ರಮೇಶ್ ಜಾರಕಿಹೊಳಿ ಸಿ.ಡಿ. ಪ್ರಕರಣ; ಹನಿಟ್ರ್ಯಾಪ್ ಶಂಕೆ ವ್ಯಕ್ತಪಡಿಸಿದ ಡಿಸಿಎಂ
ಬೆಂಗಳೂರು, ಮಾರ್ಚ್ 03: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಡಿಯೋ ಹಿಂದೆ ಹನಿಟ್ರ್ಯಾಪ್ ಹಾಗೂ ಬ್ಲಾಕ್ ಮೇಲ್ ತಂತ್ರವೂ ಇರಬಹುದು. ಬ್ಲಾಕ್ಮೇಲ್ ಮಾಡುವ ಉದ್ದೇಶದಿಂದ ವಿಡಿಯೋ ಮಾಡಿ ವಿಶ್ವಾಸಘಾತುಕತನ ಮಾಡಿರುವ ಇಂಥ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ಬಗ್ಗೆ ತನಿಖೆ ನಡೆದ ನಂತರವಷ್ಟೇ ಸತ್ಯ ತಿಳಿಯುತ್ತದೆ. ಅಲ್ಲಿಯವರೆಗೂ ಯಾವುದೇ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ನಾನು ತಪ್ಪೇ ಮಾಡಿಲ್ಲ, ರಾಜೀನಾಮೆ ಏಕೆ ಕೊಡಲಿ?: ಜಾರಕಿಹೊಳಿ ಮೊದಲ ಪ್ರತಿಕ್ರಿಯೆ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿ ಜೊತೆ ರಾಸಲೀಲೆಯಲ್ಲಿ ತೊಡಗಿದ್ದ ವಿಡಿಯೋ ಸಿ.ಡಿ ಮಂಗಳವಾರ ರಾಜ್ಯ ರಾಜಕಾರಣದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು.
ಯುವತಿಯೊಬ್ಬಳಿಗೆ ಸರ್ಕಾರಿ ಕೆಲಸ ನೀಡುವುದಾಗಿ ವಂಚಿಸಿ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಮಂಗಳವಾರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ರಾಜೀನಾಮೆಗೆ ವಿಪಕ್ಷಗಳಿಂದ ತೀವ್ರ ಒತ್ತಾಯ ಕೇಳಿಬಂದಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿದ್ದ ಜಾರಕಿಹೊಳಿ, "ಈ ಸಿ.ಡಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಮಂತ್ರಿ ಮಾತ್ರವಲ್ಲ, ಎಂಎಲ್ಸಿ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಆದರೆ ಇದರಲ್ಲಿ ನನ್ನ ತಪ್ಪು ಏನೂ ಇಲ್ಲ. ಆ ಯುವತಿ ಯಾರು ಎಂದು ನನಗೆ ಗೊತ್ತಿಲ್ಲ. ದಿನೇಶ ಕಲ್ಲಹಳ್ಳಿ ಯಾರೋ ಗೊತ್ತಿಲ್ಲ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ. ನಾನು ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ. ತಪ್ಪಿತಸ್ಥ ಎಂದು ಸಾಬೀತಾದರೆ ನಾನು ರಾಜೀನಾಮೆ ಕೊಡುತ್ತೇನೆ" ಎಂದು ಹೇಳಿದ್ದರು.