• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜು ಮುಚ್ಚಿ; ಎಚ್‌ಡಿಕೆ ಸಲಹೆ

|
Google Oneindia Kannada News

ಬೆಂಗಳೂರು, ಜನವರಿ 18: "ರಾಜ್ಯ ಹಾಗೂ ಬೆಂಗಳೂರು ನಗರದಲ್ಲಿ ಕೋವಿಡ್ ಸೋಂಕು ಭಾರೀ ಪ್ರಮಾಣದಲ್ಲಿ ಏರುತ್ತಿರುವ ಕಾರಣ ಮುಂದಿನ 15- 20 ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಿದರೆ ಒಳ್ಳೆಯದು," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ರಾತ್ರಿ ಕರ್ಫ್ಯೂ ಬಗ್ಗೆ ಬಿಜೆಪಿ ಹಾಗೂ ಸರಕಾರದ ನಡುವೆ ಗೊಂದಲವಿದ್ದು, ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತಿದೆ ಎಂದು ಎಚ್‌ಡಿಕೆ ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.

ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಶಾಲಾ- ಕಾಲೇಜು, ವಸತಿ ನಿಲಯಗಳನ್ನು ಕೆಲ ಕಾಲ ಬಂದ್ ಮಾಡುವುದು ಒಳ್ಳೆಯದು. ಇಲ್ಲವಾದರೆ ಮಕ್ಕಳು, ವಿದ್ಯಾರ್ಥಿಗಳು ಸಮಸ್ಯೆಗೆ ತುತ್ತಾಗಬೇಕಾಗುತ್ತದೆ," ಎಂದು ಎಚ್ಚರಿಕೆ ಕೊಟ್ಟರು.


ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯಿಂದ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಹಾಗಿದ್ದರೂ ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಅನಾಹುತಗಳ ಗ್ರಾಫ್ ಏರುತ್ತಿದೆ. ಅದರ ಜತೆಗೆ ಈ ಕರ್ಫ್ಯೂ ಬಗ್ಗೆ ಬಿಜೆಪಿ ಮುಖಂಡರಲ್ಲೇ ಕೆಲವು ಗೊಂದಲಗಳಿವೆ ಎಂದರು.

"ಆಡಳಿತ ಪಕ್ಷದ ಕೆಲ ಪ್ರಮುಖರು ನೈಟ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಕೆಲವರು ಅದರ ಪರ ಮಾತನಾಡುತ್ತಾರೆ. ಜನ ಯಾರ ಮಾತು ಕೇಳಬೇಕು? ವ್ಯಾಪಾರಿಗಳು, ಹೋಟೆಲ್ ವ್ಯಾಪಾರಿಗಳು, ಇನ್ನಿತರೆ ಸಂಘಟನೆಗಳು ಸಹ ಇದಕ್ಕೆ ವಿರೋಧ ಇದ್ದಾರೆ. ಆದರೂ ಬಿಜೆಪಿ ಮುಖಂಡರ ಗೊಂದಲಮ ಹೇಳಿಕೆಗಳು ಜನರನ್ನು ದಾರಿ ತಪ್ಪಿಸುತ್ತಿವೆ," ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿಕೆ ಅಭಿಪ್ರಾಯಪಟ್ಟರು.

"ನೈಟ್ ಕರ್ಫ್ಯೂ ಜಾರಿ ಮಾಡಿದ್ದಾರೆ ನಿಜ. ಆದರೆ ಕೆಲ ಕಡೆ ವಾಹನಗಳು, ಜನರು ಓಡಾಡ್ತಾ ಇದ್ದಾರೆ. ಇದು ಹೊಸ ಅಪಾಯಕ್ಕೆ ದಾರಿ ಆಗದಿರಲಿ. ನೈಟ್ ಕರ್ಫ್ಯೂನಿಂದ ಸಂಪೂರ್ಣವಾಗಿ ಕೋವಿಡ್ ಹತೋಟಿ ಬರುವುದು ಸಾಧ್ಯವೇ? ತಜ್ಞರು ಯಾವ ಅಧಾರದ ಮೇಲೆ ವರದಿ ಕೊಟ್ಟಿದ್ದಾರೋ ಗೊತ್ತಿಲ್ಲ," ಎಂದು ಅವರು ತಿಳಿಸಿದರು.

Covid-19 Surge: HD Kumaraswamy Adviced Govt to Close Schools And Colleges for 15-20 Days

"ನೈಟ್ ಕರ್ಫ್ಯೂನಿಂದ ಸಮಸ್ಯೆ ಬಗೆಹರಿಯುತ್ತದೆ ಅಂತ ಹೇಳಲು ಸಾಧ್ಯವಿಲ್ಲ. ವೀಕೆಂಡ್ ಲಾಕ್‌ಡೌನ್ ಕೂಡ ಎಷ್ಟು ಉಪಯೋಗ ಆಗುತ್ತಿದೆ ಎನ್ನುವುದನ್ನು ನೋಡಬೇಕು. ಜನ ಸಾಮಾನ್ಯರ ಜೀವನಕ್ಕೆ ತೊಂದರೆ ಆಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ತೊಂದರೆ ಆಗಿದೆ. ಈ ಸಂದರ್ಭದಲ್ಲಿ ಸರ್ಕಾರ ಅವರ ಜೀವನ ನಿರ್ವಹಣೆಗೆ ಸಹಾಯ ಮಾಡಬೇಕು. ಹಿಂದೆ ನೀಡಿದ್ದಕ್ಕಿಂತ ಉತ್ತಮ ಪ್ಯಾಕೆಜ್ ನೀಡಬೇಕು," ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಒತ್ತಾಯ ಮಾಡಿದರು.

ಜನರೇ ಎಚ್ಚರಿಕೆಯಿಂದಿರಿ
ಮುಂದಿನ ಎರಡು ಮೂರು ತಿಂಗಳು ರಾಜ್ಯದ ಧಾರ್ಮಿಕ ಕ್ಷೇತ್ರಗಳಲ್ಲಿ ಜಾತ್ರಾ- ಉತ್ಸವಗಳನ್ನೂ ಸರಕಾರ ರದ್ದು ಮಾಡಿದೆ. ಮುಂದಿನ ಒಂದು ವರ್ಷದ ಹೊತ್ತಿಗೆ ಚುನಾವಣೆಗಳು ಆರಂಭ ಆಗುತ್ತವೆ. ರಾಜಕೀಯ ಸಭೆ ಸಮಾರಂಭಗಳು ನಡೆಯುತ್ತವೆ. ರಾಜಕಾರಣಿಗಳು ಸಭೆ, ಸಮಾರಂಭ ಮಾಡಿದಾಗ ಜನ ನಮಗೆ ಒಂದು ನಿಯಮ ನಿಮಗೊಂದು ನಿಯಮ ಏಕೆ ಎಂದು ಕೇಳಬಾರದು. ಅಂತ ಪರಿಸ್ಥಿತಿಯನ್ನು ನಾಯಕರು ತಂದುಕೊಳ್ಳಬಾರದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿವಿಮಾತು ಹೇಳಿದರು.

ಜನರು ಕೂಡ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು. ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಬದುಕು ಕಟ್ಟಿಕೊಳ್ಳಬೇಕು ಎಂದ ಅವರು, ಈ ಸಲ ಎರಡನೇ ಅಲೆಯಲ್ಲಿ ಆದಂತಹ ದೊಡ್ಡ ಪ್ರಮಾಣದ ಅನಾಹುತಗಳು ಆಗಲಿಲ್ಲ. ಆ ರೀತಿ ಏನಾದರೂ ಆಗಿದ್ದಿದ್ದರೆ ಆಸ್ಪತ್ರೆಗಳಲ್ಲಿ ಜಾಗ ಸಿಗುತ್ತಿರಲಿಲ್ಲ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ ಎಂದು ಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಾದಯಾತ್ರೆ ಕುಟುಕಿದ ಎಚ್‌ಡಿಕೆ
ಇದೇ ವೇಳೆ ಕಾಂಗ್ರೆಸ್ ಪಕ್ಷ ನಡೆಸಿದ ಮೇಕೆದಾಟು ಪಾದಯಾತ್ರೆಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿಗಳು, ಇತ್ತೀಚೆಗೆ ಪಾದಯಾತ್ರೆ ಹೆಸರಿನಲ್ಲಿ ಒಂದು ಜಾತ್ರೆ ನಡೆಯಿತು. ಅದಾದ ಬಳಿಕ ಎಲ್ಲರಿಗೂ ಅದೇ ರೂಢಿ ಆಯ್ತು. ಅವರು ಮಾತ್ರ ಮಾಡಬಹುದು ನಮಗೆ ಯಾಕೆ ನಿರ್ಬಂಧ ಅಂತ ಜನಸಾಮಾನ್ಯರು ಮಾತಾಡುವಂತೆ ಆಯಿತು. ಈ ಮೂಲಕ ರಾಮನಗರ ಸೇರಿ ರಾಜ್ಯದ ಎಲ್ಲೆಡೆ ಕೊರೊನಾ ಸೋಂಕು ಜಾಸ್ತಿ ಆಗಿದೆ ಎಂದರು.

ವ್ಯಾಕ್ಸಿನ್ ಪಡೆದವರಿಗೆ ಕೋವಿಡ್ ಬಂದರೂ ಬೇಗ ವಾಸಿ ಆಗುತ್ತಿದೆ. ಆದರೆ ಲಸಿಕೆ ಪಡೆಯದ ಮಕ್ಕಳ ಸ್ಥಿತಿ ಏನು? ಅದೃಷ್ಟಕ್ಕೆ ಜೀವಹಾನಿ ಆಗುತ್ತಿರುವ ಘಟನೆಗಳು ಕಡಿಮೆ ಇವೆ. ಇದು ಸಮಾಧಾನದ ಸಂಗತಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮುಂತಾದವರು ಹಾಜರಿದ್ದರು.

English summary
Covid-19 Surge: Former CM HD Kumaraswamy adviced Karnataka govt to close schools and colleges for 15-20 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X