• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಚಿವ, ಶಾಸಕರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ವಂಚನೆಗೆ ಯತ್ನ!

|

ಬೆಂಗಳೂರು, ಫೆಬ್ರವರಿ 19: ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ತುರ್ತು ಹಣ ಬೇಕಾಗಿದೆ ಎಂದು ಎತ್ತುವಳಿ ಮಾಡಿದ್ದ ಸೈಬರ್ ಕಳ್ಳರ ಕಣ್ಣು ಇದೀಗ ರಾಜಕಾರಣಿಗಳ ಮೇಲೆ ಬಿದ್ದಿದೆ. ರಾಜ್ಯದ ಪ್ರತಿಷ್ಠಿತ ರಾಜಕಾರಣಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅವರ ಆಪ್ತರಿಗೆ ಹಣ ನೀಡುವಂತೆ ಮನವಿ ಮಾಡಿ ವಂಚನೆಗೆ ಯತ್ನಿಸಿದ್ದಾರೆ.

ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಅವರ ಹೆಸರಿನಲ್ಲಿ ನಕಲಿ ಫೇಸ್ ಬಕ್ ಖಾತೆ ತೆರೆದು ಅವರ ಸ್ನೇಹ ಕೂಟಕ್ಕೆ ಮನವಿ ಕಳಿಸಿದ್ದಾರೆ. ಬಹುತೇಕರು ನಕಲಿ ಖಾತೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದಾರೆ. ಆನಂತರ ನಿನ್ನ ಬಳಿ ಗೂಗಲ್ ಪೇ ಅಥವಾ ಪೋನ್ ಪೇ ಇದೆಯಾ ಅ? ಅರ್ಜೆಂಟಾಗಿ ಸ್ವಲ್ಪ ಹಣ ಕಳುಹಿಸು ಎಂದು ಮನವಿ ಮಾಡಿದ್ದಾರೆ. ಯು.ಬಿ. ವೆಂಕಟೇಶ್ ಚಿಲ್ಲರೆ ಕಾಸು ಗೂಗಲ್ ಪೇ ನಲ್ಲಿ ಹೇಗೆ ಕೇಳಲು ಸಾಧ್ಯ ಎಂದು ಅನುಮಾನಗೊಂಡು ಕೆಲವರು ಅವರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದಾಗ, ಯು.ಬಿ. ವೆಂಕಟೇಶ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆಗೆದು ಸಾಕಷ್ಟು ಮಂದಿಗೆ ಹಣ ನೀಡುವಂತೆ ಮೆಸೇಂಜರ್ ನಲ್ಲಿ ಸಂದೇಶ ಕಳಿಸಿರುವ ಸಂಗತಿ ಗೊತ್ತಾಗಿದೆ.

ಇದು ಗೊತ್ತಾದ ಕೂಡಲೇ ಯು.ಬಿ. ವೆಂಕಟೇಶ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ನಕಲಿ ಖಾತೆ ರದ್ದಾಗಿದ್ದು, ಯಾರಾದರೂ ನನ್ನ ಹೆಸರಿನಲ್ಲಿ ಹಣ ಕೇಳಿದರೆ ಕೊಡದಂತೆ ಅವರು ಫೇಸ್ ಬುಕ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ನಕಲಿ ಫೇಸ್ ಬುಕ್ ಖಾತೆ ತೆರೆದು ಹಣ ಕೇಳಿರುವ ಬಗ್ಗೆ ಅವರೇ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಶಿಕ್ಷಣ ಸಚಿವರ ಹೆಸರಿನಲ್ಲಿ ಖಾತೆ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಹೆಸರಿನಲ್ಲಿ ಫೇಸ್ ಬುಕ್ ನಕಲಿ ಖಾತೆ ತೆರೆದು ಅವರ ಆಪ್ತ ವರ್ಗಕ್ಕೆ ಹಣ ನೀಡುವಂತೆ ಬೇಡಿಕೆ ಇಟ್ಟಿರುವ ಸಂಗತಿ ಕೂಡ ತಡವಾಗಿ ಬೆಳಕಿಗೆ ಬಂದಿದೆ. ಎಸ್. ಸುರೇಶ್ ಕುಮಾರ್ ಹೆಸರಿನಲ್ಲಿ ಖಾತೆ ತೆರೆದ ಸೈಬರ್ ಕಳ್ಳರು, ಅವರ ಭಾವ ಚಿತ್ರಗಳನ್ನು ಬಳಸಿದ್ದಾರೆ. ಸಾವಿರಾರು ಜನಕ್ಕೆ ಹಣ ಗೂಗಲ್ ಪೇ ಮಾಡುವಂತೆ ಮನವಿ ಮಾಡಿದ್ದಾರೆ. ನಕಲಿ ಫೇಸ್ ಬುಕ್ ಖಾತೆ ತೆರೆದಿರುವ ಸೈಬರ್ ಕಳ್ಳರ ವಿರುದ್ಧ ಕ್ರಮ ಜರುಗಸುವಂತೆ ಕೋರಿ ಸಿಐಡಿ ಸೈಬರ್ ವಿಭಾಗಕ್ಕೆ ಸುರೇಶ್ ಕುಮಾರ್ ದೂರು ನೀಡಿದ್ದಾರೆ.

ಹರಿಯಾಣ ಮೂಲ: ಸಚಿವ ಸುರೇಶ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅವರ ಆಪ್ತರಿಗೆ ವಂಚನೆ ಮಾಡಲು ಯತ್ನಿಸಿರುವ ಆರೋಪಿ ಹರಿಯಾಣ ಮೂಲದವ ಎಂಬುದು ಸಿಐಡಿ ಸೈಬರ್ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ನಕಲಿ ಖಾತೆ ತೆರೆದಿರುವ ಮಾಹಿತಿ ಜಾಲಾಡಿದಾಗ ಈ ಸಂಗತಿ ಹೊರ ಬಂದಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.

ಇತ್ತೀಚೆಗೆ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅವರ ಸ್ನೇಹಿತರಿಗೆ ಹಣ ಕಳುಹಿಸುವಂತೆ ಸಂದೇಶ ರವಾನಿಸಿದ್ದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಪೊಲೀಸ್ ಅಧಿಕಾರಿಗಳೇ ಕಂಗಾಲಾಗಿದ್ದರು.ಇದೀಗ ಪ್ರತಿಷ್ಠಿತ ರಾಜಕಾರಣಿಗಳ ಸರಣಿ ಆರಂಭವಾಗಿದೆ.

English summary
Cyber Fraudulent created a fake face book account in the name of MLC U.B. venkatesh and requested money from his friends know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X