ಮೋಟು ಡಾಕ್ಟರ್ ವಿರುದ್ಧ ಎನ್ಐಎ ದೋಷಾರೋಪ ಪಟ್ಟಿ ಸಲ್ಲಿಕೆ
ಬೆಂಗಳೂರು, ಫೆಬ್ರವರಿ 22: ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಎನ್ಐಎ ಅಧಿಕಾರಿಗಳುಲಷ್ಕರೆ ಎ ತೊಯ್ಬಾ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಸೋಮವಾರ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ, ನಾಂದೇಡ್, ತೆಲಂಗಾಣ, ಹೈದರಾಬಾದ್ ಸೇರಿದಂತೆ ದೇಶದ ಹಲವು ನಗರಗಳ ಪ್ರಮುಖ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದರು. ಲಷ್ಕರೆ ಎ ತೊಯ್ಬಾ ಉಗ್ರ ಸಂಘಟನೆ ಜತೆ ಸೇರಿ ರೂಪಿಸಿದ್ದ ಸಂಚು ಸಂಬಂಧ ಬಸವೇಶ್ವವರನಗರ ಪೊಲಿಸ್ ಠಾಣೆಯಲ್ಲಿ 2012 ರಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನು ಎನ್ಐಎ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ಹದಿನೇಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಹದಿಮೂರು ಶಂಕಿತ ಉಗ್ರರನ್ನು ಅಪರಾಧಿಗಳು ಎಂದು ಪರಿಗಣಿಸಿದ್ದ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ, 2017 ರಲ್ಲಿ ಹದಿಮೂರು ಆರೋಪಿಗಳಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಉಳಿದ ಮೂವರ ವಿಚಾರಣೆ ಬಾಕಿ ಉಳಿದಿತ್ತು. ಇದೇ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರು ಆರೋಪಿಗಳಿಗಾಗಿ ಎನ್ಐಎ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದರು. ಈ ಪ್ರಕರಣ ಸಂಬಂಧ ಇದೀಗ ಡಾ. ಸಬೀಲ್ ಅಹಮದ್ ಅಲಿಯಾಸ್ ಮೋಟು ಡಾಕ್ಟರ್, ಅಸಾದುಲ್ಲಾಖಾನ್ ಅಲಿಯಾಸ್ ಅಬು ಸೂಪಿಯಾನ್ ವಿರುದ್ಧ ಬೆಂಗಳೂರಿನಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.