ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಆತಂಕದ ಮಾಹಿತಿ ಕೊಟ್ಟ ಮಾಜಿ ಸಚಿವರು

|
Google Oneindia Kannada News

ಬೆಂಗಳೂರು, ಆ. 31: ಬೆಂಗಳೂರಿನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮರಣ ಪ್ರಮಾಣದಲ್ಲಿ ಶೇಕಡಾ 4.6ರಷ್ಟು ಕಡಿಮೆಯಿದೆ ಎಂದು ರಾಜ್ಯ ಸಾಂಖ್ಯಿಕ ಇಲಾಖೆ ಇದೇ ಆಗಸ್ಟ್ ಆರಂಭದಲ್ಲಿ ಮಾಹಿತಿ ಒದಗಿಸಿತ್ತು. ಆದರೆ ಇದೀಗ ಮಾಜಿ ಸಚಿವ ಎಚ್.ಕೆ. ಪಾಟೀಲ್ ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

Recommended Video

ಇಡೀ ಪ್ರಪಂಚದಲ್ಲೇ ಇಷ್ಟು ಪ್ರಕರಣಗಳು ಯಾವ ದೇಶದಲ್ಲೂ ಪತ್ತೆಯಾಗಿಲ್ಲ | Oneindia Kannada

ಬೆಂಗಳೂರು ಮಹಾನಗರದಲ್ಲಿ ಜನವರಿ ತಿಂಗಳಿನಿಂದ ಜುಲೈ ತಿಂಗಳವರೆಗೆ ಸಾವುಗಳ ಸಂಖ್ಯೆ ಮಿತಿಮೀರಿದ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಸೋಂಕಿತರ ಸಂಖ್ಯೆಗಳು ಜೂನ್‌ನಿಂದ ಈಚೆಗೆ 7 ರಿಂದ 8 ಸಾವಿರ ತಲುಪಿರುವ ವರದಿಯಾಗುತ್ತಿದೆ. ಬೆಂಗಳೂರು ನಗರವೊಂದರಲ್ಲಿಯೇ 2020ರ ಜನೇವರಿಯಿಂದ ಜುಲೈ ತಿಂಗಳವರೆಗೆ 49,135 ಸಾವಿನ ಪ್ರಕರಣಗಳು ವರದಿಯಾಗಿವೆ. ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಗಳಲ್ಲಿ ಪಾರ್ಥಿವ ಶರೀರಗಳ ಅಂತ್ಯಕ್ರಿಯೆಗಳ ಈ ಅಂಕಿ-ಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ. ಕಳೆದ ವರ್ಷ ಇದೇ ಅವಧಿಗೆ ಅಂದರೆ ಜನೇವರಿಯಿಂದ ಜುಲೈವರೆಗೆ ಸಾವುಗಳ ಸಂಖ್ಯೆ 37,001 ಇದ್ದದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 12,136 ಜನರು ಹೆಚ್ಚುವರಿಯಾಗಿ ಸಾವಿಗೀಡಾಗಿರುವುದು ಬೆಚ್ಚಿಬೀಳಿಸಿರುವ ಕಳವಳಕಾರಿ ಪರಿಸ್ಥಿತಿ ಬಯಲಾಗಿದೆ. ಇದು ಶೇ. 32ರಷ್ಟು ಹೆಚ್ಚಳವನ್ನು ದಾಖಲಿಸಿದೆ.

ಕರ್ನಾಟಕದಲ್ಲಿ 6495 ಹೊಸ ಕೋವಿಡ್ ಪ್ರಕರಣ ದಾಖಲುಕರ್ನಾಟಕದಲ್ಲಿ 6495 ಹೊಸ ಕೋವಿಡ್ ಪ್ರಕರಣ ದಾಖಲು

ಬೆಂಗಳೂರಿನಲ್ಲಿ ಕೊರೊನಾ ವೈರಸ್‌ನಿಂದ ಸಾವಿಗೀಡಾದವರ ಸಂಖ್ಯೆ ಮಾರ್ಚ್‌ನಿಂದ ಆಗಸ್ಟ್ ವರೆಗೆ 1,886 ಎಂದು ಸರ್ಕಾರ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದೆ. ಒಂದು ವೇಳೆ ಈ ಅಂಕಿ-ಸಂಖ್ಯೆಯೇ ಅಂತಿಮವಾಗಿದ್ದರೆ, ಕೊರೋನೇತರ ಸಾವುಗಳ ಸಂಖ್ಯೆ 10,250 ಹೆಚ್ಚುವರಿ ಎಂದಾಯಿತು. 49,000 ಸಾವುಗಳಲ್ಲಿ ಕೇವಲ 1,886 ಕೋರೋನಾ ಸಾವುಗಳಾಗಿದ್ದರೆ, 47,114 ಜನ ಕೊರೋನೇತರ ಕಾರಣಗಳಿಂದ ಮೃತಪಟ್ಟಿದ್ದಾರೆ. ಈ ಸಾವುಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಚ್ಚಳವಾಗುವುದಕ್ಕೆ ಕಾರಣಗಳು ಏನು. ಈ ಸಾವಿನ ಅಂಕಿ-ಸಂಖ್ಯೆ ಮುಚ್ಚಿಡಲು ಕಾರಣಗಳೇನು? ಕೊರೋನಾ ಸಾವಿನ ಸಂಖ್ಯೆ ಕಡಿಮೆ ಪ್ರಮಾಣ ತೋರಿಸಲು ಈ ಅಚಾತುರ್ಯ ದುರುದ್ದೇಶದ ಪ್ರಯತ್ನವಾಗಿದೆಯೇ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಪ್ರಶ್ನೆ ಮಾಡಿದ್ದಾರೆ.

ಕೊರೋನೇತರ ಸಾವುಗಳ ಮಾಹಿತಿ ಕೊಡಿ

ಕೊರೋನೇತರ ಸಾವುಗಳ ಮಾಹಿತಿ ಕೊಡಿ

ರಾಜ್ಯದಲ್ಲಿ ಸರ್ಕಾರ ಜನವರಿ ತಿಂಗಳಿಂದ ಇಲ್ಲಿಯವರೆಗೂ ಸಾವಿನ ಸಂಖ್ಯೆಗಳ ಲೆಕ್ಕಪರಿಶೋಧನೆ ಮತ್ತು ಸಾವಿನ ಕಾರಣಗಳ ವೈದ್ಯಕೀಯ ಪರಿಶೋಧನೆ ಮಾಡಿಯೇ ಇಲ್ಲ. ಇದರಿಂದಾಗಿ ವಾಸ್ತವಿಕವಾಗಿ ಸಾವು ಯಾವುದಕ್ಕೆ ಸಂಭವಿಸಿದೆ ಎಂಬುದನ್ನು ವೈಜ್ಞಾನಿಕವಾಗಿ ಪರಿಗಣಿಸಲು ಆಗಿಯೇ ಇಲ್ಲ. ಇದರ ಜೊತೆಗೆ ಸಾವಿನ ಕಾರಣಗಳ ವೈದ್ಯಕೀಯ ಪ್ರಮಾಣೀಕರಣ (Medical Certification of Cause of Death- MCCD) ಮಾಡಬೇಕಾಗಿತ್ತು. ಒಂದು ವೇಳೆ ಬೆಂಗಳೂರಿನಲ್ಲಿ ಕೋವಿಡ್ ಸಾವಿನ ಸಂಖ್ಯೆ ಕೇವಲ 1886 ಎಂದು ಮಾತ್ರವಿದ್ದರೆ, 10250 ಸಾಮಾನ್ಯ ಸಾವಿನ ಹೆಚ್ಚಳ (ಇತರೇ ಕಾರಣದಿಂದ) ಸಂಖ್ಯೆ ಅತ್ಯಂತ ಗಂಭೀರವಾದದ್ದೆ. ಸರಕಾರ ವಿವರಣೆ ನೀಡಬೇಕು ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದ್ದಾರೆ.

ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಸಾವಿನ ಸಂಖ್ಯೆಯಲ್ಲಿ ಹೆಚ್ಚಳ

ಪ್ರಸಕ್ತ ವರ್ಷದಲ್ಲಿ ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದ ಶ್ವಾಸಕೋಶದ ಪರಿಣಾಮಕಾರಿ ಕಾರ್ಯನಿರ್ವಹಣೆಯ ವೈಫಲ್ಯದಿಂದ ಸಾವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದೆ. ಒಟ್ಟು ಆಕ್ಸಿಜನ್ ಕೊರತೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಹೆಚ್.ಎಫ್.ಎನ್.ಸಿ ಅಳವಡಿಕೆಗೆ ಹಿಂದೇಟು. ಅಗತ್ಯ ತುರ್ತಿನ ಇಂಜಕ್ಷನ್‍ಗಳ ಪೂರೈಕೆಯಲ್ಲಿ ಅವಾಂತರ. ಈ ಹಿನ್ನೆಲೆಯಲ್ಲಿ ಕೊರೋನಾ ವೈರಸ್ ಸಾವುಗಳ ಸಂಖ್ಯೆ ವಿಪರೀತವಾಗಿ ಹೆಚ್ಚಿದ್ದು ಸ್ಪಷ್ಟವಾಗಿದೆ. ಬೆಂಗಳೂರು ನಗರ ಒಂದರಲ್ಲಿಯೇ ಸಾವಿನ ಸಂಖ್ಯೆ ಕಳೆದ ವರ್ಷಗಳ ಇದೇ ಅವಧಿಗೆ ಹೋಲಿಸಿದರೆ ಶೇ. 32ರಷ್ಟು ಹೆಚ್ಚಳ ಕಂಡಿರುವುದು ಗಂಭೀರವಾದ ಆಘಾತಕಾರಿ ಅಂಶವಾಗಿದೆ. ರಾಜ್ಯದಲ್ಲಿ ಉಸಿರಾಟದ ತೊಂದರೆಯಿಂದಲೇ ಮೃತರ ಸಂಖ್ಯೆ ಶೇ. 8.5ಕ್ಕೆ ಮುಟ್ಟಿದೆ ಎಂಬ ಅಂಕಿ-ಅಂಶ ಹರಿದಾಡುತ್ತಿದೆ.

ಸರ್ಕಾರ ಮಾಹಿತಿ ಮುಚ್ಚಿಟ್ಟಿದೆ

ಸರ್ಕಾರ ಮಾಹಿತಿ ಮುಚ್ಚಿಟ್ಟಿದೆ

ಈ ಆಘಾತಕಾರಿ ಮಾಹಿತಿ ಬಚ್ಚಿಡುವಿಕೆ ಇಂಥ ಮಹಾಮಾರಿಯಿಂದಿರುವ ಸಂಕಷ್ಟ ಕಾಲದಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಬಹುದು. ರಾಜ್ಯದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸರ್ಕಾರ ಕೊಟ್ಟಿರುವ ಅಂಕಿ ಸಂಖ್ಯೆಗಳ ಪ್ರಕಾರವೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ರಾಷ್ಟ್ರದ ಸರಾಸರಿಯ ದುಪ್ಪಟ್ಟಾಗಿದೆ. ದೇಶದಲ್ಲಿ ಮೃತರ ಸಂಖ್ಯೆ ದಶಲಕ್ಷಕ್ಕೆ 42 ಇದ್ದರೆ, (Reported deaths per Million) ಕರ್ನಾಟಕದಲ್ಲಿ ದಶಲಕ್ಷಕ್ಕೆ 83 ತಲುಪಿದೆ. ಸರಕಾರ ಸರಿಯಾದ ಅಂಕಿ-ಅಂಶ ಪ್ರಾಮಾಣಿಕವಾಗಿ ಜನತೆ ಜೊತೆಗೆ ಹಂಚಿಕೆ ಮಾಡಿಕೊಳ್ಳಲಿಲ್ಲ. ಸಾವಿನ ಸಂಖ್ಯೆ ಈ ಪ್ರಮಾಣದ ಹೆಚ್ಚಳ ಕುರಿತ ತ್ವರಿತ ಅಧ್ಯಯನದ ವರದಿ ಪಡೆಯಲು (Quick study report) ಕ್ರಮವಿಡಬೇಕು.

ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿರುವುದು ಆಘಾತಕಾರಿ ಅಂಶ ಹಾಗೂ ಗಾಬರಿಗೊಳಿಸುವ ಸ್ಥಿತಿ. ಈ ಬಗ್ಗೆ ಚರ್ಚಿಸಿ, ತಿಳಿದು ವಾಸ್ತವಾಂಶವನ್ನು ಅರ್ಥೈಸಿ ಸರ್ಕಾರ ಗಂಭೀರ ಹೆಜ್ಜೆಗಳನ್ನು ಇರಿಸಬೇಕಾಗುವುದು. ಅಂಕಿ-ಅಂಶ ಬಚ್ಚಿಡುವುದಾಗಲಿ, ಜನರಿಗೆ ತಪ್ಪು ಮಾಹಿತಿ ವಿತರಿಸುವುದಾಗಲಿ ಯಾವುದೇ ಪ್ರಯೋಜನವಿಲ್ಲ. ಸತ್ಯ ಎಲ್ಲರಿಗೂ ತಿಳಿದಿರಲಿ. ಸರ್ಕಾರ ಗಂಭೀರ ಹೆಜ್ಜೆಗಳನ್ನು ಇಡಲೇಬೇಕಾದ ಸ್ಥಿತಿಗೆ ತಲುಪಿದ್ದೇವೆ. ಇಂಥ ಭಾರೀ ಸಾವಿನ ಹೆಚ್ಚಳದಿಂದ ಉದ್ಭವಿಸುತ್ತಿರುವ ಗಂಭೀರ ಸನ್ನಿವೇಶದಲ್ಲಿ ವಿರೋಧ ಪಕ್ಷಗಳನ್ನು, ತಜ್ಞರನ್ನು, ವೈದ್ಯರನ್ನು ತುರ್ತು ಸಭೆ ಕರೆದು ಚರ್ಚಿಸಿ ತಕ್ಷಣದ ಕ್ರಮ ಕೈಗೊಳ್ಳಲು ಸತ್ಯವಾದ ಅಂಕಿ-ಅಂಶ ಹಾಗೂ ವಸ್ತುಸ್ಥಿತಿ ಸಾರ್ವಜನಿಕರಿಗೆ ಸ್ಪಷ್ಟಪಡಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವೆ.

English summary
The number of deaths in Bengaluru has increased from January to July this year former minister H.K. Patil shared alarming information. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X