಂತ ಚೆಂದ ನೀನೆ ಸುಂದರ' ಎಂಬ ಹಾಡನ್ನು ಕೇಳಿರುವ ಮಾಧುರ್ಯ ಪ್ರಿಯರು ಎಂದಿಗೂ ಆ ಹಾಡನ್ನು ಮರೆಯಲಾರರು.

ಹಲವಾರು ಖ್ಯಾತ ನಾಮರ ಸಂಗಮ ಆ ಹಾಡು. ಆ ಹಾಡಿಗೆ ಕನ್ನಡದ ನಾದಬ್ರಹ್ಮ ಹಂಸಲೇಖ ಸಂಗೀತ ಒದಗಿಸಿದ್ದರೆ, ಆ ಹಾಡನ್ನು ಹಾಡಿದ್ದು ಭಾರತದ ಹೆಸರಾಂತ ಶಾಯರಿ ಗಾಯಕ ಪಂಕಜ್ ಉಧಾಸ್. ಅಂದಹಾಗೆ, ಅವರು ಕನ್ನಡದಲ್ಲಿ ಹಾಡಿದ ಮೊದಲ ಹಾಡೂ ಅದೇ.['ಢುಂಢಿ' ಲೇಖಕ ಯೋಗೇಶ್ ಮಾಸ್ಟರ್ ಯಾರು?]

ಆ ಹಾಡಿಗೆ ಸಾಹಿತ್ಯ ಬರೆಯುವ ಮೂಲಕ ಮನೆ ಮಾತಾದ ಇಟಗಿ ಈರಣ್ಣ, ಮಾರ್ಚ್ 13ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ. ಈರಣ್ಣ ಅಂದ ಕೂಡಲೇ ನಮಗೆ ನೆನಪಾಗುವುದೇ 'ಚೆಂದಕ್ಕಿಂತ ಚೆಂದ' ಹಾಡು.['ಚಂದಕ್ಕಿಂತ ಚೆಂದ ನೀನೇ ಸುಂದರ' ಹಾಡು ಬರೆದ ಇಟಗಿ ಈರಣ್ಣ ಇನ್ನಿಲ್ಲ]

ಹಾಗಾಗಿ, ಆ ಹಾಡು ಹುಟ್ಟಿದ ಬಗೆ ಹೇಗೆ ಎಂಬುದನ್ನು 'ಸ್ಪರ್ಶ' ಚಿತ್ರದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರನ್ನು ಸಂಪರ್ಕಿಸಿದಾಗ ಅವರು ಹಂಚಿಕೊಂಡ ನೆನಪುಗಳು ಇಲ್ಲಿವೆ.... Over to ಸುನಿಲ್ ಕುಮಾರ್ ದೇಸಾಯಿ....['ಒನ್ ಇಂಡಿಯಾ'ದಲ್ಲಿ 'ಓಂ ಮಹಾಪ್ರಾಣ ದೀಪಂ' ಹಾಡಿನ ಕಥೆ ಬಿಚ್ಚಿಟ್ಟ ಹಂಸಲೇಖ]

ಕನ್ನಡ ಶಾಯರಿ ನೋಡಿದ್ದೇ ಈರಣ್ಣ ಅವರಿಂದ

ಕನ್ನಡ ಶಾಯರಿ ನೋಡಿದ್ದೇ ಈರಣ್ಣ ಅವರಿಂದ

ನಾನು ಮೊದಲಿನಿಂದಲೂ ಹಿಂದಿ ಶಾಯರಿಗಳನ್ನು ಓದುತ್ತಿದ್ದೆ. ಅದೊಮ್ಮೆ ನನಗೆ ಇಟಗಿ ಈರಣ್ಣ ಅವರ ಕನ್ನಡ ಶಾಯರಿಗಳ ಪುಸ್ತಕಗಳನ್ನು ಓದುವ ಅವಕಾಶ ಸಿಕ್ಕಿತ್ತು. ಅದರಿಂದ ಆಕರ್ಷಿತನಾಗಿದ್ದೆ ಕೂಡ. ಸ್ಪರ್ಶ ಚಿತ್ರ ಮಾಡುವಾಗ ನಾನು ಆ ಚಿತ್ರದ ಅಲ್ಲಲ್ಲಿ ದೃಶ್ಯ ನಿರೂಪಣೆಗೆ ಸಹಾಯಕವಾಗುವಂತೆ ಶಾಯರಿಗಳನ್ನು ಬಳಸುವ ಆಲೋಚನೆ ಮಾಡಿದ್ದೆ.

ಹಾಗಾಗಿಯೇ ಅವರನ್ನು ಸಂಪರ್ಕಿಸಿದ್ದೆ

ಹಾಗಾಗಿಯೇ ಅವರನ್ನು ಸಂಪರ್ಕಿಸಿದ್ದೆ

ಸ್ಪರ್ಶ ಚಿತ್ರದ ನನ್ನ ಸ್ಕ್ರಿಪ್ಟ್ ಗೆ ಈರಣ್ಣ ಅವರ ಶಾಯರಿಗಳು ಹೆಚ್ಚಾಗಿ ಹೊಂದುತ್ತವೆ. ಅಲ್ಲದೆ, ಕೆಲವಾರು ಶಾಯರಿಗಳನ್ನು ಆ ಚಿತ್ರಕ್ಕೆಂದೇ ಹೊಸದಾಗಿ ಅವರ ಬಳಿ ಬರೆಸಬಹುದು ಎಂದೆಣಿಸಿದ್ದ ನಾನು ಈರಣ್ಣ ಅವರನ್ನು ಸಂಪರ್ಕಿಸಿದ್ದೆ. ಶಾಯರಿಗಳ ಜತೆಗೆ ಅವರಿಗೆ ಚಿತ್ರಕ್ಕಾಗಿ ಹಾಡುಗಳನ್ನೂ ಬಳಸಬೇಕೆಂಬುದು ನನ್ನ ಅಭಿಲಾಷೆಯಾಗಿತ್ತು.

ಬೆಂಗಳೂರಿಗೇ ಬಂದು ಮಾತನಾಡಿದ್ದರು

ಬೆಂಗಳೂರಿಗೇ ಬಂದು ಮಾತನಾಡಿದ್ದರು

ನಾನು ಈರಣ್ಣ ಅವರನ್ನು ಸಂಪರ್ಕಿಸಿದಾಗ ಅವರು ಮೊದಲಿಗೆ ಸಿನಿಮಾಕ್ಕೆ ಬರೆಯುವುದಕ್ಕೆ ಹಿಂದೇಟು ಹಾಕಿದ್ದರು. ಆದರೂ, ಆನಂತರ ಒಪ್ಪಿಕೊಂಡರು. ಬೆಂಗಳೂರಿಗೆ ಬಂದು ಆ ಚಿತ್ರದೊಂದಿಗಿನ ಒಪ್ಪಂದದ ಬಗ್ಗೆ ಮಾತುಕತೆಯಾಡಿದ್ದರು.

ಶಾಯರಿ ಜತೆ ಎರಡು ಹಾಡುಗಳನ್ನೂ ಬರೆದಿದ್ದರು

ಶಾಯರಿ ಜತೆ ಎರಡು ಹಾಡುಗಳನ್ನೂ ಬರೆದಿದ್ದರು

ಸ್ಪರ್ಶ ಚಿತ್ರದಲ್ಲಿ ನಾನು ಈರಣ್ಣ ಅವರ ಶಾಯರಿಗಳನ್ನು ಬಳಸುವ ಹಾಗೂ ಅವರಿಂದಲೇ ಒಂದು ಹಾಡನ್ನೂ ಬಳಸುವ ಐಡಿಯಾವನ್ನು ನಮ್ಮ ಚಿತ್ರದ ಸಂಗೀತ ನಿರ್ದೇಶಕರಾದ ಹಂಸಲೇಖಾ ಮುಂದಿಟ್ಟಿದ್ದಾಗ ಅವರೂ ಈ ಹೊಸ ಪ್ರಯತ್ನಕ್ಕೆ ಖುಷಿಯಿಂದಲೇ ಒಪ್ಪಿದ್ದರು. ಆನಂತರ, ನಟ ಸುದೀಪ್ ಮನೆಯಲ್ಲೇ ಈರಣ್ಣ ಅವರಿಂದ ಹಾಡು, ಕೆಲವಾರು ಶಾಯರಿಗಳನ್ನು ಬರೆಸಿದ್ದೆ. ಚೆಂದಕ್ಕಿಂತ ಚೆಂದ ಹಾಡಿನ ಬಹುತೇಕ ಕಂಪೋಸಿಂಗ್ ಸುದೀಪ್ ಮನೆಯಲ್ಲೇ ನಡೆದಿದ್ದು.

ಆಗಲೇ ಹೊಳೆದಿದ್ದು ಪಂಕಜ್ ಜೀ ಹೆಸರು

ಆಗಲೇ ಹೊಳೆದಿದ್ದು ಪಂಕಜ್ ಜೀ ಹೆಸರು

ಟ್ಯೂನೂ ರೆಡಿಯಾಯ್ತು, ಸಾಹಿತ್ಯವೂ ಸಿದ್ಧವಾಯ್ತು. ಆದರೆ, ಯಾರ ಬಳಿ ಇದನ್ನು ಹಾಡಿಸಬೇಕು ಎಂದಾಗ ನನ್ನಲ್ಲಿ ಕನ್ನಡಕ್ಕೆ ಹೊಸ ಎನಿಸುವಂಥ ಧ್ವನಿಯೊಂದು ಇದನ್ನು ಹಾಡಬೇಕು ಎಂಬ ಆಲೋಚನೆ ಮೊಳೆಯಿತು. ಅದನ್ನು ಹಂಸಲೇಖ ಮುಂದಿಟ್ಟಾಗ ಅವರೂ ಅದಕ್ಕೆ ಒಪ್ಪಿದರು. ಆಗಲೇ ಹೊಳೆದಿದ್ದು ಪಂಕಜ್ ಉಧಾಸ್ ಹೆಸರು. ಅವರೂ ಸಾವಿರಾರು ಶಾಯರಿಗಳನ್ನು ಹಾಡಿ ಜಗತ್ಪ್ರಸಿದ್ಧಿ ಗಳಿಸಿದವರು. ಅವರನ್ನೇ ಕನ್ನಡಕ್ಕೆ ಕರೆ ತರೋಣ ಎಂದು ನಿರ್ಧರಿಸಿದೆವು. ಹಾಗಾಗಿ, ಪಂಕಜ್ ಅವರನ್ನು ಭೇಟಿ ಮಾಡಲು ನಾನು ಮುಂಬೈಗೆ ಹಾರಿದೆ.

ನಾನು ಮನವರಿಕೆ ಮುಂದುವರಿಸಿದ್ದೆ

ನಾನು ಮನವರಿಕೆ ಮುಂದುವರಿಸಿದ್ದೆ

ಪಂಕಜ್ ಅವರಿಗೆ ನಮ್ಮ ಆಫರ್ ನೀಡಿದ ಕೂಡಲೇ ಕೊಂಚ ಬೆದರಿದರು. ನನಗೆ ಕನ್ನಡ ಭಾಷೆಯೇ ಗೊತ್ತಿಲ್ಲ. ಅದರ ಆ್ಯಕ್ಸೆಂಟ್ ನನಗೆ ಕಷ್ಟವಾಗಬಹುದು ಎಂದರು. ನಾವು ಚಿತ್ರದಲ್ಲಿ ಅವರಿಗೆ ಎರಡು ಹಾಡುಗಳನ್ನು ಹಾಡಿಸಲು ('ಚೆಂದಕ್ಕಿಂತ ಚೆಂದ' ಹಾಗೂ 'ಬರೆಯದ ಮೌನದ ಕವಿತೆ') ಯೋಚಿಸಿದ್ದೆವು. ಆದರೆ, ಹಿಂಜರಿಕೆಯಿಂದಾಗಿ ಹಾಡಲು ಒಪ್ಪಿರಲಿಲ್ಲ. ಆದರೆ ನಾನು ಪಟ್ಟು ಬಿಡಲಿಲ್ಲ. ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮುಂದುವರಿಸಿದೆ.

ಹೊಸ ಪ್ರಯತ್ನಕ್ಕೆ ಸೈ ಎಂದರು

ಹೊಸ ಪ್ರಯತ್ನಕ್ಕೆ ಸೈ ಎಂದರು

ನನಗೆ ಹಿಂದಿ ಚೆನ್ನಾಗಿ ಬರುತ್ತಿದ್ದರಿಂದ ಹಾಡಿನ ಪ್ರತಿಯೊಂದು ಸಾಲನ್ನು ಹಿಂದಿಯಲ್ಲಿ ಭಾಷಾಂತರಿಸಿ ಅವರಿಗೆ ಮನದಟ್ಟು ಮಾಡಿದೆ. ಹಾಡಿನ ಸಾಲುಗಳು ಅವರಿಗೆ ಇಂಪ್ರೆಸ್ ಮಾಡಿದವು. ಆನಂತರ, ಹಂಸಲೇಖಾ ಅವರು ಸಿದ್ಧಪಡಿಸಿದ ಟ್ಯೂನನ್ನೂ ಅವರಿಗೆ ಕೇಳಿಸಿದೆ. ಅವರಿಗೆ ಟ್ಯೂನಂತೂ ತುಂಬಾನೇ ಇಷ್ಟವಾಯ್ತು. ಹಾಗಾಗಿ, ಅವರು ''ಆಯ್ತು ಸುನಿಲ್ ಅವರೇ, ಇದೊಂದು ಪ್ರಯತ್ನ ಮಾಡೇಬಿಡ್ತೀನಿ'' ಎಂದು ಹೇಳಿ ಸ್ಪರ್ಶ ಚಿತ್ರಕ್ಕೆ ಹಾಡಲು ಒಪ್ಪಿಕೊಂಡರು.

ಅಂದೇ ಈರಣ್ಣಗೆ ಉಧಾಸ್ ಜತೆ ಭೇಟಿ ಮಾಡಿಸಿದ್ದೆ

ಅಂದೇ ಈರಣ್ಣಗೆ ಉಧಾಸ್ ಜತೆ ಭೇಟಿ ಮಾಡಿಸಿದ್ದೆ

ನಿಗದಿಯಾದ ದಿನಾಂಕದಂದೇ ಅವರು ಬೆಂಗಳೂರಿಗೆ ಆಗಮಿಸಿದರು. ಪ್ರಸಾದ್ ಸ್ಟುಡಿಯೋದಲ್ಲಿ ಅವರ ದನಿಯಲ್ಲಿ ಹಾಡನ್ನು ರೆಕಾರ್ಡ್ ಮಾಡಲಾಯಿತು. ಅಂದು ನಾನು ಹಾಡಿನ ರೆಕಾರ್ಡಿಂಗ್ ವೇಳೆ, ಇಟಗಿ ಈರಣ್ಣ ಅವರನ್ನು ಕರೆಯಿಸಿ, ಅವರಿಗೆ ಪಂಕಜ್ ಉಧಾಸ್ ಅವರನ್ನು ಪರಿಚಯಿಸಿದ್ದೆ. ರೆಕಾರ್ಡಿಂಗ್ ವೇಳೆ, ಸಾಹಿತ್ಯದಲ್ಲಿ ಕೆಲವಾರು ಸಣ್ಣ ಪುಟ್ಟ ಕರೆಕ್ಷನ್ ಗಳನ್ನು ಮಾಡಿಸಲು ಈರಣ್ಣ ಅವರ ಉಪಸ್ಥಿತಿಯಿಂದ ನೆರವಾಯಿತು. ಅಂತೂ ಇಂತು ರೆಕಾರ್ಡಿಂಗ್ ಮುಗಿಸಿಕೊಂಡ ನಂತರ, ಉಧಾಸ್ ಉತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ ಖುಷಿಯಿದೆ ಎಂದು ಹೇಳುತ್ತಾ ಮುಂಬೈಗೆ ತೆರಳಿದರು.

ಚಿತ್ರರಂಗ ಬೇಡವೆಂದು ಸಾಹಿತ್ಯ ಕೃಷಿ ಮುಂದುವರಿಸಿದರು

ಚಿತ್ರರಂಗ ಬೇಡವೆಂದು ಸಾಹಿತ್ಯ ಕೃಷಿ ಮುಂದುವರಿಸಿದರು

ಸ್ಪರ್ಶ ಚಿತ್ರ ಹಿಟ್ ಆಯಿತು. ಈರಣ್ಣ ಅವರ ಖ್ಯಾತಿ ಅವರಿದ್ದ ಬಳ್ಳಾರಿ ಪ್ರಾಂತ್ಯವನ್ನೂ ದಾಟಿ ಕರ್ನಾಟಕದ ತುಂಬೆಲ್ಲಾ ಹರಡಿತು. ಆಗ, ಅವರಿಗೆ ನಾನು ಹೇಳಿದ್ದೆ, ಸಿನಿಮಾಕ್ಕೆ ಬರೆಯುವುದನ್ನು ಮುಂದುವರಿಸಿ ಎಂದು. ಆದರೆ, ಅವರು ಒಪ್ಪಲಿಲ್ಲ. ಸಿನಿಮಾ ಸಂಗೀತದ ಅಬ್ಬರದಲ್ಲಿ ಸಾಹಿತ್ಯದ ಗುಣಮಟ್ಟ ಕುಗ್ಗುತ್ತದೆ ಎಂದೇ ಅವರು ಹಿಂದೇಟು ಹಾಕಿದ್ದರು. ಹಾಗಾಗಿ, ಸ್ಪರ್ಶ ಚಿತ್ರದ ನಂತರ ಒಂದೆರಡು ಸಿನಿಮಾಗಳ ಆಫರ್ ಬಂದರೂ ಅವರು ಹಾಡಿನ ಟ್ಯೂನುಗಳು, ಚಿತ್ರದ ಕಥೆ ಕೇಳಿದ ನಂತರವೂ ರಿಜೆಕ್ಟ್ ಮಾಡಿದ್ದರು. ಆದರೆ, ನಾನು ಮಾತ್ರ ಈರಣ್ಣನವರೇ ನೀವು ಸಿನಿಮಾಕ್ಕೆ ಬರೆಯಬೇಕು ಅಂತ ಅವರಿಗೆ ಪ್ರೋತ್ಸಾಹ ನೀಡುತ್ತಲೇ ಇದ್ದೆ. ಆಗ ಅವರು, ನೀವು ಮತ್ತು ಹಂಸಲೇಖ ಜಂಟಿಯಾಗಿ ಮತ್ತೆ ಚಿತ್ರ ಮಾಡಿದರೆ ಮಾತ್ರ ನಾನು ಮತ್ತೆ ಬರೆಯುವುದಾಗಿ ಹೇಳಿದ್ದರು. ಆದರೆ, ದುರದೃಷ್ಟವಶಾತ್ ಅದು ಮತ್ತೆ ಕೂಡಿಬರಲಿಲ್ಲ.

ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ

ಭಗವಂತ ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ

ಇತ್ತೀಚೆಗೆ, ಈರಣ್ಣ ಅವರು ಕೊಂಚ ಅನಾರೋಗ್ಯಕ್ಕೊಳಗಾಗಿದ್ದಾರೆಂದು ಕೇಳಿದ್ದೆ. ವಯೋ ಸಹಜವಾಗಿ ಕಾಣುವ ಚಿಕ್ಕಪುಟ್ಟ ಅನಾರೋಗ್ಯವಿರಬಹುದೆಂದು ತಿಳಿದಿದ್ದೆ. ಆದರೆ, ಹೀಗೆ ಅವರು ಹಠಾತ್ತಾಗಿ ನಿಧನರಾಗುತ್ತಾರೆಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಅವರ ನಿಧನದಿಂದ ಕನ್ನಡದಲ್ಲಿ ಶಾಯರಿ ಬರೆಯುವ ಮೂಲಕ ವಿಶಿಷ್ಟ ಬಗೆಯ ಸಾಹಿತ್ಯ ಪ್ರಾಕಾರವನ್ನು ಹುಟ್ಟಿಹಾಕಿದ್ದ ಒಬ್ಬ ಸುಸಂಸ್ಕೃತ ಸಾಹಿತಿಯನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ಕೊಡಲೆಂದು ಹಾರೈಸುತ್ತೇನೆ.

English summary
In the shadows of obituory to only one Kannada Shayari writer Itagi Eeranna, famous film Director Sunil Kumar Desai recalls the efforts behind 'Chendakkinta Chenda Neene Sundara' song from movie Sparsha, released in 1999. Itagi Eeranna's most of the shayaris were used in that movie. He had written one song also for 'Sparsha'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X