ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ವಾಪಸು ಪಡೆಯಲು "ಗೋಲ್ಡನ್ ಅವರ್" ಸೌಲಭ್ಯ ಬಳಸಿ!

|
Google Oneindia Kannada News

ಬೆಂಗಳೂರು, ಜೂ. 02: ಆತನಿಗೆ ಉಡುಗೊರೆ ಬಂದಿರುವುದಾಗಿ ಮೊಬೈಲ್‌ನಲ್ಲಿ ಸಂದೇಶ ಬಂದಿತ್ತು. ಖುಷಿಯಿಂದ ಲಿಂಕ್ ಒತ್ತಿದ ಕೂಡಲೇ ಅನಾಮಿಕರಿಂದ ಒಂದು ಮೊಬೈಲ್ ಕರೆ. ನಿಮ್ಮ ಖಾತೆಗೆ ಉಡುಗೊರೆ ಹಣ ಜಮೆಯಾಗಬೇಕಾದರೆ ಒಟಿಪಿ ಹೇಳಿ ಅಂತ ಪುಸಲಾಯಿಸಿದ ಅನಾಮಿಕನ ಮಾತು ನಂಬಿ ಒಟಿಪಿ ನಂಬರ್ ಹೇಳುತ್ತಿದ್ದಂತೆ ಬ್ಯಾಂಕ್ ಖಾತೆಯಲ್ಲಿದ್ದ ಹಣ ಮಂಗ ಮಾಯ! ಸೈಬರ್ ವಂಚಕರ ಇಂಥ ಮೋಸದ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡವರ ಸಂಖ್ಯೆಗೆ ಕಡಿಮೆ ಇಲ್ಲ. ಹೀಗೆ ಕಳೆದುಕೊಂಡ ಹಣ ವಾಪಸು ಪಡೆಯಲು ಸಾಧ್ಯವಿದೆಯೇ? ಹೌದು. ಬೆಂಗಳೂರು ಪೊಲೀಸರು ಪರಿಚಯಿಸಿರುವ "ಗೋಲ್ಡನ್ ಅವರ್" ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು!

ಬೆಂಗಳೂರು ನಗರ ಪೊಲೀಸರು ವರ್ಷದ ಹಿಂದೆ ಪರಿಚಯಿಸಿದ "ಗೋಲ್ಡನ್ ಅವರ್" ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ 48 ಕೋಟಿ ರೂ. ಹಣ ಮರಳಿ ವಾಪಸು ಪಡೆದಿದ್ದಾರೆ. ಕಳೆದ ಡಿಸೆಂಬರ್ 22 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ಈ ಗೋಲ್ಡನ್ ಅವರ್ ಸೌಲಭ್ಯಕ್ಕೆ ಚಾಲನೆ ನೀಡಿದ್ದರು. ಅಂದಿನಿಂದ ಈವರೆಗೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 3175 ಪ್ರಕರಣಕ್ಕೆ ಸಂಬಂಧಿಸಿದಂತೆ 48.24 ಕೋಟಿ ರೂ. ಹಣ ವಂಚನೆ ತಪ್ಪಿಸಿದ್ದಾರೆ. ಜನ ಸ್ನೇಹಿ ಗೋಲ್ಡನ್ ಅವರ್ ಸೌಲಭ್ಯ ಇದೀಗ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಸೈಬರ್ ವಂಚನೆ ಆದ್ರೆ ಏನು ಮಾಡಬೇಕು

ಸೈಬರ್ ವಂಚನೆ ಆದ್ರೆ ಏನು ಮಾಡಬೇಕು

ಸಾಮಾನ್ಯವಾಗಿ ಸೈಬರ್ ವಂಚಕರು ಹಣ ಕದಿಯುವ ಉದ್ದೇಶದಿಂದ ಕಳಿಸುವ ಸಂದೇಶ, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಚೇಂಜ್ ಎಂಬ ಆಫರ್ ಸಂದೇಶ ಕರೆಗಳನ್ನು ಸ್ವೀಕರಿಸಬಾರದು. ಆಕಸ್ಮಿಕ ಗೊತ್ತಿಲ್ಲದೇ ಸೈಬರ್ ವಂಚಕರ ಜಾಲಕ್ಕೆ ಬಿದ್ದು ಹಣ ಕಳೆದಕೊಂಡರೆ, ಕಳೆದುಕೊಂಡ ಒಂದು ತಾಸಿನೊಳಗೆ ಪೊಲೀಸ್ ಕಂಟ್ರೋಲ್ ರೂಮ್ 112 ಗೆ ಕರೆ ಮಾಡಿ. ಹಣ ಕಳೆದುಕೊಂಡ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ ಸಿಬ್ಬಂದಿ ಕೇಳುವ ಪೂರ್ಣ ವಿವರ ನೀಡಬೇಕು. ಇದನ್ನೇ ಗೋಲ್ಡನ್ ಅವರ್ ಅಂತ ಕರೆಯುತ್ತಾರೆ. ಹಣ ಕಳೆದುಕೊಂಡ ಒಂದು ತಾಸಿನೊಳಗೆ 112 ಮೂಲಕ ದೂರು ಸಲ್ಲಿಸಿದರೆ, ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಯನ್ನು ಆರ್‌ಬಿಐ ನೆರವಿನಿಂದ ಫ್ರೀಜ್ ಮಾಡಲಾಗುತ್ತದೆ. ಹೀಗೆ ಕಳೆದ ಆರು ತಿಂಗಳ ಅವಧಿಯಲ್ಲಿ 1312 ಬ್ಯಾಂಕ್ ಖಾತೆಗಳನ್ನು ಬೆಂಗಳೂರು ಪೊಲೀಸರು ಜಪ್ತಿ ಮಾಡಿ ಹಣ ವರ್ಗಾವಣೆಯಾಗದಂತೆ ತಡೆ ಹಿಡಿದಿದ್ದಾರೆ. ಈ ಮೂಲಕ ಸೈಬರ್ ವಂಚಕರ ಮೋಸದ ಜಾಲ ನಿಯಂತ್ರಣಕ್ಕೆ ಮಹತ್ವದ ಅವಕಾಶ ಕಲ್ಪಿಸಿದ್ದಾರೆ.

ಹಣ ಕಳೆದುಕೊಂಡ ಒಂದೇ ತಾಸಿನಲ್ಲಿ ಯಾಕೆ 112 ಗೆ ಕರೆ ಮಾಡಬೇಕು

ಹಣ ಕಳೆದುಕೊಂಡ ಒಂದೇ ತಾಸಿನಲ್ಲಿ ಯಾಕೆ 112 ಗೆ ಕರೆ ಮಾಡಬೇಕು

ಸಾಮಾನ್ಯವಾಗಿ ಒಂದು ಖಾತೆಯಿಂದ ಹಣ ವರ್ಗಾವಣೆಯಾದರೆ ಅದನ್ನು ಮರಳಿ ವಾಪಸು ಪಡೆಯಲು ಸಾಧ್ಯವಿಲ್ಲ. ಆದರೆ, ಸೈಬರ್ ವಂಚಕರ ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಸರ್ಕಾರಿ ಸಾಮ್ಯದ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕ್ ಸಂಶಯಾಸ್ಪದ ಟ್ರಾಂಜಕ್ಷನ್ ಒಂದು ತಾಸು ತಡೆ ಹಿಡಿಯಲು ಅವಕಾಶ ಮಾಡಲಾಗಿದೆ. ಅಂದರೆ ಬೆಂಗಳೂರು ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಮಾಡಿ ಸಂಶಯಾಸ್ಪದ ಬ್ಯಾಂಕ್ ಖಾತೆಯ ಬಗ್ಗೆ ದೂರು ನೀಡಿದ ಕೂಡಲೇ ಆ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಲಾಗುತ್ತದೆ. ಜಪ್ತಿ ಮಾಡಬೇಕಾದರೆ ದೂರುದಾರರು 112 ಗೆ ಕರೆ ಮಾಡಿ ವಿವರ ನೀಡಿರಬೇಕು. ಆನಂತರ ಸಂಬಂಧಪಟ್ಟ ಪೊಲಿಸ್ ಠಾಣೆಗೆ ದೂರು ಸಲ್ಲಿಸಬೇಕು. ಒಂದು ವೇಳೆ ಹಣ ಕಳೆದುಕೊಂಡು ಒಂದು ತಾಸಿನ ನಂತರ ದೂರು ಸಲ್ಲಿಸಿದರೆ, ಅಷ್ಟರಲ್ಲಿ ವಂಚಕರ ಜಾಲದ ಖಾತೆಗೆ ವರ್ಗಾವಣೆಯಾದ ಹಣವನ್ನು ಡ್ರಾ ಮಾಡಿರುತ್ತಾರೆ. ಹೀಗಾಗಿ ಆ ಹಣ ವಾಪಸು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ನೀವು ಸೈಬರ್ ವಂಚಕರ ಜಾಲದಿಂದ ಹಣ ಕಳೆದುಕೊಂಡ ತಕ್ಷಣ 112 ಗೆ ಕರೆ ಮಾಡಿ ಹಣವನ್ನು ವಾಪಸು ಪಡೆಯುವ ಗೋಲ್ಡನ್ ಅವರ್ ಸೌಲಭ್ಯ ಪಡೆಯಬಹುದು. ತಡವಾದರೆ ಹಣ ವಾಪಸು ಬರುವುದು ಅನುಮಾನ.

ಪ್ರವೀಣ್ ಸೂದ್ ಕನಸಿನ ಕೂಸು

ಪ್ರವೀಣ್ ಸೂದ್ ಕನಸಿನ ಕೂಸು

ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಇಲಾಖೆಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಲ್ಲಿ ನಿಪುಣತೆಯುಳ್ಳವರು. ಸಂಚಾರ ವಿಭಾಗದ ಪೊಲೀಸ್ ಆಯುಕ್ತರಾಗಿದ್ದಾಗಲೂ ತಂತ್ರಜ್ಞಾನವನ್ನು ಅತಿ ಜಾಣ್ಮೆಯಿಂದ ಬಳಿಸಿಕೊಂಡು ಸಂಚಾರ ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಿದ್ದರು. ಆನ್‌ಲೈನ್ ಪೋಗ್ರಾಮಿಂಗ್ ಅಭಿವೃದ್ಧಿ ಪಡಿಸಿ "ಗೋಲ್ಡನ್ ಅವರ್ " ಮೂಲಕ ಸೈಬರ್ ವಂಚಕರಿಂದ ಕಳೆದುಕೊಳ್ಳುವ ಹಣವನ್ನು ರಕ್ಷಣೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಚಯಿಸಿದ್ದಾರೆ. ಇದನ್ನು ಹಂತಹಂತವಾಗಿ ರಾಜ್ಯದೆಲ್ಲೆಡೆ ವಿಸ್ತರಣೆ ಮಾಡಲು ಚಿಂತನೆ ನಡೆಸಿದ್ದಾರೆ. ಸಾಮಾನ್ಯ ಅಪರಾಧಗಳಿಗೆ ಹೋಲಿಸಿದರೆ, ಸೈಬರ್ ಅಪರಾಧ ಕೃತ್ಯಗಳು ವಂಚನೆಗಳು ಹೆಜ್ಜಾಗುತ್ತಿವೆ. ಈ ವಂಚಕ ಜಾಲದಿಂದ ಕಳೆದುಕೊಂಡ ಹಣ ಪಡೆಯಲು ರೂಪಿಸಿರುವ ಗೋಲ್ಡನ್ ಅವರ್ ಯೋಜನೆ ಡಿಜಿಪಿ ಪ್ರವೀಣ್ ಸೂದ್ ಅವರ ಕನಸಿನ ಕೂಸಾಗಿದೆ.

Recommended Video

17 ವರ್ಷದ ಬಾಲಕಿ ದೈತ್ಯಾಕಾರದ ಕರಡಿಗೆ ಏನ್ ಮಾಡಿದ್ಲು ನೋಡಿ | Oneindia Kannada
ಪೊಲೀಸ್ ಆಯುಕ್ತರ ಮನವಿ

ಪೊಲೀಸ್ ಆಯುಕ್ತರ ಮನವಿ

ಇಂದು ಆನ್‌ ಲೈನ್, ನೆಟ್ ಬ್ಯಾಂಕಿಂಗ್ ಜತೆಗೆ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಜನರು ಜಾಸ್ತಿ ಬಳಕೆ ಮಾಡುತ್ತಿದ್ದಾರೆ. ಇದನ್ನೇ ಬಳಸಿಕೊಂಡು ಸೈಬರ್ ವಂಚಕರು ಕೂಡ ಮೋಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಸೈಬರ್ ವಂಚನೆ ಪ್ರಕರಣಗಳು ಜಾಸ್ತಿ ಬೆಳಕಿಗೆ ಬರುತ್ತಿದ್ದವು. ಇದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ವತಿಯಿಂದ ಆನ್‌ಲೈನ್ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದೇವೆ. ಯಾರೇ ಆಗಲಿ ಆನ್‌ಲೈನ್‌ನಲ್ಲಿ ಹಣ ಕಳೆದುಕೊಂಡರೆ ಒಂದು ತಾಸಿನ ಒಳಗೆ 112 ಗೆ ಕರೆ ಮಾಡಿ ಮಾಹಿತಿ ನೀಡಬೇಕು. ತಕ್ಷಣ ಆ ಹಣವನ್ನು ಉಳಿಸುವ ಪ್ರಯತ್ನ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಕಾರ್ಯ ಪ್ರವೃತ್ತವಾಗುತ್ತದೆ. ಇದಕ್ಕಾಗಿಯೇ ಪ್ರತ್ಯೇಕ ಕಂಟ್ರೋಲ್ ರೂಮ್ ಸೌಲಭ್ಯ ಮಾಡಲಾಗಿದೆ. ಸಾರ್ವಜನಿಕರು ಗೋಲ್ಡನ್ ಅವರ್ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಹೇಳಿದ್ದಾರೆ.

English summary
Bengaluru's Cyber Crime units have been successful in recovered Rs 48 crore lost by victims to cyber criminals, . Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X