ಕೊರೊನಾ ಲಸಿಕೆ: ಬೆಂಗಳೂರಿನಲ್ಲಿ ಈವರೆಗೆ 22 ಮಂದಿ ಮೇಲೆ ವ್ಯತಿರಿಕ್ತ ಪರಿಣಾಮ
ಬೆಂಗಳೂರು,ಜನವರಿ 22: ಬೆಂಗಳೂರಲ್ಲಿ 22ಕ್ಕೂ ಅಧಿಕ ಮಂದಿಗೆ ಕೊರೊನಾ ಲಸಿಕೆ ಪಡೆದ ಬಳಿಕ ಅಡ್ಡಪರಿಣಾಮಗಳು ಕಾಣಿಸಿಕೊಂಡಿವೆ.
ನಗರದಲ್ಲಿ ಗುರುವಾರ 23 ಸರ್ಕಾರಿ ಹಾಗೂ ಪಾಲಿಕೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು 92 ಖಾಸಗಿ ಆಸ್ಪತ್ರೆಗಳ ಲಸಿಕಾ ಕೇಂದ್ರದಲ್ಲಿ 5,.410 ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಈ ಪೈಕಿ 22 ಮಂದಿಯಲ್ಲಿ ಲಸಿಕೆಯ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ.
ಎರಡನೇ ಹಂತದ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ
ಈ ಪೈಕಿ ಸರ್ಕಾರಿ ಹಾಗೂ ಪಾಲಿಕೆಯ 1,027 ಹಾಗೂ ಖಾಸಗಿ ಆಸ್ಪತ್ರೆಯ 4,383 ಆರೋಗ್ಯ ಕಾರ್ಯಕರ್ತರು ಸೇರಿದಂತೆ ಒಟ್ಟು 5,410 (ಶೇ.52) ಮಂದಿ ಮಾತ್ರ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದುಕೊಂಡವರಲ್ಲಿ 22 ಮಂದಿಗೆ ಜ್ವರ, ತಲೆನೋವು, ಸುಸ್ತು ಸೇರಿದಂತೆ ಇನ್ನಿತರೆ ಅಡ್ಡಪರಿಣಾಮ ಕಾಣಿಸಿಕೊಂಡಿದೆ ಎಂದು ಬಿಬಿಎಂಪಿ ತಿಳಿಸಿದೆ.
ಗುರುವಾರ ಸರ್ಕಾರಿ ಮತ್ತು ಬಿಬಿಎಂಪಿಯ 2,328 ಮಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ನಗರದಲ್ಲಿ ಎರಡನೇ ಹಂತದಲ್ಲಿ ಕೊರೊನಾ ಲಸಿಕೆ ನೀಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಮೊದಲ ಹಂತದಲ್ಲಿ ಲಸಿಕೆಯನ್ನು ಕೊರೊನಾ ವಾರಿಯರ್ಸ್ಗಳಿಗೆ ನೀಡಲಾಗಿದೆ. ಎರಡನೇ ಹಂತದಲ್ಲಿ ಶಿಕ್ಷಕರು, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ.
ಕಳೆದ ಆರು ದಿನಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳ ಸಿಬ್ಬಂದಿಗೆ ಕೊರೊನಾ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.ಈವರೆಗೆ 1.82 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ನೋಂದಣಿ ಮಾಡಿಕೊಂಡಿದ್ದರು.
ಇನ್ನುಳಿದಂತೆ ಮೊದಲ ಹಂತದ ಕೊರೊನಾ ಲಸಿಕೆ ಹಾಕುವ ಕಾರ್ಯ ಮುಂದುವರೆಯುತ್ತಿದೆ. ಈ ನಡುವೆ ಬಿಬಿಎಂಪಿ ಕೇಂದ್ರ ಸರ್ಕಾರದ ಸೂಚನೆಯಂತೆ ಎರಡನೇ ಹಂತದಲ್ಲಿ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡ ಪೊಲೀಸ್, ಅಬಕಾರಿ, ಸಾರಿಗೆ ಇಲಾಖೆ, ಶಿಕ್ಷಕರು,ಅಂಗನವಾಡಿ ಕಾರ್ಯಕರ್ತರು,ಬಿಬಿಎಂಪಿ ಅಧಿಕಾರಿಗಳೂ ಸೇರಿ ಇನ್ನಿತರೆ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುತ್ತದೆ.